ಬೆಳಗಾವಿ(ಫೆ.19): ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕದ ವಿಚಾರ ಬೆಳಗಾವಿಯಲ್ಲಿಯೂ ಕಾವು ಪಡೆದಿದೆ. ಮಾತ್ರವಲ್ಲ, ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಉತ್ತರಾಧಿಕಾರಿ ಮತ್ತು ಸತ್ಯಾನ್ವೇಷಣೆಗಾಗಿ ಫೆ.23ರಂದು ಸಭೆ ನಡೆಸುತ್ತಿರುವ ಬೆನ್ನ ಹಿಂದೆಯೇ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.

ಮೂರುಸಾವಿರ ಮಠಕ್ಕೆ ತಾವೇ ಉತ್ತರಾಧಿಕಾರಿ ಎಂದು ಈಗ ಬೆಳಗಾವಿ ಜಿಲ್ಲೆಯ ಮೂರುಸಾವಿರ ಮಠದ ಶಾಖಾ ಮಠ ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ದೇವರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಮಾತ್ರವಲ್ಲ, ಮೂರು ಸಾವಿರ ಮಠಕ್ಕೆ ಆಹ್ವಾನ ನೀಡಲು ದಿಂಗಾಲೇಶ್ವರ ಶ್ರೀಗಳು ಯಾರು? ಅವರಿಗೆ ಏನು ಅಧಿಕಾರ ಇದೆ ಎಂದೂ ಗುಬ್ಬಲಗುಡ್ಡ ಮಠದ ಶ್ರೀಗಳ ಭಕ್ತರು ಕೂಡ ಈಗ ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದಾಗಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತಷ್ಟು ತಾರಕಕ್ಕೇರುವ ಲಕ್ಷಣಗಳು ಕಾಣತೊಡಗಿವೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಾಖಲೆಗಳನ್ನು ಬಿಡುಗಡೆ ಮಾಡಿರುವ ಶ್ರೀ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ದೇವರು, ಹುಬ್ಬಳ್ಳಿಯಲ್ಲಿರುವ ಮೂರುಸಾವಿರ ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಅಗತ್ಯತೆ ಇಲ್ಲ. ಶ್ರೀ ಮಠದ ಉತ್ತರಾಧಿಕಾರಿಯನ್ನು ಕಳೆದ 22 ವರ್ಷಗಳ ಹಿಂದೆಯೇ ಮಠದ ಅಂದಿನ ಜಗದ್ಗುರು ಡಾ.ಗಂಗಾಧರ ರಾಜಯೋಗಿಂದ್ರ ಸ್ವಾಮೀಜಿ ಅವರು ತಮ್ಮನ್ನು ನೇಮಕ ಮಾಡಿದ್ದಾರೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ನಾನೇ ಮೂರು ಸಾವಿರ ಮಠದ ಉತ್ತರಾಧಿಕಾರಿ: ದಿಂಗಾಲೇಶ್ವರ ಸ್ವಾಮೀಜಿ

ಅವರು, 1998 ಮಾರ್ಚ್‌ 30 ರಂದು ಹುಬ್ಬಳ್ಳಿ, ಧಾರವಾಡದ ಭಕ್ತರು ಮತ್ತು ಹಿರಿಯರ ಸಭೆಯ ಕರೆದು ನಾನು 17ನೇ ವಯಸ್ಸಿನಲ್ಲಿದ್ದಾಗ ಸರ್ವ ಸಮ್ಮತದಿಂದ ಒಪ್ಪಿಗೆ ಪಡೆದಿದ್ದಾರೆ. ನಂತರ 1998, ಮಾ.31 ರಂದು ಹುಬ್ಬಳ್ಳಿ ಹಿರಿಯ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ದಾಖಲು ಮಾಡಿದ್ದಾರೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು. ಚಿಕ್ಕ ವಯಸ್ಸಿನಲ್ಲಿರುವುದರಿಂದ ತಾವು ಶಿವಯೋಗ ಮಂದಿರದಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಬರುವ ದಿನಗಳಲ್ಲಿ ಬೇರೆ ಉತ್ತರಾಧಿಕಾರಿ ನೇಮಕ ಮಾಡಿದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಮ್ಮ ಗುರುಗಳಾದ ಶ್ರೀ ಜಗದ್ಗುರು ಡಾ.ಮೂಜಗಂ ಅವರ ಹಾಗೂ ಈಗಿನ ಮೂರು ಸಾವಿರಮಠದ ಗುರುಸಿದ್ದ ರಾಜಯೋಗಿಂದ್ರ ಅವರ ಸಂಕಲ್ಪದಂತೆ ಭಕ್ತರ ಸದಿಚ್ಛೆಯಂತೆ 2012 ಮಾರ್ಚ್‌ 02 ರಂದು ಘಟಪ್ರಭಾದ ಶ್ರೀ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠಕ್ಕೆ ಪಟ್ಟಾಧಿಕಾರಿನ್ನಾಗಿ ನೇಮಕ ಮಾಡಿದ್ದರಿಂದ ತಾವು ಘಟಪ್ರಭಾದಲ್ಲಿರುವ ಮಠದಲ್ಲಿ ಶಿಕ್ಷಣ, ಧಾರ್ಮಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ ಮೂರನೇ ವ್ಯಕ್ತಿಗಳು ಮೂರುಸಾವಿರ ಮಠದ ಬಾಲೆಹೊಸುರ ಸ್ವಾಮೀಜಿ ನಾನೇ ಉತ್ತರಾಧಿಕಾರಿ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಾನು ನ್ಯಾಯಾಲಯಕ್ಕೆ ಮೊರೆ ಹೋಗಿರುವುದಾಗಿ ತಿಳಿಸಿದರು.

