Asianet Suvarna News Asianet Suvarna News

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ತಾನು ಯಾವ ತಪ್ಪು ಮಾಡಿದ್ದೇನೆಂದೂ ತಿಳಿಯದೇ 5 ವರ್ಷಗಳ ಸೌದಿ ಅರೇಬಿಯಾದ ಜೈಲಿನಲ್ಲಿದ್ದು, ಕಾಯಿಲೆಗೊಳಗಾಗಿ, ಜೈಲಿನಲ್ಲಿಯೇ ಸತ್ತ, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ, ಇಂಜಿನಿಯರ್‌ ಜಾನ್‌ ಮೊಂತೇರೊ ಅವರ ಶವ, ಅವರು ಸತ್ತು 9 ತಿಂಗಳ ನಂತರ ಹುಟ್ಟೂರಿಗೆ ಬಂದಿದೆ. 

engineers deadbody reach mangalore after 9 month from saudi
Author
Bangalore, First Published Dec 3, 2019, 9:59 AM IST

ಉಡುಪಿ(ಡಿ.03): ತಾನು ಯಾವ ತಪ್ಪು ಮಾಡಿದ್ದೇನೆಂದೂ ತಿಳಿಯದೇ 5 ವರ್ಷಗಳ ಸೌದಿ ಅರೇಬಿಯಾದ ಜೈಲಿನಲ್ಲಿದ್ದು, ಕಾಯಿಲೆಗೊಳಗಾಗಿ, ಜೈಲಿನಲ್ಲಿಯೇ ಸತ್ತ, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ, ಇಂಜಿನಿಯರ್‌ ಜಾನ್‌ ಮೊಂತೇರೊ ಅವರ ಶವ, ಅವರು ಸತ್ತು 9 ತಿಂಗಳ ನಂತರ ಹುಟ್ಟೂರಿಗೆ ಬಂದಿದೆ.

ಕಳೆದ 5 ವರ್ಷಗಳಿಂದ ಸೌದಿಯ ಜೈಲಿನಲ್ಲಿರುವ ಗಂಡನನ್ನು ಬಿಡಿಸಲು ಪತ್ನಿ ಅಮಿನಾ ಇನ್ನಿಲ್ಲದ ಪ್ರಯತ್ನಪಟ್ಟಿದ್ದಾಳೆ. ತಂದೆಯನ್ನು ಬಿಡಿಸುವಂತೆ ನಮ್ಮ ದೇಶದ ವಿದೇಶಾಂಗ ಮಂತ್ರಿ, ಪ್ರಧಾನಿ ಮುಂತಾದವರಿಗೆ ಮಗಳು ಕರಿಶ್ಮಾ ಪತ್ರದ ಮೇಲೆ ಪತ್ರ ಬರೆದು ಗೊಗರೆದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಸೋಮವಾರ ಸುದ್ದಿಗಾರರ ಮುಂದೆ ಇನ್ನಾದರೂ ತಮಗೆ ನ್ಯಾಯ ನೀಡಿ ಎಂದು ಕಣ್ಣೀರಿನೊಂದಿಗೆ ಇವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹುಟ್ಟು ಹಬ್ಬದ ದಿನ ಹುಟ್ಟಿಸಿದಾಕೆಯನ್ನೇ ಕೊಂದ ಪಾಪಿ ಮಗ..!

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್‌ ಅವರು ಸುದ್ದಿಗೋಷ್ಠಿಯಲ್ಲಿ, ಮೋಸಕ್ಕೊಳಗಾಗಿ ಸಾವನ್ನಪ್ಪಿದ ಜಾನ್‌ ಮೊಂತೇರೊ ಅವರಿಗೆ ನ್ಯಾಯ ಕೊಡಿಸಲು ಪ್ರತಿಷ್ಠಾನ ಸೌದಿ ಅರೇಬಿಯಾದ ನ್ಯಾಯಾಲಯದಲ್ಲಿ ಧಾವೆಗೆ ಸಿದ್ಧತೆ ನಡೆಸಿರುವುದಾಗಿ ಹೇಳಿದ್ದಾರೆ.

