Tumakur : ನ್ಯಾಫೆಡ್ ಕೇಂದ್ರ ತೆರೆಯಲು ಅನ್ನದಾತರ ಆಗ್ರಹ
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬ್ಬರಿ, ಅಡಕೆ ಮತ್ತು ರಾಗಿಯ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ನ್ಯಾಫೆಡ್ ಕೇಂದ್ರವನ್ನು ತೆರೆಯಬೇಕೆಂದು ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಮತ್ತು ಗೌರವಾಧ್ಯಕ್ಷ ಅಸ್ಲಾಂ ಪಾಷಾ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ತುರುವೇಕೆರೆ (ಡಿ. 16 ): ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬ್ಬರಿ, ಅಡಕೆ ಮತ್ತು ರಾಗಿಯ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ನ್ಯಾಫೆಡ್ ಕೇಂದ್ರವನ್ನು ತೆರೆಯಬೇಕೆಂದು ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಮತ್ತು ಗೌರವಾಧ್ಯಕ್ಷ ಅಸ್ಲಾಂ ಪಾಷಾ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಲ್ಪತರು ನಾಡು ಎಂದು ಪ್ರಖ್ಯಾತಿ ಪಡೆದಿರುವ ತಾಲೂಕಿನಲ್ಲಿ ಪ್ರಮುಖ ಬೆಳೆ ತೆಂಗು (Coconut) ಬೆಳೆಯಾಗಿದೆ. ಸಾವಿರಾರು ರೈತರು (Farmers) ತೆಂಗು ಉತ್ಪಾದಿಸುತ್ತಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಕ್ವಿಂಟಲ್‌ಗೆ 18 ಸಾವಿರ ಇದ್ದ ಕೊಬ್ಬರಿ ಬೆಲೆ ಡಿಸೆಂಬರ್‌ನಲ್ಲಿ ಕೇವಲ 12 ಸಾವಿರಕ್ಕೆ ಕುಸಿದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ತೆಂಗು ಬೆಳೆಯಲು ಮಾಡಿರುವ ಉತ್ಪಾದನಾ ವೆಚ್ಚವು ಸಹ ತೆಂಗು ಬೆಳೆಗಾರಿಗೆ ಸಿಗದಂತಹ ಪರಿಸ್ಥಿತಿ ಇದೆ. ಇದರಿಂದ ತೆಂಗು ಬೆಳೆಯುವ ರೈತರು ಕಂಗಾಲಾಗಿದ್ದಾರೆ. ತೆಂಗು ಬೆಳೆಯುವ ರೈತರ ಹಿತ ಕಾಪಾಡಲು ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಪ್ರತಿ ಕ್ವಿಂಟಲ್ ಕೊಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ನ್ಯಾಪೇಡ್ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ತುರುವೇಕೆರೆಯಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ತೆಂಗು ಮತ್ತು ಕೊಬ್ಬರಿ ಹರಾಜು ಪ್ರಕ್ರಿಯೆ ಪ್ರಾರಂಭಿಸಿ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶ್ರೀನಿವಾಸ್ ಗೌಡ ಮತ್ತು ಅಸ್ಲಾಂಪಾಷಾ ಆಗ್ರಹಿಸಿದರು. ತಾಲೂಕಿನಲ್ಲಿ ರೈತರು ರಾಗಿಯನ್ನು ಹೆಚ್ಚು ಬೆಳೆದಿದ್ದಾರೆ. ಕ್ವಿಂಟಲ್ ರಾಗಿಗೆ 5000 ರು. ನಿಗದಿ ಮಾಡಬೇಕು, ರಾಗಿ ಖರೀದಿ ಕೇಂದ್ರವನ್ನು ಶೀಘ್ರವೇ ಪ್ರಾರಂಭಿಸಬೇಕು ಹಾಗೂ ಒಬ್ಬ ರೈತನಿಂದ 50 ಕ್ವಿಂಟಲ್‌ವರೆಗೆ ರಾಗಿ ಖರೀದಿಸಬೇಕು ಎಂದು ಆಗ್ರಹಿಸಿದರು. ಪ್ರತಿ ಕ್ವಿಂಟಾಲ್ ಅಡಕೆಗೆ 50 ಸಾವಿರ ರು.ಗಳನ್ನು ನಿಗದಿಗೊಳಿಸಬೇಕೆಂದೂ ಸಹ ಆಗ್ರಹಿಸಿದರು.
