Asianet Suvarna News Asianet Suvarna News

JDS ಭದ್ರಕೋಟೆ: ಮತ್ತೆ ಸಾಬೀತು, ಕಾಂಗ್ರೆಸ್‌ಗಿಂತಲೂ ಹಿಂದುಳಿದ BJP

ಮಂಡ್ಯದಲ್ಲಿ ಕಾಂಗ್ರೆಸ್‌ ಸಂಪೂರ್ಣ ಮತ್ತೆ ಎದ್ದು ನಿಲ್ಲುವ ಪ್ರಯತ್ನಕ್ಕೆ ಕೈ ಹಾಕಿದರೆ ಜಿಲ್ಲೆಯಲ್ಲಿಯೇ ಬಿಜೆಪಿ ಕಟ್ಟುವ ಅತ್ಯುತ್ಸಾಹದಲ್ಲಿರುವ ಸಚಿವ ಕೆ.ಸಿ.ನಾರಾಯಣಗೌಡ ತಾಲೂಕಿನಲ್ಲಿ ಬಿಜೆಪಿಯನ್ನು ಗಟ್ಟಿಮಾಡಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

 

BJP fails in kr pet congress jds leads Agriculture Service Co-operative Society
Author
Bangalore, First Published Feb 17, 2020, 12:48 PM IST

ಮಂಡ್ಯ(ಫೆ.7): ಕೆ.ಆರ್‌.ಪೇಟೆ ತಾಲೂಕಿನ ವಿವಿಧ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಮತ್ತೆ ಪ್ರಾಬಲ್ಯ ಸಾಧಿಸಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಹಾದಿ ಸಾಗಿದೆ.

ಕ್ಷೇತ್ರದಲ್ಲಿ ತಾವು ಕಳೆದುಕೊಂಡಿದ್ದ ನೆಲೆಗಟ್ಟನ್ನು ಪುನರ್‌ ಸ್ಥಾಪಿಸಲು ಹೋರಾಟ ಆರಂಭಿಸಿದೆ. ಕಾಂಗ್ರೆಸ್‌ ಸಂಪೂರ್ಣ ಮತ್ತೆ ಎದ್ದು ನಿಲ್ಲುವ ಪ್ರಯತ್ನಕ್ಕೆ ಕೈ ಹಾಕಿದರೆ ಜಿಲ್ಲೆಯಲ್ಲಿಯೇ ಬಿಜೆಪಿ ಕಟ್ಟುವ ಅತ್ಯುತ್ಸಾಹದಲ್ಲಿರುವ ಸಚಿವ ಕೆ.ಸಿ.ನಾರಾಯಣಗೌಡ ತಾಲೂಕಿನಲ್ಲಿ ಬಿಜೆಪಿಯನ್ನು ಗಟ್ಟಿಮಾಡಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

