ಬೆಂಗ್ಳೂರಲ್ಲಿ ಭಾರೀ ಮಳೆ ಮುನ್ಸೂಚನೆ: ಅಧಿಕಾರಿಗಳ ರಜೆ ರದ್ದು
ಭಾನುವಾರ ವಲಯ ಅಧಿಕಾರಿಗಳು, ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಹಾಜರಿದ್ದು, ಮಳೆಯಾಗುವ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಆಯಾ ವಲಯದ ಹಿರಿಯ ಅಧಿಕಾರಿಗಳು ಈ ಕುರಿತು ಮೇಲ್ವಿಚಾರಣೆ ನಡೆಸಬೇಕೆಂದು ಸೂಚಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು(ಡಿ.01): ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ರಜೆ ದಿನವಾದ ಭಾನುವಾರ ನಗರದ ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯ ನಿರ್ವಹಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶಿಸಿದ್ದಾರೆ.
ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತುಷಾರ್ ಗಿರಿನಾಥ್ ಅವರು, ಭಾನುವಾರ ವಲಯ ಅಧಿಕಾರಿಗಳು, ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಹಾಜರಿದ್ದು, ಮಳೆಯಾಗುವ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಆಯಾ ವಲಯದ ಹಿರಿಯ ಅಧಿಕಾರಿಗಳು ಈ ಕುರಿತು ಮೇಲ್ವಿಚಾರಣೆ ನಡೆಸಬೇಕೆಂದು ಸೂಚಿಸಿದ್ದಾರೆ.
ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?
ಆಯಾ ವಲಯದ ಎಲ್ಲ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವ ಹಿಸಬೇಕು. ಮಳೆಯೊಂದಿಗೆ ಗಾಳಿ ಕೂಡಾ ಹೆಚ್ಚಾಗಿ ಬರುವ ಸಾಧ್ಯತೆ ಇರುವುದರಿಂದ 28 ಮರ ಕಟಾವು ತಂಡಗಳು ಸಿದ್ಧವಾಗಿರ ಬೇಕು. ಮರ ಹಾಗೂ ಮರದ ರೆಂಬೆ-ಕೊಂಬೆಗಳು ಬಿದ್ದ ದೂರುಗಳು ಬಂದ ಕೂಡಲೇ ತೆರವುಗೊಳಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ನೀರು ನಿಲ್ಲುವ ಸ್ಥಳದಲ್ಲಿ ಯಂತ್ರೋಪಕರಣಗಳು, ಪಂಪ್ ಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು.
ಈ ಹಿಂದೆ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಳು ಚೀಲಗಳನ್ನು ಇಟ್ಟುಕೊಂಡು ಮಳೆ ಯಿಂದಾಗುವ ಸಮಸ್ಯೆ ತಪ್ಪಿಸಲು ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕೆಂದು ಸೂಚಿಸಿದರು.
ರಸ್ತೆ ಬದಿಯ ಶೋಲ್ಡರ್ ಚರಂಡಿಗಳಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 4 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಫೆಂಗಲ್ ಚಂಡಮಾರುತದ ಕಾರಣದಿಂದಾಗಿ ರಾಜ್ಯದಲ್ಲಿ ಇಂದಿನಿಂದ 4 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಶನಿವಾರ ಕೋಲಾರ, ಚಿಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಅದರೊಂದಿಗೆ ಕರಾವಳಿ ಕರ್ನಾಟಕ, ಉತ್ತರ ಒಳ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ತಿಳಿಸಿದೆ.
ತಮಿಳುನಾಡಲ್ಲಿ ಫೆಂಗಲ್ ಚಂಡಮಾರುತ; ಕರ್ನಾಟಕದಲ್ಲೂ ಭಾರೀ ಮಳೆ ಅಲರ್ಟ್!
ಉತ್ತರ ಆಂತರಿಕ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಲಿದ್ದು, ಬೆಂಗಳೂರು ನಗರದಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ. ಶನಿವಾರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 25 ಮತ್ತು 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ.
ಫೆಂಗಲ್ ಚಂಡಮಾರುತವು ಚೆನೈನಿಂದ ಅಗ್ನೇಯ ದಿಕ್ಕಿನೆಡೆ 250ಕಿ.ಮೀ ದೂರಲ್ಲಿದ್ದು, ಈ ಚಂಡಮಾರುತವು ಚೆನ್ನೈ ಹಾಗೂ ಪುದುಚೇರಿ ಕರಾವಳಿ ಭಾಗದಲ್ಲಿ ಇಂದು ಸಂಜೆ ಹಾದು ಹೋಗಲಿದೆ. ಗಾಳಿಯ ವೇಗವು ಗಂಟೆಗೆ 70-80 km ಇರಲಿದೆ. ಇದರ ಪರಿಣಾಮ ಇಂದು ಮತ್ತು ನಾಳೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ. ಡಿಸೆಂಬರ್ 2 ಹಾಗೂ 3ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಡಿಸೆಂಬರ್ 3ರಂದು ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಬೆಂಗಳೂರಲ್ಲಿ ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.