ಕಡಲೆ ಬೆಳೆಗೆ ಸಿಡಿ ರೋಗ: ಸಮೀಕ್ಷೆ ನಡೆಸಿ ಪರಿಹಾರ ನೀಡಲು ರೈತರ ಆಗ್ರಹ
ಕಡಲೆ ಬೆಳೆಗೆ ಸಿಡಿ (ಬೆಂಕಿ) ರೋಗ ಬಾಧಿಸುತ್ತಿದ್ದು, ತಾಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. ರೋಗದಿಂದ ಬೆಳೆ ಹಾನಿಯಾಗಿದ್ದು ವಿಮಾ ಕಂಪನಿಗಳು ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈಶ್ವರ ಜಿ. ಲಕ್ಕುಂಡಿ
ನವಲಗುಂದ (ಜ.19) : ಕಡಲೆ ಬೆಳೆಗೆ ಸಿಡಿ (ಬೆಂಕಿ) ರೋಗ ಬಾಧಿಸುತ್ತಿದ್ದು, ತಾಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. ಕೆಲವು ತಿಂಗಳ ಹಿಂದೆ ಮಳೆ ಬಿಟ್ಟು ಬಿಡದೆ ಸುರಿದ ಪರಿಣಾಮ ಕಡಲೆ ಬಿತ್ತನೆಯಲ್ಲೂ ಸಾಕಷ್ಟುವಿಳಂಬವಾಗಿತ್ತು. ಇದೀಗ ಬಿತ್ತನೆ ಮಾಡಿದ ಬೆಳೆಯೂ ಕೈ ಜಾರುತ್ತಿದೆ. ನವಲಗುಂದ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38,589 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ಅದರಲ್ಲಿ ಶೇ. 75ಕ್ಕೂ ಹೆಚ್ಚಿನ ಪ್ರಮಾಣದ ಬೆಳೆಗೆ ಸಿಡಿ ರೋಗ ಬಾಧಿಸುತ್ತಿದೆ. ಇದರಿಂದ ರೈತ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.
ತಾಲೂಕಿನಾದ್ಯಂತ ಬೆಳೆದ ಕಡಲೆ ಬೆಳೆಯಲ್ಲಿ ಕೆಲವೆಡೆ ಅರ್ಧಕ್ಕಿಂತ ಹೆಚ್ಚಿನ ಬೆಳೆ ಸಿಡಿ ರೋಗಕ್ಕೆ ತುತ್ತಾಗಿದೆ. ಇದರಿಂದ ಸಾವಿರಾರು ಖರ್ಚು ಮಾಡಿದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಟ್ರ್ಯಾಕ್ಟರ್ ಬಾಡಿಗೆ, ಕಡಲೆ ಬೀಜ ಮತ್ತು ಗೊಬ್ಬರ, ಎಡೆ ಹೊಡೆಯಲು, ಕಸ ತೆಗೆಯಲು, ಕೀಟನಾಶಕ ಸಿಂಪಡಣೆಗೆ ಹೀಗೆ ಕಡಲೆ ಬೆಳೆಯಲು ಸಾವಿರಾರು ರುಪಾಯಿ ವ್ಯಯಿಸಿದ್ದಾರೆ. ಆದರೆ ಇದೀಗ ರೋಗ ಬಾಧಿಸಿದ ಪರಿಣಾಮ ಖರ್ಚು ಮಾಡಿದಷ್ಟುಹಣವೂ ಬರುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಆದರೆ ಬದುಕು ನಡೆಸುವುದು ಹೇಗೆ ಎಂಬುದು ರೈತರ ಪ್ರಶ್ನೆಯಾಗಿದೆ.
ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!
ಒಂದೇ ಬೆಳೆ ಕಾರಣ:
ಮುಂಗಾರಿನಲ್ಲಿ ಹೆಸರು, ಹಿಂಗಾರಿನಲ್ಲಿ ರೈತರು ಕಡಲೆ ಬೆಳೆ ಬೆಳೆಯುತ್ತಾರೆ. ಇದರಿಂದ ಮಣ್ಣಿನ ಸತ್ವವು ಕಡಿಮೆಯಾಗಲಿದೆ. ರೈತರು ಪ್ರತಿ ವರ್ಷ ಬೇರೆ ಬೇರೆ ಬೆಳೆ ಬೆಳೆದರೆ ಬೆಳೆಗಳಿಗೆ ಬರುವ ರೋಗಗಳನ್ನು ಹತೋಟಿಗೆ ತರಬಹುದು ಎಂದು ಕೃಷಿ ವಿಜ್ಞಾನಿಗಳು ಹೇಳಿದ್ದಾರೆ.