KSRTCಗೆ ಟಿಪ್ಪರ್ ಡಿಕ್ಕಿ: 40 ಮಂದಿಗೆ ಗಾಯ

ತಾಲೂಕಿನಲ್ಲಿ ಒಟ್ಟು 30 ವ್ಯವಸಾಯ ಸೇವಾ ಸಹಕಾರ ಸಂಘಗಳಿವೆ. ಇದರಲ್ಲಿ ಅವಧಿ ಮುಗಿದ 26 ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲಾಯಿತು. ಇದರಲ್ಲಿ 17 ಸಂಘಗಳಲ್ಲಿ ಜೆಡಿಎಸ್‌ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹರಿಹರಪುರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಬೆಂಬಲಿಗರು ತಲಾ 6 ಸ್ಥಾನಗಳನ್ನು ಗೆದ್ದು ಸಮಬಲ ಸಾಧಿಸಿದ್ದರೆ 5 ಸಂಘಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರು ಪೂರ್ಣ ಬಹುಮತ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಶೀಳನೆರೆ ಸಹಕಾರ ಸಂಘದ ಎಲ್ಲಾ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ಒಂದೇ ಒಂದು ಸಹಕಾರ ಸಂಘದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಅವಧಿ ಮಗಿಯದ ಕಾರಣದಿಂದ ತಾಲೂಕಿನ ಸಿಂದುಘಟ್ಟ, ಸಾರಂಗಿ, ಸೋಮನಹಳ್ಳಿ ಮತ್ತು ಚಟ್ಟಂಗೆರೆ ಸಹಕಾರ ಸಂಘಗಳಿಗೆ ಚುನಾವಣೆ ನಡೆಯಲಿಲ್ಲ. ಇದರಲ್ಲಿ ಚಟ್ಟಂಗೆರೆ ಸಂಘ ಕಾಂಗ್ರೆಸ್‌ ಬೆಂಬಲಿಗರ ವಶದಲ್ಲಿವೆ. ಉಳಿದ 3 ಸಂಘಗಳಲ್ಲಿ ಜೆಡಿಎಸ್‌ ಬೆಂಬಲಿಗರು ಅಧಿಕಾರದಲ್ಲಿದ್ದಾರೆ.

ಜೆಡಿಎಸ್‌ ಭದ್ರಕೋಟೆ ಮತ್ತೆ ಭದ್ರ:

ಚುನಾವಣೆ ನಡೆದ 26 ಸಹಕಾರ ಸಂಘಗಳಿಗೆ ಒಟ್ಟು 312 ಜನ ನಿರ್ದೇಶಕರ ಆಯ್ಕೆ ನಡೆಯಬೇಕಾಗಿತ್ತು. ಇದರಲ್ಲಿ ಸೊಳ್ಳೇಪುರ, ಮಾಕವಳ್ಳಿ, ಮಾದಾಪುರ, ಮುರುಕನಹಳ್ಳಿ ಮತ್ತು ಬಲ್ಲೇನಹಳ್ಳಿ ಸಹಕಾರ ಸಂಘಗಳಲ್ಲಿ ಪರಿಶಿಷ್ಟಜಾತಿಗೆ ಮೀಸಲಾದ ತಲಾ ಒಂದೊಂದು ಸ್ಥಾನಗಳಿಗೆ ಅಭ್ಯರ್ಥಿಗಳು ಇಲ್ಲದ ಕಾರಣ 5 ಸ್ಥಾನಗಳಿಗೆ ಚುನಾವಣೆ ನಡೆಯಲಿಲ್ಲ. ಚುನಾವಣೆ ನಡೆದ 26 ಸಹಕಾರ ಸಂಘಗಳ 307 ಸ್ಥಾನಗಳಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರಿದ 165 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಪಕ್ಷದ ವತಿಯಿಂದ 91 ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದ 51 ಮಂದಿ ವಿವಿಧ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಸಚಿವ ನಾರಾಯಣಗೌಡ ರಾಜಕೀಯ ನೆಲೆ ಏನು?

ಜಿಲ್ಲೆಯಲ್ಲಿ ಬಿಜೆಪಿ ಕಟ್ಟುವ ಅತ್ಯುತ್ಸಾಹದಲ್ಲಿರುವ ಸಚಿವ ನಾರಾಯಣಗೌಡ ಸಹಕಾರ ಸಂಘಗಳ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದರು. ಇದುವರೆಗೆ ಜೆಡಿಎಸ್‌ ಕಾರ್ಯಕರ್ತರ ನೆರಳಿನಲ್ಲಿ ರಾಜಕೀಯ ಮಾಡುತ್ತಿದ್ದ ಗೌಡರಿಗೆ ಗ್ರಾಮೀಣ ಪ್ರದೇಶದಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆ ಕಟ್ಟಿಕೊಳ್ಳಲು ಸಹಕಾರ ಸಂಘಗಳ ಚುನಾವಣೆ ಮೆಟ್ಟಿಲಾಗಿತ್ತು. ಇದಕ್ಕಾಗಿಯೇ ಇದೇ ಪ್ರಪ್ರಥಮಬಾರಿಗೆ ತಾಲೂಕಿನಲ್ಲಿ ಸಹಕಾರ ಸಂಘಗಳ ಚುನಾವಣೆಯಲ್ಲಿ ಹಣದ ಹೊಳೆ ಹರಿಯಿತು. ಪ್ರತಿ ಮತಕ್ಕೆ ಒಂದು ಸಾವಿರದಿಂದ ಹಿಡಿದು 2-3 ಸಾವಿರದವರೆಗೂ ಬೆಲೆ ಕಟ್ಟಲಾಯಿತು. ಹಣದ ಹೊಳೆಯ ನಡುವೆಯೂ ಜೆಡಿಎಸ್‌ ತನ್ನ ಮೂಲ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ.

