Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಜೋಡಿ, ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ

ಲಾಕ್‌ಡೌನ್ ಅವಧಿಯಲ್ಲಿ ಶಿಕ್ಷಕರ ಮಾದರಿ ಕಾರ್ಯ, ಮೊಬೈಲ್ ಪರದೆಗೆ ಮೆರುಗು| ತಮ್ಮ ಮಗಳ ನಿಶ್ಚಿತಾರ್ಥವನ್ನು ಮೊಬೈಲ್ ವಿಡಿಯೋಕಾಲ್ ಮೂಲಕ ಮಾಡಿ ಇತರರಿಗೆ ಮಾದರಿಯಾದ ಶಿಕ್ಷಕ ಪಿ.ಡಿ.ಪಾಟೀಲ| ಈ ಮೂಲಕ ಸಂಕೇಶ್ವರ ಹಾಗೂ ಬಾಗಲಕೋಟೆ ನಡುವೆ ಬಾಂಧವ್ಯದ ಬೆಸುಗೆ ಮತ್ತಷ್ಟು ಗಟ್ಟಿ|

Engagement Function Held on Online in Sankeshwara in Belagavi District
Author
Bengaluru, First Published Apr 9, 2020, 3:00 PM IST

ರವಿ ಕಾಂಬಳೆ

ಹುಕ್ಕೇರಿ(ಏ.09): ಹೆಮ್ಮಾರಿ ಕೊರೋನಾದಿಂದ ಸಭೆ, ಸಮಾರಂಭ ಹಾಗೂ ಮದುವೆ ನಿಂತು ಹೋಗಿವೆ. ಹೀಗಾಗಿ ಅದೇಷ್ಟೋ ಜನರು ಈಗಾಗಲೇ ನಿಗದಿತ ದಿನಾಂಕದಂತೆ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಕೊರೋನಾ ಲಾಕ್‌ಡೌನ್‌ನಿಂದ ಇಲ್ಲೊಂದು ಜೋಡಿ ಆನ್‌ಲೈನ್ ಮೂಲಕ ಮಂಗಳವಾರ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಹೌದು! ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ನೂರಕ್ಕೂ ಅಧಿಕ ಮಂದಿ ಈ ನೆಚ್ಚಿನ ನವಜೋಡಿಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡು ಹಾರೈಸಿ ಶುಭಾಶಯ ಕೋರಿದ್ದಾರೆ. ಅರೆ ಇದೇನು, ಕೊರೋನಾ ಸೋಂಕು ಹರಡುತ್ತಿರುವ ಅವಧಿಯಲ್ಲಿ ನೂರಾರು ಜನರು ಸೇರಿದ್ದರೆ ಎಂದು ಆತಂಕಪಡಬೇಡಿ. ಅವರಾರೂ ಒಟ್ಟಿಗಿರಲಿಲ್ಲ! ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಕುಳಿತು ಒಬ್ಬ ಗೌರವಾನ್ವಿತ ಮುಖ್ಯ ಶಿಕ್ಷಕನ ಪುತ್ರಿಯ ನಿಶ್ಚಿತಾರ್ಥವು ಯಾವ ಲೋಪವೂ ಇಲ್ಲದಂತೆ ವಾಟ್ಸ್‌ಆಫ್, ಹೈಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಿ ಹೊಸತನವನ್ನು ಸೃಷ್ಟಿಸಿದ್ದಾರೆ.

Engagement Function Held on Online in Sankeshwara in Belagavi District

ಹೇಗಾಯಿತು ನಿಶ್ವಿತಾರ್ಥ?:

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅತ್ತಿಹಾಳ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ.ಡಿ.ಪಾಟೀಲ ಅವರೇ ಈ ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ತಮ್ಮ ಮಗಳ ನಿಶ್ಚಿತಾರ್ಥವನ್ನು ಮೊಬೈಲ್ ವಿಡಿಯೋ ಕಾಲ್ ಮೂಲಕ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ತನ್ಮೂಲಕ ಸಂಕೇಶ್ವರ ಹಾಗೂ ಬಾಗಲಕೋಟೆ ನಡುವೆ ಬಾಂಧವ್ಯದ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಗುಡ್ಡದಲ್ಲಿ ಅಡಗಿದ್ದ ಶಂಕಿತ ತಬ್ಲಿಘಿಗಳು ಪರಾರಿ.!

ಬಿಇ ವ್ಯಾಸಂಗ ಮಾಡಿರುವ ಪಾಟೀಲರ ಪುತ್ರಿ ಅನುಷಾ ಸಂಕೇಶ್ವರದ ಮನೆಯಲ್ಲಿದ್ದರೆ, ಈಕೆಯ ಭಾವಿ ಪತಿಯೂ ಆದ ಎಂಟೆಕ್ ವ್ಯಾಸಂಗ ಮಾಡಿರುವ ಮಹಾಂತೇಶ ಬಾಗಲಕೋಟೆಯಲ್ಲಿದ್ದರು. ಹಿಂದೂ ಸಂಪ್ರದಾಯದಂತೆ ಈ ಜೋಡಿಯ ಯಾದಿ, ಪೂಜೆ  ಸೇರಿದಂತೆ ನಿಶ್ಚಿತಾರ್ಥದ ಎಲ್ಲ ಕಾರ್ಯಗಳು ಮೊಬೈಲ್ ಪರದೆಯ ವಿಡಿಯೋ ಕಾಲ್ ಮೂಲಕ ವಿನಿಯಮಗೊಂಡಿವೆ. ಅಂತರ್ಜಾಲದ ಮೂಲಕ ನಡೆದ ಈ ನಿಶ್ಚಿತಾರ್ಥದಲ್ಲಿ ಎರಡು ಕುಟುಂಬದ ಸದಸ್ಯರು ಪಾಲ್ಗೊಂಡಿರುವುದು ಕೇವಲ ಬೆರಳಣಿಕೆಯಷ್ಟು ಮಾತ್ರ. ಈ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡಂತಾಗಿದೆ.

ಇನ್ನು ವಿಶಿಷ್ಟ ಮತ್ತು ವಿನೂತನವಾಗಿ ನಡೆದ ಈ ನಿಶ್ಚಿತಾರ್ಥದ ದೃಶ್ಯಾವಳಿಗಳು ಮೊಬೈಲ್ ಪರದೆಯಲ್ಲಿ ಹರಿದಾಡಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ. ಅಲ್ಲದೇ ಶುಭಾಶಯ ಕೋರಿ ಹಾರೈಸಿದ್ದಾರೆ. ಈ ಆನ್‌ಲೈನ್ ನಿಶ್ಚಿತಾರ್ಥದ ಪೌರೋಹಿತ್ಯವಹಿಸಿದ್ದೂ ಬೇರಾರು ಅಲ್ಲ. ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ. ಈ ಹಿಂದಿನ ಅನುಭವ ಬಳಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿರುವ ಶ್ರೀಶೈಲ ಅವರ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದಾಗಿದೆ.

ನಿಶ್ಚಿತಾರ್ಥಕ್ಕೆ ಅದ್ಧೂರಿ ತಯಾರಿ ನಡೆಸಿ ಉತ್ಸಾಹದಲ್ಲಿದ್ದ ಉಭಯ ಕುಟುಂಬಸ್ಥರಿಗೆ ಲಾಕ್‌ಡೌನ್ ನಿಯಮ ತಣ್ಣೀರೆರೆಚಿದ್ದರೂ ಮಾದರಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಕ್ತವಾಗಿರುವ ಪ್ರಶಂಸೆಗೆ ಅವರ ಕುಟುಂಬದ ಖುಷಿಯನ್ನು ಇಮ್ಮಡಿಗೊಳಿದೆ.
 

Follow Us:
Download App:
  • android
  • ios