ಶಿವಮೊಗ್ಗ(ಜೂ.15): ಕೊನೆಗೂ ಮಲೆನಾಡಿನ ವಿಮಾನ ನಿಲ್ದಾಣಕ್ಕೆ ಮಹೂರ್ತ ಕೂಡಿ ಬಂದಿದೆ. ದಶಕದ ಕನಸು ನನಸಾಗುವ ಹೊತ್ತು ಮೂಡಿದೆ. ಸೋಮವಾರ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಸೋಗಾನೆ ವಿಮಾನ ನಿಲ್ದಾಣದ ವಿವಿಧ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಕನಸು ಮತ್ತು ಪ್ರಯತ್ನ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರದ್ದು. ಇದಕ್ಕೆ ಜೀವ ತುಂಬಿದವರು ಸಂಸದ ಬಿ.ವೈ. ರಾಘವೇಂದ್ರ ಅವರು. ಹಲವು ವಿಘ್ನಗಳ ನಡುವೆಯೂ ಸತತ ಪ್ರಯತ್ನದ ಮೂಲಕ ವಿಮಾನ ನಿಲ್ದಾಣದ ಕನಸು ಸಾಕಾರಗೊಳ್ಳುವ ಸಮಯ ಸನ್ನಿಹವಾಗಿದೆ.

ಸೋಮವಾರ ಎಲ್ಲವೂ ಅಂದುಕೊಂಡಂತೆ ನಡೆದರೆ ಯಡಿಯೂರಪ್ಪ ಖುದ್ದು ಆಗಮಿಸಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಒಂದು ಪಕ್ಷ ಅವರಿಗೆ ಆಗಮಿಸಲು ಸಾಧ್ಯವಾಗದೆ ಹೋದಲ್ಲಿ ಆನ್‌ಲೈನ್‌ ಮೂಲಕ ಚಾಲನೆ ನೀಡಲಿದ್ದಾರೆ. ಕೊರೋನಾ ಸಂಕಷ್ಟದ ನಡುವೆಯೂ ಕಾಮಗಾರಿ ಯಾವುದೇ ವಿಘ್ನವಿಲ್ಲದೆ ನಡೆಯಲು ಎಲ್ಲ ರೀತಿಯ ವ್ಯವಸ್ಥೆಯೂ ಆಗಿದೆ.

ನಾಲ್ಕನೇ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಗಳಾಗುತ್ತಿದ್ದಂತೆ ವಿಮಾನ ನಿಲ್ದಾಣ ಆರಂಭಿಸುವ ಸಂಕಲ್ಪ ಮಾಡಿದರು. ಈ ಕುರಿತು ಸಮಗ್ರ ವರದಿ ತರಿಸಿಕೊಂಡು ಚರ್ಚೆ ನಡೆಸಿದರು. ಈ ಹಿಂದೆ ಗುತ್ತಿಗೆ ನೀಡಿದ್ದ ಸಂಸ್ಥೆಗಳು ಕೈ ಎತ್ತಿದ್ದರಿಂದ ಈ ಬಾರಿ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಉದ್ದೇಶಿತ ಕಾಮಗಾರಿಗಳನ್ನೆಲ್ಲಾ ಪ್ರತ್ಯೇಕ ಪ್ಯಾಕೇಜ್‌ಗಳಲ್ಲಿ ರನ್‌ವೇ, ಟರ್ಮಿನಲ್‌ ಕಟ್ಟಡ ಹಾಗೂ ಇನ್ನುಳಿದ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. 116 ಕೋಟಿ ರು. ಮೊತ್ತದ ಮೊದಲ ಪ್ಯಾಕೇಜ್‌ನಲ್ಲಿ ರನ್‌ ವೇ ಮತ್ತಿತರ ಕಾಮಗಾರಿ ಆರಂಭವಾಗಲಿದೆ.

ಸಮನ್ವಯ ಸಮಿತಿ ರಚನೆ:

ವಿಮಾನ ನಿಲ್ದಾಣ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದು, ಹೀಗಾಗಿ ಯಾವುದೇ ಕಾಮಗಾರಿಗೆ ಯಾವುದೇ ಹಂತದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು, ಉಂಟಾಗಬಹುದಾದ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ. 1 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಯೋಜನೆ ಎರಡು ಹಂತದಲ್ಲಿ ನಡೆಯಲಿದೆ.

ವಿಮಾನ ನಿಲ್ದಾಣದ ಕತೆ:

2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ವಿಮಾನ ನಿಲ್ದಾಣ ನಿರ್ಮಿಸುವ ಪ್ರಯತ್ನಕ್ಕೆ ಚಾಲನೆ ನೀಡಿದರು. ಇದಕ್ಕಾಗಿ ವಿಶಾಲವಾದ ಜಾಗ ಹುಡುಕಿ ಅಂತಿಮವಾಗಿ ಸೋಗಾನೆಯ 800 ಎಕರೆ ಜಾಗ ಗುರುತಿಸಲಾಯಿತು. ಇಲ್ಲಿದ್ದ ಬಗರ್‌ಹುಕುಂ ರೈತರಿಗೂ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಹಾರ ನೀಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಯಿತು.

'ಭಾರತವನ್ನು ಸ್ವಾವಲಂಬಿ ದೇಶವನ್ನಾಗಿಸುವುದೇ ಮೋದಿ ಸರ್ಕಾರದ ಉದ್ದೇಶ'

ಮೊದಲು ಮೈಥಾಸ್‌ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಈ ನಡುವೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದವು. ಒಂದೊಂದೇ ಸಮಸ್ಯೆ ಬಗೆಹರಿಸುತ್ತಿದ್ದಂತೆ ಗುತ್ತಿಗೆ ಪಡೆದಿದ್ದ ಸಂಸ್ಥೆ ಸಮಸ್ಯೆಗೆ ಸಿಲುಕಿಕೊಂಡು ಕಾಮಗಾರಿಗೆ ಹಿನ್ನೆಡೆಯಾಯಿತು. ಈ ನಡುವೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಆಗ ಯೋಜನೆಗೆ ಹಿನ್ನೆಡೆಯಾಯಿತು. ನಂತರ ಬಂದ ಸರ್ಕಾರ ಯೋಜನೆ ಕುರಿತು ಆಸಕ್ತಿಯನ್ನೇ ತೋರಲಿಲ್ಲ. ಒಂದು ಹಂತದಲ್ಲಿ ಕೇಂದ್ರ ವಿಮಾನ ಯಾನ ಇಲಾಖೆ ಇದನ್ನು ನಿರ್ಮಿಸುವ ಆಸಕ್ತಿ ತೋರಿದರೂ ಅದೂ ಯಶ ಕಾಣಲಿಲ್ಲ. ಅಂತಿಮವಾಗಿ ಇದನ್ನು ಪೂರ್ಣಗೊಳಿಸಲು ಪುನಃ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಬೇಕಾಯಿತು.

ಯೋಜನೆ ಜಾರಿಯಲ್ಲಿ ಸಂಸದ ರಾಘವೇಂದ್ರಅವರು ಗಟ್ಟಿಯಾಗಿ ನಿಂತಿದ್ದಾರೆ. ಎಲ್ಲ ಪ್ರಯತ್ನಗಳನ್ನು ಹಾಕಿ, ಅಧಿಕಾರಿಗಳ ಜೊತೆ ಹಲವಾರು ಸಭೆಗಳನ್ನು ನಡೆಸಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್‌. ಈಶ್ವರಪ್ಪ ಕೂಡ ಬೆನ್ನ ಹಿಂದೆ ನಿಂತು ಸಹಕಾರ ನೀಡುತ್ತಿದ್ದಾರೆ.

ಏನೇನು ಕಾಮಗಾರಿ ನಡೆಯಲಿದೆ?:

2050 ಮೀಟರ್‌ ಉದ್ದ ಮತ್ತು 30 ಮೀ ಅಗಲದ ಫ್ಲೆಕ್ಸಿಬಲ್‌ ಪೇವ್‌ಮೆಂಟ್‌ ರನ್‌ವೇ, , 184 ಮೀ ಉದ್ದ 24 ಮೀ ಅಗಲದ ಟ್ಯಾಕ್ಸಿ ವೇ, 182 ಮೀ ಉದ್ದ 25 ಮೀ ಅಗಲದ ಐಸೋಲೇಷನ್‌ ಬೇ, 132 ಮೀ ಉದ್ದ 132 ಮೀ ಅಗಲದ ಏಪ್ರಾನ್‌, 862 ಮೀ ಉದ್ದ 18 ಮೀ ಅಗಲದ ಸಂಪರ್ಕ ರಸ್ತೆ ನಿರ್ಮಾಣವಾಗಲಿದೆ.

ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಮಲೆನಾಡಿನಲ್ಲಿ ಉದ್ಯೋಗವಕಾಶಗಳು ಗರಿಕೆದರಬೇಕು ಎಂಬ ಸದುದ್ದೇಶವಿದೆ. ವಿಮಾನ ನಿಲ್ದಾಣವಾದಲ್ಲಿ ಸಂಪರ್ಕ ಸುಲಭವಾಗಿ ಸಾಕಷ್ಟುಕೈಗಾರಿಕೆಗಳು ಜಿಲ್ಲೆಗೆ ಬರಲಿವೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸು. - ಬಿ. ವೈ. ರಾಘವೇಂದ್ರ, ಸಂಸದರು.