ಮೈಸೂರು[ಜು.02]: ಅಕ್ರಮ ಸಂಬಂಧದಿಂದ ದೂರ ಇರುವಂತೆ ಕಂಡೀಷನ್ ಹಾಕಿದ ಹಿನ್ನೆಲೆಯಲ್ಲಿ ವಿವಾಹಿತ ಪ್ರೇಮಿಗಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ರಮಾಬಾಯಿ ನಗರದಲ್ಲಿ ನಡೆದಿದೆ.

ಮೃತರನ್ನು ಸಂತೋಷ್ ಕುಮಾರ್ (34), ಸುಮಿತ್ರಾ(35) ಎಂದು ಗುರುತಿಸಲಾಗಿದೆ. ಇಬ್ಬರೂ ಸಂತೋಷ್ ಕುಮಾರ್ ಮನೆಯ ಕೊಠಡಿಯಲ್ಲಿ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜೆಪಿ ನಗರದ ನಿವಾಸಿ ಸುಮಿತ್ರಾ, ಸಿದ್ದರಾಜು ಎಂಬುವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದರು. ಅತ್ತ ರಮಾಬಾಯಿನಗರದ ನಿವಾಸಿ ಸಂತೋಷ್ ಕುಮಾರ್, ಅರ್ಚನಾ ಎಂಬಾಕೆಯನ್ನು ಮದುವೆಯಾಗಿದ್ದ. ಸಂತೋಷ್ ಹಾಗೂ ಅರ್ಚನಾ ದಂಪತಿಗೆ ಇಬ್ಬರು ಮಕ್ಕಳಿದ್ದರು. 

ಜೆ.ಪಿ. ನಗರದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಸುಮಿತ್ರಾ ಕೆಲಸ ಮಾಡುತ್ತಿದ್ದರೆ, ಸಂತೋಷ್ ಕುಮಾರ್ ಅದೇ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿಯುತ್ತಿದ್ದ. ಕಳೆದ ಡಿಸೆಂಬರ್ ನಿಂದ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ಅಂತಿಮವಾಗಿ ಗ್ರಾಮದ ಮುಖಂಡರು ಮಾತುಕತೆ ನಡೆಸಿ ಇಬ್ಬರ ಅಕ್ರಮ ಸಂಪರ್ಕಕ್ಕೆ ತೆರೆ ಎಳೆದಿದ್ದರು. 

ಹೀಗಿದ್ದರೂ ಕಳೆದ ಗುರುವಾರ ಸುಮಿತ್ರಾ ಮನೆ ಬಿಟ್ಟು ಓಡಿಹೋಗಿದ್ದಳು. ಇದರಿಂದ ಕುಪಿತನಾದ ಸುಮಿತ್ರಾ ಪತಿ ಸಿದ್ದರಾಜು ರೆಡ್ ಹ್ಯಾಂಡಾಗಿ ಹಿಡಿಯಲು ಪೊಲೀಸರ ಜತೆ ಸಂತೋಷ್ ಕುಮಾರ್ ಮನೆಗೆ ಹೋಗಿದ್ದ. ಆದರೆ ಅಷ್ಟರಲ್ಲಾಗಲೇ ಸುಮಿತ್ರಾ ಹಾಗೂ ಸಂತೋಷ್ ಕುಮಾರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.