ರಾಯಚೂರು ರೈತರಿಗೆ ಕೃಷ್ಣಮೃಗಗಳ ಕಾಟ: ಕಂಗಾಲಾದ ಅನ್ನದಾತ..!
ಕೃಷ್ಣಮೃಗಗಳು ಓಡಿಸಲು ಜಮೀನಿನ ಬಳಿ ಕೂಲಿ ಆಳುಗಳು ಇಟ್ಟ ರೈತರು
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು(ಜು.27): ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳ ಪೈಕಿ ಕೃಷ್ಣಮೃಗಗಳು(Black Buck) ಕೂಡ ಒಂದಾಗಿವೆ. ಆದ್ರೆ ರಾಯಚೂರು ತಾಲೂಕಿನಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಕೃಷ್ಣಮೃಗಗಳ ಸಂತತಿ ಹೆಚ್ಚಾಗುತ್ತಿದೆ. ವರ್ಷದ 8 ತಿಂಗಳ ಕಾಲ ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಕೃಷ್ಣಮೃಗಗಳ ಮುಂಗಾರು ಮಳೆ ಬಳಿಕ ರಾಯಚೂರು ತಾಲೂಕಿನ ರೈತರಿಗೆ ಕಾಟ ನೀಡಲು ಶುರು ಮಾಡಿವೆ. ಸಾಧು ಪ್ರಾಣಿಗಳು ಎಂದು ಕರೆಸಿಕೊಳ್ಳುವ ಕೃಷ್ಣಾಮೃಗಗಳು ನೀಡುವ ಕಾಟಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಕೆಲ ರೈತರು ಅಂತೂ ಕೃಷ್ಣಾಮೃಗಗಳ ಹಾವಳಿಯಿಂದ ಒಂದೇ ಜಮೀನಿನಲ್ಲಿ ಎರಡು ಮೂರು ಬಾರಿ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷ್ಣಮೃಗಗಳ ಕಾಟಕ್ಕೆ ಬೇಸತ್ತು ಹೋದ ಅನ್ನದಾತರು:
ಬೆಳೆಗೆ ರೋಗ ಬಂದ್ರೆ ಔಷಧಿ ತಂದು ಸಿಂಪಡಣೆ ಮಾಡಿ ಬೆಳೆ ಉಳಿಸಿಕೊಳ್ಳಬಹುದು. ಆದ್ರೆ ಕೃಷ್ಣಾಮೃಗಗಳ ವಿಚಾರದಲ್ಲಿ ಹಾಗೇ ರೈತರು ಮಾಡದಂತೆ ಆಗಿದೆ. ರೈತರು ಜಮೀನಿಗೆ ಬರುತ್ತಿದ್ದಂತೆ ಜಮೀನುಗಳಿಂದ ಕೃಷ್ಣಾಮೃಗಗಳ ಗುಂಪು ಓಡಿ ಹೋಗಿ ಬಿಡುತ್ತವೆ.
Raichur: ಬಸ್ ಸೌಕರ್ಯಕ್ಕೆ ಆಗ್ರಹಿಸಿ ಡಿಪೋಗೆ ಮುತ್ತಿಗೆ
ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ರೈತರ ಬಾಳು:
ರೈತರ ಬೆಳೆಗಳಿಗೆ ಈವರೆಗೆ ಕೀಟಬಾಧೆ ಹಾಗೂ ನೀರಿನ ಅಭಾವ ಕಾಡುತ್ತಿತ್ತು. ಆದರೆ, ಈಗ ಕೃಷ್ಣಮೃಗಗಳ ಕಾಟ ರೈತರಿಗೆ ತಲೆನೋವು ತಂದಿದೆ. ರಾಯಚೂರು ತಾಲೂಕಿನ ಮಂಚಲಾಪೂರ, ಮರ್ಚೆಡ್, ಫತ್ತೆಪೂರು, ಜಾಗೀರ್ ವೆಂಕಟಪೂರ ಸೇರಿದಂತೆ ವಿವಿಧ ಗ್ರಾಮದಲ್ಲಿ ಬರೀ ಕೃಷ್ಣಮೃಗಗಳ ಕಾಟದ ಬಗ್ಗೆ ಚರ್ಚೆ ಶುರುವಾಗಿದೆ. ಬಿತ್ತನೆ ಮಾಡಿ ಹತ್ತಿ ಬೆಳೆ ಮೊಳಕೆ ಒಡೆದು ಒಂದು -ಎರಡೆರಡು ಎಲೆಗಳನ್ನು ಹೊತ್ತು ನಿಂತ ಬೆಳೆಗಳನ್ನ ಕೃಷ್ಣಮೃಗಗಳು ತಿನ್ನುತ್ತಿವೆ. ಇದರಿಂದ ರೈತರಿಗೆ ಮತ್ತೊಮ್ಮೆ ಬಿತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ದಿನನಿತ್ಯ ಜಮೀನುಗಳಲ್ಲಿ ಕೃಷ್ಣಮೃಗಗಳನ್ನು ಕಾಯುವುದೇ ರೈತರಿಗೆ ಕೆಲಸವಾಗಿದೆ.
