ಬೆಂಗಳೂರು [ಮಾ.14]:  ಬಾರ್‌ನಲ್ಲಿ ಮೊಬೈಲ್‌ ಕದ್ದ ಎಂದು ಆರೋಪ ಹೊರಿಸಿ ವ್ಯಕ್ತಿಯೊಬ್ಬನನ್ನು ರೂಮ್‌ಗೆ ಕರೆದೊಯ್ದು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಚಂದ್ರಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಗರಬಾವಿಯ ಜ್ಯೋತಿನಗರ ನಿವಾಸಿ ಪ್ರಸಾದ್‌ (40) ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಸುಭಾಷ್‌ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ ನಾಲ್ಕೈದು ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಸಾದ್‌ ಸಿಸ್ಕೋ ಕಂಪನಿಯಲ್ಲಿ ಚಾಲಕರಾಗಿದ್ದು, ಪತ್ನಿ ಹಾಗೂ ಪುತ್ರನ ಜತೆ ಜ್ಯೋತಿನಗರದಲ್ಲಿ ನೆಲೆಸಿದ್ದರು. ಮಾ.11ರಂದು ಕಂಪನಿಗೆ ರಜೆ ಇದ್ದ ಕಾರಣ ಪ್ರಸಾದ್‌ ಪತ್ನಿ ಬಳಿ 500 ರುಪಾಯಿ ಪಡೆದು ಮಧ್ಯಾಹ್ನ 4ರ ಸುಮಾರಿಗೆ ಮದ್ಯ ಸೇವಿಸಲು ಬಾರ್‌ಗೆ ತೆರಳಿದ್ದರು.

ರಾತ್ರಿ 8.30ರ ಸುಮಾರಿಗೆ ಪ್ರಸಾದ್‌ ಅವರ ಪತ್ನಿಗೆ ಅಪರಿಚಿತ ಮೊಬೈಲ್‌ನಿಂದ ಕರೆ ಮಾಡಿದ್ದ ವ್ಯಕ್ತಿ, ‘ನಿಮ್ಮ ಪತಿ ನಮ್ಮ ಮೊಬೈಲ್‌ ಕದ್ದಿದ್ದು, ನಮ್ಮ ಬಳಿ ಇದ್ದಾರೆ’ ಎಂದು ಆರೋಪಿಗಳು ತಾವು ಇದ್ದ ಸ್ಥಳದ ವಿಳಾಸ ತಿಳಿಸಿದ್ದರು. ಅದರಂತೆ ಪ್ರಸಾದ್‌ ಅವರ ಪತ್ನಿ ನಾಗರಾಬಾವಿ ಸರ್ಕಲ್‌ ಬಳಿ ಇರುವ ಪಿಜ್ಜಾ ಹಟ್‌ ಹತ್ತಿರ ಹೋದಾಗ ವ್ಯಕ್ತಿಯೊಬ್ಬ ಬಂದು ಸುಕನ್ಯಾ ಅವರನ್ನು ಅವರ ಕೊಠಡಿ ಬಳಿ ಕರೆದೊಯ್ದಿದ್ದ.

ಕೊಠಡಿಯಲ್ಲಿ ಪತಿ ಪ್ರಸಾದ್‌ ಹಾಗೂ ನಾಲ್ಕೈದು ಮಂದಿ ಅಪರಿಚಿತರಿದ್ದರು. ಸುಕನ್ಯಾ ಅವರು ಪತಿಗೆ ‘ಮೊಬೈಲ್‌ ಕಳವು ಮಾಡಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಕ್ಕೆ, ಪ್ರಸಾದ್‌ ಅಣೆ-ಪ್ರಮಾಣ ಮಾಡಿ ‘ಮೊಬೈಲ್‌ ಕದ್ದಿಲ್ಲ’ ಎಂದಿದ್ದರು. ಈ ವೇಳೆ ಅಪರಿಚಿತನೊಬ್ಬ ಪ್ರಸಾದ್‌ ಕೆನ್ನೆಗೆ ಹೊಡೆದಿದ್ದ. ಈ ವೇಳೆ ಸುಕನ್ಯಾ ಅವರು ‘ಈ ರೀತಿ ಮಾಡುವುದು ಸರಿಯಲ್ಲ. ಪತಿ ಕುಡಿದ ಮತ್ತಿನಲ್ಲಿದ್ದಾರೆ. ಬೆಳಗ್ಗೆ ಕರೆದುಕೊಂಡು ಬರುತ್ತೇನೆ ಕಳುಹಿಸಿ ಕೊಡಿ’ ಎಂದಿದ್ದಾರೆ.

ಶಿವಮೊಗ್ಗ: ತಾಯಿ ಸಾಲದೆಂದು ಮಗಳ ಮೇಲೂ ಕಣ್ಣಾಕಿದ, ಕರುಳ ಕುಡಿಯನ್ನೇ ಕೊಂದ ಮಹಾತಾಯಿ!..

ಇದಕ್ಕೆ ಆರೋಪಿಗಳು ಒಪ್ಪದೆ, ಪ್ರಸಾದ್‌ನನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಬಳಿಕ ಸುಕನ್ಯಾ ಅವರು ಮನೆಗೆ ವಾಪಸ್‌ ಆಗಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಸುಕನ್ಯಾ ಪತಿ ಮೊಬೈಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. 10.30ರ ಸುಮಾರಿಗೆ ಪತಿಯ ಮೊಬೈಲ್‌ನಿಂದ ಸುಕನ್ಯಾಗೆ ಕರೆ ಮಾಡಿದ್ದ ಆರೋಪಿ, ‘ತೀವ್ರ ಮದ್ಯದ ನಶೆಯಲ್ಲಿರುವ ನಿಮ್ಮ ಪತಿ ಎದ್ದೇಳುತ್ತಿಲ್ಲ. ಬಂದು ಕರೆದುಕೊಂಡು ಹೋಗಿ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ.

ಕೊಠಡಿಯಲ್ಲಿ ಬಾಡಿಗೆಗೆ ಇದ್ದ ಸುಭಾಷ್‌ ಎಂಬಾತ ಆಟೋದಲ್ಲಿ ಸುಕನ್ಯಾ ಅವರನ್ನು ಕರೆ ತರಲು ಬಂದಿದ್ದ. ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪತಿ ಬಿದ್ದಿರುವುದನ್ನು ಕಂಡು ಸುಭಾಷ್‌ ನೆರವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಪ್ರಸಾದ್‌ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಪ್ರಸಾದ್‌ ತಲೆಗೆ ಪೆಟ್ಟು ಬಿದ್ದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಸುಭಾಷ್‌ ಕೊಠಡಿಯಲ್ಲಿ ಕೃತ್ಯ ನಡೆದಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಮತ್ತು ಸುಭಾಷ್‌ ಸ್ನೇಹಿತರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೊಬೈಲ್‌ ಕದ್ದರು ಎಂಬ ಕಾರಣಕ್ಕೆ ಕೃತ್ಯ ನಡೆದಿದೆಯೇ ಅಥವಾ ಬೇರೆ ಉದ್ದೇಶ ಇದೆಯೇ ಎಂಬುದು ಆರೋಪಿಗಳು ಸಿಕ್ಕ ಬಳಿಕ ಹೊರ ಬರಲಿದೆ ಎಂದು ಪೊಲೀಸರು ವಿವರಿಸಿದರು.