ಗೋಪಾಲ್‌ ಯಡಗೆರೆ, ಕನ್ನಡಪ್ರಭ

ಶಿವಮೊಗ್ಗ(ಜೂ.27): ಕೊರೋನಾ ಲಾಕ್‌ಡೌನ್‌ ಮುಗಿದು ಇನ್ನೊಂದು ಹೊಸ ಲಾಕ್‌ಡೌನ್‌ ಕರಿನೆರಳು ಬೀಳಲಾರಂಭಿಸಿದೆ. ಆದರೆ ಹೋಟೆಲ್‌ ಉದ್ಯಮ ಮಾತ್ರ ಅಕ್ಷರಶಃ ನೆಲಕಚ್ಚಿದ ಸ್ಥಿತಿಯಲ್ಲಿದ್ದು, ಈ ವಲಯದಲ್ಲಿ ಆತಂಕ ಮನೆ ಮಾಡಿದೆ.

ಸಾವಿರಾರು ಕಾರ್ಮಿಕರಿಗೆ ಬದುಕು ನೀಡಿದ್ದ, ಸಾವಿರಾರು ಜನ ತಮ್ಮ ಸ್ವಯಂ ಉದ್ಯೋಗ ಕಂಡುಕೊಂಡಿದ್ದ ಈ ಕ್ಷೇತ್ರ ಕುಸಿದಿರುವುದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊಡ್ಡ ಸಂಖ್ಯೆಯಲ್ಲಿನ ಜನರಿಗೆ ಆದಾಯಕ್ಕೆ ಹೊಡೆತ ಬಿದ್ದಿದೆ.

ಒಂದು ಹೋಟೆಲ್‌ ನೇರವಾಗಿ ಅದರ ಮಾಲೀಕ ಮತ್ತು ಅಲ್ಲಿನ ಹತ್ತಾರು ಉದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟರೆ, ಪರೋಕ್ಷವಾಗಿ ಅಕ್ಕಿ ವ್ಯಾಪಾರಿಗಳಿಗೆ, ದಿನಸಿ ಅಂಗಡಿಗಳವರಿಗೆ, ಸೊಪ್ಪು, ತರಕಾರಿ ಮಾರುವವರಿಗೆ, ಹಾಲು ಪೂರೈಕೆದಾರರಿಗೆ, ಹಣ್ಣಿನ ವ್ಯಾಪಾರಿಗಳಿಗೆ.. ಹೀಗೆ ಹತ್ತು ಹಲವು ಜನರಿಗೆ ದೊಡ್ಡ ಮಟ್ಟದಲ್ಲಿ ಬದುಕು ಕಟ್ಟಿಕೊಟ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ ಅನೇಕ ಮಹಿಳೆಯರು ಮನೆಯಲ್ಲಿಯೇ ಚಪಾತಿ ಮಾಡಿ ಹೋಟೆಲ್‌ಗಳಿಗೆ ಪೂರೈಸುತ್ತಿದ್ದರು. ಆದರೆ ಇದೀಗ ಈ ಎಲ್ಲ ಸರಪಳಿ ತುಂಡಾಗಿದೆ. ಎಲ್ಲರೂ ಕೆಲಸವಿಲ್ಲದೆ ಕುಳಿತಿದ್ದಾರೆ.

ಆರಂಭದಲ್ಲಿ ಲಾಕ್‌ಡೌನ್‌ ಜಾರಿಯಾದಾಗ ಎಲ್ಲರಂತೆ ಕೆಲ ದಿನಗಳ ನಂತರ ತಮಗೂ ಎಂದಿನಂತೆ ವ್ಯಾಪಾರ ನಡೆಯುತ್ತದೆ ಎಂದುಕೊಂಡಿದ್ದವರು ಹೋಟೆಲ್‌ ಉದ್ಯಮಿಗಳು. ಆದರೆ ಮೊದಲ ಹಂತದಲ್ಲಿ ಲಾಕ್‌ಡೌನ್‌ ತೆರೆಯುತ್ತಾ ಬಂದರೂ ಹೊಟೇಲ್‌ಗಳಿಗೆ ಮಾತ್ರ ಅವಕಾಶವನ್ನೇ ನೀಡಲಿಲ್ಲ. ಆ ನಂತರ ಪಾರ್ಸಲ್‌ ಮಾತ್ರ ನೀಡಬಹುದೆಂಬ ಆದೇಶ ಹೊರಬಿತ್ತು. ಈ ಹಂತದಲ್ಲಿ ಅಷ್ಟರಲ್ಲಿ ನಷ್ಟದಲ್ಲಿದ್ದ ಹೊಟೇಲ್‌ ಉದ್ಯಮಿಗಳು ಇನ್ನಷ್ಟುನಷ್ಟಅನುಭವಿಸಿದರು. ಊರಿಗೆ ತೆರಳಿದ್ದ ಕಾರ್ಮಿಕರನ್ನು ಕರೆಸಿಕೊಂಡು ಪಾರ್ಸಲ್‌ ನೀಡಲು ಖಾದ್ಯ ತಯಾರಿಕೆಯಲ್ಲಿ ನಿರತರಾದರು. ಆದರೆ ಪಾರ್ಸಲ್‌ ಒಯ್ಯಲು ಜನರೇ ಬರಲಿಲ್ಲ. ಇದನ್ನು ನಿರೀಕ್ಷಿಸದಿದ್ದ ಹೋಟೆಲ್‌ ವಲಯ ಭಾರೀ ಮಟ್ಟದಲ್ಲಿಯೇ ಕೈಸುಟ್ಟುಕೊಂಡಿತು.