ಸಮೀಕ್ಷೆ ಮಾಡಿ:
ರೋಗದಿಂದ ಬೆಳೆ ಹಾನಿಯಾಗಿದ್ದು ವಿಮಾ ಕಂಪನಿಗಳು ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಜತೆಗೆ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ರೋಗ ಹತೋಟಿಗೆ ಕ್ರಮಕೈಗೊಳ್ಳುವ ಕುರಿತು ಮಾಹಿತಿ ನೀಡಬೇಕು. ತಕ್ಷಣ ಸರ್ಕಾರ ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬಿತ್ತನೆಯೂ ವಿಳಂಬ:
ಕಡಲೆ ಬಿತ್ತನೆ ವೇಳೆ ನಿರಂತರ ಮಳೆ ಸುರಿದ ಪರಿಣಾಮ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಬಿತ್ತನೆಗೆ ಹಿನ್ನಡೆಯಾಗಿತ್ತು. ಆದರೂ ರೈತರು ಬಿತ್ತನೆ ಕೈಗೊಂಡು ಸಮೃದ್ಧ ಬೆಳೆ ಬೆಳೆದಿದ್ದರು. ಆದರೆ, ಇದೀಗ ರೋಗಬಾಧೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ಕಣ್ಣೀರು ಇಡುತ್ತಿದ್ದಾರೆ.
ಕಾಡಾನೆ ದಾಳಿ: ನಾಲ್ಕು ಎಕರೆಯಲ್ಲಿನ ಅಡಿಕೆ,ಬಾಳೆ ಬೆಳೆ ಸಂಪೂರ್ಣ ನಾಶ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜೈವಿಕ ಬೀಜೋಪಚಾರ ಕೇಂದ್ರದಿಂದ ಬೀಜ ಪಡೆದು ಕೃಷಿ ವಿಜ್ಞಾನಿಗಳ ಮಾರ್ಗಸೂಚಿಯಂತೆ ಕಡಲೆ ಬೆಳೆಗೆ ಸಿಡಿ ರೋಗ ಹಾಯಬಾರದೆಂಬ ಮುನ್ನೆಚ್ಚರಿಕೆಯಾಗಿ ಬೀಜೋಪಚಾರಕ್ಕೆ . 2600 ನೀಡಿದ್ದರೂ ಬೆಳೆಗೆ ರೋಗ ಆವರಿಸಿ ಸಂಪೂರ್ಣ ಹಾನಿಯಾಗಿದೆ. 5 ಎಕರೆಯಲ್ಲಿ ಕಡಲೆ ಬೆಳೆ ಬೆಳೆದಿದ್ದೇನೆ. ಅರ್ಧಕ್ಕಿಂತ ಹೆಚ್ಚಿನ ಬೆಳೆಗೆ ರೋಗ ಆವರಿಸಿ ಸಂಪೂರ್ಣವಾಗಿ ಹಾನಿಯಾಗಿದೆ.
ಶಿವರಾಜ ಲಕ್ಕುಂಡಿ, ಯುವ ರೈತ
ಸಿಡಿ ರೋಗವು ಮಣ್ಣಿನಲ್ಲಿರುವ ಸಿಜೇರಿಯಮ್ ಆಕ್ಸಿಸ್ ಪೋರ್‌ಂ ಎಂಬ ಫಂಗಸ್ ಹೊಂದಿದೆ. ಯಾವುದೇ ಔಷಧಿ ಸಿಂಪಡಣೆ ಮಾಡಿದರೂ ಹತೋಟಿಗೆ ಬರುವುದಿಲ್ಲ. ಇದರಿಂದ ಸಿಡಿ ರೋಗ ಉಲ್ಬಣಗೊಳ್ಳುತ್ತದೆ. ಅದನ್ನು ತಡೆಗಟ್ಟಬೇಕಾದರೆ ಆಳವಾಗಿ ಬಿತ್ತನೆ ಮಾಡಬೇಕು. ಪ್ರತಿವರ್ಷ ಬೆಳೆಯುವ ಬೆಳೆ ಬದಲಾವಣೆಯಾಗಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಹೆಚ್ಚಿಸಬೇಕಾಗಿದೆ.
ಶ್ರೀನಾಥ ಚಿಮ್ಮಲಗಿ ಸಹಾಯಕ ಕೃಷಿ ನಿರ್ದೇಶಕ