ಕರ್ನಾಟಕದ ಮಠಗಳಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮೂರುಸಾವಿರಮಠ ಪ್ರಾಮುಖ್ಯತೆ ಪಡೆದಿದೆ. ಮೂರುಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲು ಯಾರೋ ಎಲ್ಲಿಯೋ ಕುಳಿತುಕೊಂಡು ಹೆಸರು ಸೂಚಿಸುವುದಲ್ಲ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಲಿಂಗಾಯತರ ಸಭೆ ಕರೆದು ನಿರ್ಣಯ ಮಾಡಬೇಕಾಗುತ್ತದೆ. ಗುರುಸಿದ್ದ ರಾಜೇಂದ್ರ ಸ್ವಾಮೀಜಿಯರು ಮೂರುಸಾವಿರಮಠದ ಬೈ ಲಾ ಬರೆದಂತೆ ನನಗೆ ಭರವಸೆಯನ್ನು ನೀಡಿದ್ದರು. ಅಲ್ಲಿಂದ ನಾನು ಘಟಪ್ರಭಾ ಮಠದ ಉಸ್ತುವಾರಿ ನೋಡಿಕೊಂಡಿದ್ದೇನೆ ಎಂದರು.

ಉತ್ತರಾಧಿಕಾರಿಯನ್ನು ನೇಮಕ ಮಾಡಲು ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಭಕ್ತರ ಹಾಗೂ ಹಿರಿಯರ ಸಭೆ ಕರೆದು ಸರ್ವಸಮ್ಮತದಿಂದ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ನಂತರ ಹಿರಿಯ ಉಪನೋಂದಣಿ ಕಚೇರಿಯಲ್ಲಿ ಮೊದಲು ನೋಂದಣಿಯಾಗಬೇಕು. ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸುವ ಅವಶ್ಯಕತೆ ಇಲ್ಲ. ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮೀಜಿಗಳೇ ಮುಂದುವರಿಯಬೇಕು. ಮಲ್ಲಿಕಾರ್ಜುನ ದೇವರು, ನಾವು ಮೂರುಸಾವಿರ ಮಠದ ಉತ್ತಾರಾಧಿಕಾರಿ. ರಾಜಕೀಯ ಒತ್ತಡ ಹಾಗೂ ಜನಪ್ರತಿನಿಧಿಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ದಿಂಗಾಲೇಶ್ವರ ಸ್ವಾಮೀಜಿಯವರು ಹೇಳಿಕೆ ನೀಡುವ ಮೊದಲು ಶ್ರೀ ಮಠದ ಬೈ ಲಾವನ್ನು ನೋಡುವುದು ಸೂಕ್ತ ಎಂದರು.