ಪ್ರಕರಣದ ವಿವರ:

ಮೆಕ್ಯಾನಿಕಲ್‌ ಇಂಜಿನಿಯರ್‌ ಆಗಿ, ಏರ್‌ ಕಂಡಿಷನ್‌ ನಿರ್ವಹಣೆಯಲ್ಲಿ ಪರಿಣಿತರಾಗಿದ್ದ ಜಾನ್‌ 10 ವರ್ಷ ಅಬುದಾಬಿಯಲ್ಲಿ, 8 ವರ್ಷ ದೆಹಲಿಯಲ್ಲಿ ಕೆಲಸ ಮಾಡಿದ್ದರು. 2003ರಲ್ಲಿ ಸೌದಿಗೆ ತೆರಳಿ, ತಮ್ಮ ಪರಿಣಿತಿಯಿಂದಾಗಿ ಏರ್‌ ಕಂಡಿಷನ್‌ ನಿರ್ವಹಣೆಯ ಸಾಕಷ್ಟುಗುತ್ತಿಗೆಗಳನ್ನು ಪಡೆದು, ಹಣ ಸಂಪಾದಿಸಿ, ಮಕ್ಕಳಿಬ್ಬರನ್ನು ದೆಹಲಿಯ ಪ್ರತಿಷ್ಠಿತ ಶಾಲೆಯಲ್ಲಿ ಓದಿಸುತ್ತಿದ್ದರು.

ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಬ್ಯಾಂಕಿನೊಳಗೆ ನುಗ್ಗಿದ ಯುವಕ

2014ರಲ್ಲಿ ಜಾನ್‌ ಇದ್ದಕ್ಕಿದ್ದಂತೆ ಕಾಣೆಯಾದರು. ಹೆಂಡತಿ ಸಂಪರ್ಕಕ್ಕೆ ಸಾಕಷ್ಟುಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಜಾನ್‌ ಅವರೇ ಕರೆ ಮಾಡಿ ತನ್ನನ್ನು ಜೈಲಿಗೆ ಹಾಕಿದ್ದಾರೆ. ಯಾವ ಕಾರಣಕ್ಕೆ ಎಂದು ಪೊಲೀಸರು ಹೇಳುತ್ತಿಲ್ಲ ಎಂದರು. ನಾಲ್ಕಾರು ತಿಂಗಳು ಕಳೆದರೂ ಜಾನ್‌ ಬಿಡುಗಡೆಯಾಗಲಿಲ್ಲ, ನ್ಯಾಯಾಲಯಕ್ಕೂ ಹಾಜರುಪಡಿಸಲಿಲ್ಲ, ವಕೀಲರನ್ನು ನೀಡಲಿಲ್ಲ. ಅವರಿಗೆ ತಿಳಿಯದ ಅರೇಬಿಕ್‌ ಭಾಷೆಯ ದಾಖಲೆಗಳಿಗೆ ಸಹಿ ಮಾಡಲು ಒತ್ತಾಯಿಸಿದರು, ಜಾನ್‌ ನಿರಾಕರಿಸಿದಾಗ, ನ್ಯಾಯಾಲಯದ ಮೂಲಕ ಅವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.

ಇತ್ತ ದೆಹಲಿಯಲ್ಲಿ ಅಮಿನಾ ಅವರಿಗೆ ಜೀವನ ಸಾಗಿಸುವುದು ಕಷ್ಟವಾಯಿತು. ಹೊಟ್ಟಪಾಡಿಗೆ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡತೊಡಗಿದರು.

ಜೈಲಿನಲ್ಲಿ ಪೊಲೀಸರು ಜಾನ್‌ಗೆ ಪ್ರಜ್ಞೆ ತಪ್ಪುವಷ್ಟುಹೊಡೆಯುತ್ತಿದ್ದರು. ಇದರಿಂದ ಅನಾರೋಗ್ಯಕ್ಕೀಡಾದ ಜಾನ್‌ ಹಾಸಿಗೆ ಹಿಡಿದರು, ಚಿಕಿತ್ಸೆ ನೀಡುವಂತೆ ಬೇಡಿದರೂ ಪೊಲೀಸರು ಕರುಣೆ ತೋರಿಸಲಿಲ್ಲ. ಜಾನ್‌ ಜೈಲಿನ ಬೇರೆ ಕೈದಿಗಳನ್ನು ನೋಡಲು ಬರವವರ ಫೋನುಗಳಿಂದ ಮನೆಗೆ ಕರೆ ಮಾಡಿ ತನ್ನ ಪರಿಸ್ಥಿತಿಯನ್ನು ಹೇಳಿ ಕಣ್ಣೀರಿಡುತ್ತಿದ್ದರು.

ಚಿಕಿತ್ಸೆಗೆ ಮನವಿ:

ಜನವರಿಯಲ್ಲಿ ಕರೆ ಮಾಡಿ, ಜೂನ್‌ ತಿಂಗಳಲ್ಲಿ ಬಿಡುಗಡೆಯಾಗಿ ಊರಿಗೆ ಬರುತ್ತೇನೆ ಎಂದಿದ್ದರು. ಆದರೆ ನಂತರ ಅವರ ಕುತ್ತಿಗೆ ಬಾತುಕೊಂಡು ವಿಪರೀತ ನೋವು ಕಾಣಿಸಿಕೊಂಡಿತು. ಪೊಲೀಸರು ಈಗಲೂ ಚಿಕಿತ್ಸೆ ಮಾಡಿಸಲಿಲ್ಲ. ಈ ಹಂತದಲ್ಲಿ ಅಮಿನಾ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ತನ್ನ ಪತಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಫೆ.16ರಂದು ಜಾನ್‌ ಕೊನೆಯುಸಿರೆಳೆದರೆಂದು ಸೌದಿಯಿಂದ ಯಾರೋ ಕರೆ ಮಾಡಿ ಅಮಿನಾಗೆ ತಿಳಿಸಿದರು.

ದೂತವಾಸದ ನಿರ್ಲಕ್ಷ:

ಗಂಡನನ್ನು ಜೀವಂತವಾಗಿಯಂತೂ ಕರೆತರಲಾಗಲಿಲ್ಲ, ಆದರೆ ಆತನ ಶವಕ್ಕೆ ಯೋಗ್ಯ ಸಂಸ್ಕಾರವಾದರೂ ಸಿಗಲಿ ಎಂದು ಅಮಿನಾ ಭಾರತೀಯ ದೂತಾವಾಸ, ವಿದೇಶಾಂಗ ಕಚೇರಿಗಳನ್ನು ಸತತವಾಗಿ ಸಂಪರ್ಕಿಸಿದರು. ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನವೂ ವಿದೇಶಾಂಗ ಸಚಿವರಿಗೆ ಮನವಿ ಮಾಡಿತ್ತು. ಆದರೆ ಈ ಎರಡೂ ಕಚೇರಿಗಳಿಂದ ಯಾವುದೇ ಸಹಕಾರ ದೊರೆಯಲಿಲ್ಲ.

 

ಜಾನ್‌ ಅವರು ನಿಧನರಾಗಿ 9 ತಿಂಗಳ ನಂತರ ಸೌದಿ ಅರೇಬಿಯಾ ಸರ್ಕಾರವೇ ಶವವನ್ನು ನ.28ರಂದು ಊರಿಗೆ ಕಳುಹಿಸಿದೆ. ಡಿ.1ರಂದು ಶವಸಂಸ್ಕಾರ ನಡೆಸಲಾಗಿದೆ.

