ಕಾಂಗ್ರೆಸ್‌ಗೆ ಮೈಸೂರಿನಲ್ಲಿ ‘ಕಹಿ’, ಚಾಮರಾಜನಗರದಲ್ಲಿ ‘ಸಿಹಿ’

ಅವಿಭಜಿತ ಮೈಸೂರು ಜಿಲ್ಲೆಯ ಪೈಕಿ ಒಂದು ಕಡೆ ಕಹಿ, ಮತ್ತೊಂದು ಕಡೆ ಸಿಹಿ... ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ವ್ಯಾಪ್ತಿಯಲ್ಲಿರುವ ಬರುವ ಎರಡು ಲೋಕಸಭಾ ಕ್ಷೇತ್ರಗಳ 2024ರ ಫಲಿತಾಂಶದ ವಿಶ್ಲೇಷಣೆ.

 Bitter  for Congress in Mysore   Sweet in Chamarajanagar

 ಅಂಶಿ ಪ್ರಸನ್ನಕುಮಾರ್

 ಮೈಸೂರು :  ಅವಿಭಜಿತ ಮೈಸೂರು ಜಿಲ್ಲೆಯ ಪೈಕಿ ಒಂದು ಕಡೆ ಕಹಿ, ಮತ್ತೊಂದು ಕಡೆ ಸಿಹಿ... ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ವ್ಯಾಪ್ತಿಯಲ್ಲಿರುವ ಬರುವ ಎರಡು ಲೋಕಸಭಾ ಕ್ಷೇತ್ರಗಳ 2024ರ ಫಲಿತಾಂಶದ ವಿಶ್ಲೇಷಣೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಸೋತರು. ಬಿಜೆಪಿ ಅಭ್ಯರ್ಥಿ ಯದುವೀರ್ ಜಯಭೇರಿ ಬಾರಿಸಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಜಯಭೇರಿ ಬಾರಿಸಿದರು.

ಸಿದ್ದರಾಮಯ್ಯ ಅವರು ಹಿಂದಿನ ಜನತಾ ಪರಿವಾರ ಮತ್ತು ಈಗಿನ ಕಾಂಗ್ರೆಸ್ಸಿನಲ್ಲಿ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಪ್ರಶ್ನಾತೀತ ನಾಯಕ. ಅದೇ ರೀತಿ 2004 ರಿಂದ ಈ ಭಾಗದಲ್ಲಿ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಅವರ ನಾಯಕತ್ವಕ್ಕೆ ಜೈಕಾರ.

ವಿಧಾನಸಭಾ ಚುನಾವಣೆಯಲ್ಲಿ 2004, 2008, 2013, 2018, 2023 ರಲ್ಲಿ ಇದು ನಿಜವಾಗಿತ್ತು. ಆದರೆ ಲೋಕಸಭಾ ಚುನಾವಣೆಗೆ ಸೀಮಿತವಾಗಿ ಹೇಳಬೇಕಾದರೆ 2004 ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದರು. ಆಗ ಚಾಮರಾಜನಗರದಲ್ಲಿ ಗೆದ್ದಿದ್ದರೆ ಮೈಸೂರಿನಲ್ಲಿ ಸೋತಿದ್ದರು. 2009ರ ವೇಳೆಗೆ ಕಾಂಗ್ರೆಸ್ ನಲ್ಲಿದ್ದರು. ಆಗ ಎರಡೂ ಕಡೆಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆದ್ದರೆ ಮೈಸೂರಿನಲ್ಲಿ ಸೋತಿತ್ತು. 2019 ರಲ್ಲಿ ಎರಡೂ ಕಡೆಯೂ ಕಾಂಗ್ರೆಸ್ ಸೋತು, ಬಿಜೆಪಿ ಗೆದ್ದಿತ್ತು. ಈ ಬಾರಿ ಮೈಸೂರಿನಲ್ಲಿ ಕಾಂಗ್ರೆಸ್ ಸೋತಿದೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆದ್ದಿದೆ. ಸಿದ್ದರಾಮಯ್ಯ ಪಾಲಿಗೆ ಇದೊಂದು ರೀತಿಯಲ್ಲಿ 2004 ಹಾಗೂ 2014ರ ಫಲಿತಾಂಶದ ಪುನರಾವರ್ತನೆ.

