ಚಿತ್ರದುರ್ಗ(ಏ.05): ಲಾಕ್‌ ಡೌನ್‌ ಹೊಡೆತಕ್ಕೆ ರೈತರು ಹೈರಾಣವಾಗುತ್ತಿದ್ದಾರೆ. ತರಕಾರಿ, ಹಣ್ಣು ಬೆಳೆದ ರೈತರ ದುಸ್ಥಿತಿ ಬಯಲುಸೀಮೆಯಲ್ಲಿ ಹೇಳತೀರದಂತಿದೆ. ಇಲ್ಲೊಬ್ಬ ರೈತ ಹಾಗಲಕಾಯಿ ಬೆಳೆದು ಕೈ ತುಂಬ ಲಾಭ ಕಾಣುವ ಮುನ್ನವೇ ಕೊರೋನಾ ವೈರಾಣು ಎಫೆಕ್ಟ್ ಅವನ ಶ್ರಮವನ್ನೆಲ್ಲ ಎಡಗಾಲಲ್ಲಿ ಹೊಸಕಿಹಾಕಿದೆ.

ಹಿರಿಯೂರು ತಾಲೂಕಿನ ಸಮುದ್ರದ ಹಳ್ಳಿಯ ರೈತ ನಾರಾಯಣಗೌಡ ಕಷ್ಟಪಟ್ಟು ಹಾಗಲಕಾಯಿ ಬೆಳೆದರು. ಅದೂ ಒಂದೆರಡು ಎಕರೆಯಲ್ಲ, ಬರೋಬ್ಬರಿ ಆರು ಎಕರೆಯಲ್ಲಿ .8 ಲಕ್ಷ ಖರ್ಚು ಮಾಡಿದ್ದಾರೆ. ಆದರೆ ಪ್ರಸ್ತುತ ಲಾಕ್‌ಡೌನ್‌ ಆದೇಶ ಈ ರೈತನ ಪಾಲಿಗೆ ವಿಷವಾಗಿ ಪರಿಣಮಿಸಿದೆ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಹುಲಸಾಗಿ ಬೆಳೆದ ಹಾಗಲ ಬೆಳೆಯನ್ನು ಜಮೀನಿಗೆ ಬಂದು ಕೊಳ್ಳುವರಿಲ್ಲ, ಕೊಯ್ಲು ಮಾಡಿ ಮಾರುಕಟ್ಟೆಗೆ ಒಯ್ದರೆ ಕೇಳುವರೂ ಈಗ ಇಲ್ಲವೇ ಇಲ್ಲ. ಪರಿಣಾಮ ಬಳ್ಳಿಯಲ್ಲಿಯೇ ಹಾಗಲಕಾಯಿಗಳೆಲ್ಲ ಹಣ್ಣಾಗಿ ಉದುರುತ್ತಿವೆ. ಲಾಭವಿರಲಿ, ಅಸಲೂ ದಕ್ಕಿಸಿಕೊಳ್ಳಲಾಗದ ನಾರಾಯಣಗೌಡರೀಗ ಲಕ್ಷಾಂತರ ರು.ಗಳ ಸಾಲದ ಸುಳಿಗೆ ಸಿಲುಕಿದ್ದಾರೆ.

ಹಾಗಲ ಅಡುಗೆಗೆ ಮಾತ್ರವಲ್ಲದೇ, ಉಪಯುಕ್ತ ಔಷಧಿ ಬೆಳೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಎಂಬುದನ್ನು ಕಂಡಿದ್ದೇ ಇಲ್ಲ. ಕಲ್ಲಂಗಡಿ, ಕರಬೂಜ ಬೆಳೆದು ಕೈ ಸುಟ್ಟುಕೊಂಡಿದ್ದ ನಾರಾಯಣಗೌಡ ಅವರು, ಆ ಕಹಿಯನ್ನು ಹಾಗಲದಲ್ಲಿ ಸಿಹಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ 6 ಎಕರೆಯಲ್ಲಿ ಹಾಗಲ ಬೆಳೆಸಿದರು. ಒಂದೆರಡು ಬೀಡು ಸರಕನ್ನು ಮಾರುಕಟ್ಟೆಗೂ ಪೂರೈಸಿದರು.

