Asianet Suvarna News Asianet Suvarna News

ರಾಮನಗರ ಜಿಲ್ಲೆಯಲ್ಲಿ ಬೆಳೆ ಹಾನಿ: 274.22 ಕೋಟಿ ನಷ್ಟ

ಜಿಲ್ಲೆಯ 5 ತಾಲೂಕುಗಳು ಮುಂಗಾರು ಮಳೆಯ ಕೊರತೆ ಹಾಗೂ ಬರದಿಂದ ತೀವ್ರವಾಗಿ ತತ್ತರಿಸಿದ್ದು, ಇದರಿಂದ ಅಂದಾಜು 274 ಕೋಟಿ ರುಪಾಯಿ ನಷ್ಟ ಉಂಟಾಗಿದೆ.

Crop damage in Ramnagar district: 274  crore loss snr
Author
First Published Oct 10, 2023, 10:17 AM IST

ಎಂ.ಅಫ್ರೋಜ್ ಖಾನ್

ರಾಮನಗರ :  ಜಿಲ್ಲೆಯ 5 ತಾಲೂಕುಗಳು ಮುಂಗಾರು ಮಳೆಯ ಕೊರತೆ ಹಾಗೂ ಬರದಿಂದ ತೀವ್ರವಾಗಿ ತತ್ತರಿಸಿದ್ದು, ಇದರಿಂದ ಅಂದಾಜು 274 ಕೋಟಿ ರುಪಾಯಿ ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 44,128 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಕೇಂದ್ರದ ಎನ್‌ ಡಿಆರ್ ಎಫ್‌ ಮಾರ್ಗಸೂಚಿಯ ಪ್ರಕಾರವಾಗಿ ರೈತರಿಗೆ ಇನ್‌ ಪುಡ್‌ ಸಬ್ಸಿಡಿಯಾಗಿ ಪರಿಹಾರ ನೀಡಲು ಸುಮಾರು 32ರಿಂದ 35 ಕೋಟಿ ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಬರದಿಂದಾಗಿ ಜಿಲ್ಲೆಯ ಪ್ರಮುಖ ಬೆಳೆಗಳು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳು ಹಾನಿಗೊಂಡಿವೆ. 5 ತಾಲೂಕುಗಳ ಕೃಷಿಕರು ಬೆಳೆ ಕೈಗೆ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರದಿಂದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಅಲ್ಲಲ್ಲಿ ಬೆಳೆ ಹಾಕಿದ್ದರೂ ನೀರು ಅಥವಾ ಮಳೆ ಇಲ್ಲದೇ ಅವು ಒಣಗುತ್ತಿರುವ ಪರಿಣಾಮ ಹಸಿರು ಬರ ತಲೆದೋರಿದೆ.

ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬೆಳೆಹಾನಿಯ ಜಂಟಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ.

ಕುಡಿಯುವ ನೀರು ಪೂರೈಕೆ, ಪಶುಗಳಿಗೆ ಮೇವು ಬ್ಯಾಂಕ್ ಸ್ಥಾಪನೆ, ಮಿನಿ ಕಿಟ್ಸ್ ಸರಬರಾಜು , ಔಷದೋಪಚಾರ ಹಾಗೂ ರೈತರಿಗೆ ಇನ್ಪುಟ್‌ ಸಬ್ಸಿಡಿ ವಿತರಿಸಲು ಅನುದಾದನ ಅಗತ್ಯವಿದೆ. ಕನಕಪುರ, ರಾಮನಗರ, ಹಾರೋಹಳ್ಳಿ ತಾಲೂಕುಗಳನ್ನು ಪ್ರಸಕ್ತ ಮುಂಗಾರಿನಲ್ಲಿ ತೀವ್ರ ಬರ ಪೀಡಿತ ಹಾಗೂ ಚನ್ನಪಟ್ಟಣ, ಮಾಗಡಿ ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬರಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿರುವ ಸಂಬಂಧ ಸರ್ಕಾರದ ಸೂಚನೆಯಂತೆ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಬೆಳೆ ಹಾನಿ ಹಾಗೂ ಅದರಿಂದ ಆಗಿರುವ ನಷ್ಟದ ಅಂದಾಜನ್ನು ಮಾಡಲಾಗಿದೆ. ಕ್ರೋಢೀಕೃತ ವರದಿಯನ್ನು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದರ ಪ್ರತಿ   ಲಭ್ಯವಾಗಿದೆ.

