ಗದಗ(ಫೆ.27): ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿನ ಖಜೂರಿ ಶಾಖಾ ಮಠವಾದ ಶ್ರೀ ಕೋರಣೇಶ್ವರ ಶಾಂತಿಧಾಮಕ್ಕೆ ಮುಸ್ಲಿಂ ಸಮುದಾಯದ ದಿವಾನ್‌ ರೆಹಮಾನ್‌ ಶರೀಫ್ ಮುಲ್ಲಾ ಅವರು ಬುಧವಾರ ವಿಧ್ಯುಕ್ತವಾಗಿ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸುವುದರ ಜೊತೆಗೆ ಬಸವ ತತ್ವದ ಪೂಜಾ ಕೈಂಕರ್ಯವನ್ನು ಕೈಗೊಳ್ಳುವ ಮೂಲಕ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.

ಬಸವ ತತ್ವದ ವೀರಶೈವ- ಲಿಂಗಾಯತ ಮಠವೊಂದಕ್ಕೆ ಮುಸ್ಲಿಂ ಸಮುದಾಯದವರೊಬ್ಬರು ಪೀಠಾಧಿಪತಿಯಾಗುವ ಮೂಲ ಹೊಸ ಮನ್ವಂತರವೊಂದಕ್ಕೆ ಸಾಕ್ಷಿಯಾಯಿತು. ಅಸೂಟಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕೋರಣೇಶ್ವರ ಶಾಂತಿಧಾಮದಲ್ಲಿ ಮುರುಘರಾಜೇಂದ್ರ ಕೋರಣೇಶ್ವರ ಮಠದ ಶ್ರೀಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಹರ, ಚರ, ಗುರುಮೂರ್ತಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು.
ಪೀಠಾಧಿಪತಿಗಳ ಅಧಿಕಾರ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಏಳು ಜೋಡಿ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.

ಬಸವತತ್ವ ಪಾಲನೆಯಲ್ಲಿ ಇಸ್ಲಾಂ ಕುಟುಂಬ: ಲಿಂಗಾಯತ ಮಠಕ್ಕೆ ಮುಸ್ಲಿಂ ಯುವಕ ಪೀಠಾಧಿಕಾರಿ

2019 ರ ನವೆಂಬರ್‌ 10 ರಂದು ಲಿಂಗದೀಕ್ಷೆ ಪಡೆದಿದ್ದ ಮುನ್ನಾ ಮುಲ್ಲಾ ಲಿಂಗ ದೀಕ್ಷೆ ನಂತರ ದಿವಾನ್‌ ರೆಹಮಾನ್‌ ಶರೀಫ ಮುಲ್ಲಾ ಅಂತಾ ಹೆಸರು ಬದಲಾವಣೆ ಮಾಡಿಕೊಂಡಿದ್ದ ಮುಸ್ಲಿಂ ಸ್ವಾಮೀಜಿ. ಈಗ ನಿರ್ಮಾಣವಾಗುತ್ತಿರುವ ಲಿಂಗಾಯತ ಮಠಕ್ಕೆ ಮುಸ್ಲಿಂ ಸಮುದಾಯದ ದಿವಾನ್‌ ಶರೀಫ್‌ ಪೀಠಾಧಿಪತಿಗಳಾಗಿದ್ದು ನಾಡಿನ ಮತ್ತೊಂದು ವಿಶೇಷತೆಯಾಗಿದೆ. ಈ ಸಂದರ್ಭದಲ್ಲಿ ಒಪ್ಪತ್ತೇಶ್ವರ ಶ್ರೀಗಳು ಸೇರಿದಂತೆ ಹಲವರು ಹಾಜರಿದ್ದರು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಲಿಂಗಾಯತ- ವೀರಶೈವ ಮಠಕ್ಕೆ ಮುಸ್ಲಿಂ ಧರ್ಮೀಯರೊಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಿಸಿ, ಪೀಠಾಧಿಪತಿಯಾಗಿ ಅಧಿಕಾರ ನೀಡಲಾಯಿತು.