ಮಲ್ಲಿಕಾರ್ಜುನ ಶ್ರೀ ನನ್ನ ಮುಂದೆ ಬೆಳೆದ ಕೂಸು

ಮೂರುಸಾವಿರಮಠದ ಉತ್ತರಾಧಿಕಾರಿ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅತ್ತ ಘಟಪ್ರಭಾದ ಮಲ್ಲಿಕಾರ್ಜುನ ದೇವರು ನಾನೇ ಉತ್ತರಾಧಿಕಾರಿ, ನನ್ನನ್ನು ಹಿಂದಿನ ಜಗದ್ಗುರು ಡಾ.ಗಂಗಾಧರ ಮಹಾಸ್ವಾಮಿಗಳು ನೇಮಕ ಮಾಡಿ ನೋಂದಣಿ ಕೂಡ ಮಾಡಿಸಿದ್ದರು ಎಂದು ಹೇಳಿಕೆ ನೀಡುತ್ತಿದ್ದಂತೆ ಇತ್ತ ದಿಂಗಾಲೇಶ್ವರ ಶ್ರೀಗಳು ಕಿಡಿಕಿಡಿಯಾಗಿದ್ದಾರೆ.

ಹಿಂದೆ ಗುರುರಾಜಯೋಗೀಂದ್ರ ಶ್ರೀಗಳನ್ನು ಹಾಗೂ ರುದ್ರಮುನಿ ದೇವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುವಾಗ ಏಕೆ ಈ ಪ್ರಶ್ನೆ ಮಾಡಲಿಲ್ಲ ? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಘಟಪ್ರಭಾದ ಮಲ್ಲಿಕಾರ್ಜುನ ಶ್ರೀಗಳು, ಮೂಜಗಂ ಅವರ ರಕ್ತಸಂಬಂಧಿ. ವಿರಕ್ತ ಪರಂಪರೆಯಿರುವ ಮಠಕ್ಕೆ ರಕ್ತ ಸಂಬಂಧಿಗಳನ್ನು ಉತ್ತರಾಧಿಕಾರಿಗಳನ್ನಾಗಿ ಮಾಡುವಂತಿಲ್ಲ. ಮಠ ಮನೆಯಾಗಬಾರದು ಎಂದಿದ್ದಾರೆ.

ಅತ್ತ ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ದೇವರು ಪತ್ರಿಕಾಗೋಷ್ಠಿ ನಡೆಸಿ, ನಾನೇ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ. ನನ್ನನ್ನು ಹಿಂದಿನ ಜಗದ್ಗುರು ಡಾ.ಗಂಗಾಧರ ಸ್ವಾಮೀಜಿ 1998ರಲ್ಲೇ ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ. ಆ ದಾಖಲೆ ಕೂಡ ನೋಂದಣಿ ಮಾಡಿಸಿದ್ದಾರೆ. ಆಗ ನನಗೆ 17 ವರ್ಷ ವಯಸ್ಸಿತ್ತು. ಈ ಹಿನ್ನೆಲೆಯಲ್ಲಿ ಆ ಪಟ್ಟಾಭಿಷೇಕ ಮಾಡಿರಲಿಲ್ಲ. ಮುಂದೆ 2012ರಲ್ಲಿ ಈಗಿನ ಶ್ರೀ ಗುರುಸಿದ್ಧ ರಾಜಯೋಗೀಂದ್ರರು ನನ್ನನ್ನು ಗುಬ್ಬಲಗುಡ್ಡ ಮಠಕ್ಕೆ ನೇಮಿಸಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಶ್ರೀಗಳು, 1998ರಲ್ಲೇ ಉತ್ತರಾಧಿಕಾರಿಯೆಂದು ನೇಮಕ ಮಾಡಿದ್ದರೆ ಮತ್ತೆ ಹಿಂದೆ ರುದ್ರಮುನಿ ದೇವರ ಹಾಗೂ ಈಗಿನ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ನೇಮಕದ ವೇಳೆ ಪ್ರಶ್ನೆ ಎತ್ತಲಿಲ್ಲ. ಇನ್ನೂ 17 ವರ್ಷವಿದ್ದ ಯುವಕನಿಗೆ ಪಟ್ಟಾಭಿಷೇಕ ಮಾಡಬಾರದು ಎಂಬ ನಿಯಮವೇನೂ ಇಲ್ಲ. ಕಲಬುರಗಿಯ ಶರಣಬಸಪ್ಪ ಶ್ರೀಗಳು 1 ವರ್ಷದ ಕೂಸಿಗೆ ಪಟ್ಟಾಭಿಷೇಕ ಮಾಡಿದ್ದಾರಲ್ವೇ? ಎಂದಿದ್ದಾರೆ.

ಮಲ್ಲಿಕಾರ್ಜುನ ಶ್ರೀಗಳು ಈಗಾಗಲೇ ಘಟಪ್ರಭಾ ಮಠದ ಹಾಗೂ ಮುಂಡರಗಿ ಮಠದ ಪೀಠಾಧಿಪತಿ ಆಗಿದ್ದಾರೆ. ಆದರೂ ಆ ಮಠಗಳ ಅಭಿವೃದ್ಧಿ ಮಾಡಿಲ್ಲ. ಇವರು ಮುಂಡರಗಿ ಮಠದ ಪೀಠಾಧಿಪತಿಯಾಗಲು ಏನೆಲ್ಲ ಮಾಡಿದರು. ಯಾವ ರೀತಿ ಪೀಠಾಧಿಪತಿಯಾದರು ಎಂಬುದೆಲ್ಲ ಭಕ್ತರಿಗೆಲ್ಲ ಗೊತ್ತು. ಇವರ ಹಿಂದೆ ಯಾರು ನಿಂತು ಆಟ ಆಡಿಸುತ್ತಿದ್ದಾರೆ ಎಂಬುದೆಲ್ಲ ಗೊತ್ತು ಎಂದ ಅವರು, ಕಾವಿಧಾರಿಯೊಬ್ಬರು ಮಲ್ಲಿಕಾರ್ಜುನ ಶ್ರೀಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವನ್ನೆಲ್ಲ ಫೆ.23ರ ಸಭೆಯಲ್ಲಿ ಸ್ಪಷ್ಟಪಡಿಸುವುದಾಗಿ ಹೇಳಿದರು.

ಮೂಜಗಂ ರಕ್ತ ಸಂಬಂಧಿ:

ಇನ್ನು ವಿರಕ್ತ ಪರಂಪರೆಯಿರುವ ಮಠಕ್ಕೆ ಯಾವುದೇ ರಕ್ತ ಸಂಬಂಧಿಗಳನ್ನು ಪೀಠಾಧಿಪತಿಯನ್ನಾಗಿ ಮಾಡಬಾರದು. ಏಕೆಂದರೆ ಮಲ್ಲಿಕಾರ್ಜುನ ಶ್ರೀಗಳು ಹಿಂದಿನ ಜಗದ್ಗುರು ಗಂಗಾಧರ ಸ್ವಾಮೀಜಿ ಅವರ ಮೊಮ್ಮಗ. ಹತ್ತಿರದ ರಕ್ತಸಂಬಂಧಿ. ಅವರ ಅಣ್ಣ ಅಥವಾ ತಮ್ಮನ ಮೊಮ್ಮಗನೋ ಆಗಬೇಕು. ಹೀಗೆ ರಕ್ತಸಂಬಂಧಿಗಳನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಬರಲ್ಲ. ಏಕೆಂದರೆ ಈ ರೀತಿ ರಕ್ತಸಂಬಂಧಿಗಳನ್ನು ಪೀಠಾಧಿಕಾರಿಯನ್ನಾಗಿ ಮಾಡಿದರೆ ಅದು ಮನೆಯಾಗುತ್ತದೆಯೇ ವಿನಃ ಮಠವಾಗಿ ಉಳಿಯಲ್ಲ. ಅವರು ಯಾವ ರೀತಿ ಮೊಮ್ಮಗ ಎಂಬುದನ್ನು ಅಂದಿನ ಸಭೆಯಲ್ಲೇ ಸ್ಪಷ್ಟಪಡಿಸುತ್ತೇನೆ ಎಂದರು.

ಪಾಠ ಕಲಿಯುವ ಅಗತ್ಯವಿಲ್ಲ:

ಮಲ್ಲಿಕಾರ್ಜುನ ಶ್ರೀಗಳು ನನ್ನ ಮುಂದೆ ಬೆಳೆದ ಕೂಸು. ನಾನು ಪಟ್ಟಕ್ಕೆ ಏರಿದಾಗ ಆತ ಇನ್ನೂ ವಿದ್ಯಾರ್ಥಿ. ನನಗೆ ಬುದ್ಧಿ ಹೇಳುವಷ್ಟುಪ್ರೌಢಿಮೆ ಅವರಿಗೆ ಇಲ್ಲ ಎಂಬುದು ನನಗಲ್ಲ ಭಕ್ತರಿಗೆ ಗೊತ್ತಿದೆ. ಇವರಿಂದ ನಾನೇನು ಪಾಠ ಕಲಿಯುವ ಅಗತ್ಯವಿಲ್ಲ . ನಾನು ಭಕ್ತರನ್ನು ಕರೆದಿದ್ದೇನೆಯೇ ಹೊರತು ಬೇರೆ ಯಾರನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.