ಚಾರ್ಮಾಡಿ ಘಾಟ್‌ ಈಗ ಡೇಂಜರ್‌ ಝೋನ್‌!

ಭಾರೀ ಮಳೆಯಿಂದ ತೀವ್ರ ಹಾನಿಗೆ ಒಳಗಾಗಿರುವ ಚಾರ್ಮಾಡಿ ಘಾಟಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧವಿದೆ. 6 ತಿಂಗಳು ಕಳೆದರೂ ಇಲ್ಲಿ ರಿಪೇರಿಯಾಗುವುದು ಅನುಮಾನವಾಗಿದೆ. 

Charmadi Ghat closed for repairs till September 14

ಆರ್‌.ತಾರಾನಾಥ್‌

ಚಿಕ್ಕಮಗಳೂರು [ಆ.26]: ಮಹಾಮಳೆಗೆ ಸಂಪರ್ಕ ಕಳೆದುಕೊಂಡಿರುವ ಚಾರ್ಮಾಡಿ ಘಾಟ್‌ ರಸ್ತೆ ಭವಿಷ್ಯದಲ್ಲಿ ವಾಹನಗಳ ಸಂಚಾರಕ್ಕೆ ಎಷ್ಟುಸೇಫ್‌?

- ಈ ರೀತಿಯ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಆತಂಕದಿಂದ ಕೇಳಿಬರುತ್ತಿದೆ.

ಆ.2ರಿಂದ 14ರವರೆಗೆ ಚಾರ್ಮಾಡಿ ಘಾಟ್‌ ರಸ್ತೆಯ ಸುತ್ತಮುತ್ತ ಭಾರೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಗೆ ಬರುವ 13 ಕಿ.ಮೀ. ಉದ್ದದ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಡ್ಡಗಳು ಕುಸಿದಿವೆ. ಸಣ್ಣ ಸಣ್ಣ ಝರಿಗಳು ಜಲಪಾತಗಳಾಗಿ ರಸ್ತೆಯ ಮೇಲೆ ಹರಿದು ಹೋಗಿವೆ. ಮೂಡಿಗೆರೆಯಿಂದ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್‌ ರಸ್ತೆಗೆ ಎಂಟ್ರಿ ಆಗುತ್ತಿದ್ದಂತೆ ಹಲವೆಡೆ ಬೆಟ್ಟಕುಸಿದು ರಸ್ತೆಯ ಮೇಲೆ ಬಿದ್ದಿರುವುದು ಕಂಡುಬರುತ್ತದೆ. ಬೃಹತ್‌ ಬಂಡೆಗಳು ಗುಡ್ಡದಿಂದ ರಸ್ತೆಯ ಮೇಲೆ ಬಿದ್ದು ಅಲ್ಲಿಂದ ಪ್ರಪಾತದಲ್ಲಿ ಬಿದ್ದಿವೆ.

ಮಲಯಮಾರುತದಿಂದ ಸುಮಾರು 1 ಕಿ.ಮೀ. ದೂರದಲ್ಲಿ ಅಲೇಖಾನ್‌ ಹೊರಟ್ಟಿಯ ಸಂಪರ್ಕದ ರಸ್ತೆಯ ಬಳಿ ಸಿಗುವ ಝರಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬಂದು ಚಾರ್ಮಾಡಿ ರಸ್ತೆಯ ಮೇಲೆ ನುಗ್ಗಿದೆ. ಇಲ್ಲಿನ ತಡೆಗೋಡೆ ಕೊಚ್ಚಿಹೋಗಿದೆ. ಇಂದಿಗೂ ಕೂಡ ಇಲ್ಲಿ ನೀರು ಭಾರೀ ಪ್ರಮಾಣದಲ್ಲಿ ಜಲಪಾತವಾಗಿ ಹರಿದುಹೋಗುತ್ತಿದೆ. ಇದೇ ಸ್ಥಳದಲ್ಲಿ ತಡೆಗೋಡೆಯ ಜತೆಗೆ ರಸ್ತೆಯ ಭಾಗವೂ ಕೊಚ್ಚಿಹೋಗಿದೆ. ತಾತ್ಕಾಲಿಕವಾಗಿ ತಡೆಗೋಡೆಯನ್ನು ಕಟ್ಟಲಾಗಿದೆ. ಹಲವೆಡೆ ರಸ್ತೆಯ ಭಾಗ ಕುಸಿದಿದೆ. ಇದರಿಂದಾಗಿ ಅಗಲ ಕಡಿಮೆಯಾಗಿದೆ. ಅಲ್ಲಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಇಂತಹ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾತ್ಕಾಲಿಕ ದುರಸ್ತಿ: ಭಾರೀ ಮಳೆಗೆ ಹಾಳಾಗಿರುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸೆಪ್ಟಂಬರ್‌ 14ರವರೆಗೆ ನಿಷೇಧಿಸಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಯುತ್ತಿದೆ. ಅಂದರೆ, ರಸ್ತೆಯ ಮೇಲೆ ಬಿದ್ದಿರುವ ಗುಡ್ಡದ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ. ಇದಕ್ಕಾಗಿ ನೆರೆಯ ಹಾಸನದಿಂದ 8 ಜೆಸಿಬಿ, 6 ಹಿಟಾಚಿ ಯಂತ್ರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತರಿಸಿಕೊಂಡಿದೆ. ಕೆಲವೆಡೆ ತಾತ್ಕಾಲಿಕವಾಗಿ ತಡೆಗೋಡೆಗಳನ್ನು ಕಟ್ಟಲಾಗಿದೆ.