ಬೆದರಿದ ಜನ:

ಹೋಟೆಲ್‌ಗಳಿಗೆ ಮೂರು ವಿಧದ ಜನರಿಂದ ಹೆಚ್ಚಿನ ವ್ಯಾಪಾರವಾಗುತ್ತದೆ. ಒಂದು ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವಿವಿಧ ಕೆಲಸಗಳಿಗಾಗಿ ಬರುವವರು. ಇನ್ನೊಂದು ನಗರದಲ್ಲಿನ ಕುಟುಂಬ ವರ್ಗ ಒಟ್ಟಾಗಿ ಹೋಟೆಲ್‌ಗೆ ಬರುವುದು ಹಾಗೂ ನಗರ ಪ್ರದೇಶದ ಕಾರ್ಮಿಕರು ಮಧ್ಯಾಹ್ನದ ಊಟಕ್ಕಾಗಿ ಹೋಟೆಲ್‌ ಕಡೆ ಆಗಮಿಸುವುದು. ಉಳಿದಂತೆ ನಗರ ಪ್ರದೇಶದ ಬೇರೆ ಉದ್ಯೋಗಿಗಳು ಕೇವಲ ಟೀ, ಕಾಫಿಗಾಗಿ ಮಾತ್ರ ಹೋಟೆಲ್‌ ಆಶ್ರಯಿಸುತ್ತಾರೆ.

ಅಶೋಕ್‌ಗೆ ಕೊರೋನಾ ಉಸ್ತುವಾರಿ: ಸಚಿವ ಶ್ರೀರಾಮುಲು ಬಾಯಿಯಿಂದ ಬಂದ ಮಾತುಗಳು

ಇದುವರೆಗೂ ಗ್ರಾಮೀಣ ಪ್ರದೇಶಗಳಿಗೆ ಸರಿಯಾಗಿ ಬಸ್ಸು ಸಂಚಾರವೇ ಇಲ್ಲದಿರುವುದರಿಂದ ಜನರು ನಗರ ಪ್ರದೇಶಕ್ಕೆ ಬರುತ್ತಲೇ ಇಲ್ಲ. ನಗರ ಪ್ರದೇಶದ ಇತರೆ ವಲಯ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದೆ ಇರುವುದರಿಂದ ಶೇ. 50 ರಷ್ಟುಕಾರ್ಮಿಕರು ಇನ್ನೂ ತಮ್ಮೂರಿನಿಂದ ಮರಳಿ ಬಂದಿಲ್ಲ. ಇನ್ನು ನಗರ ಪ್ರದೇಶದ ಕುಟುಂಬ ವರ್ಗ ಮನೆ ಬಿಟ್ಟು ಆಚೆ ಬರುತ್ತಲೇ ಇಲ್ಲ. ಅದರಲ್ಲಿಯೂ ಹೋಟೆಲ್‌ ಕಡೆ ಮುಖ ಹಾಕುತ್ತಲೇ ಇಲ್ಲ. ಅವರಿಗೆ ಭಯ ಹೋಗಿಲ್ಲ. ಇನ್ನೂ ಕೊರೋನಾ ಆತಂಕದ ಮೂಡಿನಲ್ಲಿಯೇ ಇದ್ದಾರೆ. ಹೀಗಾಗಿ ಸದ್ಯಕ್ಕಂತೂ ಹೊರಗಿನ ತಿಂಡಿ, ಊಟ ಬೇಡ ಎನ್ನುವಂತಹ ಮನಃಸ್ಥಿತಿಯಲ್ಲಿದ್ದಾರೆ.