'ಮಮ್ಮಿ ಪ್ಲೀಸ್ ಕರ್ಕೊಂಡ್ ಹೋಗು, ಇಲ್ಲಾ ಸಾಯ್ತೀನಿ' ಮಗಳ ಪತ್ರ

ಮುಂಬರುವ ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಎದುರಿಸಲು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ವ್ಯವಸಾಯ ಸೇವಾ ಸಹಕಾರ ಸಂಘಗಳ ಚುನಾಯಿತ ಸದಸ್ಯರ ಬೆಂಬಲ ಅತೀಮುಖ್ಯ. ಇದರ ಅರಿವಿದ್ದ ಜೆಡಿಎಸ್‌ ಬಹುತೇಕ ಕಡೆ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಪಿಎಲ್‌ಡಿ ಬ್ಯಾಂಕ್‌ ಬಿಜೆಪಿಗೆ ಹಿನ್ನಡೆ:

ತಾಲೂಕಿನ ಅತ್ಯಂತ ಪ್ರತಿಷ್ಠಿತ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲೂ ಸಚಿವ ಕೆ.ಸಿ.ನಾರಾಯಣಗೌಡ ನೇತೃತ್ವದ ಬಿಜೆಪಿ ಹಿನ್ನಡೆ ಅನುಭವಿಸಿದೆ. ಪಿಎಲ್‌ಡಿ ಬ್ಯಾಂಕ್‌ನ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 7, ಬಿಜೆಪಿ 4 ಮತ್ತು ಜೆಡಿಎಸ್‌ 3 ಸ್ಥಾನಗಳಲ್ಲಿ ಜಯಗಳಿಸಿವೆ.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಮತ್ತು ಸಚಿವ ಕೆ.ಸಿ.ನಾರಾಯಣಗೌಡ ಇಬ್ಬರಿಗೂ ಅತ್ಯಂತ ಪ್ರತಿಷ್ಠಿತವಾಗಿದ್ದ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಮೂಲಕ ಕೆಬಿಸಿ ರಾಜಕೀಯ ಮೇಲಗೈ ಪ್ರದರ್ಶಿಸಿದ್ದಾರೆ.

ಕಳೆದ ಅವಧಿಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಸಹೋದರ ಕೆ.ಬಿ.ರವಿ ಆಯ್ಕೆಯಾಗಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿಯೂ ಅಧಿಕಾರ ನಡೆಸಿದ್ದರು. ಈ ಸಾಲಿನಲ್ಲಿ ಕೆ.ಬಿ.ಚಂದ್ರಶೇಖರ್‌ ಸಹೋದರ ಕೆ.ಬಿ.ವಿವೇಕ ಪತ್ನಿ ಯಮುನಾ ಜಯಗಳಿಸುವ ಮೂಲಕ ಕೆ.ಬಿ.ಸಿ ಅವರ ರಾಜಕೀಯ ಶಕ್ತಿ ಇನ್ನೂ ಕುಗ್ಗಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.

