ಸಂಡೂರು(ಜ.23): ಕೇಂದ್ರ ಸರ್ಕಾರವು ಜಾರಿ ಮಾಡಿರುವ ಪೌರತ್ವ ಕಾಯಿದೆ (ಸಿಎಎ) ತಿದ್ದುಪಡಿಯ ಕಾನೂನಿನಂತೆ ನೆರೆಯ ದೇಶಗಳಾದ ಬಾಂಗ್ಲಾ, ಪಾಕ್‌, ಆಷ್ಘಾ​ನಿ​ಸ್ತಾ​ನದ ನಿರಾಶ್ರಿತ ಅಲ್ಪ ಸಂಖ್ಯಾತರಾದ ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿ, ಸಿಕ್‌ ಸಮುದಾಯಗಳ ಅಕ್ರಮ ವಲಸಿಗರಿಗೆ ಪೌರತ್ವ ನೀಡಿ ಮುಸ್ಲಿಂರನ್ನು ಮಾತ್ರ ನುಸುಳುಕೋರರು ಎಂದು ಪರಿಗಣಿಸಲಾಗುತ್ತದೆ ಎಂದು ಸಿಐಐ ಸಂಚಾಲಕ ಸೋಮಶೇಖರಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಪಟ್ಟಣದ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಸಿಎಎ, ಎನ್‌ಆರ್‌ಸಿ, ಆರ್ಥಿಕ ಕುಸಿತ ವಿರೋಧಿಸಿ ಹಮ್ಮಿಕೊಂಡಿದ್ದ ಜನತೆಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ನಮ್ಮ ದೇಶದಲ್ಲಿ ಸರ್ವಧರ್ಮಗಳನ್ನು ಸಮಾನವಾಗಿ ಕಾಣಬೇಕು. ಧರ್ಮ ಆಧಾರಿತ ಪೌರತ್ವ ನೀಡುವ ಕ್ರಮ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿದೆ. ಸ್ವಾತಂತ್ರ, ಸಮಾನತೆ ಮತ್ತು ಸಹೋದರತ್ವ ಎತ್ತಿ ಹಿಡಿಯಬೇಕಾದ, ಸ್ವಾತಂತ್ರ ಹೋರಾಟಗಾರರು, ಸಮಾಜ ಸುಧಾರಕರ ಆಶಯದಂತೆ ನಡೆಯದ ಕ್ರಮವನ್ನು ಸಂಪೂರ್ಣ ವಿರೋಧಿಸುತ್ತೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎಐಡಿಎಸ್‌ಒ ಉಪಾಧ್ಯಕ್ಷ ಡಾ. ಪ್ರಮೋದ್‌ ಮಾತನಾಡಿ, ದೇಶದಲ್ಲಿ 2024ರೊಳಗೆ ರಾಷ್ಟ್ರೀಯ ಪೌರತ್ವ (ಎನ್‌ಆರ್‌ಸಿ) ನೋಂದಣಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳುತ್ತಿದ್ದಾರೆ. ಎನ್‌ಆರ್‌ಸಿಗೆ ಅಗತ್ಯ ದಾಖಲೆಗಳನ್ನು ಜೋಡಿಸಲು ಜನ ಕಚೇರಿ ಅಲೆಯಬೇಕಾಗುತ್ತದೆ. ಈ ಹಿಂದೆ ನೋಟ್‌ ಬ್ಯಾನ್‌ ಮಾಡಿದಾಗಲೂ ಜನ ಬ್ಯಾಂಕ್‌ಗಳ ಮುಂದೆ ನಿಂತು ತಮ್ಮ ಸಮಯ ವ್ಯರ್ಥ ಮಾಡಿಕೊಂಡಿದ್ದಾರೆ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂಥ ಕಹಿ ಅನುಭವದ ನಡುವೆ ಮತ್ತೊಮ್ಮೆ ಎನ್‌ಆರ್‌ಸಿ ಹೆಸರಿನಲ್ಲಿ ಜನರ ಮೇಲೆ ಪ್ರಹಾರ ನಡೆಸಲಾಗುತ್ತಿದೆ. ಭ್ರಷ್ಟಅಧಿಕಾರಿಗಳು ದಾಖಲೆಗಳನ್ನು ನೀಡುವಲ್ಲಿ ವಿಳಂಬ ತೋರಿ ಸಾಮಾನ್ಯ ಜನರನ್ನು, ಕೂಲಿ ಕಾರ್ಮಿಕರನ್ನು, ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸುವ ಮತ್ತು ಬಂಧನ ಕೇಂದ್ರಗಳಿಗೆ ಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಕೆಲವೇ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಸಲುವಾಗಿ 125 ಕೋಟಿ ಜನ ಭಾರತೀಯರು ದಾಖಲೆಗೆ ಕಚೇರಿ ಅಲೆಯುವಂತೆ ಮಾಡುವುದು ಅನ್ಯಾಯದ ಪರಮಾವಧಿ ಎಂದು ಜರಿದರು. 

ರಾಷ್ಟ್ರವಾದ, ದೇಶ ಭಕ್ತಿಯನ್ನು ಗುತ್ತಿಗೆ ಹಿಡಿದವರಂತೆ ವರ್ತಿಸುವ ಬಿಜೆಪಿ, ಸಂಘ ಪರಿವಾರದವರ ಕೋಮುವಾದಿ ಅಜೆಂಡಾಗಳಿಂದ ದೇಶ ಹೊತ್ತಿ ಉರಿಯುತ್ತಿದೆ. ಜನರ ಹೋರಾಟಗಳನ್ನು ಬಲ ಪ್ರಯೋಗದಿಂದ, ನಿಷೇಧಾಜ್ಞೆಗಳಿಂದ ನೆಮ್ಮದಿ ಕದಡುತ್ತಿರುವ ಅನ್ಯಾಯವನ್ನು ವಿರೋಧಿಸಬೇಕು ಎಂದರು.

ವಕೀಲ ಟಿ.ಎಂ. ಶಿವಕುಮಾರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಚ್ಛೀ ದಿನ್‌ ನೀಡುವುದಾಗಿ ಭರವಸೆ ನೀಡಿ, ದುರ್ದಿನಗಳನ್ನು ತಂದಿದ್ದಾರೆ ಎಂಬುದಕ್ಕೆ ದೇಶದ ಜಿಡಿಪಿ ಕುಸಿತ, ನಿರುದ್ಯೋಗದ ಹೆಚ್ಚಳ, ಬಂಡವಾಳ ಹೂಡಿಕೆಯಲ್ಲಿ ಹಿಂದೆ ಬಿದ್ದಿರುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡಲಿಲ್ಲ. ಜನರಿಗೆ ದೇಶದ ಸದ್ಯದ ಶೋಚನೀಯ ಸ್ಥಿತಿ ತಿಳಿಯದಂತೆ ಮರೆಮಾಚಲು ಜನ ವಿರೋಧಿಯಾದ ಎನ್‌ಆರ್‌ಸಿ, ಸಿಎಎ ಕಾನೂನುಗಳನ್ನು ಜಾರಿ ಮಾಡುವಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.

ವಿದ್ಯಾರ್ಥಿ ಮುಖಂಡ ಗೋವಿಂದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಂಜುನಾಥ, ಶಾಂತಿ ಇತರರಿದ್ದರು.(ಚಿತ್ರ: ಸಾಂದರ್ಭಿಕ ಚಿತ್ರ)