ಬೆಟ್ಟದ ಬದಿಯಲ್ಲಿ ಬಿದ್ದಿರುವ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ. ಮಳೆಯ ನೀರು ರಸ್ತೆಗೆ ಬಂದರೆ ಮತ್ತಷ್ಟುಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಮಾರ್ಗದ ಉದ್ದಕ್ಕೂ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಇಷ್ಟೆಲ್ಲಾ ಮುಂಜಾಗ್ರತೆ ತೆಗೆದುಕೊಳ್ಳಲಾಗುತ್ತಿದೆ. ಆದರೆ, ರಸ್ತೆಯ ಈಗಿನ ಪರಿಸ್ಥಿತಿ ನೋಡಿದರೆ ವಾಹನಗಳ ಸಂಚಾರ ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಟ್ಟು ಉತ್ತರ ಹುಡುಕುತ್ತ ಹೋದರೆ, ಭವಿಷ್ಯದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಇದೊಂದು ಡೇಂಜರ್‌ ಝೋನ್‌ ಆಗುವುದು ಖಚಿತ.

ಕೆಲವು ಕಡೆಗಳಲ್ಲಿ ಕಾರುಗಳು ದ್ವಿಮುಖವಾಗಿ ಸಂಚಾರಿಸಲು ಕಷ್ಟವಾಗಲಿದೆ. ಅಲ್ಲಲ್ಲಿ ರಸ್ತೆ ಬಿರುಕುಬಿಟ್ಟಿದೆ. ರಾತ್ರಿ ವೇಳೆಯಲ್ಲಿ ಇಲ್ಲಿ ವಾಹನಗಳ ಸಂಚಾರ ಇನ್ನು ಕಷ್ಟವಾಗಲಿದೆ. ಯಾವ ಕ್ಷಣದಲ್ಲಿ ಏನಾದರೂ ಅಪಾಯವಾಗಬಹುದು. ಆ ಮಟ್ಟದಲ್ಲಿ ರಸ್ತೆ ಹಾಳಾಗಿದೆ. 13 ಕಿ.ಮೀ. ಉದ್ದದ ಈ ರಸ್ತೆಯ ತಾತ್ಕಾಲಿಕ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ .7 ಕೋಟಿಯನ್ನು ಜಿಲ್ಲಾಡಳಿತಕ್ಕೆ ಕೇಳಿದೆ. ಇಷ್ಟುಹಣ ಖರ್ಚು ಮಾಡಿದ ಮೇಲೂ ಈ ರಸ್ತೆ ಸರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ರಸ್ತೆಯ ತಾತ್ಕಾಲಿಕ ದುರಸ್ತಿಗೆ ಕನಿಷ್ಠ 6 ತಿಂಗಳಾದರೂ ಬೇಕು ಎಂದು ಹಿರಿಯ ಅಧಿಕಾರಿಯೋರ್ವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಅಪಾಯ ಅಂಚಿನಲ್ಲಿ ಚಾರ್ಮಾಡಿ ರಸ್ತೆ:  ಚಾರ್ಮಾಡಿ ರಸ್ತೆಯ ದುರಸ್ತಿ ಕಾಮಗಾರಿ ನಡೆದಿರುವ ಸ್ಥಳದಲ್ಲಿ ನೋಡಿದರೆ ಕೆಲವೆಡೆ ಬೆಟ್ಟದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಬಿದ್ದಿದ್ದರೆ, ಮತ್ತೆ ಕೆಲವೆಡೆ ಜರಿದುಕೊಂಡಿವೆ. ಬೃಹತ್‌ ಮರಗಳು, ಮಣ್ಣು, ಬಂಡೆಗಳು ರಸ್ತೆಗೆ ಮುಖಮಾಡಿ ನಿಂತಿವೆ. ಈ ಭಾಗದಲ್ಲಿ ಸತತವಾಗಿ ಗಾಳಿ ಮತ್ತು ಮಳೆ ಬಂದರೆ ಮತ್ತೆ ಚಾರ್ಮಾಡಿ ಘಾಟಿ ರಸ್ತೆ ಬಂದ್‌ ಆಗುವುದು ಖಚಿತ. ಆಗ ಮತ್ತೆ ತಾತ್ಕಾಲಿಕ ದುರಸ್ತಿ ಕಾರ್ಯಕ್ಕಾಗಿ ಈ ರಸ್ತೆ ಬಂದ್‌ ಮಾಡಬೇಕಾಗುತ್ತದೆ.

ಈಗಾಗಲೇ ಮಹಾಮಳೆಗೆ ಚದುರಿರುವ ಚಾರ್ಮಾಡಿ ಘಾಟ್‌ ರಸ್ತೆಯ ಶಾಶ್ವತ ಕಾಮಗಾರಿ ಮಾಡಿದರೂ ಇಲ್ಲಿ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಮುಂದಿನ ದಿನಗಳಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ ತಳ್ಳಿ ಹಾಕುವಂತಿಲ್ಲ.

Latest Videos
Follow Us:
Download App:
  • android
  • ios