ಎಲ್ಲೆಲ್ಲಿ ಯಾರಿಗೆ ಜಯ

* ತಾಲೂಕಿನ ಅಗ್ರಹಾರಚಾಚಹಳ್ಳಿ, ಆನೆಗೊಳ, ಅಕ್ಕಿಹೆಬ್ಬಾಳು, ಬಂಡೀಹೊಳೆ, ಬೀರುವಳ್ಳಿ, ಬಲ್ಲೇನಹಳ್ಳಿ, ಬೂಕನಕೆರೆ, ಗಂಜೀಗೆರೆ, ಹೊಸಹೊಳಲು, ಹರಳಹಳ್ಳಿ, ಜೈನಹಳ್ಳಿ, ಮುರುಕನಹಳ್ಳಿ, ಮಾದಾಪುರ, ಮಂದಗೆರೆ, ಮಡುವಿನಕೋಡಿ, ಮಾಂಬಳ್ಳಿ ಮತ್ತು ಸೊಳ್ಳೇಪುರ ವ್ಯವಸಾಯ ಸಹಕಾರ ಸಂಘಗಳಲ್ಲಿ ಜೆಡಿಎಸ್‌ ಮೇಲುಗೈ ಸಾಧಿಸಿದ್ದಾರೆ.

*ಆಲಂಬಾಡಿಕಾವಲು, ಬಳ್ಳೇಕೆರೆ, ಕಸಬಾ(ಕೆ.ಆರ್‌.ಪೇಟೆ ಟೌನ್‌), ಕಿಕ್ಕೇರಿ, ಸಂತೇಬಾಚಹಳ್ಳಿ ಮತ್ತು ವಿಠಲಾಪುರ ಸಂಘಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ.

*ಶೀಳನೆರೆ ಸಹಕಾರ ಸಂಘದ ಆಡಳಿತವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

*ಬಿಜೆಪಿ ಅಘಲಯ ಸಹಕಾರ ಸಂಘದಲ್ಲಿ ಜೆಡಿಎಸ್‌ ಪಕ್ಷದೊಂದಿಗೆ ಸಮಬಲ ಸಾಧಿಸಿದೆ.

*ಕಾಂಗ್ರೆಸ್‌ ಬೆಂಬಲಿಗರ ಸಹಕಾರದೊಂದಿಗೆ ಜೆಡಿಎಸ್‌ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ತಾಲೂಕಿನ ಅಗ್ರಹಾರಬಾಚಹಳ್ಳಿ, ಆನೆಗೊಳ, ಬಲ್ಲೇನಹಳ್ಳಿ, ಹರಿಹರಪುರ, ಗಂಜೀಗೆರೆ, ಹರಳಹಳ್ಳಿ, ಮಾದಾಪುರ, ಮಂದಗೆರೆ, ಮಾಂಬಳ್ಳಿ ಮತ್ತು ವಿಠಲಾಪುರ ಸಹಕಾರ ಸಂಘಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲವಲ್ಲಿ ಬಿಜೆಪಿ ವಿಫಲವಾಗಿದೆ.

*ಬೂಕನಕೆರೆ, ಹರಳಹಳ್ಳಿ ಹಾಗೂ ಶೀಳನೆರೆ ಸಂಘಗಳಲ್ಲಿ ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಿದೆ.

*ಶೀಳನೆರೆ ಸಹಕಾರ ಸಂಘದ ಎಲ್ಲಾ 12 ಸ್ಥಾನಗಳೂ ಬಿಜೆಪಿ ಪಕ್ಷದ ಪಾಲಾದ ಪರಿಣಾಮ ಇಲ್ಲಿ ಜೆಡಿಎಸ್‌ ಶೂನ್ಯ ಸಂಪಾದನೆ ಮಾಡಿದೆ.

-ಸಿಂ.ಕಾ.ಸುರೇಶ್‌

Follow Us:
Download App:
  • android
  • ios