ಚಾಮರಾಜನಗರ(ಮಾ.21): ಕೊರೋನಾ ವೈರಸ್‌ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಾ. 22ರಂದು ಜನತಾ ಕಪ್ರ್ಯೂ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಕೆಕ್ಕನಹಳ್ಳ, ಮೂಲೆಹೊಳೆ ವಾಹನಗಳಿಗೆ ನಿಷೇಧ ಹೇರುವ ಮೂಲಕ ಅಂತರ್‌ ರಾಜ್ಯ ಸಂಪರ್ಕ ಕಡಿತಗೊಂಡಿದೆ.

ಗುಂಡ್ಲುಪೇಟೆ-ಸುಲ್ತಾನ್‌ ಬತ್ತೇರಿ ಹೆದ್ದಾರಿಯ ಮೂಲೆಹೊಳೆ ಹಾಗೂ ಗುಂಡ್ಲುಪೇಟೆ- ಗೂಡಲೂರು ಹೆದ್ದಾರಿಯ ಕೆಕ್ಕನಹಳ್ಳ ಬಳಿ ರಸ್ತೆಯಲ್ಲಿ ಎರಡು ರಾಜ್ಯದ ವಾಹನಗಳ ಸಂಪರ್ಕ ಕಡಿತಕ್ಕೆ ಪೊಲೀಸರು ಕ್ರಮ ವಹಿಸಿದ್ದಾರೆ. ಕೆಕ್ಕನಹಳ್ಳ ಮೂಲಕ ತಮಿಳುನಾಡಿಗೆ, ಮೂಲೆಹೊಳೆ ಮೂಲಕ ಕೇರಳಕ್ಕೆ ವಾಹನಗಳ ಸಂಚಾರ ನಿಷೇಧಿಸುವ ಮೂಲಕ ಗಡಿ ಬಂದ್‌ ಮಾಡಲಾಗಿದೆ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಮಹದೇವಸ್ವಾಮಿ ಹೇಳಿದರು.

ಕೊರೋನಾ ಚುಚ್ಚುಮದ್ದು ನನ್ನ ಮೇಲೆ ಪ್ರಯೋಗಿಸಿ ಎಂದ ವಕೀಲ

ಕೇರಳ ಹಾಗೂ ತಮಿಳುನಾಡಿಗೆ ಸಂಚಾರ ನಿಷೇಧಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಒಂದೆರಡು ವಾಹನಗಳ ಹೋಗಲು ಅವಕಾಶ ನೀಡಲಾಗಿದೆ ಆದರೆ ಇದು ತಾತ್ಕಾಲಿಕ. ಕೇರಳ ರಸ್ತೆಯಲ್ಲಿರುವ ಹೋಟೆಲ್‌ ಹಾಗೂ ಲಾಡ್ಜ್‌ಗಳಿಗೆ ಆರೋಗ್ಯ ಇಲಾಖೆ ಹಾಗೂ ತಹಸೀಲ್ದಾರ್‌ ಹಾಗು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಕೊರೋನಾ ವೈರಸ್‌ ಎಲ್ಲೆಡೆ ಹರಡುತ್ತದೆ ಎಂದು ಕೇರಳಿಗರು ಹೆಚ್ಚಾಗಿ ಬರುವ ಹೋಟೆಲ್‌ಗಳನ್ನು ಬಂದ್‌ ಮಾಡಿಸಿದ್ದಾರೆ ಹಾಗೂ ಲಾಡ್ಜ್‌ಗಳಲ್ಲಿ ಯಾವುದೇ ಕಾರಣಕ್ಕೂ ರೂಂ ಕೊಡಬಾರದು ಎಂದು ಸೂಚಿಸಿದ್ದಾರೆ. ಚಿಕನ್‌, ತೀತರ್‌ ಮಾರಾಟ ಹಾಗೂ ಆಹಾರ ತಯಾರಿಕೆ ಬೇಡ ಎಂದು ಸೂಚನೆ ನೀಡಲಾಗಿದೆ. ಅಲ್ಲದೆ ಕಾಫಿ ಡೇ ಹಾಗೂ ಕೇರಳಿಗರು ಬರುವ ಸ್ಥಳಗಳಿಗೆ ನಿಗಾ ವಹಿಸಲಾಗಿದೆ. ಪೊಲೀಸ್‌ ಠಾಣೆಗೆ ಬರುವ ಜನರಿಗೆ ಕೊರೋನಾ ವೈರಸ್‌ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್‌ ಇಲಾಖೆ ಎಲ್ಲರೂ ಮಾಸ್ಕ್‌ ಧರಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.

ಡಿಸಿಗೆ ಮನವರಿಕೆ:

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಟ್ರಕ್‌ನಲ್ಲಿ ಹೆಚ್ಚಾಗಿ ಕೇರಳಿಗರು ಬರುತ್ತಿದ್ದಾರೆ. ಎಪಿಎಂಸಿ ಬಂದ್‌ ಮಾಡಿದರೆ ರೈತರಿಗೆ ತೊಂದರೆಯಾಗುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ತಹಸೀಲ್ದಾರ್‌ ಎಂ.ನಂಜುಂಡಯ್ಯ ಮಾತನಾಡಿ, ಹೋಟೆಲ್‌ಗೆ ತೆರಳಿ ಮಾಹಿತಿ ಪಡೆಯುತ್ತಿದ್ದೇನೆ. ಗುಂಡ್ಲುಪೇಟೆಯಲ್ಲಿ ರಸ್ತೆಯಲ್ಲಿ ತಿಂಡಿ, ತಿನಿಸು ಹಾಗೂ ಕ್ಯಾಂಟೀನ್‌ಗಳ ವ್ಯಾಪಾರ ನಿಲ್ಲಿಸಲಾಗಿದೆ. ಗುಂಡ್ಲುಪೇಟೆಗೆ ಜನರು ಹೆಚ್ಚು ಬರುತ್ತಿರುವ ಕಾರಣ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟಕ್ಕೆ ಸ್ವಲ್ಪ ಬ್ರೇಕ್‌ ಹಾಕುವುದಾಗಿ ಹೇಳಿದರು.