2004, 2014ರ ಪರಿಸ್ಥಿತಿಯೇ ಬೇರೆ. ಈಗಿನ ಪರಿಸ್ಥಿತಿಯೇ ಬೇರೆ. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದರಿಂದ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಅದರಲ್ಲಿ ವಿಫಲರಾಗಿದ್ದಾರೆ.

ಮೈಸೂರು ಜಿಲ್ಲೆಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳು ಮೈಸೂರು ಸಾಮಾನ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ, ಎಚ್.ಡಿ. ಕೋಟೆ, ನಂಜನಗೂಡು, ಟಿ. ನರಸೀಪುರ ಮತ್ತು ವರುಣ ಚಾಮರಾಜನಗರಕ್ಕೂ, ಕೆ.ಆರ್. ನಗರವು ಮಂಡ್ಯಕ್ಕೂ ಸೇರುತ್ತದೆ.

ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ, ದರ್ಶನ್ ಧ್ರುವನಾರಾಯಣ- ನಂಜನಗೂಡು ಡಾ.ಎಚ್.ಸಿ. ಮಹದೇವಪ್ಪ- ಟಿ. ನರಸೀಪುರ, ಅನಿಲ್ ಚಿಕ್ಕಮಾದು- ಎಚ್.ಡಿ. ಕೋಟೆ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಅಲ್ಲದೇ ಚಾಮರಾಜನಗರ- ಸಿ. ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ- ಎ.ಆರ್. ಕೃಷ್ಣಮೂರ್ತಿ, ಗುಂಡ್ಲುಪೇಟೆ- ಎಚ್.ಎಂ. ಗಣೇಶಪ್ರಸಾದ್ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾರೆ. ಹನೂರಿನಲ್ಲಿ ಮಾತ್ರ ಜೆಡಿಎಸ್ ಶಾಸಕ ಎಂ.ಆರ್. ಮಂಜುನಾಥ್ ಇದ್ದಾರೆ. ಚಾಮರಾಜನಗರದಲ್ಲಿ ಅದಕ್ಕೆ ತಕ್ಕಂತೆ ಹೋರಾಟ ನಡೆಸಿ, ಕಳೆದ ಬಾರಿ ಬಿಜೆಪಿ ಪಾಲಾಗಿದ್ದ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡಿದ್ದಾರೆ.

ಆದರೆ ಮೈಸೂರಿನಲ್ಲಿ ಆ ರೀತಿಯಾಗಿಲ್ಲ. ಇಲ್ಲಿ ಕೂಡ ಚಾಮರಾಜ- ಕೆ. ಹರೀಶ್ ಗೌಡ, ನರಸಿಂಹರಾಜ- ತನ್ವೀರ್ ಸೇಠ್, ಪಿರಿಯಾಪಟ್ಟಣ- ಕೆ. ವೆಂಕಟೇಶ್ ಕಾಂಗ್ರೆಸ್ ಪಕ್ಷದ ಶಾಸಕರೇ ಇದ್ದಾರೆ. ಇದಲ್ಲದೇ ಇದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ

ಮಡಿಕೇರಿ- ಡಾ.ಮಂಥರ್ ಗೌಡ, ವೀರಾಜಪೇಟೆ- ಎ.ಎಸ್. ಪೊನ್ನಣ್ಣ ಕಾಂಗ್ರೆಸ್ ಶಾಸಕರಿದ್ದಾರೆ. ಮೈಸೂರಿನ ಕೃಷ್ಣರಾಜದಲ್ಲಿ ಬಿಜೆಪಿಯ ಟಿ.ಎಸ್. ಶ್ರೀವತ್ಸ, ಚಾಮುಂಡೇಶ್ವರಿಯಲ್ಲಿ ಜೆಡಿಎಸ್ನ ಜಿ.ಟಿ. ದೇವೇಗೌಡ, ಹುಣಸೂರಿನಲ್ಲಿ ಜೆಡಿಎಸ್ನ ಜಿ.ಡಿ. ಹರೀಶ್ಗೌಡ ಶಾಸಕರು.

