ಬಜೆಟ್-2021: ಕಾಫಿನಾಡಿಗೆ ಮತ್ತೆ ಸೊನ್ನೆ!
ನಾಲ್ವರು ಬಿಜೆಪಿ ಶಾಸಕರಿರುವ ಚಿಕ್ಕಮಗಳೂರು ಜಿಲ್ಲೆಗೆ ಈ ಬಾರಿಯ ಬಜೆಟ್ ನಿರಾಶಾದಾಯಕವಾಗಿದೆ. ಯಾವುದೇ ಅನುಕೂಲಕರ ಯೋಜನೆಗಳು ಜಿಲ್ಲೆಗೆ ಬಿ ಎಸ್ ವೈ ಸರ್ಕಾರದಿಂದ ದೊರೆತಿಲ್ಲ.
ಚಿಕ್ಕಮಗಳೂರು (ಮಾ.09): ರಾಜ್ಯದಲ್ಲಿರುವ ಆಡಳಿತಾರೂಢ ಸರ್ಕಾರಕ್ಕೆ 4 ಮಂದಿ ಬಿಜೆಪಿ ಶಾಸಕರನ್ನು ಕೊಟ್ಟಕಾಫಿಯ ನಾಡಿಗೆ 2021-22ನೇ ಸಾಲಿನ ಬಜೆಟ್ ನಿರಾಶೆ ಮೂಡಿಸಿದೆ.
ಜಿಲ್ಲೆಯ ಶಾಸಕರು, ಸಂಸದರು, ಕಾಫಿ ಬೆಳೆಗಾರರು, ಇತರೇ ಜನಪ್ರತಿನಿಧಿಗಳು ಬಜೆಟ್‌ನಲ್ಲಿ ಜಿಲ್ಲೆಗೆ ಆದ್ಯತೆ ನೀಡಬೇಕೆಂದು ಕೇಳಿಕೊಂಡರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂಬುದು ಬಜೆಟ್ ಮಂಡನೆಯಲ್ಲಿ ವ್ಯಕ್ತವಾಗಿದೆ.
ಕಳೆದ ಮೂರು ವರ್ಷಗಳಿಂದ ಭಾರಿ ಮಳೆಗೆ ಕಾಫಿತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಈ ನಷ್ಟವನ್ನು ತುಂಬಲು ಕಾಫಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಬೇಡಿಕೆಯನ್ನು ಬೆಳೆಗಾರರು ಸರ್ಕಾರದ ಮುಂದಿಟ್ಟಿದ್ದರು. ಆದರೆ, ನೆರೆಯ ಕೊಡಗು ಜಿಲ್ಲೆಗೆ ಸೀಮಿತವಾಗಿ ಕಾಫಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅಂದರೆ, ಚಿಕ್ಕಮಗಳೂರು ಜಿಲ್ಲೆಯನ್ನು ಕಡೆಗಣಿಸಲಾಗಿದೆ.
ತೋಟಗಾರಿಕೆಯಿಂದ ರೈತರಿಗೆ ವರ್ಷವಿಡೀ ಭರ್ಜರಿ ಆದಾಯ .
ಹಾಲು ಒಕ್ಕೂಟ: ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಬೇಕು. ಇದು, ರೈತರ ಮಾತ್ರವಲ್ಲ, ಬಿಜೆಪಿಯ ಒಂದು ದಶಕದ ಬೇಡಿಕೆ. ಈ ಬಾರಿ ಬೇಡಿಕೆ ಈಡೇರುತ್ತದೆ ಎಂದು ಜಿಲ್ಲೆಯ ಜನರು ಭಾವಿಸಿದ್ದರು. ಈ ಸಂಬಂಧ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆಗ ಸಿಎಂ ಅವರಿಂದ ಗ್ರೀನ್ ಸಿಗ್ನಲ್ ಸಹ ಸಿಕ್ಕಿತ್ತು. ಆದರೆ, ಆಯವ್ಯಯದಲ್ಲಿ ಘೋಷಣೆ ಆಗಲಿಲ್ಲ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ದಿನದಂದು ಚಿಕ್ಕಮಗಳೂರಿನಲ್ಲಿ ಈ ಬಾರಿ ನಡೆದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಜಿಲ್ಲೆಗೊಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಬೇಕೆಂದು ಕೇಳಿಕೊಂಡಿದ್ದರು. ಈ ಬೇಡಿಕೆಯೂ ಕೂಡ ಈಡೇರಿಲ್ಲ.
ಟೂರಿಸಂ ಸಕ್ರ್ಯೂಟ್, ಮಿನಿ ವಿಮಾನ ನಿಲ್ದಾಣ ಏರ್ ಸ್ಟ್ರೀಪ್ ವಿಸ್ತರಣೆ ಇವುಗಳ ಬಗ್ಗೆಯೂ ಪ್ರಸ್ತಾಪ ಆಗಲಿಲ್ಲ. ನೆರೆಯ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಜಿಲ್ಲೆಯ ಪಾಲಿಗೆ ನಿರಾಶದಾಯಕ ಬಜೆಟ್.
ಅನುಕೂಲ: ಜಿಲ್ಲೆಯ ಮಲೆನಾಡಿನಲ್ಲಿ ಕಾಡುಪ್ರಾಣಿಗಳು ಹಾಗೂ ಜನರ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇವೆ. ಇದಕ್ಕೆ ಕೊನೆ ಹಾಡಬೇಕು ಎಂಬುದು ಮಲೆನಾಡು ಜನರ ಒಟ್ಟಾರೆ ಅಭಿಪ್ರಾಯವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಗೆ ಕಾರಿಡಾರ್ ನಿರ್ಮಾಣದ ಜಾಗವನ್ನು ಸರ್ಕಾರವೇ ಖರೀದಿಸುವುದು ಎಂಬುವುದಾಗಿ ಉಲ್ಲಂಘಿಸಲಾಗಿದೆ. ಇದರಿಂದ ಮಲೆನಾಡಿನ ಜನರಿಗೆ ಅನುಕೂಲ ಆಗಬಹುದು.
- ಅಡಕೆ ಹಳದಿ ಎಲೆರೋಗ ನಿಯಂತ್ರಣ ಕುರಿತ ಸಂಶೋಧನೆ ಹಾಗೂ ಅಡಕೆಗೆ ಪರ್ಯಾಯ ಬೆಳೆ ಬೆಳೆಯಲು ಉತ್ತೇಜನಕ್ಕೆ 25 ಕೋಟಿ ರುಪಾಯಿ.
- ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕಾಲು ಸಂಕ ನಿರ್ಮಾಣಕ್ಕೆ 100 ಕೋಟಿ ರು.
- ಭದ್ರಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ಪೂರೈಸಲು ಆದ್ಯತೆ.
- ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಗೆ ಕಾರಿಡಾರ್ ನಿರ್ಮಾಣದ ಜಾಗವನ್ನು ಸರ್ಕಾರವೇ ಖರೀದಿಸುವುದು.
- ಕೆಮ್ಮಣ್ಣಗುಂಡಿಯ ನಿರ್ವಹಣೆಯ ಜವಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