Asianet Suvarna News Asianet Suvarna News

ಉತ್ತರಾಧಿಕಾರಿ ವಿವಾದ: 45 ದಿನ ಗಡುವು ಕೊಟ್ಟ ದಿಂಗಾಲೇಶ್ವರ ಶ್ರೀ

45 ದಿನಗಳಲ್ಲಿ ಸ್ಪಷ್ಟ ನಿರ್ಧಾರ ತಿಳಿಸಲಿ: ದಿಂಗಾಲೇಶ್ವರ ಶ್ರೀ|ಮೂಜಗು ಶ್ರೀಗಳನ್ನು ಕೆಲ ಕಾವಿಧಾರಿಗಳು ಕಟ್ಟಿ ಹಾಕುತ್ತಿದ್ದಾರೆ| ನ್ಯಾಯಾಲಯದ ತೀರ್ಪಿಗೆ ಕಾಯಲ್ಲ|

Dingaleshwara Shri Given 45 day Deadline to Solve Successor to the Dispute
Author
Bengaluru, First Published Feb 24, 2020, 7:51 AM IST

ಹುಬ್ಬಳ್ಳಿ(ಫೆ.24): ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ತಿಳಿಸಿರುವ ದಿಂಗಾಲೇಶ್ವರ ಶ್ರೀಗಳು, ಮುಂದಿನ 45 ದಿನಗಳೊಳಗೆ ಈ ವಿವಾದವನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ. ಅಲ್ಲದೇ, ನ್ಯಾಯಾಲಯದ ತೀರ್ಪಿಗೆ ಕಾದು ಕುಳಿತುಕೊಳ್ಳುವುದಿಲ್ಲ. ಇದಕ್ಕಾಗಿ ತಾವೇ ಭಕ್ತರ ಒಂದು ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ.

ಸತ್ಯದರ್ಶನ ಮಾಡಿಸುವುದಾಗಿ ಸಭೆ ಕರೆದಿದ್ದ ದಿಂಗಾಲೇಶ್ವರ ಶ್ರೀಗಳು, ಅದು ಸಾಧ್ಯವಾಗದೇ ರಸ್ತೆಯಲ್ಲೇ ನಿಂತು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದರು. ಈ ವೇಳೆ ನಮ್ಮನ್ನು ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳೇ ಒತ್ತಾಯಪೂರ್ವಕವಾಗಿ ಉತ್ತರಾಧಿಕಾರಿಯನ್ನಾಗಿ ಮಾಡಿ 2014ರಲ್ಲಿ ಪತ್ರ ಬರೆದುಕೊಟ್ಟಿದ್ದಾರೆ. 2009 ರಿಂದಲೇ ನನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಗುರುಗಳದ್ದು ಎಂದರು.

ಪ್ರಕರಣಗಳ ಸುಳಿಯಲ್ಲಿ ದಿಂಗಾಲೇಶ್ವರ ಶ್ರೀ: 'ಸ್ವಾಮೀಜಿಗೆ ಶಿಕ್ಷೆಯಾಗಲೇಬೇಕು'

ನಾನು ಎಂದಿಗೂ ಈ ಮಠದ ಉತ್ತರಾಧಿಕಾರಿಯಾಗಲು, ಸಂಪತ್ತಿಗೆ ಆಸೆ ಪಟ್ಟು ಬಂದವನಲ್ಲ. ಈಗಲೂ ಸಮಯವಿದೆ, ಮೂಜಗು ಸ್ವಾಮೀಜಿ ಬಂದು ನಿನ್ನನ್ನು (ದಿಂಗಾಲೇಶ್ವರರನ್ನು) ಉತ್ತರಾಧಿಕಾರಿ ಮಾಡಿಲ್ಲ ಎಂದು ಕರ್ತೃ ಗದ್ದುಗೆ ಮೇಲೆ ಪ್ರಮಾಣ ಮಾಡಲಿ ಅಥವಾ ಅಂದಿನ ಪರಿಸ್ಥಿತಿಯಲ್ಲಿ ಉತ್ತರಾಧಿಕಾರಿ ಎಂದು ಹೇಳಿದ್ದೆ, ಈಗ ಮಾಡಲಾರೆ ಎಂದಾದರೂ ಹೇಳಲಿ. ನನ್ನ ಬಳಿ ಇರುವ ಕಾಗದ ಪತ್ರಗಳನ್ನು ಮಠದ ಆವರಣದಲ್ಲಿ ಸುಟ್ಟು ಬಾಲೇಹೊಸೂರಿಗೆ ಹೋಗುತ್ತೇನೆ ಎಂದು ಸವಾಲು ಹಾಕಿದರು.

ಕೋರ್ಟ್‌ನಲ್ಲೇ ಈ ಸಮಸ್ಯೆ ಬಗೆಹರಿಯಬೇಕೆಂದು ಕೆಲವರು ಇಚ್ಛಿಸುತ್ತಿದ್ದಾರೆ. ಆದರೆ, ಇದನ್ನು ಕೋರ್ಟ್‌ ಹೊರಗೆ ಇತ್ಯರ್ಥ ಪಡಿಸಬೇಕು ಎಂಬ ಇಚ್ಛೆ ನಮ್ಮದು. ಈ ನಿಟ್ಟಿನಲ್ಲೇ ಉನ್ನತಾಧಿಕಾರ ಸಮಿತಿ, ಹಿರಿಯರು, ಮುಖಂಡರು, ಮೂಜಗು ಅವರಿಗೆ 45 ದಿನಗಳ ಕಾಲ ಗಡುವು ನೀಡುತ್ತೇನೆ. ಹುಬ್ಬಳ್ಳಿಯಲ್ಲಿ ಸಮರ್ಥ ನಾಯಕರು ಇದ್ದರೆ ಈಗಲೇ ಸಮಸ್ಯೆ ಬಗೆಹರಿಯಬೇಕು. ನನಗೆ ನ್ಯಾಯಾಲಯಕ್ಕಿಂತ ಸಮಾಜದ ಮೇಲೆಯೇ ನಂಬಿಕೆಯಿದೆ. ಒಳಗೆ ಬಿಟ್ಟರೆ ಸೇವೆಗೆ ದುಡಿಯಲು ಸಿದ್ಧ. ಹೊರ ಹಾಕಿದರೆ ಹೋಗಲು ಸಿದ್ಧ. 45 ದಿನದ ವರೆಗೆ ಈ ಕುರಿತಂತೆ ಮಾತನಾಡುವುದಿಲ್ಲ. ಗುರುಗಳು ಯೋಗ್ಯ ತೀರ್ಮಾನ ನೀಡುವುದಾಗಿ ನಂಬಿಕೆಯಿದೆ ಎಂದರು.

ಮಾತು ಮಾತಿಗೂ ಉತ್ತರಾಧಿಕಾರಿ ವಿವಾದ ಕೋರ್ಟ್‌ನಲ್ಲಿದೆ ಎಂದು ಮೂಜಗು ಹೇಳುವುದು ಬೇಡ. ಕೋರ್ಟ್‌ ಎನ್ನುತ್ತಿದ್ದರೆ ನೀವು ಸಹ ಇಂದು ಜಗದ್ಗುರು ಪೀಠದಲ್ಲಿ ಇರಲು ಸಾಧ್ಯವಿರಲಿಲ್ಲ. ನಿಮ್ಮ ಉತ್ತರಾಧಿಕಾರದ ಸಂದಿಗ್ಧದ ಸಮಯದಲ್ಲಿ ಸೇವೆ ಮಾಡಲು ಬಂದವನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೀರಿ. ಈಗ ನೀವೇ ಉತ್ತರಿಸಿ ಸಮಸ್ಯೆ ಬಗೆಹರಿಸಿ ಎಂದ ಅವರು, ನಾವು ನ್ಯಾಯಾಲಯದ ತೀರ್ಪಿಗೆ ಕಾದು ಕುಳಿತುಕೊಳ್ಳುವುದಿಲ್ಲ ಎಂದರು.

ಮೂರುಸಾವಿರ ಮಠ ಉತ್ತರಾಧಿಕಾರಿ ವಿವಾದ: ಮೌನ ಮುರಿದ ಮೂಜಗು

ಗದ್ದುಗೆ ಪ್ರಮಾಣ ಮಾಡಿ ಸತ್ಯದರ್ಶನ ಸಭೆ ಮಾಡುತ್ತೇನೆ ಎಂದು ಹೇಳಿದ್ದೆ. ಸುಳ್ಳು ಹೇಳುವವರು, ನನ್ನ ಮೇಲೆ ಆರೋಪ ಮಾಡುವವರೂ ಬನ್ನಿ ಎಂದು ಹೇಳಿದ್ದೆ. ಆದರೆ, ಇಂದು ಸಭೆ ನಡೆಸಲೂ ಅವಕಾಶ ನೀಡದಂತಹ ಕೆಟ್ಟಪರಿಸ್ಥಿತಿ ನಿರ್ಮಿಸಲಾಗಿದೆ. ಇದಕ್ಕೆ ಸ್ವಾಮೀಜಿಗಳ ಹಿಂದೆ ನಿಂತು ಕುತಂತ್ರ ಮಾಡುತ್ತಿರುವ ಕೆಲವು ಕಾವಿಧಾರಿಗಳು ಕಾರಣ. ನನ್ನ ಗುರುಗಳು ಎಂದಿಗೂ ನನ್ನ ಕೈ ಬಿಡಲಾರರು. ಆದರೆ, ಅವರನ್ನು ಕೆಲವು ಸ್ವಾಮೀಜಿ ಕಟ್ಟಿಹಾಕುವ ಹಾಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಉತ್ತರಾಧಿಕಾರಿ ಸಮಸ್ಯೆ ಬಗೆಹರಿಸುವ ಪರಿಸ್ಥಿತಿ ಬಂದಾಗ ರುದ್ರಮುನಿ ಶ್ರೀಗಳಿಗೆ . 1 ಕೋಟಿ ನೀಡುವ ವಿಷಯ ಬಂದಿತ್ತು. ನಾನು ಭಕ್ತರ ಸಹಾಯದಿಂದ ಅದನ್ನು ಕೂಡಿಸಿ ನೀಡಿ ಮಠದ ಸಮಸ್ಯೆ ಬಗೆಹರಿಸಿದ್ದೇನೆ. ಗುರುಗಳಿಗೆ ಇತರರ ಬಳಿ ಮಾಡಿದ್ದ ಕೈಗಡ ಸಾಲ . 25 ಲಕ್ಷ ಹಣವನ್ನು ದಿಂಗಾಲೇಶ್ವರ ಮಠದಿಂದ ಹೊಂದಿಸಿ ನೀಡಿದ್ದೆ. ಆಗ ಈ ಮಠಕ್ಕೆ ನೀವೇ ಉತ್ತರಾಧಿಕಾರಿ ಆಗಬೇಕು ಎಂದಿದ್ದರು ಎಂದು ತಿಳಿಸಿದರು.

ಸಮಿತಿ ರಚನೆ

ಗದ್ದುಗೆ ದರ್ಶನದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 11 ವರ್ಷದಲ್ಲಿ ಆಗದ ಬೆಳವಣಿಗೆ ಈಗಿನ 45 ದಿನಗಳಲ್ಲಿ ಆಗಬಹುದು ಎಂಬ ನಂಬಿಕೆ ಇದೆ. ಕಾನೂನು ತೊಡಕು ನಿವಾರಣೆಗೆ ನಾನೇ ನನ್ನ ಭಕ್ತರ ಸಮಿತಿಯನ್ನು ರಚನೆ ಮಾಡುತ್ತೇನೆ. ಈ ಮೂಲಕ ಅಂದು ಅರ್ಜಿಗೆ ಸಹಿ ಮಾಡಿದವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.

ನೇಣು ಹಾಕಲಿ

ಕೆಲವರು ನನ್ನ ವಿರುದ್ಧ ಕೇಸ್‌ ದಾಖಲಿಸಿದ್ದುಂಟು. ಅವೆಲ್ಲ ಈಗ ನಿಖಾಲಿಯಾಗಿವೆ. ಆದರೆ ನನ್ನ ಮೇಲೆ ಈಗಲೂ ಕೇಸ್‌ಗಳಿವೆ ಎಂದು ಹೇಳುತ್ತಿದ್ದಾರೆ. ಹಾಗೊಂದು ವೇಳೆ ಕೇಸ್‌ ಇದ್ದಿದ್ದೆ ಖರೆ ಆದರೆ ಅದೇ ಠಾಣೆಯೆದುರಿಗೆ ನನಗೆ ನೇಣು ಹಾಕಲಿ ಎಂದರು.
 

Follow Us:
Download App:
  • android
  • ios