Asianet Suvarna News Asianet Suvarna News

ನರಗುಂದ: ಭೂಕುಸಿತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗ್ತಿಲ್ಲ, ಆತಂಕದಲ್ಲಿ ಜನತೆ

ನಿತ್ಯ ಭಯದ ವಾತಾವರಣದಲ್ಲಿ ಬದುಕು ಸಾಗಿಸುತ್ತಿರುವ ಸ್ಥಳೀಯರು | 38 ಮನೆಗಳು ಕುಸಿತ| ಗದಗ ಜಿಲ್ಲೆಯ ನರಗುಂದ ಪಟ್ಟಣದ ಹಲವೆಡೆ ಭೂಕುಸಿತ| 

Exact Cause is Still Unknown to Landslide in Naragund in Gadag District
Author
Bengaluru, First Published Feb 26, 2020, 11:46 AM IST

ಎಸ್.ಜಿ.ತೆಗ್ಗಿನಮನಿ 

ನರಗುಂದ(ಫೆ.26): ನರಗುಂದ ಪಟ್ಟಣದ ಹಲವೆಡೆ ಕಳೆದ ಆರು ತಿಂಗಳಲ್ಲಿ 38 ಬಾರಿ ಭೂಕುಸಿತ ಸಂಭವಿಸಿದೆ. ಇಲ್ಲಿಯ ಕೆಲ ಬಡಾವಣೆಗಳ ಜನರು ಈಗಲೂ ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುತ್ತಿದ್ದಾರೆ. ಮನೆಗಳ ಒಳಗೆ, ಹಿತ್ತಲಿನಲ್ಲಿ ಕುಸಿತವಾಗುತ್ತಿರುವುದೇ ಹೆಚ್ಚು. ಗದಗ, ಕೊಪ್ಪಳ, ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರು, ತಜ್ಞರು ಆಗಮಿಸಿ ಪರಿಶೀಲಿಸಿದ್ದರೂ ಇನ್ನೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಭೂಕುಸಿತ ನಿಂತಿಲ್ಲ. ಇದಕ್ಕೆ ನಿಖರ ಕಾರಣವೂ ತಿಳಿಯುತ್ತಿಲ್ಲ. 

ಭೂಗರ್ಭ ತಜ್ಞರ ಸೂಚನೆಯಂತೆ ಎತ್ತರದ ಕೆಂಪಕೆರೆ ನೀರು ಖಾಲಿ ಮಾಡಿಸಿದರೂ ಭೂಕುಸಿತದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದ ಕಾರಣ ನಗರದ ಕಸಾಬ್, ಶೆಳಕೆ ಗಲ್ಲಿ, ಹಗದಕಟ್ಟಿ ಓಣಿ ಸೇರಿದಂತೆ ವಿವಿಧ ಕಡೆಗಳಲ್ಲಿ ಹಲವಾರು ಮನೆಗಳಲ್ಲಿ ಭೂ ಕುಸಿತ ಉಂಟಾಗಿದ್ದರಿಂದ ಪುರಸಭೆ ಅಧಿಕಾರಿಗಳು ಕಾರಣ ಪತ್ತೆ ಮಾಡಲು 2019ರ ನವಂಬರನಲ್ಲಿ ಗದಗ-ಕೊಪ್ಪಳ ಭೂಗರ್ಭ ತಜ್ಞರಾದ ದಿಲೀಪ ಹಾಗೂ ಸಂತೋಷ ಅವರನ್ನು ಕರೆಸಿ ಎರಡು ದಿನಗಳ ಭೂಕುಸಿತವಾದ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ಮಾಡಿದರು. 

