ಕಲಬುರಗಿ(ಜೂ.25): ನಗರ ಹಾಗೂ ಜಿಲ್ಲೆಯಲ್ಲಿ ಹೆಮ್ಮಾರಿ ಸೋಂಕು ಹರಡದಂತೆ ಕಟ್ಟಿ ಹಾಕುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಖಾಕಿಪಡೆಗೆ ಇದೀಗ ಸೋಂಕಿನ ಭೀತಿ ಆವರಿಸಿದೆ.

ಬಂಧಿತ ಅತ್ಯಾಚಾರ ಆರೋಪಿಯೊಬ್ಬನಿಗೆ ಕೋವಿಡ್‌-19 ಸೋಂಕು ದೃಢಪಟ್ಟಿರುವುದರಿಂದ ನಗರ ಪೊಲೀಸರಲ್ಲಿ ಭೀತಿ ಮನೆ ಮಾಡಿದೆ. ಹತ್ತು ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷದ ಆರೋಪಿಯನ್ನು ಬಂಧಿಸಲಾಗಿತ್ತು. ಪೋಸ್ಕೊ ಪ್ರಕರಣವಾಗಿದ್ದರಿಂದ ಆರೋಪಿಯನ್ನು ನಗರ ಮಹಿಳಾ ಠಾಣೆ ಪೊಲೀಸರು ಬಂಧಿಸಿ ಜೂ.18ರಂದು ಠಾಣೆಗೆ ಕರೆತಂದಿದ್ದರು. ನಂತರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿತ್ತು.

ಕಾರಾಗೃಹದಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಪಿಯ ಗಂಟಲು ದ್ರಾವಣ ಮಾದರಿ ಸಂಗ್ರಹಿಸಿ, ಐಸೋಲೇಷನ್‌ ಮಾಡಲಾಗಿತ್ತು. ಸೋಮವಾರ ಪ್ರಯೋಗಾಲಯದಿಂದ ವರದಿ ಬಂದಿದ್ದು, ಆರೋಪಿ (ರೋಗಿ ಸಂಖ್ಯೆ-9372)ಗೆ ಕೊರೊನಾ ಪಾಸಿಟಿವ್‌ ಎಂದು ದೃಢಪಟ್ಟಿದೆ.

ಕಲಬುರಗಿ: ಕೋವಿಡ್‌ ಸೋಂಕಿದೆ, ಆದರೆ ಲಕ್ಷಣಗಳೇ ಇಲ್ಲ..!

ಕೋವಿಡ್‌ ಭೀತಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಇಷ್ಟು ದಿನ ಆರೋಪಿಗಳನ್ನು ಬಂಧಿಸದೆ, ಕೇವಲ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಜಾಗ್ರತೆ ವಹಿಸಿದ್ದರು. ಲಾಕ್‌ಡೌನ್‌ ಸಡಿಲಿಕೆ ನಂತರ ಕೊಲೆ, ಪೋಸ್ಕೊದಂತಹ ಗಂಭೀರ ಪ್ರಕರಣಗಳು ನಡೆಯುತ್ತಿರುವುದರಿಂದ ಆರೋಪಿಗಳನ್ನು ಬಂಧಿಸಲು ಶುರು ಮಾಡಿದ್ದರು. ಇದರ ಬೆನ್ನೆಲ್ಲೇ ಅತ್ಯಾಚಾರಿ ಆರೋಪಿಗೆ ಸೋಂಕು ಪತ್ತೆಯಾಗಿದೆ. ಇವನಿಗೆ ಕಂಟೇನ್ಮೆಂಟ್‌ ಝೋನ್‌ ಸಂಪರ್ಕದಿಂದ ಕೋವಿಡ್‌ ಅಂಟಿದೆ ಎಂದು ತಿಳಿದುಬಂದಿದ್ದು, ಹಿನ್ನೆಲೆ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

13 ಪೊಲೀಸರು ಕ್ವಾರಂಟೈನ್‌:

ಆರೋಪಿಗೆ ಕೊರೊನಾ ಖಚಿತವಾಗುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ನಗರ ಮಹಿಳಾ ಠಾಣೆ ಇನ್ಸಪೆಕ್ಟರ್‌ ಸೇರಿ ಒಟ್ಟು 13 ಸಿಬ್ಬಂದಿಗಳನ್ನು ಕ್ವಾರಂಟೈನ್‌ ನಲ್ಲಿ ಇಡಲಾಗಿದೆ. ಪೊಲೀಸ್‌ ಠಾಣೆ ಮತ್ತು ವಾಹನಗಳನ್ನು ಸ್ಯಾನಿಟೈಜರ್‌ ಮಾಡಿ ಸ್ವಚ್ಛಗೊಳಿಸಲಾಗಿದೆ. ಕಾರಾಗೃಹದಲ್ಲಿ ಆರೋಪಿಯನ್ನು ಐಸೋಲೇಷನ್‌ ಮಾಡಿ ನಿಗಾ ವಹಿಸಿದ್ದರಿಂದ ಕಾರಾಗೃಹ ಸಿಬ್ಬಂದಿಗೆ ಸೋಂಕಿನ ಆತಂಕ ಇಲ್ಲ ಎನ್ನಲಾಗಿದೆ.

ಬಂಧಿತ ಅತ್ಯಾಚಾರ ಆರೋಪಿಗೆ ಕೋವಿಡ್‌ ಸೋಂಕು ತಗುಲಿದ್ದು ನಿಜ. ಆದರೆ, ಠಾಣೆ ಸಿಬ್ಬಂದಿ ಅಂತರ ಕಾಪಾಡಿಕೊಂಡಿದ್ದಾರೆ. ಸುರಕ್ಷತಾ ಕ್ರಮ ಅನುಸರಿಸಿದ್ದಾರೆ. ಹೀಗಾಗಿ ಪೊಲೀಸ್‌ ಠಾಣೆಯನ್ನು ಸೀಲ್ಡೌನ್‌ ಮಾಡುವುದಿಲ್ಲ. ಯಾವುದೇ ರೀತಿಯ ಆತಂಕವೂ ಇಲ್ಲ. ಅಲ್ಲದೇ ಠಾಣೆಯ ಇನ್ಸಪೆಕ್ಟರ್‌ ಸೇರಿದಂತೆ ಒಟ್ಟು 13 ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಅವರ ಗಂಟಲು ದ್ರಾವಣ ಮಾದರಿ ಸಂಗ್ರಹಿಸಿ ಪ್ರಾಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸತೀಷ ಕುಮಾರ್‌ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.