ಕುಡಿಯಲು ಹಣ ನೀಡಲು ಪೀಡಿಸಿದ ಅಣ್ಣ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ತಮ್ಮ

ಆದರೆ ಮಾರ್ಚ್ ಆರಂಭದಲ್ಲಿ ಕೆಜಿಗೆ ಐದಾರು ರು.ಗಳ ಆಸುಪಾಸಿನಲ್ಲೇ ಬೆಲೆ ಇದ್ದುದರಿಂದ ಲಾಭವೇನೂ ಗಿಟ್ಟಿರಲಿಲ್ಲ. ಈ ಕಾರಣಕ್ಕೆ ಹಾಗಲ ಕೀಳುವ ಪ್ರಯತ್ನ ಮಾಡಿರಲಿಲ್ಲ. ಮಾಚ್‌ರ್‍ ಕೊನೆಯ ಹೊತ್ತಿಗೆ ಇಲ್ಲವೇ ಏಪ್ರಿಲ್ ತಿಂಗಳಲ್ಲಿ ಬಿಸಿಲು ಬಲಿಯುತ್ತಲೇ ದರ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ನಾರಾಯಣಗೌಡ. ಆದರೆ, ವಿಶ್ವಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿದ ಕೊರೋನಾ ವೈರಸ್‌ನ ಕೆಟ್ಟಎಫೆಕ್ಟ್ ಕೃಷಿ ಕ್ಷೇತ್ರವನ್ನೇ ಮಕಾಡೆ ಕೆಡವಿತು. ಲಾಭವಿಲ್ಲ, ಅಸಲೂ ಇಲ್ಲದೇ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಮಾತ್ರ ನಾರಾಯಣಗೌಡರ ಪಾಲಿಗೆ ಉಳಿದಿದೆ.

ರೈತ ಪಾಪರ್‌

ಕಳೆದ 3 ದಿನಗಳಿಂದ ಕೃಷಿ ಬೆಳೆಗಳ ಮಾರಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದರಿಂದ ಬೆಂಗಳೂರಿನ ಮಾರುಕಟ್ಟೆಗೆ ಹಾಗಲಕಾಯಿ ಲೋಡು ಸಾಗಿಸಿರುವ ಉತ್ತಮ ರೇಟ್‌ ನಿರೀಕ್ಷೆಯಲ್ಲಿದ್ದ ರೈತನಿಗೆ ಕೆ.ಜಿ.ಗೆ ಕೇವಲ 2- 3 ದರಕ್ಕೆ ಮಾಲು ಬಿಕರಿ ಮಾಡಬೇಕಾದ ಸ್ಥಿತಿ ಬಂದಿದೆ. ಲಾಕ್‌ ಡೌನ್‌ ಪರಿಸ್ಥಿತಿಯನ್ನು ಎನ್‌ಕ್ಯಾಶ್‌ ಮಾಡಿಕೊಂಡಿರುವ ಮಾರುಕಟ್ಟೆಖರೀದಿದಾರರು ಹಾಗೂ ದಲ್ಲಾಳಿಗಳು ತೀರಾ ಅಗ್ಗದ ಬೆಲೆ ನಿಗದಿಪಡಿಸಿ, ರೈತರಿಗೆ ವಂಚಿಸಿದ್ದಾರೆ. ಆದರೆ ಅವರು ರೀಟೈಲ್ ಮಾರಾಟಗಾರರಿಗೆ ನೀಡುವಾಗ ಹತ್ತುಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ.

-ಆರ್‌.ಸಂತೋಷ್‌ ಕೋಡಿಹಳ್ಳಿ