ಕೊಬ್ಬರಿ, ತೆಂಗು, ಅಡಕೆ ಮತ್ತು ರಾಗಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಮತ್ತು ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಆಗ್ರಹಿಸಿ ಡಿ.19ರಂದು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು. ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಹಾಗೂ ಗೌರವಾಧ್ಯಕ್ಷ ಅಸ್ಲಾಂ ಪಾಷಾ ತಿಳಿಸಿದದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶಿವಬಸವಯ್ಯ, ಚಂದ್ರಯ್ಯ, ಕೊಟ್ಟೂರನ ಕೊಟ್ಟಿಗೆ ಶ್ರೀನಿವಾಸ್, ಪುರುಷೋತ್ತಮ್, ನಟರಾಜು, ರಾಜಶೇಖರ್, ಡ್ಯಾನಿಯಲ್, ಸಿಐಟಿಯು ಸತೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರಯ್ಯ, ವಕೀಲ ನಟರಾಜು ಸೇರಿದಂತೆ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.
ಅನ್ನದಾತರ ನಿದ್ದೆಗೆಡಿಸಿದ ಮಳೆ
ಎಸ್.ಆರ್. ಪ್ರಕಾಶ್
ಸಾಲಿಗ್ರಾಮ (ಡಿ.13): ಮುಂಗಾರು ಹಂಗಾಮಿನ ಭತ್ತ ತೆನೆ ತುಂಬಿ ಬಾಗಿ ಗದ್ದೆಗಳಲ್ಲಿ ಬೆಳೆ ಮಾಗಿ ನಿಂತಿದೆ. ಆದರೆ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ, ಒಮ್ಮಲೇ ಸುರಿಯುವ ಮಳೆ, ಕಣ್ಣಾ ಮುಚ್ಚಾಲೆಯ ಮಳೆಯಾತಂಕ ಅನ್ನದಾತರ ನಿದ್ದೆಗೆಡಿಸಿದೆ.
ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಕೃಷ್ಣ ರಾಜನಗರ ತಾಲೂಕಿನ ಸುಮಾರು 25 ಸಾವಿರಕ್ಕೂ ಅಧಿಕ ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಪ್ರದೇಶಗಳ ಗದ್ದೆಗಳಲ್ಲಿ (Paddy Field) ಸಮೃದ್ಧಿಯಾಗಿ ತುಂಬಿದ ಭತ್ತದ ತೆನೆ ಬಾಗಿ ನಿಂತಿದೆ, ಕೆಲವೆಡೆ ಭತ್ತದ ಕಟಾವು ಮುಗಿಸಿ ವರ್ಷದ ಕೂಳು ಮನೆ ಸೇರಿದೆ. ಆದರೆ ಬಹುತೇಕ ಕಡೆಗಳಲ್ಲಿ ಕಟಾವು ಆರಂಭದ ಹಂತಕ್ಕೆ ತಲುಪಿ ರೈತರ (Farmers) ಬಾಳಲ್ಲಿ ಆಶಾಕಿರಣದ ಮಂದಹಾಸ ಮೂಡಿ ಸುಗ್ಗಿ-ಹುಗ್ಗಿ ಇಷ್ಟೋತ್ತಿಗೆಲ್ಲ ಸಂಭ್ರಮ ಕಳೆಕಟ್ಟುತ್ತಿತ್ತು, ಆದರೆ ಕಷ್ಟಪಟ್ಟು ಬೆಳೆದ ಬೆಳೆ ಕೈಸೇರುವ ಸಮಯಕ್ಕೆ ಸುರಿಯುತ್ತಿರುವ ಅಕಾಲಿಕ ಮಳೆ ರೈತರ ಬಾಳಿಗೆ ಮೊಗ್ಗಲ ಮುಳ್ಳಾಗಿರುವುದು ಕಳವಳಕ್ಕೀಡು ಮಾಡಿದೆ.
ಒಂದಿಷ್ಟುಒಣ ಹವೆ ವಾತಾವರಣವಿದ್ದರೂ, ಮೋಡ ಕವಿದ ವಾತಾವರಣ ಮಳೆ ಮುನ್ಸೂಚನೆ, ಒಮ್ಮೆಲೆ ಬಂದು ಹೋಗುತ್ತಿರುವ ಮಳೆಯ ಕಣ್ಣಾಮುಚ್ಚಾಲೆ. ನಿರೀಕ್ಷಿತ ಬೆಳೆದ ಬೆಳೆ ಮಳೆಗೆ ಸಿಲುಕಿ ಭತ್ತ, ರಾಗಿ ಪೈರಿನಲ್ಲೇ ಮೊಳಕೆಯೊಡೆಯುವ ಭೀತಿ. ಬಿಟ್ಟರೆ ಭತ್ತ ಉದುರುವುದು. ರೋಗ ರುಜಿನದಿಂದ ಇಳುವರಿ ಕುಂಠಿತ ಇನ್ನಿತರ ವಾಣಿಜ್ಯ ಬೆಳೆಗಳ ಕೃಷಿ ಚಟುವಟಿಕೆಗಳ ಸಮಸ್ಯೆಗಳ ಆತಂಕದ ನಡುವೆ ಕಟಾವು ಮುಗಿಸಿ ವರ್ಷದ ಕೂಳು ಉಳಿಸಿಕೊಳ್ಳುವ ಭರದಲ್ಲಿರುವ ರೈತರು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಕಟಾವು ಯಂತ್ರಗಳ ಕೊರತೆಯ ಜತೆಗೆ ಕೂಲಿ ಕಾರ್ಮಿಕರ ಯಂತ್ರಗಳ ಬಾಡಿಗೆ ದುಬಾರಿಯಾಗಿರುವುದು ಗಾಯದ ಮೇಲೆ ಬರೆ ಹಾಕಿದಂತಾಗಿದೆ.
ಈ ಹಿಂದೆ ರೈಸ್ ಮಿಲ…ನವರು ಅವರದ್ದೇ ವಾಹನಗಳಲ್ಲಿ ಯಾವುದೇ ಬಾಡಿಗೆ ಇಲ್ಲದೇ ಭತ್ತ ತುಂಬಿಕೊಂಡು ತಮ್ಮ ಮಿಲ…ಗಳಿಗೆ ಕೊಂಡೊಯ್ಯುತ್ತಿದ್ದರು. ಆದರೆ ಈ ಬಾರಿ ಸರ್ಕಾರ ನೇರವಾಗಿ ಖರೀದಿ ಮಾಡುತ್ತಿರುವುದರಿಂದ ಬಾಡಿಗೆ ವಾಹನಗಳಿಗೆ ಹೆಚ್ಚು ಹಣ ನೀಡಿ ರೈತರೇ ಭತ್ತವನ್ನು ಕೇಂದ್ರಗಳಿಗೆ ಕೊಂಡೊಯ್ಯ ಬೇಕಿರುವುದು ಮತ್ತಷ್ಟುನಷ್ಟದ ಸುಳಿಯಲ್ಲಿ ಸಿಲುಕುವಂತಾಗಿ ಎಂದು ರೈತ ನವೀನ್ ಆರೋಪಿಸುತ್ತಿದ್ದಾರೆ.
ಈಗಾಗಲೇ ಭತ್ತ ಕಟಾವಿನ ಹಂತದಲ್ಲಿದ್ದು ಕೊಯ್ಲು ಮಾಡಿಸುವ ಅನಿವಾರ್ಯತೆಯಿದೆ ಆದರೆ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆದು ನಿಂತಿರುವ ಭತ್ತವನ್ನು ಕಟಾವು ಮಾಡಲು ಆಗುತ್ತಿಲ್ಲ ಹೀಗೆ ಸುರಿಯುತ್ತಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುವುದು. ಈ ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ರೈತರ ಅಸಾಯಕತೆಯನ್ನೆ ಬಂಡವಾಳ ಮಾಡಿಕೊಂಡು ಕಟಾವು ಯಂತ್ರಕ್ಕೂ ಹಾಗೂ ಕೂಲಿ ಕಾರ್ಮಿಕರ ಬೇಡಿಕೆಯೂ ಹೆಚ್ಚಾಗುವುದು, ಇದರಿಂದ ಮಧ್ಯಮ ಮತ್ತು ಬಡ ಕೃಷಿಕರ ರೈತರಿಗೆ ಮತ್ತಷ್ಟುಆರ್ಥಿಕ ಸಂಕಷ್ಟಎದುರಾಗಿದೆ.