ಇದೀಗ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ.ರವಿಂದ್ರನಾಥ ಶ್ಯಾನುಭಾಗ್‌ ಅವರು ಅಮಿನಾ ಅವರಿಗೆ ನ್ಯಾಯ ಒದಗಿಸಲು ಸಿದ್ಧವಾಗಿದ್ದು, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ದೂತವಾಸ ಸಹಕರಿಸಿದಲ್ಲಿ ಸೌದಿ ಅರೇಬಿಯಾದ ರಾಷ್ಟ್ರೀಯ ನ್ಯಾಯಾಲಯದಲ್ಲಿ ಧಾವೆ ಹೂಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿಯ ಹಿರಿಯ ನ್ಯಾಯವಾದಿ ಶಾಂತಾರಾಮ ಶೆಟ್ಟಿ, ಪ್ರತಿಷ್ಠಾನದ ಟ್ರಸ್ಟಿಗಳಾದ ಮುರಳಿಧರ ಮತ್ತು ಜೋಸೆಫ್‌ ರೆಬೆಲ್ಲೋ ಉಪಸ್ಥಿತರಿದ್ದರು.

ಯಾವ ದಾಖಲೆಯೂ ಇಲ್ಲ !

ಕಾಯ್ದೆಯಂತೆ ಜಾನ್‌ ಅವರ ಶವದೊಂದಿಗೆ ಬರಬೇಕಾಗಿದ್ದ ಪಾಸ್‌ಪೋರ್ಟ್‌, ವಿಮೆ, ಬ್ಯಾಂಕ್‌ ಖಾತೆ ದಾಖಲೆಗಳು, ಆಸ್ತಿಪಾಸ್ತಿ ವಿವರ, ಪೋಸ್ಟ್‌ಮಾರ್ಟಂ ವರದಿ, ಕೋರ್ಟ್‌ ಆದೇಶ ಇತ್ಯಾದಿ ಯಾವುದೂ ಇರಲಿಲ್ಲ. ಹೃದಯ ಮತ್ತು ಉಸಿರಾಟ ನಿಂತದ್ದರಿಂದ ಸಾವು ಸಂಭವಿಸಿದೆ ಎಂದು ಸಣ್ಣ ಪತ್ರ ಮಾತ್ರವಿತ್ತು. ಇದನ್ನೆಲ್ಲಾ ಪರಿಶೀಲಿಸಿಬೇಕಾಗಿದ್ದ ಅಲ್ಲಿನ ಭಾರತೀಯ ದೂತವಾಸ ಯಾವ ಕರ್ತವ್ಯವನ್ನೂ ಮಾಡಿಲ್ಲ.

ಏನನ್ನೋ ಮುಚ್ಚಿಡುತ್ತಿದ್ದಾರೆ?

ಸುರದ್ರೂಪಿಯಾಗಿದ್ದ ಜಾನ್‌ (54 ವರ್ಷ), ಶವದ ಚಹರೆಯೆ ಬದಲಾಗಿತ್ತು. ಕೃಷಗೊಂಡಿದ್ದ ಶವದ ಮುಖದ ತುಂಬಾ ಗಡ್ಡ ಇತ್ತು, ಶವದೊಳಗಿನ ಎಲ್ಲಾ ಅಂಗಾಂಗಳನ್ನು ತೆಗೆದು, ಅಲ್ಲಿ ಹತ್ತಿ ಮತ್ತು ಪಾರ್ಮಲಿನ್‌ ತುಂಬಿಸಿ, ಹೊಲಿಯಲಾಗಿತ್ತು. ಆದ್ದರಿಂದ ಅಲ್ಲಿಯೇ ಪೋಸ್ಟ್‌ಮಾರ್ಟಂ ನಡೆಸಲಾಗಿದೆ. ಆದರೆ ಅದರ ವರದಿಯನ್ನು ನೀಡದೇ ಏನ್ನನ್ನೊ ಮುಚ್ಚಿಟ್ಟಿದ್ದಾರೆ ಎಂದು ಡಾ.ಶ್ಯಾನುಭಾಗ್‌ ಸಂಶಯ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios