ಕತ್ತೆಗೂ ಕಾಲ : ಕತ್ತೆ ಹಾಲಿಗೆ ಲೀಟರಿಗೆ 5- 7 ಸಾವಿರ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅನ್ನುವಂತೆ ಕತ್ತೆಗೂ ಒಂದು ಒಳ್ಳೆಯ ಕಾಲ ಬಂದಾಯ್ತು.
ಗಂ. ದಯಾನಂದ ಕುದೂರು
ಕುದೂರು : ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅನ್ನುವಂತೆ ಕತ್ತೆಗೂ ಒಂದು ಒಳ್ಳೆಯ ಕಾಲ ಬಂದಾಯ್ತು. ಒಂದೆರೆಡು ಕತ್ತೆಗಳನ್ನು ವಾಹನದಲ್ಲಿ ಹಾಕಿಕೊಂಡೋ ಅಥವ ನಡೆಸಿಕೊಂಡೋ ಒಂದು ಹೊಳ್ಳೆ ಕತ್ತೆ ಹಾಲಿಗೆ ಐವತ್ತು ರೂಪಾಯಿ ಎನ್ನುತ್ತಾ ಕೂಗುತ್ತಾ ಬರುತ್ತಾರೆ. ಕತ್ತೆಯ ಹಾಲಿಗಾಗಿಯೇ ಕಾದುಕುಳಿತವರಂತೆ ಜನರು ಕೂಡಾ ಅದನ್ನು ಸುತ್ತುವರೆದು ಕತ್ತೆ ಹಾಲನ್ನು ಕೊಂಡು ದೊಡ್ಡವರಾದಿಯಾಗಿ ಮಕ್ಕಳೆಲ್ಲರಿಗೂ ಕುಡಿಸುತ್ತಾರೆ.
ಕತ್ತೆಗಳೇ ಇಲ್ಲದ ಊರಾಯಿತು ಕುದೂರು:
ಕುದೂರು ಗ್ರಾಮದಲ್ಲಿ ನೂರಾರು ಕತ್ತೆಗಳಿದ್ದವು. ಊರಿಂದೂರಿಗೆ ಉಪ್ಪು ಹೊತ್ತು ಮಾರಾಟ ಮಾಡಲು ಹಾಗೂ ಕೆರೆಕಟ್ಟೆಗಳಿಗೆ ಬಟ್ಟೆಯ ಗಂಟು ಹೊತ್ಯೊಯ್ಯಲು ಇವುಗಳನ್ನು ಬಳಸಲಾಗುತ್ತಿತ್ತು. ಆದರೆ ಇಂದು ಗ್ರಾಮದಲ್ಲಿ ಒಂದೇ ಒಂದು ಕತ್ತೆಯೂ ಇಲ್ಲದಂತಾಯಿತು. ಇದು ಕುದೂರು ಗ್ರಾಮದ ಕಥೆ ಮಾತ್ರವಲ್ಲ ಪ್ರತಿ ಗ್ರಾಮದಲ್ಲೂ ಕತ್ತೆಗೆ ಇದೇ ಗತಿಯೇ ಆಗಿದೆ.
ಊರುಗಳಲ್ಲಿ ಕತ್ತೆಗಳಿಲ್ಲದಂತಾಯಿತು ಏಕೆ?:
ಕತ್ತೆಗಳನ್ನು ಭಾರ ಹೊರಲಷ್ಟೇ ಬಳಸಲಾಗುತ್ತಿತ್ತು. ಕೆಲವೊಂದು ಕಡೆಗೆ ಅವುಗಳನ್ನು ವ್ಯವಸಾಯದ ದೃಷ್ಟಿಯಿಂದಲೂ ಸಾಕುತ್ತಿದ್ದರು. ಆದರೆ ವ್ಯವಸಾಯಕ್ಕೆ ಅದು ಹೆಚ್ಚು ಪ್ರಯೋಜನಕ್ಕೆ ಬಾರದಂತಾಯಿತು. ಭಾರ ಹೊರುವ ಕೆಲಸ ಬಿಟ್ಟರೆ ಅವು ಯಾವಾಗಲೂ ಬೀದಿ ಬೀದಿಗಳಲ್ಲಿ ತಿರುಗುತ್ತಿದ್ದವು. ಇದರಿಂದಾಗಿ ಕೆಲಸವಿಲ್ಲದ ಸೋಮಾರಿಗಳನ್ನ ಇಂದಿಗೂ ಕತ್ತೆ ತಿರುಗಿದಂತೆ ತಿರುಗುತ್ತಿಯಾ, ಮೂರು ಕಾಸಿಕೆ ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಬೈಗುಳ ಚಾಲ್ತಿಗೆ ಬರುವಂತಾಯಿತು.
ಇದರ ಹಾಲನ್ನು ಎಳೆಯ ಮಕ್ಕಳಿಗೆ ಔಷಧದಂತೆ ಕುಡಿಸುತ್ತಿದ್ದರು. ಮಕ್ಕಳು ಚುರುಕಾಗುತ್ತಾರೆ . ಎಂತಹ ದಷ್ಟಪುಷ್ಟವಾದ ಕತ್ತೆಯೇ ಆದರೂ ಅದು ಹೆಚ್ಚು ಎಂದರೆ ಮುಕ್ಕಾಲು ಅಥವಾ ಒಂದು ಲೀಟರ್‌ನಷ್ಟು ಹಾಲನ್ನು ಕೊಡುತ್ತದೆ. ಈ ಹಾಲು ಮಕ್ಕಳಿಗೆ ಕುಡಿಸಲಷ್ಟೇ ಒಂದೋ ಎರಡೋ ಹೊಳ್ಳೆಯಷ್ಟು ಪಡೆಯುತ್ತಿದ್ದರು. ಉಳಿದಂತೆ ಅದರ ಹಾಲು ಯಾವುದಕ್ಕೂ ಬಳಸುತ್ತಿರಲಿಲ್ಲವಾಗಿ ಗ್ರಾಮೀಣ ಭಾಗದಲ್ಲಿ ಕತ್ತೆಗಳು ಇಲ್ಲದಂತಾಯಿತು.
ಕತ್ತೆ ಹಾಲು ಲೀಟರಿಗೆ 5- 7 ಸಾವಿರ:
ಹಸುವಿನ ಹಾಲಿಗೆ ಲೀಟರ್ ಗರಿಷ್ಟ 40 ರು. ಗಿರ್ ಹಸುವಿನ ಹಾಲಿಗೆ ಗರಿಷ್ಟ 200 ರುಪಾಯಿ, ಆದರೆ ಕತ್ತೆ ಹಾಲಿಗೆ ಒಂದು ಲೀಟರಿಗೆ 5 ರಿಂದ 7 ಸಾವಿರಕ್ಕೆ ಜಿಗಿದಿದೆ. ಇದಕ್ಕೆ ಕಾರಣ ಕತ್ತೆಯ ಹಾಲಿಗೆ ಪೂರೈಕೆ ಕಡಿಮೆ. ಕತ್ತೆಗಳ ಸಂಖ್ಯೆ ಕಡಿಮೆಯಾದಂತೆ ಅದರ ಹಾಲಿನ ಕೊರತೆಯೂ ಕಂಡುಬರಲಾರಂಭಿಸಿತು.
ಕತ್ತೆ ಹಾಲಲ್ಲಿ ತಾಯಿ ಹಾಲಿನಷ್ಟೇ ಪೌಷ್ಟಿಕಾಂಶ:
ಮಕ್ಕಳಿಗೆ ಕತ್ತೆ ಹಾಲನ್ನು ಏಕೆ ಕುಡಿಸುತ್ತಾರೆಂದರೆ ಕತ್ತೆ ಹಾಲು ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುತ್ತದೆ. ಅದು ತಾಯಿ ಹಾಲಿನಷ್ಟೇ ತೆಳುವಾಗಿರುತ್ತದೆ. ಹಸುವಿನ ಹಾಲಿಗಿಂತ ಕಡಿಮೆ ಕೊಬ್ಬಿನ ಅಂಶ ಹೊಂದಿರುತ್ತದೆ. ಮಕ್ಕಳ ಜೀರ್ಣಶಕ್ತಿಗೆ ಹಾಗೂ ಚರ್ಮದ ಕಾಂತಿಗೆ ಮತ್ತು ಮಕ್ಕಳ ಮೂಳೆಗಳನ್ನು ಗಟ್ಟಿ ಮಾಡಲು ಕತ್ತೆ ಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಹೊಂದಿರುತ್ತದೆ.
ಮಕ್ಕಳಿಗಷ್ಟೇ ಅಲ್ಲದೆ ಹಿರಿಯರಿಗೆ ಸಂದೀವಾತ, ಕೆಮ್ಮು, ಹೃದಯಸಂಬಂಧಿ ಕಾಯಿಲೆಗಳಿಗೂ ಕತ್ತೆ ಹಾಲನ್ನು ಕುಡಿಯುತ್ತಾರೆ. ದೇಶದ ಹರಿಯಾಣ, ಗುಜರಾತ್‌ಗಳಲ್ಲಿ ಕಂಡು ಬರುವ ಹಲಾರಿ ತಳಿಯ ಕತ್ತೆಯ ಹಾಲು ಅತ್ಯಂತ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡಿದೆ, ಅಲ್ಲಿನ ಕತ್ತೆಯ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ.
ಕ್ಲಿಯೋಪಾತ್ರಗಳ ಸೌಂದರ್‍ಯದ ಗುಟ್ಟು:
ಜಗತ್ತಿನ ಇತಿಹಾಸವನ್ನು ಅವಲೋಕಿಸಿದಾಗ ಅನೇಕ ರಾಣಿಯರು ತಮ್ಮ ಸೌಂದರ್‍ಯವನ್ನು ಹೆಚ್ಚು ಮಾಡಿಕೊಳ್ಳಲು ಕತ್ತೆಯ ಹಾಲನ್ನು ಯಥೇಚ್ಚವಾಗಿ ಬಳಸುತ್ತಿದ್ದರು ಎನ್ನುವುದಕ್ಕೆ ಉಲ್ಲೇಖಗಳಿವೆ. ಜಗತ್ತಿನ ಮೋಹಕ ನಗೆಗೆ ಕ್ಲಿಯೋಪಾತ್ರಳ ಚಿತ್ರ ಇಂದಿಗೂ ಹೆಸರಾಗಿದೆ. ಆಕೆಯ ಸೌಂದರ್‍ಯದ ಗುಟ್ಟೇ ಕತ್ತೆಯ ಹಾಲು. ಅಂದರೆ ಆಕೆ ನಿತ್ಯವೂ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಂಳಂತೆ ಅಂದರೆ ಬಾತ್‌ಟಬ್ ತುಂಬಾ ಕತ್ತೆ ಹಾಲು ಭರ್ತಿ ಮಾಡಿಸಿ ಅದರಲ್ಲಿ ಮುಳುಗಿ ಚರ್ಮದ ಮೃದುತ್ವ ಹಾಗೂ ಹೊಳಪನ್ನು ಹೆಚ್ಚು ಮಾಡಿಕೊಂಡಿದ್ದರ ಫಲ ಅಷ್ಟು ಸುಂದರಿ ಎನಿಸಿಕೊಂಡಿದ್ದು ಎಂಬುದೊಂದು ಕಥೆ.
ಇಂದು ಇಂಗ್ಲೆಂಡ್, ಇಟಲಿ, ಪ್ರಾನ್ಸ್ ನಂತಹ ಅನೇಕ ದೇಶಗಳಲ್ಲಿ ಹಾಲಿನ ಪೌಡರ್ ದೊರಕುವಂತೆ ಕತ್ತೆಯ ಹಾಲಿನ ಪೌಡರ್ ಕೂಡಾ ದೊರಕುತ್ತದೆ.
ಬೆಂಗಳೂರಿನಲ್ಲಿ ಪ್ರತಿಭಟನೆಗಷ್ಟೇ ಕತ್ತೆ:
ಬಹಳ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡುವ ಕೆಲವು ರಾಜಕಾರಣಿಗಳು ಕತ್ತೆಗಳನ್ನು ತಂದು ಅದರ ಮೇಲೆ ಕೂತು ಪ್ರತಿಭಟನೆ ಮಾಡುತ್ತಾರೆ. ಸರ್ಕಾರದ ಆಡಳಿತ ಅತ್ಯಂತ ಮಂದಗತಿಯಲ್ಲಿ ನಡೆಯುತ್ತಿದೆ ಎಂದಾಗ ಕತ್ತೆಗಳ ಪ್ರತಿಭಟನೆಗೆ ಮಹತ್ವ ಬರುತ್ತದೆ. ಇದಲ್ಲದೆ ಬೆಂಗಳೂರಿನಂತಹ ನಗರಗಳಲ್ಲಿ ಇಂದಿಗೂ ದೋಬಿಘಾಟ್ ಎಂಬ ಪ್ರದೇಶಗಳಿವೆ. ಅಲ್ಲಿಯೂ ವಿರಳ ಎನ್ನುವಂತೆ ಕತ್ತೆಗಳು ಕಂಡು ಬರುತ್ತವೆ. ಒಂದು ಕತ್ತೆಯ ಬೆಲೆ ೧೫ ರಿಂದ ೨೦ ಸಾವಿರ ಬೆಲೆ ಬಾಳುತ್ತಾದ್ದರಿಂದ ಆಗಾಗ್ಗೆ ಕತ್ತೆಗಳ ಕಳ್ಳತನವೂ ನಡೆಯುತ್ತದೆ. ಆಂಧ್ರ ಪ್ರದೇಶದಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಕತ್ತೆಗಳನ್ನು ಸಾಕಿದ್ದಾರೆ.
ಊರಿಂದೂರಿಗೆ ತಿರುಗಿ ಕುರಿಮಂದೆಯ ಜನರು ಕೂಡಾ ತಮ್ಮ ಅಡುಗೆ ವಸ್ತುಗಳು, ಬಟ್ಟೆ, ಬರೆ ಹೊರಲು ಒಂದೆರೆಡು ಕತ್ತೆಗಳನ್ನು ಕುರಿಗಳ ಜೊತೆಗೆ ಸಾಕುತ್ತಾರೆ. ಆಂಧ್ರಪ್ರದೇಶ ಮತ್ತು ಕರಾವಳಿ ಪ್ರದೇಶಗಳಲ್ಲಿ ಕತ್ತೆಯ ಮಾಂಸ ಆರೋಗ್ಯಕ್ಕೆ ಹೆಚ್ಚು ಅನುಕೂಲ ಎಂದು ಕತ್ತೆಯ ಮಾಂಸಕ್ಕೆ ಹೆಚ್ಚಿನ ಬೇಡಿಕೆಯೂ ಇದೆ. ದೇಶದ ಚಂಡೀಘಡದಲ್ಲಿ ಕತ್ತೆಯ ಹಾಲನ್ನು ಸಂಗ್ರಹ ಮಾಡಲು ಕತ್ತೆ ಹಾಲಿನ ಡೈರಿಯನ್ನು ಆರಂಭಿಸಲಾಗಿದೆ. ಆದ್ದರಿಂದ ಯಾರನ್ನೂ ಹಗುರವಾಗಿ ನೊಡಬಾರದು, ಎಲ್ಲರಿಗೂ ಒಂದೊಳ್ಳೆ ಕಾಲ ಬರುತ್ತದೆ ಎನ್ನುವುದಕ್ಕೆ ಕತ್ತೆಯೊಂದು ಒಳ್ಳೆಯ ಉದಾಹರಣೆಯಾಗಿದೆ. ಅದನ್ನು ಆಡಿಕೊಂಡ ಜನರಿಗೆ ಕಾಲ ಎಲ್ಲರ ಕಾಲೆಳಿಯುತ್ತದೆ ಎನ್ನುವುದೂ ಕೂಡಾ ಅನ್ವಯವಾಗುತ್ತದೆ.