ನರಗುಂದದಲ್ಲಿ ಮತ್ತೆ ಭೂಕುಸಿತ: ಆತಂಕದಲ್ಲಿ ಜನತೆ

ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಎತ್ತರದ ಪ್ರದೇಶದಲ್ಲಿರುವ ಕೆಂಪಕೆರೆ ಭೂ ಕುಸಿತಕ್ಕೆ ಕಾರಣವಾಗಿದೆ ಎಂದು ಈ ತಂಡ ವರದಿ ನೀಡಿತು. ಇದರಿಂದ ಪುರಸಭೆ ಅಧಿಕಾರಿಗಳು ಲಕ್ಷಾಂತರ ರು. ಖರ್ಚು ಮಾಡಿ ಕೆರೆಯ ನೀರನ್ನು ಪಂಪಸೆಟ್‌ಗಳ ಮೂಲಕ ಹೊರ ಹಾಕಿಸಿದರು. ಕೆರೆ ನೀರು ಹೊರ ಹಾಕಿದ್ದೇವೆ ಇನ್ನೇನೂ ಭೂ ಕುಸಿತವಾಗುವುದಿಲ್ಲ ಎಂದು ಊಹೆ ಮಾಡಿದ್ದರು. ಆದರೆ ಕಳೆದ ಜನವರಿ ತಿಂಗಳಿಂದ ಪಟ್ಟಣದಲ್ಲಿ ಮತ್ತೆ ಭೂ ಕುಸಿತ ಪ್ರಾರಂಭಗೊಂಡಿದ್ದರಿಂದ ಅಧಿಕಾರಿಗಳಿಗೆ ದಿಕ್ಕು ತೋಚದಂತಾಯಿತು. ಮತ್ತೆ ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರಾಗಿರುವ ಡಾ. ಪ್ರಕಾಶ, ಸಂತೋಷ ಮತ್ತು ದಿಲೀಪ್ ಅವರನ್ನು ಪುರಸಭೆ ಅಧಿಕಾರಿಗಳು ಕರೆಯಿಸಿ ಭೂಕುಸಿತವಾಗಿರುವ ಪ್ರದೇಶಗಳನ್ನು ಪರಿಶೀಲಿಸಿದರು. ಅಧಿಕಾರಿಗಳು ಕಲ್ಲು, ಮಣ್ಣು, ನೀರನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. 15 ದಿನಗಳಾದರೂ ಇನ್ನೂ ಅವರು ವರದಿ ಸಲ್ಲಿಸಿಲ್ಲ. ಭೂಕುಸಿತಕ್ಕೆ ನಿಖರ ಕಾರಣವೂ ತಿಳಿಯಲಿಲ್ಲ. 

38 ಮನೆಗಳು ಕುಸಿತ: 

2019ರ ಆಗಸ್ಟನಿಂದ 2020ನೇ ಫೆಬ್ರುವರೆಗೆ ಪಟ್ಟಣದ ಕಸಬಾ, ಹಗದಕಟ್ಟಿ ಓಣೆ, ದೇಸಾಯಿ ಬಾಯಿ, ಶೆಳಕೆ ಗಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಒಟ್ಟು 38 ಮನೆಗಳಲ್ಲಿ ಭೂಕುಸಿತವಾಗಿದೆ. ಆದರೆ ತಜ್ಞರ ತಂಡಕ್ಕೆ ಇನ್ನೂ ನಿಖರ ಕಾರಣ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದೇ ಹೇಳಬಹುದು. 

ಪ್ರಾಣಪಾಯದಿಂದ ಪಾರು: 

ಅಕ್ಟೋಬರ್ 28, 2019 ರಂದು ಕಸಾಬ್ ಓಣಿಯ ನಿವಾಸಿ ವಿನಾಯಕ ದೇಶಪಾಂಡೆವರು ಬೆಳಗ್ಗೆ ಪೂಜೆಗಾಗಿ ಮನೆಯ ಹಿತ್ತಲದಲ್ಲಿರುವ ಹೂ ತರುವ ಸಮಯದಲ್ಲಿ ಭೂ ಕುಸಿತವಾಗಿ ಸುಮಾರು 8 ಅಡಿ ಆಳದಲ್ಲಿ ಬಿದ್ದು ತೀವ್ರ ಗಾಯ ಗೊಂಡಿದ್ದರು. ಇವರ ಕಿರುಚಾಟ ಕೇಳಿ ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ಜನತೆ ಆಗಮಿಸಿ ಏಣಿಯ ಮೂಲಕ ಇವರನ್ನು ಹೊರ ತೆಗೆದು ಪ್ರಾಣ ಉಳಿಸಿದ್ದರು. ಮತ್ತೆ ಫೆ. 8ರಂದು ಶೆಳಕೆ ಓಣಿಯಲ್ಲಿ ಶರಣಪ್ಪ ಕಟ್ಟಕಾರವರ ಪತ್ನಿ ರೇಣುಕಾ ಕಟ್ಟಕಾರವರು ಬೆಳಗ್ಗೆ ಅಡುಗೆ ಮನೆಗೆ ತೆರಳಿದ ವೇಳೆ ಭೂಕುಸಿದು ರೇಣುಕಾ ಅವರು 6 ಅಡಿ ಭೂಕುಸಿತದಲ್ಲಿ ಸಿಲುಕಿ ಗಾಯಗೊಂಡಿದ್ದರು. ಇವಳು ಕೂಗು ಕೇಳಿ ಪತಿ ರಕ್ಷಣೆಗೆ ಧಾವಿಸಿದ ಸಂದರ್ಭದಲ್ಲಿ ಇವರು ಸಹ ಸಿಲುಕಿ ಚೀರಾಡಿದ್ದರಿಂದ ಅಕ್ಕಪಕ್ಕ ಮನೆಯವರು ಪತಿ -ಪತ್ನಿಯನ್ನು ರಕ್ಷಣೆ ಮಾಡಿದ್ದಾರೆ.