ಸ್ವತಃ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದು, ಕಾಂಗ್ರೆಸ್ನ ಐವರು ಶಾಸಕರಿರುವುದು, ಜಿಲ್ಲೆಯನ್ನು ಇಬ್ಬರು ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಪ್ರತಿನಿಧಿಸುತ್ತಿರುವುದು, ಕಾಂಗ್ರೆಸ್ನಿಂದ ಒಕ್ಕಲಿಗ ಜನಾಂಗಕ್ಕೆ ಸೇರಿದ ಎಂ. ಲಕ್ಷ್ಮಣ ಅಭ್ಯರ್ಥಿ ಆಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಅರಸು ಜನಾಂಗದ ಯದುವೀರ್ ಅವರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳ ಜೊತೆಗೆ ಒಕ್ಕಲಿಗ ಮತಗಳ ವಿಭಜನೆಯಾಗಿ ಕಾಂಗ್ರೆಸ್ ಗೆಲುವು ಸುಲಭ ಎಂದು ಎಣಿಸಲಾಗಿತ್ತು. ಆದರೆ ಕಳೆದೆರಡು ಬಾರಿ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದ್ದ ಜೆಡಿಎಸ್ ಈ ಬಾರಿ ನೇರವಾಗಿ ಬಿಜೆಪಿ ಪರ ಗಟ್ಟಿಯಾಗಿ ನಿಂತಿದಿದ್ದರಿಂದ ಕಾಂಗ್ರೆಸ್ ಸೋತಿದೆ.

ಜೆಡಿಎಸ್ ಟ್ರಿಕ್- ಬಿಜೆಪಿಗೆ ಹ್ಯಾಟ್ರಿಕ್ ಗೆಲವು, ಕಾಂಗ್ರೆಸ್‌ಗೆ ಹ್ಯಾಟ್ರಿಕ್ ಸೋಲು

ಮೈಸೂರು ಲೋಕಸಭಾ ಕ್ಷೇತ್ರದಿಂದ ಈವರೆಗೂ ಒಮ್ಮೆ ಗೆಲ್ಲದ ಜನತಾ ಪರಿವಾರದ ಪ್ರಾತಿನಿಧಿಕ ಸ್ವರೂಪದಂತಿರುವ ಜೆಡಿಎಸ್ 2014 ರಿಂದಲೂ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದುಕೊಂಡು ಬರುತ್ತಿದೆ. ತಾನು ಗೆಲ್ಲದಿದ್ದರೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ಕಟು ಟೀಕಾಕಾರರಾದ ಹಾಗೂ ತಮ್ಮ ಪಕ್ಷದಲ್ಲಿಯೇ ಇದ್ದು, ಕಾಂಗ್ರೆಸ್ ಸೇರಿದ ನಂತರ ಕಡುವೈರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡುವುದು- ಈ ಎರಡೂ ಗುರಿಯನ್ನು ಈಡೇರಿಸಿಕೊಂಡು ಬರುತ್ತಿದೆ. ಅದಕ್ಕಾಗಿ ತಂತ್ರಗಾರಿಕೆ ಮೆರೆಯುತ್ತಿದೆ. ಇದರಿಂದಾಗಿಯೇ ಕಳೆದ ಮೂರು ಬಾರಿಯಿಂದಲೂ ಕಾಂಗ್ರೆಸ್ ಸೋಲುತ್ತಿದೆ.

ಲಾಭ ಪಡೆದ ಬಿಜೆಪಿ

ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಕಡೆ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಸಂಘಟನೆಯೂ ಬಲವಾಗಿರಲಿಲ್ಲ. ಈ ಬಾರಿ ಹಿಂದಿನಂತೆ ಅಷ್ಟೊಂದು ಸಂಘಟನಾತ್ಮಕವಾಗಿಯೂ ಚುನಾವಣೆ ಎದುರಿಸಲಿಲ್ಲ. ಆದರೂ ಜೆಡಿಎಸ್ ಬೆಂಬಲದೊಂದಿಗೆ ಸತತ ಮೂರನೇ ಬಾರಿ ಗೆದ್ದು ಬೀಗಿದೆ. ಕ್ಷೇತ್ರದಲ್ಲಿ ಐದನೇ ಬಾರಿ ಕಮಲ ಅರಳಿಸಿದೆ. ಹಿಂದೆ ಸಿ.ಎಚ್. ವಿಜಯಶಂಕರ್ ಹಾಗೂ ಪ್ರತಾಪ್ ಸಿಂಹ ತಲಾ ಎರಡು ಬಾರಿ ಬಿಜೆಪಿ ಅಭ್ಯರ್ಥಿಗಳಾಗಿ ಗೆದ್ದಿದ್ದರು.

Latest Videos
Follow Us:
Download App:
  • android
  • ios