ಪ್ರವಾಹಕ್ಕೆ ಹೆದರಿ ಜಮೀನುಗಳತ್ತ ಮುಖ ಮಾಡಿದ ಕೃಷ್ಣಮೃಗಗಳು
ರಾಯಚೂರು ಕೃಷ್ಣ ನದಿ ತೀರದಲ್ಲಿ ನೂರಾರು ಕೃಷ್ಣಮೃಗಗಳು ವಾಸವಾಗಿವೆ. ವರ್ಷದ 8 ತಿಂಗಳ ಕಾಲ ಕೃಷ್ಣಮೃಗಗಳು ಯಾರ ಕಣ್ಣಿಗೂ ಕಾಣದಂತೆ ನದಿ ತೀರದಲ್ಲಿ ವಾಸವಾಗಿರುತ್ತವೆ. ಮಳೆಗಾಲ ಬಂತು ಅಂದ್ರೆ ಸಾಕು ಕೃಷ್ಣಮೃಗಗಳು ರಾಯಚೂರು ತಾಲೂಕಿನ ರೈತರ ಜಮೀನಿನಲ್ಲಿ ಓಡಾಟ ಶುರು ಮಾಡುತ್ತವೆ. ರೈತರು ಬಿತ್ತಿದ ಶೇಂಗಾ, ಜೋಳ, ಹತ್ತಿ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಕೃಷ್ಣಮೃಗಗಳ ದಾಳಿಯಿಂದ ಹಾಳಾಗಿ ಹೋಗುತ್ತಿವೆ. ಅದರಲ್ಲಿ ಚಿಕ್ಕ ಸಸಿಗಳನ್ನು ಕೃಷ್ಣಮೃಗಗಳು ಕಡಿದು ತಿಂದು ಹೋಗುತ್ತಿವೆ. ಹೀಗಾಗಿ ರೈತರು ಗೋಳಾಟ ಮಾಡುತ್ತಾ ಮತ್ತೆ ಮರು ಬಿತ್ತನೆ ಮಾಡಿ, ಜಮೀನುಗಳಲ್ಲಿ ಬೆಳೆ ಕಾಯುವುದೇ ಕೆಲಸ ಮಾಡಿಕೊಂಡಿದ್ದಾರೆ.
ಕೃಷ್ಣಮೃಗಗಳ ಕಾಟಕ್ಕೆ ಕೂಲಿಗಳು ಇಟ್ಟು ಬೆಳೆ ರಕ್ಷಣೆ :
ನದಿ ಪಾತ್ರದಲ್ಲಿ ವಾಸವಾಗಿರುತ್ತಿದ್ದ ಕೃಷ್ಣಮೃಗಗಳು ರೈತರ ಜಮೀನಿನಲ್ಲಿ ಓಡಾಟ ಮಾಡಲು ಶುರು ಮಾಡಿವೆ. ಮುಂಗಾರು ಬಿತ್ತನೆ ವೇಳೆಯಲ್ಲಿ ಕಾಣಿಸಿಕೊಳ್ಳುವ ಕೃಷ್ಣಮೃಗಗಳು ರೈತರು ಬಿತ್ತನೆ ಮಾಡಿದ ಮೊಳಕೆ ಒಡೆದ ಬೆಳೆ ತಿನ್ನಲು ಶುರು ಮಾಡಿವೆ. ಹೀಗಾಗಿ ರೈತರು ನಿತ್ಯ ಕೂಲಿ ಆಳುಗಳನ್ನು ಇಟ್ಟು ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಆಳುಗಳು ಮನೆಗೆ ಹೋದ ಮೇಲೆ ಮತ್ತೆ ರಾತ್ರಿ ವೇಳೆ ಕೃಷ್ಣಾಮೃಗಗಳು ಜಮೀನಿಗೆ ಬಂದು ಬೆಳೆ ತಿಂದು ಹೋಗುತ್ತಿದೆ. ಇದು ರೈತರಿಗೆ ಏನು ಮಾಡಬೇಕು ಎಂಬುದು ದಿಕ್ಕೂ ಕಾಣದಂತೆ ಆಗಿದೆ. ಕೆಲ ರೈತರು ಕೃಷ್ಣಾಮೃಗಗಳ ಕಾಟಕ್ಕೆ ಕೃಷಿಯೇ ಬೇಡ ಅನ್ನುವಷ್ಟರ ಮಟ್ಟಿಗೆ ರೋಸಿ ಹೋಗಿದ್ದಾರೆ.
