ಚಿಕ್ಕಮಗಳೂರು(ಮಾ.25): ಬೆಂಗಳೂರಿನ ಬಸವನಗುಡಿ ಠಾಣೆಯ ಪೊಲೀಸರೆಂದು ಹೇಳಿಕೊಂಡು ವ್ಯಕ್ತಿಯೋರ್ವನನ್ನು ಕಳೆದ 15 ದಿನಗಳ ಹಿಂದೆ ಕಿಡ್ನಾಪ್‌ ಮಾಡಿದ್ದ 8 ಮಂದಿಯನ್ನು ನಗರ ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃತ್ತಿ ವೈಷಮ್ಯ ಈ ಪ್ರಕರಣಕ್ಕೆ ಪ್ರಮುಖ ಕಾರಣವಾಗಿದೆ.

ಚಿಕ್ಕಮಗಳೂರಿನ ರೂಪೇಶ್‌, ಆತನ ಸ್ನೇಹಿತರಾದ ಹಾಸನದ ಕುಮಾರ್‌, ಹರೀಶ್‌, ಮಂಡ್ಯ ಜಿಲ್ಲೆ ಕೆ.ಆರ್‌. ಪೇಟೆಯ ಕಾರ್ತಿಕ್‌, ಕಿಶೋರ್‌, ಲೋಕೇಶ್‌, ಬಟ್ಲ ಬಾಬು ಕುಮಾರ, ಬೆಂಗಳೂರಿನ ನವೀನ್‌ಶೇಖರ್‌ ಬಂಧಿತ ಆರೋಪಿಗಳು.
ನಗರದಲ್ಲಿ ಅಕ್ಕಸಾಲಿಗ ವೃತ್ತಿ ಮಾಡುತ್ತಿರುವ ರೂಪೇಶ್‌, ವೃತ್ತಿ ವೈಷಮ್ಯದಿಂದ ಸಾಗರ್‌ ಸಮಂತ್‌ ಅವರನ್ನು ತನ್ನ ಸ್ನೇಹಿತರಿಂದ ಕಿಡ್ನಾಪ್‌ ಮಾಡಲು ಸ್ಕೇಚ್‌ ಹಾಕಿದ್ದರು. ಇದಕ್ಕೆ ಬಳಸಿಕೊಂಡ ಮಾರ್ಗ ನಕಲಿ ಪೊಲೀಸರ ವೇಷ. ಈ ತಂಡ ತಾವು ಬೆಂಗಳೂರಿನ ಬಸವನಗುಡಿ ಠಾಣೆಯ ಪೊಲೀಸರಾಗಿದ್ದು, ಕಳ್ಳತನ ಮಾಡಿರುವ ಚಿನ್ನಾಭರಣ ಖರೀದಿ ಮಾಡಿದ್ದೀಯಾ, ವಿಚಾರಣೆ ನಡೆಸಬೇಕಿದ್ದು, ಬರುವಂತೆ ಹೇಳಿ ಕಾರಿನಲ್ಲಿ ಕಿಡ್ನಾಪ್‌ ಮಾಡಿದ್ದರು. ಬಳಿಕ ಸಾಗರ್‌ ಸಮಂತ್‌ ಅವರನ್ನು ಹೆದರಿಸಿ, ಬೆದರಿಸಿ ಅವರ ಬಳಿ ಇದ್ದ 90 ಗ್ರಾಂ. ಚಿನ್ನವನ್ನು ಕಸಿದುಕೊಂಡು ಚನ್ನರಾಯಪಟ್ಟಣ ಬಸ್‌ ನಿಲ್ದಾಣದಲ್ಲಿ ಇಳಿಸಿ ಹೋಗಿದ್ದರು.

ತನ್ನ ಹಣ ತಾನೇ ಕದ್ದು ದರೋಡೆ ಆಯ್ತೆಂದು ಡ್ರಾಮಾ ಮಾಡಿದ..!

ಇದಲ್ಲದೇ ಈ ಹಿಂದೆ ಕಾರ್ತಿಕ್‌, ಕಿಶೋರ್‌, ನವೀನ್‌ ಶೇಖರ್‌ ಮತ್ತು ಹರ್ಷಿತ್‌ ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯ ಟಿ.ಬೇಗೂರ್‌ ಬಳಿ ಹೈವೇಯಲ್ಲಿರುವ ಆನಂದ ಖುಷಿ ಹೊಟೇಲ್‌ ಬಳಿ ಊಟಕ್ಕೆ ನಿಲ್ಲಿಸಿದ್ದ ಬಸ್‌ನಲ್ಲಿದ್ದ ಬ್ಯಾಗ್‌ನಿಂದ 110 ಗ್ರಾಂ. ಚಿನ್ನ, 3.5 ಕೆ.ಜಿ. ಬೆಳ್ಳಿ ಕಳ್ಳತನ ಮಾಡಿರುವುದು ತನಿಖಾ ವೇಳೆ ಬೆಳಕಿಗೆ ಬಂದಿದೆ.

ಬಂಧಿತರಿಂದ ಸುಮಾರು .7.80 ಲಕ್ಷ ಮೌಲ್ಯದ 160 ಗ್ರಾಂ. ಚಿನ್ನ , 2 ಕೆ.ಜಿ. ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್‌ ಫೋನ್‌ ಹಾಗೂ ಮೋಟಾರ್‌ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ತಂದೆ: ಕಾರಣ?

ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕರಾದ ಸಲೀಂ ಅಬ್ಬಾಸ್‌, ನಗರ ಪಿಎಸ್‌ಐ ತೇಜಸ್ವಿ, ಸಿಬ್ಬಂದಿ ಈರೇಗೌಡ , ಶಶಿಧರ್‌, ಮಂಜುನಾಥ್‌ ಆಚಾರ್‌, ಲೋಹಿತ್‌, ಗಿರೀಶ್‌, ಸೋಮಪ್ಪ ಗೌಡ, ಮಹಾಂತೇಶ್‌, ಮಧುಕುಮಾರ್‌ , ಗುರುಪ್ರಸಾದ್‌, ನವೀನ್‌, ಶ್ರೀಧರ್‌, ಇಬ್ರಾಹಿಂ, ಪ್ರಸನ್ನ, ತಿಮ್ಮಶೆಟ್ಟಿಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿರುವ ಜಿಲ್ಲಾ ರಕ್ಷಣಾಧಿಕಾರಿಯವರು ಬಹುಮಾನ ಘೋಷಿಸಿದ್ದಾರೆ.