ಒಂದೇ ವರ್ಷದಲ್ಲಿ 9 ಸಾವಿರ ಹೆಕ್ಟೇರಲ್ಲಿ ಅಡಕೆ ಬೆಳೆ ವಿಸ್ತರಣೆ!

 ಕಳೆದ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆ ವಿಸ್ತರಣೆಯಾಗಿದ್ದು, ಇದರಿಂದಾಗಿ ನೀರಾವರಿ ಪ್ರದೇಶದಲ್ಲಿ ಜನರ ಹೊಟ್ಟೆತುಂಬಿಸುತ್ತಿದ್ದ ಭತ್ತದ ಕಣಜ ಬರಿದಾಗುತ್ತಿದೆ.

Expansion of groundnut crop in 9 thousand hectares in a single year shivamogga rav

ಗೋಪಾಲ್‌ ಯಡಗೆರೆ

 ಶಿವಮೊಗ್ಗ (ಅ.17) : ಕಳೆದ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆ ವಿಸ್ತರಣೆಯಾಗಿದ್ದು, ಇದರಿಂದಾಗಿ ನೀರಾವರಿ ಪ್ರದೇಶದಲ್ಲಿ ಜನರ ಹೊಟ್ಟೆತುಂಬಿಸುತ್ತಿದ್ದ ಭತ್ತದ ಕಣಜ ಬರಿದಾಗುತ್ತಿದೆ. ದುಡ್ಡಿನ ಬೆಳೆಯೇ ಮುಖ್ಯ ಎಂಬ ನಿರ್ಧಾರಕ್ಕೆ ಬಂದಂತಿರುವ ರೈತರು ಅಡಕೆಯತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ. ಒಂದು ಕಾಲದ ಬಹುತೇಕ ಭತ್ತದ ನಾಡಾಗಿದ್ದ ಶಿವಮೊಗ್ಗ ಜಿಲ್ಲೆ ಇದೀಗ ಸಂಪೂರ್ಣವಾಗಿ ಕೆಂಪಡಕೆಯ ಬೀಡಾಗಿದೆ.

Davanagere: ಮಾಯಕೊಂಡ ಮತ್ತೆ 10 ಕ್ವಿಂಟಾಲ್‌ ಅಡಿಕೆ ಕಳವು

ಮಲೆನಾಡಿನ ಸಾಂಪ್ರದಾಯಿಕ ಅಡಕೆ ಬೆಳೆ ಬಯಲು ನಾಡನ್ನು ಆಕ್ರಮಿಸಿಕೊಂಡಿದ್ದು, ಈ ಆಕ್ರಮಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಒಂದಿಲ್ಲೊಂದು ರೋಗ ಬಾಧೆಯಿಂದ ಬಳಲುತ್ತಿರುವ ಮಲೆನಾಡು ಪ್ರದೇಶದ ಅಡಕೆ ಬೆಳೆ ನಿಧಾನವಾಗಿ ಅಲ್ಲಿ ಕಣ್ಮರೆ ಆಗುವತ್ತ ಹೆಜ್ಜೆ ಇಟ್ಟರೆ, ಅನ್ನದ ಬಟ್ಟಲಿನಲ್ಲಿ ಅಡಕೆಯ ಘಮ ಹೆಚ್ಚುತ್ತಿದೆ. ಇದು ಆತಂಕಕ್ಕೂ ಕಾರಣವಾಗಿದೆ. ಆದರೆ ಇದೇ ಕಾಲಕ್ಕೆ ಬಯಲುನಾಡಿನ ರೈತರ ಜೇಬಿನಲ್ಲಿ ಕಾಂಚಾಣದ ಝಣ ಝಣ ಸದ್ದು ಕೂಡ ಕೇಳಿ ಬರುತ್ತಿರುವುದು ಸುಳ್ಳಲ್ಲ.

ಒಂದೇ ವರ್ಷದಲ್ಲಿ 9 ಸಾವಿರ ಹೆಕ್ಟೆರ್‌ ಹೆಚ್ಚಳ:

ಶಿವಮೊಗ್ಗ ಎಂದರೆ ಭತ್ತದ ನಾಡು ಎಂದು ಬಿಂಬಿತವಾಗಿತ್ತು. ಆದರೀಗ ಜಿಲ್ಲೆಯ ಅರೆಮಲೆನಾಡು ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಕೆ ಬೆಳೆ ಹಿಗ್ಗುತ್ತಿದೆ. ಶಿಕಾರಿಪುರ, ಭದ್ರಾವತಿ, ಸೊರಬ, ಶಿವಮೊಗ್ಗ ತಾಲೂಕುಗಳಲ್ಲಿನ ಭತ್ತದ ಗದ್ದೆಗಳೆಲ್ಲ ಅಡಕೆಯ ತೋಟಗಳಾಗುತ್ತಿವೆ. ಇದೇ ವೇಳೆಗೆ ಸಾಂಪ್ರದಾಯಿಕವಾಗಿ ಕಣಿವೆ ಪ್ರದೇಶದಲ್ಲಿ ಮಾತ್ರ ಅಡಕೆ ಬೆಳೆ ಬೆಳೆಯುತ್ತಿದ್ದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಗಳಲ್ಲೀಗ ಗುಡ್ಡಗಳಲ್ಲಿ ಕೂಡ ಅಡಕೆ ತೋಟ ವಿಸ್ತೀರ್ಣವಾಗುತ್ತಿದೆ. ಮಲೆನಾಡಿನ ಸಾಂಪ್ರದಾಯಿಕ ಬತ್ತದ ಗದ್ದೆಗಳು ಶೇ.90 ರಷ್ಟುಮಾಯವಾಗಿದೆ ಎಂದರೆ ಅತಿಶೋಕ್ತಿಯಲ್ಲ.

ಜಿಲ್ಲೆಯಲ್ಲಿ ಕಳೆದ 10 ವರ್ಷದಿಂದ ಈಚೆಗೆ ಅಡಕೆ ಬೆಳೆ ದುಪ್ಪಾಟ್ಟಿಗಿಂತ ಹೆಚ್ಚಾಗಿದೆ. ಆಗ 40 ಸಾವಿರ ಹೆಕ್ಟೇರ್‌ ಪ್ರದೇಶವಿದ್ದರೆ ಈಗ ಅಡಕೆ ವ್ಯಾಪ್ತಿ 1 ಲಕ್ಷ ಹೆಕ್ಟೇರ್‌ ದಾಟಿದೆ. ಸಧ್ಯ ಒಟ್ಟು 1,02,536 ಹೆಕ್ಟೇರ್‌ ಖಾತಾ ಪ್ರದೇಶದಲ್ಲಿ ಅಡಕೆ ವಿಸ್ತೀರ್ಣವಾಗಿದ್ದರೆ, ಇನ್ನು ಒತ್ತುವರಿ ಪ್ರದೇಶದಲ್ಲಿ ವಿಸ್ತರಣೆಯಾದ ಲೆಕ್ಕ ಇಲಾಖೆಗೆ ಸಿಕ್ಕಿಲ್ಲ. ಮಲೆನಾಡಿನ ಬಹುತೇಕ ರೈತರು ತಮ್ಮ ಖಾತೆ ಭೂಮಿಯಲ್ಲಿ ಈಗಾಗಲೇ ಅಡಕೆ ಅಥವಾ ಭತ್ತ ಬೆಳೆದಿದ್ದಾರೆ. ಇನ್ನು ತಮ್ಮ ಭೂಮಿಯ ಪಕ್ಕದಲ್ಲಿರುವ ಕಂದಾಯ ಭೂಮಿಯನ್ನು ಕನಿಷ್ಟಒಂದರಿಂದ ಐದು ಎಕರೆ ಭೂಮಿಯನ್ನು ರೈತರು ಸರಾಸರಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿ ಭೂಮಿಯಲ್ಲಿ ಶೇ. 95 ರಷ್ಟುಅಡಕೆಯನ್ನೇ ಬೆಳೆದಿದ್ದಾರೆ. ಇತ್ತೀಚೆಗೆ ಮಲೆನಾಡಿನ ಗುಡ್ಡ ಪ್ರದೇಶಗಳಲ್ಲಿಯೂ ಕೊಳವೆ ಬಾವಿ ಕೊರೆಸಿ ಅಡಕೆ ಬೆಳೆಯುತ್ತಿದ್ದಾರೆ. ಇಂತಹ ಒತ್ತುವರಿ ಭೂಮಿಯ ಲೆಕ್ಕ ಸಿಕ್ಕಿಲ್ಲ. ಈ ಒತ್ತುವರಿ ಲೆಕ್ಕ ತೆಗೆದುಕೊಂಡರೆ ಏನಿಲ್ಲವೆಂದರೂ ಕನಿಷ್ಟ50 ಸಾವಿರ ಎಕರೆ ಭೂಮಿಯಲ್ಲಿ ಅಡಕೆ ವಿಸ್ತರಣೆಯಾಗಿದೆ.