ಹತ್ತಾರು ರೈತರಿಂದ ಅರಣ್ಯಾಧಿಕಾರಿಗಳಿಗೆ ದೂರು:
ಕೃಷ್ಣಮೃಗಗಳ ಕಾಟಕ್ಕೆ ಬೇಸತ್ತು ರೈತರು ರಾಯಚೂರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದರು. ಅರಣ್ಯ ಅಧಿಕಾರಿಗಳು ರೈತರ ದೂರು ಆಧರಿಸಿ ಸ್ಥಳ ಪರಿಶೀಲನೆ ನಡೆಸಿದರು. ಕೃಷಿ ಇಲಾಖೆಯೂ ಅರಣ್ಯ ಅಧಿಕಾರಿಗಳ ವರದಿಯಂತೆ ಕೃಷಿ ಇಲಾಖೆಯ ನಿಯಮದಂತೆ ಬೆಳೆ ಪರಿಹಾರ ನೀಡುತ್ತೆ. ಇದು ಪ್ರತಿ ವರ್ಷವೂ ಇದೇ ರೀತಿಯಾಗಿ ನಡೆಯುತ್ತಿದೆ. ನಮಗೆ ಕೃಷ್ಣಾಮೃಗಗಳಿಂದ ಶಾಶ್ವತ ಮುಕ್ತಿ ದೊರಕಿಕೊಂಡಬೇಕೆಂದು ರೈತರು ಅಧಿಕಾರಿಗಳ ಬಳಿ ಮನವಿ ಮಾಡಿದ್ರು.
ಕೃಷ್ಣ ಮೃಗಗಳ ಬಗ್ಗೆ ಅರಣ್ಯ ಅಧಿಕಾರಿಗಳು ಹೇಳುವುದೇನು?
ರಾಜ್ಯದಲ್ಲಿ ಕೃಷ್ಣಮೃಗಗಳ ಸಂತತಿ ಅಳಿವಿನಂಚಿಗೆ ಬಂದಿದೆ. ಆದ್ರೆ ರಾಯಚೂರು ತಾಲೂಕಿನ ಕೃಷ್ಣ ನದಿ ತೀರದಲ್ಲಿ ಮಾತ್ರ ಕೃಷ್ಣಮೃಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಇಂತಹ ಪ್ರಾಣಿಗಳ ರಕ್ಷಣೆ ನಮ್ಮ ಎಲ್ಲರ ಕರ್ತವ್ಯವಾಗಿದೆ. ಕೃಷ್ಣಾಮೃಗಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೆ ಒಳಪಟ್ಟಿವೆ. ಅವುಗಳ ರಕ್ಷಣೆಗೆ ನಾವು ಮುಂದಾಗಬೇಕಾಗಿದೆ. ಕೃಷ್ಣ ನದಿ ತೀರದಲ್ಲಿ ಕೃಷ್ಣಾಮೃಗಗಳ ವಾಸಕ್ಕೆ ಅನುಕೂಲಕರ ವಾತಾವರಣ ಇರುವುದರಿಂದ ಕೃಷ್ಣಾಮೃಗಗಳು ವಾಸವಾಗಿವೆ.
ರಾಯಚೂರು: ಆ.10ರಿಂದ 16ವರೆಗೆ ಮಂತ್ರಾಲಯದಲ್ಲಿ ರಾಘವೇಂದ್ರ ಆರಾಧನೆ
ರೈತರು ಬೆಳೆ ಹಾನಿ ಆಗಿದ್ರೆ, ಪರಿಹಾರ ಕೋರಿ ಅರ್ಜಿ ಸಲ್ಲಿಕೆ ಮಾಡಿ, ನಾವು ಮತ್ತು ಕೃಷಿ ಇಲಾಖೆಯವರು ಪರಿಶೀಲನೆ ನಡೆಸಿ ಕೃಷ್ಣಮೃಗಗಳಿಂದ ಹಾಳಾಗಿದ ಬೆಳೆಗೆ ಸರ್ಕಾರ ಪರಿಹಾರ ನೀಡುತ್ತೆ..ರೈತರು ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ರಾಯಚೂರು ಪ್ರಾದೇಶಿಕ ಅರಣ್ಯಾಧಿಕಾರಿಗಳು ರೈತರಿಗೆ ತಿಳಿಸಿದರು.
ಒಟ್ಟಿನಲ್ಲಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿ ಮೊಳಕೆ ಒಡೆದ ಬೆಳೆ ಕೃಷ್ಣಮೃಗಗಳ ಪಾಲಾಗುತ್ತಿದೆ. ಹೀಗಾಗಿ ಅನ್ನದಾತರು ದಾರಿ ಕಾಣದೇ ಕಂಗಾಲಾಗಿ ಹೋಗಿದ್ದಾರೆ.