Asianet Suvarna News Asianet Suvarna News

ವಿಜಯಪುರ: ಕೈಕೊಟ್ಟ ರೋಹಿಣಿ ಮಳೆ, ಕಂಗಾಲಾದ ಅನ್ನದಾತ..!

ರೋಹಿಣಿ ಮಳೆ ಅಲ್ಲಷ್ಟು ಇಲ್ಲಷ್ಟು ಸಾಧಾರಣವಾಗಿ ಸುರಿದು ರೈತ ಸಮುದಾಯಕ್ಕೆ ಕೈ ಕೊಟ್ಟಿದೆ. ಜೂನ್‌ 8ರಂದು ಮೃಗಶಿರ ಮಳೆ ಆರಂಭವಾಗಬೇಕಿತ್ತು. ಈಗ ಮೃಗಶಿರ ಮಳೆಯಾದರೂ ಆಗುತ್ತದೆಯೋ ಇಲ್ಲವೋ ಎಂಬ ಚಿಂತೆ ರೈತ ಸಮುದಾಯವನ್ನು ಕಾಡುತ್ತಿದೆ. ಹಾಗಾಗಿ, ಈಗ ಎಲ್ಲ ರೈತರ ಚಿತ್ತ ಮೃಗಶಿರ ಮಳೆಯತ್ತ ನೆಟ್ಟಿದೆ.

Farmers Faces For Not Come Rain Vijayapura grg
Author
First Published Jun 7, 2023, 9:25 PM IST

ರುದ್ರಪ್ಪ ಆಸಂಗಿ

ವಿಜಯಪುರ(ಜೂ.07):  ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಉರಿ ಬಿಸಿಲು ಅದರ ಜೊತೆಗೆ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ರೋಹಿಣಿ ಮಳೆಯಾಗುತ್ತದೆ ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ರೈತರು ಜಮೀನು ಹಸನು ಮಾಡಿ ತುದಿಗಾಲ ಮೇಲೆ ನಿಂತಿದ್ದರು. ಆದರೆ ರೋಹಿಣಿ ಮಳೆ ಅಲ್ಲಷ್ಟು ಇಲ್ಲಷ್ಟು ಸಾಧಾರಣವಾಗಿ ಸುರಿದು ರೈತ ಸಮುದಾಯಕ್ಕೆ ಕೈ ಕೊಟ್ಟಿದೆ. ಜೂನ್‌ 8ರಂದು ಮೃಗಶಿರ ಮಳೆ ಆರಂಭವಾಗಬೇಕಿತ್ತು. ಈಗ ಮೃಗಶಿರ ಮಳೆಯಾದರೂ ಆಗುತ್ತದೆಯೋ ಇಲ್ಲವೋ ಎಂಬ ಚಿಂತೆ ರೈತ ಸಮುದಾಯವನ್ನು ಕಾಡುತ್ತಿದೆ. ಹಾಗಾಗಿ, ಈಗ ಎಲ್ಲ ರೈತರ ಚಿತ್ತ ಮೃಗಶಿರ ಮಳೆಯತ್ತ ನೆಟ್ಟಿದೆ.

ರೋಹಿಣಿ ಮಳೆಯಾದರೆ ಓಣೆಲ್ಲಾ ಜೋಳ... ಎಂಬ ಪ್ರತೀತಿ ಜಿಲ್ಲೆಯ ರೈತರಲ್ಲಿ ಇತ್ತು. ಆದರೆ ರೋಹಿಣಿ ಮಳೆಯಾಗದೆ ರೈತ ವಲಯದಲ್ಲಿ ಸಾಕಷ್ಟುಚಿಂತೆಗೀಡು ಮಾಡಿದೆ. ಜೂನ್‌ 8ರಂದು ಮೃಗಶಿರ ಮಳೆ ಆಗಮಿಸಲಿದ್ದು, ಈ ಮಳೆಯಾದರೂ ಕೈ ಹಿಡಿಯುತ್ತದೆ ಇಲ್ಲವೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ರೋಹಿಣಿ ಮಳೆಯಾದರೆ ರೈತರು ತುಸು ವಿಳಂಬವಾಗಿ ಭೂಮಿಗೆ ಕಾಳು ಹಾಕುತ್ತಾರೆ. ಈ ಮಳೆ ಸಕಾಲಕ್ಕೆ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಬಿದ್ದರೆ ರೈತರು ಹುಲುಸಾದ ಬೆಳೆ ಬೆಳೆಯಬಹುದಾಗಿದೆ. ಆದರೆ, ಈ ಮಳೆಯ ಮೇಲೆಯೇ ರೈತನ ಬದುಕು ನಿಂತಿದೆ.

ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ: ಸಚಿವ ಶಿವಾನಂದ ಪಾಟೀಲ

ಮುಂಗಾರು ಹಂಗಾಮಿನ ಮಳೆ ಕಾಳುಕಡಿಗಳ ಬೆಳೆಯಾಗಿದೆ. ಈ ಮಳೆಯಾದರೆ ಕಾಳುಕಡಿ ಸಮೃದ್ಧಿವಾಗಿ ಬೆಳೆಯುತ್ತವೆ. ರೈತರು ಈ ಹಂಗಾಮಿನಲ್ಲಿ ಹೆಚ್ಚು ಹೆಚ್ಚಾಗಿ ದ್ವಿದಳಧಾನ್ಯ ಬೆಳೆಯುತ್ತಾರೆ. ರೋಹಿಣಿ ಮಳೆಯಂತೆ ಮೃಗಶಿರ ಮಳೆ ಕೈ ಕೊಟ್ಟರೆ ರೈತರ ಬದುಕು ಮತ್ತೆ ಚಿಂತಾಜನಕವಾಗುತ್ತದೆ. ರೈತರು ಈಗ ಆಕಾಶದತ್ತ ನೋಡುತ್ತಿದ್ದಾರೆ.

ಮಳೆಯಾದರೂ ಬಿತ್ತನೆಗೆ ತೇವಾಂಶದ ಕೊರತೆ

ಏಪ್ರಿಲ್‌ ತಿಂಗಳಲ್ಲಿ ವಾಡಿಕೆ ಮಳೆ 15 ಮಿಲಿ ಮೀಟರ್‌, 36 ಮಿಲಿ ಮೀಟರ್‌ ಮಳೆಯಾಗಿದೆ. ಮೇ ತಿಂಗಳಲ್ಲಿ 37,5 ಮಿಲಿ ಮೀಟರ್‌ ವಾಡಿಕೆ ಮಳೆ ಇದೆ. 47.9 ಮಿಲಿ ಮೀಟರ್‌ ಮಳೆಯಾಗಿದೆ. ಮುಂಗಾರು ಪೂರ್ವ ಮಳೆ ಭೂಮಿ ಬಿತ್ತನೆಗೆ ಹದಗೊಳಿಸಲು ಅನುಕೂಲವಾಗಿದೆ. ಆದರೆ ಬಿತ್ತನೆಗೆ ಸಕಾಲಕ್ಕೆ ಮಳೆಯಾಗದೇ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ರೋಹಿಣಿ ಮಳೆ ಕೈ ಕೊಟ್ಟಿದೆ. ಮೃಗಶಿರ ಮಳೆ ಕೈ ಹಿಡಿಯುತ್ತದೆ ಎಂಬ ಆಶಾ ಭಾವನೆ ರೈತರಲ್ಲಿ ಇದೆ. ರೈತರ ಈ ಆಶಯ ಈಡೇರಿದರೆ ರೈತರು ಸಮೃದ್ಧ ಬೆಳೆ ಪಡೆದು ನೆಮ್ಮದಿ ಜೀವನ ಸಾಗಿಸಬಹುದು. ಆದರೆ ಈ ವರ್ಷ ವರುಣ ಕೈ ಹಿಡಿಯುತ್ತಾನೆಯೋ ಇಲ್ಲವೋ ಎಂಬ ಅಳಕು ಅನ್ನದಾತನಲ್ಲಿ ಮನೆ ಮಾಡಿದೆ.

ರೋಹಿಣಿ ಮಳೆಗೆ ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಮುಂಗಾರು ಪೂರ್ವ ಬಂದಿದ್ದರಿಂದಾಗಿ ವಿಪರೀತ ಬಿಸಿಲಿನ ಪ್ರಖರತೆಗೆ ಭೂಮಿಯಲ್ಲಿ ತೇವಾಂಶವಿಲ್ಲದೆ ಬಿತ್ತನೆ ಮಾಡಲು ಆಗಿಲ್ಲ. ಸಕಾಲಕ್ಕೆ ರೋಹಿಣಿ ಮಳೆಯಾಗಿದ್ದರೆ ಹೆಸರು, ಉದ್ದು ಬಿತ್ತನೆ ಮಾಡಬಹುದಿತ್ತು. ಆದರೆ ಮಳೆಯಾಗದೆ ಬಿತ್ತನೆ ಆಗಲಿಲ್ಲ. ಇನ್ನು ಬಿತ್ತನೆ ಶೂನ್ಯವಾಗಿದೆ.

7,36,794 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ

ಪ್ರಸಕ್ತ ವರ್ಷ ಕೃಷಿ ಇಲಾಖೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 7,36,794 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಮುಂಗಾರು ಹಂಗಾಮಿನಲ್ಲಿ ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ ಸೇರಿದಂತೆ 7,36,794 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಬಸವನ ಬಾಗೇವಾಡಿ ತಾಲೂಕು-1,17,417 ಲಕ್ಷ ಹೆಕ್ಟೇರ್‌, ವಿಜಯಪುರ ತಾಲೂಕು-1,65,330 ಲಕ್ಷ ಹೆಕ್ಟೇರ್‌, ಇಂಡಿ ತಾಲೂಕು-1,64,178 ಲಕ್ಷ ಹೆಕ್ಟೇರ್‌, ಮುದ್ದೇಬಿಹಾಳ ತಾಲೂಕು-1,11,401 ಲಕ್ಷ ಹೆಕ್ಟೇರ್‌, ಸಿಂದಗಿ ತಾಲೂಕು-1,78,468 ಲಕ್ಷ ಹೆಕ್ಟೇರ್‌ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7,36,794 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ.

ಈಗಾಗಲೇ ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು 88,738 ಟನ್‌ ರಸಗೊಬ್ಬರ ದಾಸ್ತಾನು ಮಾಡಿದೆ. 32,746 ಟನ್‌ ಯೂರಿಯಾ, 14,452 ಟನ್‌ ಡಿಎಪಿ, 37,002 ಟನ್‌ ಕಾಂಪ್ಲೆಕ್ಸ್‌, 698 ಟನ್‌ ಎಂಒಪಿ ರಸಗೊಬ್ಬರ ಹಾಗೂ 3,840ಟನ್‌ ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನು ಮಾಡಿದೆ. ಅಗತ್ಯದ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ತೊಗರಿ 9,200 ಕ್ವಿಂಟಲ್‌, ಮೆಕ್ಕೆಜೋಳ 905 ಕ್ವಿಂಟಲ್‌, ಹೆಸರು 23 ಕ್ವಿಂಟಲ್‌, ಸಜ್ಜೆ 39 ಕ್ವಿಂಟಲ್‌, ಸೂರ್ಯಕಾಂತಿ 36 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಮಾಡಿ ರೈತ ಸಂಪರ್ಕ ಕೇಂದ್ರಗಳಿಗೆ ಕಳುಹಿಸಿ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಕೈಗಾರಿಕೆ ಸ್ಥಾಪನೆಗೆ ಏಕಗವಾಕ್ಷಿ ವ್ಯವಸ್ಥೆ: ಸಚಿವ ಎಂ.ಬಿ.ಪಾಟೀಲ್‌

ರೋಹಿಣಿ ಮಳೆಯಾಗಿದ್ದರೆ ಹೆಸರು, ಉದ್ದು ಬಿತ್ತನೆ ಮಾಡ್ತಿದ್ದೀವಿ. ಇನ್ನು ಮಳೆಯಾಗಿಲ್ಲ. ಭೂಮಿಯಲ್ಲಿ ತೇವಾಂಶವಿಲ್ಲದ್ದರಿಂದ ಬಿತ್ತನೆ ಮಾಡಿಲ್ಲ. ಮನೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ ಮಾಡಿಕೊಂಡಿದ್ದೇವೆ. ಆದರೆ, ಇನ್ನೂ ಮಳೆಯಾಗುತ್ತಿಲ್ಲ. ಮೃಗಶಿರ ಮಳೆಯಾದರೂ ಆಗುತ್ತದೆಯೋ ಇಲ್ಲವೋ ಎಂದು ಆಕಾಶದತ್ತ ಮುಖ ಮಾಡಿದ್ದೇವೆ ಅಂತ ಕತ್ನಳ್ಳಿ ರೈತ ಭೀಮರಾಯ ಕೋಟ್ಯಾಳ ಹೇಳಿದ್ದಾರೆ. 

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ವಿತರಣೆಗೆ ರೈತ ಸಂಪರ್ಕ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ರೋಹಿಣಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಬಿತ್ತನೆಯಾಗಿಲ್ಲ ಅಂತ ವಿಜಯಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್‌.ರೂಪಾ ತಿಳಿಸಿದ್ದಾರೆ. 

Follow Us:
Download App:
  • android
  • ios