ಮಧ್ಯಮ ಮತ್ತು ಮೇಲ್ಮಟ್ಟದ ಹೊಟೇಲ್‌ಗಳಲ್ಲಿ ಉತ್ತರ ಭಾರತೀಯ ಕಾರ್ಮಿಕರೇ ಹೆಚ್ಚಿದ್ದು, ಲಾಕ್‌ಡೌನ್‌ನಲ್ಲಿ ಊರಿಗೆ ಮರಳಿದ್ದಾರೆ. ವಾಪಸ್ಸು ಬಂದಿಲ್ಲ. ಅನೇಕ ಹೊಟೇಲ್‌ಗಳು ತೆರೆಯಲೇ ಸಾಧ್ಯವಾಗಿಲ್ಲ.

ಕುಸಿದ ವ್ಯಾಪಾರ:

ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೇ ಕೆಲವು ಹೋಟೆಲ್‌ಗಳು ಶೇ. 40-50 ರಷ್ಟು ವ್ಯಾಪಾರಕ್ಕೆ ಮರಳಿದ್ದರೆ, ಉಳಿದೆಲ್ಲ ಹೊಟೇಲ್‌ಗಳು ಶೇ. 25-30 ರಷ್ಟು ವ್ಯಾಪಾರ ಕೂಡ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಇಷ್ಟೊಂದು ಕಾರ್ಮಿಕರನ್ನು ಇಟ್ಟುಕೊಂಡು ಹೋಟೆಲ್‌ ಉದ್ಯಮ ನಡೆಸುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಉದ್ಯಮಿಗಳು.

ಚಿಕ್ಕಪುಟ್ಟಟೀ ಅಂಗಡಿಗಳಿಗೆ ಹಾಗೂ ಹೀಗೂ ವ್ಯಾಪಾರವಾಗುತ್ತಿದೆ. ಆದರೆ ಒಳಗೆ ಕುಳಿತು ತಿನ್ನುವ ದೊಡ್ಡ ದೊಡ್ಡ ಹೊಟೇಲ್‌ಗಳು ಕಷ್ಟದ ಸ್ಥಿತಿಯಲ್ಲಿದೆ. ಇದಕ್ಕೆ ಸರಿಯಾಗಿ ಕೊರೋನಾ ನಿಯಂತ್ರಣಕ್ಕೆಂದು ಸರ್ಕಾರ ಹೋಟೆಲ್‌ಗಳಿಗಾಗಿ ಹೊರಡಿಸಿರುವ ಮಾರ್ಗಸೂಚಿಗಳು ಕೂಡ ಕಠಿಣವಾಗಿದೆ.

ಪ್ರತಿ ಟೇಬಲ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಕೂರಬಾರದು, ಪ್ರತಿ ಬಾರಿಯೂ ಸ್ಯಾನಿಟೈಸ್‌ ಮಾಡಬೇಕು. ಒಳಗೆ ಬರುವ ಪ್ರತಿಯೊಬ್ಬರನ್ನೂ ಥರ್ಮಲ್‌ ಸ್ಕಿ್ರೕನಿಂಗ್‌ ಮಾಡಬೇಕು, ಸಿಬ್ಬಂದಿ ಸಂಖ್ಯೆಯನ್ನು ಮಿತಿಗೊಳಿಸಬೇಕು, ಯೂಸ್‌ ಎಂಡ್‌ ಥ್ರೋ ತಟ್ಟೆಲೋಟಗಳನ್ನೇ ಉಪಯೋಗಿಸಬೇಕು ಎಂಬಿತ್ಯಾದಿ ಮಾರ್ಗಸೂಚಿಗಳನ್ನು ಪಾಲಿಸಲು ಹೋಟೆಲ್‌ಗಳು ಕಷ್ಟಪಡುತ್ತಿವೆ. ಹಾಗೆಂದು ಇದನ್ನು ಮಾಡದೆ ಇರಲು ಸಾಧ್ಯವೂ ಇಲ್ಲ ಎನ್ನುತ್ತಾರೆ ಹೊಟೇಲ್‌ ಮಾಲೀಕರು. ಎಲ್ಲವನ್ನೂ ಸ್ವಚ್ಛವಾಗಿ ಮಾಡುತ್ತಿದ್ದು, ಇದೀಗ ಹೈಜೆನಿಕ್‌ ವ್ಯವಸ್ಥೆಯಿದೆ.

ಆರ್ಥಿಕ ನೆರವು ನೀಡಿ:

ಕಳೆದ ಮೂರ್ನಾಲ್ಕು ತಿಂಗಳಿನಿಂದ ವ್ಯಾಪಾರವಿಲ್ಲದೆ ಸಾಕಷ್ಟುನಷ್ಟಅನುಭವಿಸಿರುವ ಹೋಟೆಲ್‌ ಉದ್ಯಮಕ್ಕೆ ಸರ್ಕಾರ ಯಾವುದಾದರೂ ಪ್ಯಾಕೇಜ್‌ ರೂಪದ ಆರ್ಥಿಕ ನೆರವು ನೀಡಬೇಕು. ತೆರಿಗೆ ಕಡಿತ, ತೆರಿಗೆ ರಜೆ, ಸುಲಭ ಬಡ್ಡಿದರದಲ್ಲಿ ಸಾಲ ಸೌಲಭ್ಯ ಮೊದಲಾದ ಕ್ರಮಗಳ ಮೂಲಕ ಕುಸಿಯುತ್ತಿರುವ ಹೋಟೆಲ್‌ ಉದ್ಯಮಕ್ಕೆ ಜೀವ ತುಂಬುವ ಕೆಲಸ ಮಾಡಬೇಕು. ಹಾಗೆಯೇ ಹೋಟೆಲ್‌ ಹಾಗೂ ದರ್ಶಿನಿಗಳು ವ್ಯಾಪಾರದ ಸ್ಥಳದಲ್ಲಿ ಶುಚಿತ್ವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವತ್ತ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳುತ್ತಾರೆ.

ಹಾಗಾದರೆ ಹೊಟೇಲ್‌ ಉದ್ಯಮ ಚೇತರಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಖಚಿತವಾಗಿ ಹೇಳಲು ಇವರಿಗೂ ಸಾಧ್ಯವಾಗುತ್ತಿಲ್ಲ. ತೆರಿಗೆ ಮನ್ನಾ, ಸರ್ಕಾರದ ನೆರವು ಇತ್ಯಾದಿಗಳ ಬೇಡಿಕೆ ಇಟ್ಟರೂ ಇವೆಲ್ಲ ತಾತ್ಕಾಲಿಕ. ಹೋಟೆಲ್‌ ಉದ್ಯಮ ಮೊದಲಿನಂತಾಗಬೇಕು ಎಂಬ ಒತ್ತಡ ಅವರಲ್ಲಿದ್ದರೂ ಹೇಗೆಂದು ತೋಚದೆ ಸಂಕಷ್ಟದಲ್ಲಿದ್ದಾರೆ.

ಕಾನ್ಫಿಡೆನ್ಸ್‌ ಬಿಲ್ಡಪ್‌ ಮಾಡಬೇಕು

ಕೊರೋನಾ ಕುರಿತಂತೆ ಜನರಲ್ಲಿ ಮನೆ ಮಾಡಿರುವ ಆತಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸ್ವತಃ ಹೊಟೇಲ್‌ಗಳಿಗೆ ಬರಲಾರಂಭಿಸಿದರೆ ಜನ ಸಾಮಾನ್ಯರಲ್ಲಿರುವ ಬಹಳಷ್ಟುಅಪನಂಬಿಕೆಗೆಳು ನಿವಾರಣೆಯಾಗುತ್ತದೆ. ರಾಜ್ಯದ ಬೊಕ್ಕಸಕ್ಕೆ ತೆರಿಗೆ ಜೊತೆಗೆ ದುಡಿಯುವ ಕೈಗಳಿಗೆ ಕೆಲಸ ನೀಡುತ್ತಾ ಸ್ವಾವಲಂಬಿ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಹೋಟೆಲ್‌ ಉದ್ಯಮಕ್ಕೆ ಈಗ ತುರ್ತಾಗಿ ಸರ್ಕಾರದ ಸಹಾಯ ಹಸ್ತ ಬೇಕಿದೆ.

-ಮಥುರಾ ಎನ್‌. ಗೋಪಿನಾಥ್‌, ಶಿವಮೊಗ್ಗ ಹೋಟೆಲ್‌ ಮಾಲೀಕರು

ಬಾಡಿಗೆ ಕಟ್ಟುವುದೂ ಕಷ್ಟವಿದೆ:

ಉತ್ತರ ಭಾರತದ ಕಾರ್ಮಿಕರು ಊರಿಗೆ ಹೋಗಿದ್ದು, ಮರಳಿ ಬಂದಿಲ್ಲ. ಹೀಗಾಗಿ ಕಾರ್ಮಿಕರ ಸಮಸ್ಯೆಯಿದೆ. ಬಾಡಿಗೆ ಹೆಚ್ಚಿದ್ದು ಕೊಡಲು ಕಷ್ಟಪಡುವಂತಾಗಿದೆ. ಆದರೆ ಇದೆಲ್ಲವನ್ನೂ ನಿಭಾಯಿಸುತ್ತಾ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಸದ್ಯ ಆನ್‌ಲೈನ್‌ ವ್ಯವಹಾರ ಸ್ವಲ್ಪ ಹೆಚ್ಚಾಗಿದೆ.

- ಉದಯ ಕಡಂಬ, ಶುಭಂ ಹೊಟೇಲ್‌ ಮಾಲೀಕರು

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"