ಜಿಲ್ಲೆಯಲ್ಲಿ ಕಳೆದ ಒಂದೇ ವರ್ಷದಲ್ಲಿ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಹೆಚ್ಚಳ ಆಗಿದೆ. ನೀರಾವರಿ ಪ್ರದೇಶದಲ್ಲಿ ಭತ್ತದ ಬದಲಾಗಿ ದುಡ್ಡಿನ ಬೆಳೆ ಎಂದೇ ಹೆಸರಾದ ಅಡಕೆ ಬೆಳೆ ರೈತರು ವಾಲುತ್ತಿರುವುದು ಸ್ಪಷ್ಟವಾಗಿದೆ. 2019- 2020ರಲ್ಲಿ ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್‌ ಅಡಕೆ ಬೆಳೆಯಿತ್ತು. ಕಳೆದ ಒಂದು ವರ್ಷದಲ್ಲಿ 9 ಸಾವಿರ ಹೆಚ್ಚಳವಾಗಿ ಈಗ ಜಿಲ್ಲೆಯಲ್ಲಿ 1.2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಿದೆ. ಇದು ಖಾತಾ ಭೂಮಿಯ ಲೆಕ್ಕ ಮಾತ್ರ!

ಹಲವು ವರ್ಷಗಳಿಂದ ಅಡಕೆ ಬೆಲೆ ರೈತನಿಗೆ ನಷ್ಟಆಗುವಷ್ಟುಭಾರಿ ಕುಸಿತ ಆಗಿಲ್ಲ. ಕೊರೋನಾ ಬಿಕ್ಕಟ್ಟಿನ ಕಾಲದಲ್ಲಿ ಎಲ್ಲೆಲ್ಲೂ ಬೆಲೆ ಕುಸಿತವೇ ಸುದ್ದಿಯಾದರೆ ಅಡಕೆ ಮಾತ್ರ ತನ್ನ ಮಾನ ಉಳಿಸಿಕೊಂಡು ಬೆಲೆ ಏರಿಕೆಯಾಗಿತ್ತು. ಪ್ರಮುಖ ದುಡ್ಡು ತಂದು ಕೊಡುವ ವಾಣಿಜ್ಯ ಬೆಳೆಯಾಗಿದ್ದು, ಒಮ್ಮೆ ಅಡಕೆ ತೋಟ ಕಟ್ಟಿಆರರಿಂದ ಏಳು ವರ್ಷ ಜತನ ಮಾಡಿದರೆ ನಂತರ ರೈತನಿಗೆ ಉತ್ತಮ ಆದಾಯದ ತಂದು ಕೊಡುತ್ತದೆ. ಜೊತೆಗೆ ಮಿಶ್ರ ಬೆಳೆಯಾಗಿ ಕಾಳುಮೆಣಸು ಸೇರಿ ಅನೇಕ ಬೆಳೆಗಳನ್ನು ಬೆಳೆದು ರೈತರು ಆರ್ಥಿಕವಾಗಿ ಲಾಭ ಮಾಡುತ್ತಿದ್ದಾರೆ. ಹಾಗಾಗಿ ದಿನೇದಿನೇ ರೆತರು ಈ ಬೆಳೆಯತ್ತ ಚಿತ್ತ ಹರಿಸುವ ಸಂಖ್ಯೆ ಹೆಚ್ಚುತ್ತಿದೆ.

ಭೂತಾನ್‌ ಅಡಕೆ ಆಮದಿನಿಂದ ದೇಶಿ ಧಾರಣೆ ಕುಸಿಯಲ್ಲ : ವೈ.ಎಸ್‌. ಸುಬ್ರಹ್ಮಣ್ಯ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಡಕೆ ಪ್ರದೇಶ ಹೆಚ್ಚಳವಾಗಿದೆ. ಇದರ ಅಂಕಿಅಂಶ ಇಲ್ಲಿದೆ (ಖಾತಾ ಭೂಮಿಯ ಲೆಕ್ಕ)

ವರ್ಷ- ಅಡಕೆ ಬೆಳೆ ವಿಸ್ತೀರ್ಣ (ಹೆಕ್ಟೇರ್‌ಗಳಲ್ಲಿ)

  • 2010-2011- 43530
  • 2012-2013- 47237
  • 2013-2014- 48187
  • 3014-2015- 49091
  • 2015-2016- 50820
  • 2016-2017- 54482
  • 2017-2018- 59379
  • 2018-2019- 92177
  • 2019-2020- 93609
  • 2020-2021- 102536
Latest Videos
Follow Us:
Download App:
  • android
  • ios