ಗಂಗಾವತಿ: ಬತ್ತ ಮಾರಾಟಕ್ಕೆ ಅಲೆದಾಡುತ್ತಿರುವ ರೈತರು
* ವೆಬ್‌ಸೈಟ್ ಸ್ಥಗಿತ, ಬಿಕೋ ಎನ್ನುತ್ತಿರುವ ಬತ್ತ ಖರೀದಿ ಕೇಂದ್ರ
* ಬತ್ತ ಖರೀದಿ ಮಾಡುವವರೇ ಕೇಂದ್ರದಲ್ಲಿ ಇಲ್ಲದಿರುವುದರಿಂದ ರೈತರಿಗೆ ಸಮಸ್ಯೆ
* ಸರ್ಕಾರ ಕೂಡಲೇ ಗಮನಹರಿಸಬೇಕು
ರಾಮಮೂರ್ತಿ ನವಲಿ
ಗಂಗಾವತಿ(ಮೇ.27): ನೋಂದಣಿಗೆ ವೆಬ್‌ಸೈಟ್ ಸ್ಥಗಿತಗೊಂಡಿರುವುದಿಂದ ಬತ್ತ ಖರೀದಿ ಕೇಂದ್ರದಲ್ಲಿ ರೈತರಿಗೆ ಬತ್ತ ಮಾರಾಟ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಏ. 23ರಂದು ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಬತ್ತ ಖರೀದಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಬತ್ತ ಮಾರಾಟ ಮಾಡುವ ರೈತರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಬೇಕು. ಇಲ್ಲಿಯ ವರೆಗೆ ಕೇವಲ 72 ರೈತರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಈ ವೆಬ್‌ಸೈಟ್ ತೆರೆದುಕೊಳ್ಳುತ್ತಿಲ್ಲ. ಹೀಗಾಗಿ ರೈತರಿಗೆ ನೋಂದಣಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ಬತ್ತ ಮಾರಾಟ ಮಾಡಲು ನಿತ್ಯ ಅಲೆದಾಡುವಂತಾಗಿದೆ.
ಬತ್ತ ಖರೀದಿ ಸಾಧ್ಯವಾಗದೇ ಇರುವುದರಿಂದ ಇಲ್ಲಿಯ ಬತ್ತ ಖರೀದಿ ಕೇಂದ್ರ ಯಾರೂ ಇಲ್ಲದೆ ಬಿಕೋ ಎನ್ನುತ್ತಿದೆ. ರೈತರು ಇಲ್ಲಿಗೆ ಬಂದರೆ ಯಾವುದೇ ಅಧಿಕಾರಗಳು ಕಾಣುವುದಿಲ್ಲ. ಒಬ್ಬ ಕಂಪ್ಯೂಟರ್ ಆಪರೇಟರ್ ಬಿಟ್ಟು ಯಾರೂ ಇಲ್ಲಿ ಇರುವುದಿಲ್ಲ ಎಂದು ರೈತರು ದೂರುತ್ತಾರೆ. ಮೊದಲು ಇಲ್ಲಿಯ ಬತ್ತ ಖರೀದಿ ಕೇಂದ್ರಕ್ಕೆ ನಾಮಫಲಕವಾದರೂ ಇತ್ತು. ಈಗ ಅದೂ ಕಾಣುತ್ತಿಲ್ಲ. ಹೀಗಾಗಿ ರೈತರು ಖರೀದಿ ಕೇಂದ್ರ ಹುಡುಕುವಂತಾಗಿದೆ.
ಮುಚ್ಚಿದ ವೆಬ್‌ಸೈಟ್:
ಸದ್ಯ ಖರೀದಿ ಕೇಂದ್ರದಲ್ಲಿ ವಹಿವಾಟು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ನ್ಯಾಷನಲ್ ಇನ್‌ಫಾರ್ಮಷೇನ್ ಸೆಂಟರ್ ವೆಬ್‌ಸೈಟ್ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿದೆ. ಹೀಗಾಗಿ ನೋಂದಣಿಗೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಬಂದ ರೈತರಿಗೆ ಸಮರ್ಪಕ ಮಾಹಿತಿಯೂ ಸಿಗುತ್ತಿಲ್ಲ.
ಕೋವಿಡ್ ಲಕ್ಷಣ ಇದ್ದರೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ: ಸಚಿವ ಬಿ.ಸಿ.ಪಾಟೀಲ್
ರೈತರ ಅಲೆದಾಟ:
ಬೆಲೆ ಸಮರ್ಪಕವಾಗಿ ಸಿಗದ ಕಾರಣ ರೈತರು ಬತ್ತ ಮಾರಾಟಕ್ಕಾಗಿ ಅಲೆದಾಡುವಂತಾಗಿದೆ. ಗಂಗಾವತಿ ತಾಲೂಕಿನಲ್ಲಿ 1 ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬತ್ತ ಬೆಳೆದಿದ್ದು, ಬೆಳೆದ ರೈತರಿಗೆ ತಕ್ಕಂತೆ ಬೆಲೆ ಸಿಗದೆ ಇರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಖರೀದಿ ಕೇಂದ್ರದಲ್ಲಿ ಸಾಮಾನ್ಯ ಬತ್ತದ ದರ 75 ಕೆಜಿಗೆ 1,888 ಇದೆ. ಎ ಗ್ರೇಡ್ ಬತ್ತದ ದರ 75 ಕೆಜಿಗೆ 1,418 ನಿಗದಿಪಡಿಸಿದೆ. ಆದರೆ ಬತ್ತ ಖರೀದಿ ಮಾಡುವವರೇ ಕೇಂದ್ರದಲ್ಲಿ ಇಲ್ಲದಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ಖಾಸಗಿ ಬತ್ತ ಖರೀದಿ ಮಳಿಗೆಗಳಲ್ಲಿ 75 ಕೆಜಿ ಬತ್ತ ಆರ್‌ಎನ್‌ಆರ್ 1,100-1,200, ಕಾವೇರಿ ಸೋನಾ 1,300, ಹಳೆಯ ಸೋನಾ 2,000 ಖರೀದಿ ಮಾಡುತ್ತಿದ್ದಾರೆ. ಆದರೆ ರೈತರಿಗೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಸಿಗುತ್ತಿದೆ. ಖರ್ಚು ಮಾಡಿದಷ್ಟೂಆದಾಯ ಬರುತ್ತಿಲ್ಲ ಎಂಬ ಕೊರಗು ರೈತರಲ್ಲಿದೆ.
ಸರ್ಕಾರ ಒಂದು ತಿಂಗಳ ಹಿಂದೆ ಬತ್ತ ಖರೀದಿ ಕೇಂದ್ರ ಪ್ರಾರಂಭಿಸಲು ಸೂಚನೆ ನೀಡಿತ್ತು. ಆನಂತರ ಕೇವಲ 70 ರೈತರ ನೋಂದಣಿಯಾಗಿದೆ. ವೆಬ್‌ಸೈಟ್ ಬಂದ್ ಆಗಿದ್ದರಿಂದ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಕಳೆದ ವರ್ಷ ಸರ್ಕಾರದಿಂದ ರೈತರಿಗೆ 10 ಲಕ್ಷ ಬಾಕಿ ಬರಬೇಕಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವ್ಯವಸ್ಥಾಪಕರು ಹಾಗೂ ಬತ್ತ ಖರೀದಿ ಕೇಂದ್ರದ ಅಧಿಕಾರಿ ಚಂದ್ರಶೇಖರ ರಡ್ಡಿ ತಿಳಿಸಿದ್ದಾರೆ.
ಗಂಗಾವತಿಯಲ್ಲಿ ಬತ್ತ ಖರೀದಿ ಕೇಂದ್ರ ಪ್ರಾರಂಭ ಮಾಡಿದರೂ ರೈತರಿಂದ ಬತ್ತ ಖರೀದಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಕೃಷಿ ಸಚಿವರು ಬತ್ತ ಖರೀದಿ ಕೇಂದ್ರ ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ. ಆದರೆ ಇಲ್ಲಿಯ ಅಧಿಕಾರಿಗಳು ಗೋಲ್‌ಮಾಲ್ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ರೈತರು ಬತ್ತವನ್ನು ವಾಹನದಲ್ಲಿ ಹಾಕಿಕೊಂಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೆ ಗಮನಹರಿಸಬೇಕು ಎಂದು ತೋಳದ-ಉಳೇನೂರು ರೈತ ಹನುಮಂತಪ್ಪ ನಾಯಕ ತಿಳಿಸಿದ್ದಾರೆ.