Asianet Suvarna News Asianet Suvarna News

ಇನ್ಮುಂದೆ ಹುಬ್ಬಳ್ಳಿ-ಧಾರವಾಡದಲ್ಲಿ ಜಗಮಗಲಿಸಲಿದೆ ಡಿಜಿಟಲ್‌ ಜಾಹೀರಾತು..!

*  ಸ್ಮಾರ್ಟ್‌ಪೋಲ್‌ನಲ್ಲಿ ಜಗಮಗಿಸಲಿದೆ ಡಿಜಿಟಲ್‌ ಜಾಹೀರಾತು
*  ವಿದ್ಯುತ್‌ ಬಿಲ್‌ ಪಾವತಿಸಲಿದೆ ಗುತ್ತಿಗಾ ಸಂಸ್ಥೆ
*  ಜಾಹೀರಾತಿನಲ್ಲಿ ಪಾಲಿಕೆಗೆ ಶೇ.50 ಆದಾಯ
 

Digital Advertising Will Be Starts in Hubballi Dharwad grg
Author
Bengaluru, First Published Jun 28, 2022, 9:04 PM IST

ಮಯೂರ ಹೆಗಡೆ

ಹುಬ್ಬಳ್ಳಿ(ಜೂ.28):  ಇನ್ನು ಮುಂದೆ ಮಹಾನಗರದಲ್ಲಿ ಡಿಜಿಟಲ್‌ ಜಾಹೀರಾತು ಜಗಮಗಿಸಲಿದೆ. ಹುಬ್ಬಳ್ಳಿ -ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ 500 ಸ್ಮಾರ್ಟ್‌ಪೋಲ್ಸ್‌ ಅಳವಡಿಸಲು ಪಾಲಿಕೆ ಮುಂದಾಗಿದ್ದು, ಪಾಲಿಕೆಗೆ ಆದಾಯದ ಜೊತೆಗೆ ವಿದ್ಯುತ್‌ ಬಿಲ್‌ ಭರಿಸುವ ಹೊರೆಯೂ ತಪ್ಪಲಿದೆ.

ಹೌದು. ವಾಣಿಜ್ಯ ನಗರಿಯಲ್ಲಿ ಕಟ್ಟಡದ ಮೇಲಿನ ದೊಡ್ಡದೊಡ್ಡ ಪೇಪರ್‌ನ ಜಾಹೀರಾತು ಫಲಕ, ಕಟೌಟ್‌ಗಳು ಮರೆಯಾಗುವ ಕಾಲ ಸನ್ನಿಹಿತವಾಗಿದೆ. ಡಿಜಿಟಲ್‌ ಯುಗಕ್ಕೆ ತಕ್ಕಂತೆ ಇನ್ನು ನಗರಾದ್ಯಂತ ಮುಂದೆ ಸ್ಮಾರ್ಟ್‌ಪೋಲ್‌ಗಳಲ್ಲಿ ಜಾಹೀರಾತು ಬಿತ್ತರವಾಗಲಿದೆ. ಈಗಾಗಲೆ ಲ್ಯಾಮಿಂಗ್ಟನ್‌ ಸ್ಕೂಲ್‌ ಹಾಗು ಸಾಯಿಬಾಬಾ ದೇವಸ್ಥಾನದ ಬಳಿ ಒಂದೊಂದು ಪೋಲ್‌ಗಳನ್ನು ಪ್ರಾಯೋಗಿಕವಾಗಿ ನಿಲ್ಲಿಸಲಾಗಿದೆ.

ದೌರ್ಜನ್ಯಕ್ಕೊಳಗಾದ SC-ST ಜನಾಂಗಕ್ಕೆ ನ್ಯಾಯ ಒದಗಿಸುವಂತೆ ಧಾರವಾಡ ಜಿಲ್ಲಾಧಿಕಾರಿ ಸೂಚನೆ

ಪಾಲಿಕೆಯು ಬೆಂಗಳೂರು ಮೂಲಕ ಉತ್ತಮ್‌ ಇಂಡಸ್ಟ್ರೀಸ್‌ ಜತೆಗೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ. ಆರಂಭಿಕವಾಗಿ ಒಟ್ಟೂ500 ಸ್ಮಾರ್ಚ್‌ ಪೋಲ್‌ ನಿಲ್ಲಿಸಲು ತೀರ್ಮಾನವಾಗಿದೆ. ಒಂದು ಪೋಲ್‌ .2ಲಕ್ಷ ಮೌಲ್ಯದ್ದಾಗಿದ್ದು, 12 ವಲಯದಲ್ಲಿ ಎಷ್ಟೆಷ್ಟು ಪೋಲ್‌ ಅಳವಡಿಸಬೇಕು ಎಂಬುದರ ಕುರಿತು ಸರ್ವೇ ನಡೆದಿದೆ. ಹೆಚ್ಚು ಜನ ಸೇರುವಂತ ವಾಣಿಜ್ಯ ಚಟುವಟಿಕೆ ನಡೆಯುವ ಕೊಪ್ಪಿಕರ ರಸ್ತೆ, ಗೋಕುಲ ರಸ್ತೆಯಲ್ಲಿ ಇವನ್ನು ನಿಲ್ಲಿಸಲಾಗುವುದು ಎಂದು ಪಾಲಿಕೆ ವಿದ್ಯುತ್‌ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್‌.ಎನ್‌. ಗಣಾಚಾರಿ ತಿಳಿಸಿದರು.

ಹೇಗಿದೆ ಸ್ಮಾರ್ಟ್‌ಪೋಲ್‌:

ಎಲ್‌ಇಡಿ ವಿದ್ಯುತ್‌ ಬಲ್ಬ್‌ ಒಳಗೊಂಡ ಪೋಲ್‌ ಇದು. ಎರಡೂ ಬದಿಯಲ್ಲಿ ಜಾಹೀರಾತು ಪ್ರಸಾರ ಆಗುವಂತೆ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ದಿನದ 24 ಗಂಟೆಯೂ ಜಾಹೀರಾತು ಪ್ರಸಾರ ಆಗುತ್ತದೆ. ಗುತ್ತಿಗೆ ಸಂಸ್ಥೆಯೆ ಜಾಹೀರಾತು ಪ್ರಸಾರ ಮಾಡಲಿದೆ. ನಗರದ ಹೊಟೆಲ್‌, ಬಟ್ಟೆಅಂಗಡಿ, ರಾಜಕೀಯ ಕಾರ್ಯಕ್ರಮ, ಉತ್ಪನ್ನಗಳು ಸೇರಿ ಎಲ್ಲ ಬಗೆಯ ಜಾಹೀರಾತು ಪ್ರಸಾರ ಆಗಲಿದೆ. ಆದರೆ, ಧೂಮಪಾನ, ಮದ್ಯಪಾನ,ಗುಟಕಾ ಸೇರಿ ಸಾಮಾಜಿಕ ಸ್ವಾಸ್ಥ್ಯಕ್ಕೆ ತೊಡಕಾಗುವ ವಿಚಾರಗಳನ್ನು ಪ್ರಸಾರ ಮಾಡದಂತೆ ಪಾಲಿಕೆ ಷರತ್ತು ವಿಧಿಸಿದೆ.

ಪಾಲಿಕೆಗೆ ಆದಾಯ:

ಸ್ಮಾರ್ಟ್‌ಪೋಲ್‌ನ ವಿದ್ಯುತ್‌ ಬಿಲ್ಲನ್ನು ಗುತ್ತಿಗೆ ಸಂಸ್ಥೆಯೆ ಭರಿಸಬೇಕು ಎಂಬ ಒಪ್ಪಂದವಾಗಿದೆ. ಜೊತೆಗೆ ಜಾಹೀರಾತು ಪ್ರಸಾರದಿಂದ ಬರುವ ಆದಾಯದಲ್ಲಿ ಶೇ. 50ರಷ್ಟನ್ನು ಪಾಲಿಕೆಗೆ ನೀಡಬೇಕು ಎಂದು ತಿಳಿಸಲಾಗಿದೆ. ದಿನಕ್ಕೆ ಎಷ್ಟುಸಂಸ್ಥೆಗಳ ಜಾಹೀರಾತು ಪ್ರಸಾರವಾಗಿದೆ ? ಎಷ್ಟು ಸೆಕೆಂಡ್‌ ಒಂದು ಜಾಹೀರಾತಿದೆ ? ಹಾಗೂ ಯಾವ್ಯಾವ ಬಗೆಯ ಜಾಹೀರಾತು ಪ್ರಸಾರ ಮಾಡಲಾಗುತ್ತಿದೆ ? ಹಾಗೂ ಎಷ್ಟು ದರ ನಿಗದಿಯಾಗಿದೆ ಎಂಬುದನ್ನು ಪಾಲಿಕೆಗೆ ಸಂಸ್ಥೆಯವರು ಮಾಹಿತಿ ನೀಡಬೇಕು ಎಂದು ಗಣಾಚಾರಿ ತಿಳಿಸಿದರು.

ಹೇಗೆ ನಿರ್ವಹಣೆ

ಕಮಾಂಡ್‌ ಸೆಂಟರ್‌ ಮೂಲಕ ಸ್ಮಾರ್ಟ್‌ಪೋಲ್‌ಗಳ ನಿರ್ವಹಣೆ ಆಗಲಿದೆ. ಸಿಸಿಎಂಎಸ್‌ (ಸೆಂಟ್ರಲ್‌ ಕಂಟ್ರೋಲ್‌ ಆ್ಯಂಡ್‌ ಮಾನಿಟರಿಂಗ್‌ ಸಿಸ್ಟಮ್‌) ಮೂಲಕ ಪೋಲ್‌ನಲ್ಲಿ ಜಾಹೀರಾತು ಪ್ರದರ್ಶನ, ಬ್ರೈಟ್‌ನೆಸ್‌ ಹೆಚ್ಚು ಕಡಿಮೆ ಮಾಡುವುದು, ಆನ್‌ ಹಾಗೂ ಆಫ್‌ ಮಾಡುವ ಕಾರ್ಯಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಈ ಸೆಂಟರ್‌ನಲ್ಲಿ ಗುತ್ತಿಗಾ ಸಂಸ್ಥೆಯ ಹಾಗೂ ಪಾಲಿಕೆಯ ಒಬ್ಬರು ಸಿಬ್ಬಂದಿ ಇರುವರು. ಪಾಲಿಕೆ ಸಿಬ್ಬಂದಿ ಜಾಹೀರಾತಿನ ಮೇಲ್ವಿಚಾರಣೆ ಮಾಡಲಿದ್ದಾರೆ.

ಅರ್ಧ ಶತಮಾನದ ಮುನಿಸಿಗೆ ತೆರೆ..! 52 ವರ್ಷ ನಂತರ ಒಂದಾದ ಜೋಡಿ ಕಥೆ

ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ನಗರದ ಸೌಂದರ್ಯಿಕರಣದ ದೃಷ್ಟಿಯಿಂದಲೂ ಸ್ಮಾರ್ಟ್‌ಪೋಲ್‌ ಹೆಚ್ಚು ಅನುಕೂಲ.ಜೊತೆಗೆ ಪರಿಸರ ಸಂರಕ್ಷಣೆ ಕಾರಣದಿಂದಲೂ ಒಳಿತು. ಇದರ ಫಲಿತಾಂಶ ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಮಾರ್ಟ್‌ಪೋಲ್‌ ಅಳವಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್‌ಪೋಲ್‌ನಿಂದ ಸರ್ಕಾರಿ ಯೋಜನೆ ಜಾಹೀರಾತು ಪ್ರಸಾರಕ್ಕೂ ಅವಕಾಶ ನೀಡುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ. ಇದರಿಂದ ಪಾಲಿಕೆಗೆ ಆದಾಯವೂ ಬರಲಿದೆ ಅಂತ ಹುಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ತಿಳಿಸಿದ್ದಾರೆ.  
 

Follow Us:
Download App:
  • android
  • ios