ಜಿಲ್ಲೆಯಲ್ಲಿ ಮಳೆ ಕೊರತೆ:

ಮುಂಗಾರು ಹಂಗಾಮಿನಲ್ಲಿ ಆಗಸ್ಟ್ ಮಾಹೆವರೆಗೆ ವಾಡಿಕೆ ಮಳೆ 254 ಮಿ.ಮೀ. ಗೆ 134 ಮಿ.ಮೀ. ಮಳೆಯಾಗಿದ್ದು, ಶೇ.47ರಷ್ಟು ಮಳೆ ಕೊರತೆಯಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ವಾಡಿಕೆ ಮಳೆ 175 ಮಿ.ಮೀ. ಗೆ 144 ಮಿ.ಮೀ. ಮಳೆಯಾಗಿ ಶೇ.18ರಷ್ಟು ಕೊರತೆಯಾಗಿದೆ. ಜನವರಿಯಿಂದ ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗೆ ಒಟ್ಟಾರೆ ಚನ್ನಪಟ್ಟಣ - ಶೇ.9, ಕನಕಪುರ - ಶೇ.28, ಮಾಗಡಿ - ಶೇ.16,ರಾಮನಗರ - ಶೇ.29 ಮತ್ತು ಹಾರೋಹಳ್ಳಿ -ಶೇ.48ರಷ್ಟು ಮಳೆ ಕೊರತೆಯಾಗಿದೆ. ಮಳೆಯ ತೀವ್ರ ಕೊರತೆಯಿಂದಾಗಿ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 92655 ಹೆಕ್ಟೇರ್‌ ಬಿತ್ತನೆ ವಿಸ್ತೀರ್ಣದ ಗುರಿಗೆ ಆಗಸ್ಟ್ ತಿಂಗಳ ಅಂತ್ಯಕ್ಕೆ 46358 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಶೇ.50.3ರಷ್ಟು ಬಿತ್ತನೆಯಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಒಟ್ಟು 74789 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಈ ಪ್ರದೇಶದಲ್ಲಿ

42897 ಹೆಕ್ಟೇರ್ ಪ್ರದೇಶವನ್ನು ಹಾಗೂ 1231 ಹೆಕ್ಟೆರ್ ತೆಂಗು ಪ್ರದೇಶವನ್ನು ಶೇ.35ಕ್ಕಿಂತ ಹೆಚ್ಚಿನ ಬೆಳೆ ಹಾನಿಯೆಂದು ವರದಿ ಮಾಡಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಬರದ ತೀವ್ರತೆ ಹೆಚ್ಚುತ್ತಲೇ ಇದ್ದು, ರಾಗಿ ಸೇರಿದಂತೆ ಬಹುತೇಕ ಬೆಳೆಗಳು ಮೊಳಕೆ ಹಂತದಲ್ಲೇ ಬಾಡಿ ಹೋಗಿವೆ. ಬೇಸಿಗೆ ರೀತಿಯ ವಾತಾವರಣ ನಿರ್ಮಾಣವಾಗಿದ್ದು, ಬೆಳೆಗಳನ್ನು ಹಾಕಲಾಗದೇ ಹಾಗೂ ಉಳಿಸಿಕೊಳ್ಳಲಾಗದೆ ರೈತರು ಕಂಗಾಲಾಗಿದ್ದಾರೆ.

Follow Us:
Download App:
  • android
  • ios