ಅಂಶಿ ಪ್ರಸನ್ನಕುಮಾರ್‌

ಮೈಸೂರು [ನ.27]: ರಾಜ್ಯದ ಬಹುತೇಕ ಘಟಾನುಘಟಿ ರಾಜಕಾರಣಿಗಳು ಒಂದಲ್ಲ ಒಂದು ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಹಲವಾರು ಕ್ರಾಂತಿಕಾರ ನಿರ್ಣಯಗಳ ಮೂಲಕ ‘ಪರಿವರ್ತನೆಯ ಹರಿಕಾರ’ ಎನಿಸಿಕೊಂಡು. ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಲು ಕಾರಣಕರ್ತರಾದ ಡಿ. ದೇವರಾಜ ಅರಸು ಅವರು ಮಾತ್ರ ಚುನಾವಣಾ ರಾಜಕೀಯದಲ್ಲಿ ಸೋಲಿಲ್ಲದ ಸರದಾರ.

1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಅರಸು ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 1957ರ ವೇಳೆಗೆ ಹುಣಸೂರಿಗೆ ಪಕ್ಕದ ಹೆಗ್ಗಡದೇವನಕೋಟೆ ತಾಲೂಕನ್ನು ಸೇರಿಸಿ ದ್ವಿಸದಸ್ಯ ಕ್ಷೇತ್ರವಾಗಿ ಪರಿವರ್ತಿಸಲಾಯಿತು. ಕಾಂಗ್ರೆಸ್‌ ಟಿಕೆಟ್‌ ಮೇಲೆ ಅರಸು ಎರಡನೇ ಬಾರಿಗೆ ಆಯ್ಕೆಯಾದರು. ಅವರೊಂದಿಗೆ ಎನ್‌. ರಾಚಯ್ಯ ಕೂಡ ಆಯ್ಕೆಯಾಗಿದ್ದರು. 1962ರ ವೇಳೆಗೆ ಹೆಗ್ಗಡದೇವನಕೋಟೆ ಪ್ರತ್ಯೇಕ ಪ.ಜಾತಿ ಮೀಸಲು ಕ್ಷೇತ್ರವಾಯಿತು. ಹುಣಸೂರು ಮತ್ತೆ ಏಕಸದಸ್ಯ ಕ್ಷೇತ್ರವಾಯಿತು. ಕಾಂಗ್ರೆಸ್‌ ಅಭ್ಯರ್ಥಿಯಾದ ಅರಸು ಅವರು ಅವಿರೋಧವಾಗಿ ಆಯ್ಕೆಯಾದರು. ಇದು ಅವರಿಗೆ ಸತತ ಮೂರನೇ ಗೆಲವು.

1967 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅರಸು ಸತತ ನಾಲ್ಕನೇ ಬಾರಿಗೆ ಗೆದ್ದರು. 1972ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. 1969 ರಲ್ಲಿ ಕಾಂಗ್ರೆಸ್‌ ಇಬ್ಭಾಗವಾಗಿತ್ತು. ಅರಸು ಅವರು ಇಂದಿರಾಗಾಂಧಿ ನೇತೃತ್ವದ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿ, ಇಡೀ ರಾಜ್ಯಾದ್ಯಂತ ಪ್ರಚಾರದ ಹೊಣೆ ಹೊತ್ತಿದ್ದು ಇದಕ್ಕೆ ಕಾರಣ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅರಸು ಅವರೇ ಮುಖ್ಯ ಮಂತ್ರಿಯಾಗಿ ಆಯ್ಕೆಯಾದರು. ಹುಣಸೂರಿನಿಂದ ಗೆದ್ದಿದ್ದ ಡಿ.ಕರಿಯಪ್ಪಗೌಡರು ಅರಸು ಅವರಿಗೆ ಸ್ಥಾನ ತೆರವು ಮಡಿಕೊಟ್ಟು. ಮೇಲ್ಮನೆ ಸದಸ್ಯರಾದರು. ಉಪ ಚುನಾವಣೆಯಲ್ಲಿ ಅರಸು ಗೆದ್ದು. ಹುಣಸೂರನ್ನು ಐದನೇ ಬಾರಿಗೆ ಪ್ರತಿನಿಧಿಸುವ ಗೌರವ ಪಡೆದರು. 1978 ರಲ್ಲಿ ಅರಸು ಅವರು ಹುಣಸೂರಿನಿಂದ ಆರನೇ ಬಾರಿ ಗೆದ್ದು. 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಅರಸು ಅವರು ಮೊದಲ ಸಿಎಂ ಅವಧಿಯನ್ನು 20.3.1972 ರಿಂದ 31.12.1977 ರವರೆಗೆ ಪೂರ್ಣಾವಧಿ ನಿರ್ವಹಿಸಿದರು. ಎರಡನೇ ಬಾರಿಗೆ 28.2.1978 ರಲ್ಲಿ ಸಿಎಂ ಆದರು. ಪಕ್ಷದಲ್ಲಿ ಕಾಣಿಸಿಕೊಂಡ ‘ಆಯಾರಾಂ ಗಯಾರಾಂ’ ಸಂಸ್ಕೃತಿಯಿಂದ 7.1.1980 ರಂದು ಸಿಎಂ ಪದವಿಯಿಂದ ನಿರ್ಗಮಿಸಬೇಕಾಯಿತು. ಅವರು ಬೆಳೆಸಿದವರೇ ಅವರಿಗೆ ಕೈ ಕೊಟ್ಟರು. ಹೀಗಾಗಿ ಅರಸು ಅವರು ಚುನಾವಣಾ ರಾಜಕೀಯದಲ್ಲಿ ‘ಸೋಲಿಲ್ಲದ ಸರದಾರ’ ಎನಿಸಿಕೊಂಡರೂ ‘ತಂತ್ರಗಾರಿಕೆಯ ರಾಜಕಾರಣ’ದಲ್ಲಿ ಸೋತು. ಜೀವಿತದ ಕೊನೆ ಅವಧಿಯಲ್ಲಿ ‘ಏಕಾಂಗಿ’ಯಾಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿ. ದೇವರಾಜ ಅರಸು ಅವರು 23.1.1980 ರಿಂದ 11.6.1981 ರವರೆಗೆ ವಿರೋಧ ಪಕ್ಷದ ನಾಯಕರೂ ಆಗಿದ್ದರು.

ಚಂದ್ರಪ್ರಭ ಅವರ ನಂತರ ಅವರ ಮಕ್ಕಳಾದ ಅನುಪಮಾ, ಮಂಜುನಾಥ ಅರಸು ಆಗಾಗ ಹುಣಸೂರಿನಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಉಂಟು. ಅನುಪಮಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂದು ಬೆಂಬಲಿಗರು ಆಗ್ರಹಿಸಿದ್ದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಮಂಜುನಾಥ ಅರಸು ಅವರನ್ನು ಕೆಜೆಪಿ ಸೆಳೆದುಕೊಂಡು 2013ರಲ್ಲಿ ಟಿಕೆಟ್‌ ನೀಡಿತ್ತು. ತಾತ 6 ಬಾರಿ, ಅಮ್ಮ 2 ಬಾರಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಮಂಜುನಾಥ್‌ ಅರಸು ಸ್ಪರ್ಧಿಸಿ,ನಾಲ್ಕನೇ ಸ್ಥಾನ ಗಳಿಸಿ, ಸೋತರು. ಇದಾದ ನಂತರ ರಾಜಕೀಯದಿಂದ ದೂರ ಇದ್ದಾರೆ. ಅರಸು ಅವರ ಮತ್ತೊಬ್ಬ ಮೊಮ್ಮಗ ಸೂರಜ್‌ ಹೆಗಡೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

ಪುತ್ರಿಯರು ರಾಜಕಾರಣಕ್ಕೆ

ಅರಸು ನಿಧನಾನಂತರ ಅವರ ಪುತ್ರಿ ಚಂದ್ರಪ್ರಭ ಅರಸು ರಾಜಕೀಯ ಪ್ರವೇಶಿಸಿದರು. ಹುಣಸೂರು ಕ್ಷೇತ್ರದಿಂದ 1983 ರಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿ ಗೆದ್ದು, ರಾಮಕೃಷ್ಣ ಹೆಗಡೆ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ರೇಷ್ಮೆ ಖಾತೆಯ ಸಚಿವೆಯಾಗಿದ್ದರು. ನಂತರ ಜನತಾ ಪಕ್ಷ ಬಿಟ್ಟು ಅಜೀಜ್‌ ಸೇಠ್‌ ಅವರ ಜೊತೆ ಕಾಂಗ್ರೆಸ್‌ಗೆ ಹೋದರು. 1985ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಸ್ಪರ್ಧಿಸಿ, ಸೋತರು. 1989 ರಲ್ಲಿ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಮೇಲೆ ಸ್ಪರ್ಧಿಸಿ, ಎರಡನೇ ಬಾರಿ ಗೆದ್ದರು. 1991 ರಲ್ಲಿ ಮೈಸೂರಿನಿಂದ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದರು. 1994, 1999 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸ್ವಪಕ್ಷೀಯರ ಕಾಲೆಳೆಯುವ ಆಟದಿಂದಾಗಿ ನಾಲ್ಕನೇ ಸ್ಥಾನ ಪಡೆದು, ಸೋತರು. ಇದಾದ ನಂತರ ರಾಜಕೀಯವಾಗಿ ಮೇಲೆಳಲು ಆಗಲಿಲ್ಲ. ಅರಸು ಮಂತ್ರದ ಜಪಿಸುವ ಕಾಂಗ್ರೆಸ್‌ ಚಂದ್ರಪ್ರಭ ಅವರಿಗೆ ಯಾವುದೇ ಪರ್ಯಾಯ ಹುದ್ದೆಯ ವ್ಯವಸ್ಥೆ ಮಾಡಲಿಲ್ಲ. ನಂತರ ಅನಾರೋಗ್ಯದಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಸರಿದರು. ಈಗ ಅವರು ಬದುಕಿಲ್ಲ.

1998 ರಲ್ಲಿ ಹುಣಸೂರಿನಿಂದ ನಡೆದ ಉಪ ಚುನಾವಣೆಯಲ್ಲಿ ಅರಸು ಅವರ ಮತ್ತೋರ್ವ ಪುತ್ರಿ ಭಾರತಿ ಅರಸು ಬಿಜೆಪಿ-ಲೋಕಶಕ್ತಿ ಸಂಯುಕ್ತ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಾಲ್ಕನೇ ಸ್ಥಾನ ಪಡೆದು ಸೋತರು.