Asianet Suvarna News Asianet Suvarna News

ಇಳಿಕೆಯಾಗುತ್ತಿರುವ ಕೊಬ್ಬರಿ ಬೆಲೆ: ಆತಂಕದಲ್ಲಿ ಅನ್ನದಾತ

ಇಲ್ಲಿನ ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಯಲ್ಲಿ ಈ ಹಿಂದೆ ಒಂದು ಕ್ವಿಂಟಲ್ ಕೊಬ್ಬರಿ ಬೆಲೆ 18000 ರು. ಗಡಿ ದಾಟಿ ದಾಖಲೆ ಸೃಷ್ಟಿಸಿತ್ತು. ನಂತರ ಕಳೆದ ಐದಾರು ವರ್ಷಗಳಿಂದ ಕೊಬ್ಬರಿ ಬೆಲೆ ತೀವ್ರ ಇಳಿಮುಖವಾಗುತ್ತ 8000 ರು.ಯಿಂದ 9000 ರು.ಗೆ ಗಿರಕಿ ಹೊಡೆಯುತ್ತಿದೆ.

Decreasing coconut prices: Farmers worried snr
Author
First Published Jun 5, 2024, 10:30 AM IST

 ತಿಪಟೂರು :  ಇಲ್ಲಿನ ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಯಲ್ಲಿ ಈ ಹಿಂದೆ ಒಂದು ಕ್ವಿಂಟಲ್ ಕೊಬ್ಬರಿ ಬೆಲೆ 18000 ರು. ಗಡಿ ದಾಟಿ ದಾಖಲೆ ಸೃಷ್ಟಿಸಿತ್ತು. ನಂತರ ಕಳೆದ ಐದಾರು ವರ್ಷಗಳಿಂದ ಕೊಬ್ಬರಿ ಬೆಲೆ ತೀವ್ರ ಇಳಿಮುಖವಾಗುತ್ತ 8000 ರು.ಯಿಂದ 9000 ರು.ಗೆ ಗಿರಕಿ ಹೊಡೆಯುತ್ತಿದ್ದು, ಇತ್ತೀಚೆಗೆ ನ್ಯಾಫೆಡ್ ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದರೂ ಸಹ ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಮಾತ್ರ ಏರಿಕೆಯಾಗದಿರುವುದು ಬೆಳೆಗಾರರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.

ಕಲ್ಪತರು ನಾಡಿನಲ್ಲಿ ಕೊಬ್ಬರಿಯೇ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕಳೆದ ಐದಾರು ವರ್ಷಗಳಿಂದಲೂ ಕೊಬ್ಬರಿ ಬೆಲೆ ೯ ಸಾವಿರ ರು. ಗಡಿ ದಾಟುತ್ತಿಲ್ಲವಾದ್ದರಿಂದ ಇಲ್ಲಿನ ಕೊಬ್ಬರಿ ಬೆಳೆಗಾರರು ತೀವ್ರ ನಷ್ಟಕ್ಕೀಡಾಗುತ್ತಲೇ ಬರುತ್ತಿದ್ದಾರೆ. ಕಳೆದ ೨ ವರ್ಷಗಳಿಂದಲೂ ಬೆಂಬಲ ಬೆಲೆಯಡಿ ಕೇಂದ್ರ ಸರ್ಕಾರ ಕೊಬ್ಬರಿ ಕೊಂಡುಕೊಳ್ಳುವ ಮೂಲಕ ಬೆಳೆಗಾರರ ಹಿತಕಾಯಬೇಕೆಂದು ರೈತರು, ರೈತ ಸಂಘದವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ವಿವಿಧ ಪ್ರತಿಭಟನೆಗಳ ಮೂಲಕ ಒತ್ತಾಯಿಸಿದ್ದವು.

ಕೇಂದ್ರ ಸರ್ಕಾರ ಬೆಂಬಲ ಬೆಲೆ 12 ಸಾವಿರ ರು. ಹಾಗೂ ರಾಜ್ಯ ಸರ್ಕಾರ ಇದಕ್ಕೆ ೧೫೦೦ ರು.ಗಳನ್ನು ಸೇರಿಸಿ ಒಂದು ಕ್ವಿಂಟಲ್ ಕೊಬ್ಬರಿಗೆ ೧೩೫೦೦ ರು.ನಂತೆ ಕೊಬ್ಬರಿ ಕೊಂಡುಕೊಳ್ಳುವ ಪ್ರಕ್ರಿಯೆ ಪ್ರಾರಂಬಿಸಲಾಗಿದೆ. ನಫೆಡ್ ಮೂಲಕ ಖರೀದಿ ಪ್ರಾರಂಭವಾದರೆ, ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಬಂದು ಕೊಬ್ಬರಿ ಬೆಲೆ ಕನಿಷ್ಠ 15000 ರು.ಆದರೂ ಏರಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಹಾಗೂ ವರ್ತಕರು ಇದ್ದರು. ಆದರೆ ನ್ಯಾಫೆಡ್ ಖರೀದಿ ಗುರಿಯಲ್ಲಿ ಅರ್ಧಕ್ಕೂ ಹೆಚ್ಚು ಖರೀದಿ ಮುಗಿಯುತ್ತಿದ್ದರೂ ಕೊಬ್ಬರಿ ಬೆಲೆ ಮಾತ್ರ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿಲ್ಲ. ಎಲ್ಲರ ನಂಬಿಕೆ ಹುಸಿಯಾಗಿಸಿ, ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ನೋಂದಣಿ ಮಾಡಿಸಿದವರು ಖುಷಿಯಲ್ಲಿ:

ನ್ಯಾಫೆಡ್ ಖರೀದಿಗೆ ನೋಂದಣಿ ಪ್ರಾರಂಬಿಸಿದಾಗ ಹಗಲು- ರಾತ್ರಿ ಸರತಿಯಲ್ಲಿ ನಿಂತು ಕೊಬ್ಬರಿ ಮಾರಾಟ ನೋಂದಣಿ ದಾಖಲಾತಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಂಡು ಈಗ ಅಲ್ಲಿ ಮಾರಾಟ ಮಾಡುತ್ತಿರುವವರಿಗೆ ಒಂದು ಕ್ವಿಂಟಲ್ ಕೊಬ್ಬರಿಗೆ ೧೩೫೦೦ ರು.ಗಳು ದೊರೆಯುತ್ತಿದ್ದು ಖುಷಿಯಲ್ಲಿದ್ದಾರೆ.

ನೊಂದಣೆ ಮಾಡಿಸದವರು ತೀವ್ರ ನಷ್ಟದಲ್ಲಿ:

ಬೆಳೆಗಾರರ ಪೈಕಿ ಕೇವಲ ಶೇ.೨೫ಕ್ಕೂ ಕಡಿಮೆ ರೈತರಿಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಬಹಳಷ್ಟು ರೈತರು ನೋಂದಣಿ ಮಾಡಿಸಿಲ್ಲ. ಹಾಗಾಗಿ ಇಂತಹ ರೈತರು ಎಪಿಎಂಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರುಕಟ್ಟೆಯ ಹರಾಜಿನ ದರದಲ್ಲೇ ಕೊಬ್ಬರಿ ಮಾರಬೇಕಾಗಿದೆ. ದುರಾದೃಷ್ಟವೆಂದರೆ ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ಕೇವಲ ೮೫೦೦ ರು.ಗಳಿಂದ ೯ ಸಾವಿರ ರು.ಗಳೊಳಗಡೆಯೇ ಹರಾಜು ನಡೆಯುತ್ತಿರುವುದರಿಂದ ಬೆಳೆಗಾರರು ಕೊಬ್ಬರಿ ಮಾರಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.

ಶಾಶ್ವತ ಖರೀದಿ ಕೇಂದ್ರ ಆರಂಭಿಸಿದರೆ ಮಾತ್ರ ಬೆಲೆ

ಕೊಬ್ಬರಿ ಬೆಲೆ ಇತ್ತೀಚಿನ ಹಲವಾರು ವರ್ಷಗಳಿಂದ ೮ ಸಾವಿರ ರು.ಗಳ ಸುತ್ತಲೂ ಗಿರಕಿ ಹೊಡೆಯುತ್ತಿರುವುದರಿಂದ, ತೆಂಗಿನ ಬೆಳೆ ಹಾಗೂ ಬೆಳೆಗಾರರನ್ನು ಉಳಿಸುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ಮಾಡಬೇಕಾಗಿದೆ. ಆದರೆ ತೋಟಗಾರಿಕೆ ಇಲಾಖೆಯೇ ಹೇಳುವ ಪ್ರಕಾರ ಒಂದು ಕ್ವಿಂಟಲ್ ಕೊಬ್ಬರಿ ಉತ್ಪಾದಿಸಲು ೧೬ ಸಾವಿರ ರು.ಗಳಿಗೂ ಹೆಚ್ಚು ಖರ್ಚು ಬರುವುದರಿಂದ ಇದಕ್ಕಿಂತ ಹೆಚ್ಚಿನ ಬೆಲೆಯನ್ನು ಬೆಂಬಲ ಬೆಲೆಯಾಗಿ ಘೋಷಿಸಬೇಕು, ಅಲ್ಲದೇ ವರ್ಷದ ಎಲ್ಲ ಸಮಯದಲ್ಲೂ ನಫೆಡ್ ಖರೀದಿ ಕೇಂದ್ರವನ್ನು ತೆರೆದು ಎಲ್ಲ ರೈತರ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ಮಾತ್ರ ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಹೆಚ್ಚಿನ ಬೆಲೆ ಬರಲಿದೆ.

Latest Videos
Follow Us:
Download App:
  • android
  • ios