ಭೂ ಕುಸಿತ ವೀಕ್ಷಣೆ ಮಾಡಿದ ಭೂಗರ್ಭ ತಜ್ಞರು ಹೇಳಿದ ಪ್ರಕಾರ ಕೆಂಪಕೆರೆ ನೀರು ಖಾಲಿ ಮಾಡಿದ್ದೇವೆ, ಆದರೆ ಮತ್ತೆ ಭೂ ಕುಸಿತವಾಗು ತ್ತಿರುವುದರಿಂದ ಈ ಸಲ ಬೆಂಗಳೂರಿನ ಖ್ಯಾತ ಭೂಗರ್ಭ ತಜ್ಞ ಡಾ. ಪ್ರಕಾಶ ಅವರನ್ನು ಕರೆಯಿಸಿ ನಗರದ ಭೂ ಕುಸಿತ ಪ್ರದೇಶಗಳನ್ನು ತೋರಿಸಿದ್ದೇವೆ. ಅವರು ಈ ಪ್ರದೇಶದ ನೀರು, ಮಣ್ಣು, ಕಲ್ಲುಗಳನ್ನು ಅಧ್ಯಯನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಈ ವರೆಗೆ ಭೂ ಕುಸಿತದ ಕಾರಣ ತಿಳಿಸಿಲ್ಲ ಎಂದು ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಹೇಳಿದ್ದಾರೆ. 

ನರಗುಂದದಲ್ಲಿ ಮತ್ತೆ ಭೂಕುಸಿತ: ಕಂಗಾಲಾದ ಜನತೆ

ಈ ಬಗ್ಗೆ ಮಾತನಾಡಿದ ಗದಗದ ಭೂಗರ್ಭ ತಜ್ಞ ಸಂತೋಷ ಬೆನಕಟ್ಟಿ ಅವರು, ಪಟ್ಟಣದ ಕೆಂಪಕೆರೆ ಎತ್ತರದ ಮಟ್ಟಕ್ಕೆ ಇರುವುದರಿಂದ ಅಂರ್ತಜಲ ಹೆಚ್ಚಾಗಿ ನಗರದಲ್ಲಿನ ಮನೆಗಳು ಭೂಕುಸಿತಗೊಳ್ಳುತ್ತಿದೆ, ಆದ್ದರಿಂದ ನಾವು ಕೆರೆ ನೀರು ಖಾಲಿ ಮಾಡಬೇಕೆಂದು ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆ ಪ್ರಕಾರ ಅಧಿಕಾರಿಗಳು ಕೆರೆ ನೀರು ಖಾಲಿ ಮಾಡಿದ್ದಾರೆ. ನೀರು ಖಾಲಿಯಾದ ತಕ್ಷಣ ಭೂ ಕುಸಿತ ನಿಲ್ಲುವುದಿಲ್ಲ. ಮತ್ತೆ ಒಂದು ತಿಂಗಳ ನಂತರ ಭೂಕುಸಿತವಾದರೆ ಹೆಚ್ಚಿನ ಮಾಹಿತಿ ಹೊಂದಿರುವ ಭೂಗರ್ಭ ತಜ್ಞರನ್ನು ಕರೆಸಲಾಗುವುದು ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios