ಕೊನೆಗೂ ಖಾಸಗೀಕರಣದ ಬಾಗಿಲಿಗೆ ಮೈಸೂರು ಪೇಪರ್ ಮಿಲ್ಸ್
ಒಂದೇ ಸ್ಥಳದಲ್ಲಿ ಸಕ್ಕರೆ ಹಾಗೂ ಕಾಗದ ಉತ್ಪಾದನಾ ಘಟಕ ಹೊಂದಿದ್ದ ಏಷ್ಯಾದ ಸರ್ಕಾರಿ ಸ್ವಾಮ್ಯದ ಮೊದಲ ಕಾರ್ಖಾನೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ ರಾಜ್ಯದ ಪ್ರತಿಷ್ಠಿತ ಎಂಪಿಎಂನ್ನು ಇನ್ನು ಮುಂದೆ ಹಂತ ಹಂತವಾಗಿ ಖಾಸಗೀಕರಣಗೊಳ್ಳುವ ಹೆಜ್ಜೆಯಿಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಗೋಪಾಲ್ ಯಡಗೆರೆ, ಕನ್ನಡಪ್ರಭ
ಶಿವಮೊಗ್ಗ(ಮೇ.30): ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಮೈಸೂರು ಪೇಪರ್ ಮಿಲ್ಸ್) ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆಯಡಿ ನೀಡಬೇಕಿದ್ದ ಪರಿಹಾರ ಮೊತ್ತದ ಕೊನೆಯ ಕಂತು ಬಿಡುಗಡೆ ಮಾಡುವ ಮೂಲಕ ಕಾರ್ಖಾನೆಯ ಸರ್ಕಾರಿ ಒಡೆತನಕ್ಕೆ ರಾಜ್ಯ ಸರ್ಕಾರ ಕೊನೆಗೂ ಚರಮಗೀತೆ ಹಾಡಿದಂತೆ ಕಾಣುತ್ತಿದೆ.
ಈ ಮೂಲಕ ಒಂದೇ ಸ್ಥಳದಲ್ಲಿ ಸಕ್ಕರೆ ಹಾಗೂ ಕಾಗದ ಉತ್ಪಾದನಾ ಘಟಕ ಹೊಂದಿದ್ದ ಏಷ್ಯಾದ ಸರ್ಕಾರಿ ಸ್ವಾಮ್ಯದ ಮೊದಲ ಕಾರ್ಖಾನೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ ರಾಜ್ಯದ ಪ್ರತಿಷ್ಠಿತ ಎಂಪಿಎಂನ್ನು ಇನ್ನು ಮುಂದೆ ಹಂತ ಹಂತವಾಗಿ ಖಾಸಗೀಕರಣಗೊಳ್ಳುವ ಹಾದಿ ಸುಗಮವಾದಂತಾಗಿದೆ.
ಕಾರ್ಮಿಕ ಸಂಘಟನೆಗಳ ಭಿನ್ನಾಭಿಪ್ರಾಯ, ಸರ್ಕಾರಗಳ ನಿರ್ಲಕ್ಷ್ಯ ಹಾಗೂ ಸಕ್ಕರೆ ಮತ್ತು ಕಾಗದ ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲಾಗದ ಪರಿಸ್ಥಿತಿಗೆ ತಲುಪಿದ ಕಾರ್ಖಾನೆ ಇದೀಗ ಅನಿವಾರ್ಯವಾಗಿ ಖಾಸಗಿಯವರ ಮೂಲಕ ಮತ್ತೆ ಮುಂಚೂಣಿಗೆ ಬರಬೇಕಾಗಿದೆ.
ಗರ್ಭಿಣಿಗೆ ಫ್ಲ್ಯಾಟ್ ಪ್ರವೇಶ ನಿರಾಕರಿಸಿದ ಅಪಾರ್ಟ್‌ಮೆಂಟ್‌ಗೆ ನೋಟಿಸ್
ಕೊನೆಯ ಹಂತದ ಪರಿಹಾರ ಮೊತ್ತದ ಬಿಡುಗಡೆಯಿಂದಾಗಿ 773 ಕಾಯಂ ನೌಕರರು ಹಾಗೂ 1029 ಗುತ್ತಿಗೆ ಆಧಾರಿತ ನೌಕರರು ಕಾರ್ಖಾನೆಯೊಂದಿಗೆ ಹೊಂದಿದ್ದ ಸಂಬಂಧ ಕೊನೆಗೊಂಡಂತಾಗಿದ್ದು ಎಂಪಿಎಂನ್ನು ಈಗಿರುವ ಸ್ಥಿತಿಯಲ್ಲೇ ಖಾಸಗಿಯವರಿಗೆ ಲೀಸ್ ಔಟ್ ಮಾಡುವ ಪ್ರಕ್ರಿಯೆಗೆ ಚಾಲನೆ ದೊರಕುವ ಸಾಧ್ಯತೆ ಹೆಚ್ಚಾಗಿದೆ.
ಕಾರ್ಖಾನೆಯ ಹಿನ್ನೋಟ:
1936ರಲ್ಲಿ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಭದ್ರಾವತಿಯ ನದಿ ದಂಡೆ ಮೇಲೆ ಎಂಪಿಎಂ ಸ್ಥಾಪಿನೆಗೊಂಡಿತು. ಕಾರ್ಖಾನೆ ಉತ್ತುಂಗದಲ್ಲಿದ್ದಾಗ 4 ರಿಂದ 6 ಸಾವಿರ ನೌಕರರನ್ನು ಹೊಂದಿತ್ತು. ಎಂಪಿಎಂನ ಪೇಪರ್ ಮಿಲ್ ಅಂದರೆ ಪಿಎಂ ಒಂದು 1937, ಪಿಎಂ ಎರಡು 1952, ಪಿಎಂ ಮೂರು 1972 ರಲ್ಲಿ ಆರಂಭವಾಯಿತು. ಆಗ ಬರೆಯುವ ಕಾಗದದ ಉತ್ಪಾದನೆ ಶುರುವಾಯಿತು. ಪಿಎಂ 4 ರಲ್ಲಿ 1981ರಲ್ಲಿ ಆರಂಭಿಸಿ ಮುದ್ರಣ ಕಾಗದ ಹಾಗೂ 1985 ರಲ್ಲಿ ಸಕ್ಕರೆ ಉತ್ಪಾದನೆ ಆರಂಭಿಸಿತು.
ಈ ಮೂಲಕ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ರೈತರಿಗೆ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆ ಉತ್ಪಾದನೆಗೆ ಪ್ರೋತ್ಸಾಹಿಸಿತು. ಒಂದೇ ಸ್ಥಳದಲ್ಲಿ ಪೇಪರ್ ಹಾಗೂ ಸಕ್ಕರೆ ಉತ್ಪಾದನೆಯುಳ್ಳ ಏಷ್ಯಾದ ಏಕೈಕ ಕಾರ್ಖಾನೆಯಾಗಿ ಗುರುತಿಸಿಕೊಂಡಿತು.
ಅವನತಿ ಆರಂಭ :
2000ದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಯಾವಾಗ ಮುದ್ರಣ ಕಾಗದದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿತೋ ದೇಶದ ಉಳಿದ ಕಾರ್ಖಾನೆಯಂತೆ ಎಂಪಿಎಂ ಸಹ ನಷ್ಟಕ್ಕೆ ಈಡಾಯಿತು.
ಜೊತೆಗೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಕಾರಣಿಗಳನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾರಂಭಿಸಿದ್ದೂ ಎಂಪಿಎಂಗೆ ಮತ್ತಷ್ಟು ದುಬಾರಿಯಾದಂತೆ ಕಾಣಿಸಿತು. ವರ್ಷದಿಂದ ವರ್ಷಕ್ಕೆ ನಷ್ಟದತ್ತ ಕಾರ್ಖಾನೆ ಹೋಗಲಾರಂಭಿಸಿತು.
ಇದಕ್ಕೆ ಪೂರಕ ಎಂಬಂತೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ, ಕಾರ್ಮಿಕರ ನಿಲುವು ನಷ್ಟಕ್ಕೆ ಕಾರಣಗಳನ್ನು ಒದಗಿಸಿತು. ಆಗ ಸಿಎಂಡಿ ಆದ ಎಷ್ಟೋ ಮಂದಿ ಐಎಎಸ್ ಅಧಿಕಾರಿಗಳು ಬೆಂಗಳೂರಿನ ಐಷಾರಾಮಿ ಎಂಪಿಎಂ ಕಚೇರಿಗಳಲ್ಲಿ ಕುಳಿತು ದರ್ಬಾರ್ ನಡೆಸಿದರೇ ಹೊರತು ಇತ್ತ ಭದ್ರಾವತಿಯಲ್ಲಿನ ಕಾರ್ಖಾನೆಯ ಅಂಗಳಕ್ಕೆ ಕಾಲಿಡಲೇ ಇಲ್ಲ. ಆಗಾಗ್ಗೆ ಕೆಲವು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಸಿಎಂಡಿ ಆದಾಗ ಕಾರ್ಖಾನೆಯ ನಷ್ಟ ಕಡಿಮೆಯಾಗಿದ್ದನ್ನು ಗಮನಿಸಬೇಕಾಗುತ್ತದೆ. ಇದೆಲ್ಲದರ ಒಟ್ಟಾರೆ ಪರಿಣಾಮ ಕಾರ್ಖಾನೆ ಸರ್ಕಾರದ ಪಾಲಿಗೆ ಬಿಳಿ ಆನೆಯಾದಂತಾಯಿತು. ನಷ್ಟದ ಮೊತ್ತ ನೂರಾರು ಕೋಟಿಗಳಾದವು. 2015 ರಲ್ಲಿ ಆಗಿನ ರಾಜ್ಯ ಸರ್ಕಾರ ಮುದ್ರಣ ಕಾಗದ ಉತ್ಪಾದನೆ ನಿಲ್ಲಿಸಿತು.
ಕಾರ್ಖಾನೆ ಪುನಃಶ್ಚೇನಕ್ಕೆ ನಡೆಸಿದ ಯಾವ ಪ್ರಯತ್ನವೂ ಯಶ ಕಾಣಲಿಲ್ಲ. ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಾದರೆ ಸಾವಿರಾರು ಕೋಟಿ ರು. ಬೇಕಾಗುತ್ತದೆ ಎಂಬ ವರದಿ ಸಿದ್ಧಗೊಂಡಿತು. ಆ ಮಟ್ಟದ ಹಣ ನೀಡಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಲಿಲ್ಲ. ನಷ್ಟದ ಪ್ರಮಾಣ ಏರುತ್ತಲೇ ಹೋದಾಗ ಸರ್ಕಾರ ಖಾಸಗೀಕರಣವೇ ಇದಕ್ಕೆ ಮದ್ದು ಎಂಬ ಚಿಂತನೆ ಬಂದಿತು.
ಇದಾದ ನಂತರ 2017 ನವೆಂಬರ್ ಒಳಗೆ ಸ್ವಯಂ ನಿವೃತ್ತಿ ತೆಗೆದುಕೊಳ್ಳಿ ಎಂದು ಅಂತಿಮ ಗಡುವು ವಿಧಿಸಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂಪಿಎಂ ನೌಕರರ ಸ್ವಯಂ ನಿವೃತ್ತಿ ಯೋಜನೆಗೆ 345 ಕೋಟಿ ರು. ನಿಧಿ ಮೀಸಲಿಡಲು ನಿರ್ಧರಿಸಿತು. ಈ ಮೂಲಕ ಕಾರ್ಖಾನೆ ನೌಕರರ ನಿಜವಾದ ಸ್ವಯಂ ನಿವೃತ್ತಿ ಯೋಜನೆ 2018 ಜನವರಿಯಲ್ಲಿ ಆರಂಭಗೊಂಡಿತು. ಆಗ 773 ಕಾಯಂ ನೌಕರರು ಹಾಗೂ 1029 ಗುತ್ತಿಗೆ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯ ವ್ಯಾಪ್ತಿಗೆ ಬಂದರು. ಇದಕ್ಕಾಗಿ 345 ಕೋಟಿ ಪೈಕಿ 202 ಕೋಟಿ ಬಿಡುಗಡೆ ಮಾಡಿತು. ನಂತರದ ದಿನಗಳಲ್ಲಿ ಉಳಿದ 123 ಕೋಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಾ ಬಂತು.
ಈ ಪೈಕಿ ಕೊನೆಯ 20 ಕೋಟಿ ಯನ್ನು ಕಳೆದ ವಾರ ಬಿಡುಗಡೆ ಮಾಡುವ ಮೂಲಕ ಎಂಪಿಎಂಗೆ ಚರಮಗೀತೆ ಹಾಡಿದೆ. ಸ್ವಯಂ ನಿವೃತ್ತಿ ಯೋಜನೆಗೊಳಪಟ್ಟ ಗುತ್ತಿಗೆ ನೌಕರರಿಗೆ ಪರಿಹಾರ ರೂಪದಲ್ಲಿ ತಲಾ 5 ರಿಂದ 8 ಲಕ್ಷ ರು. ಸಿಕ್ಕಂತಾಗಿದೆ.
ಹೀಗೆ ಏರು ಹಾದಿಯಲ್ಲಿ ಸಾಗಿ ನಾಡಿನ ಹೆಮ್ಮೆಯ ಕಾರ್ಖಾನೆಯಾಗಿ ಮೆರೆದಿದ್ದ ಎಂಪಿಎಂ ಕೊನೆಗೂ ಖಾಸಗೀಕರಣ ಬಾಗಿಲಿಗೆ ಬಂದು ನಿಂತಿದೆ. ಕಾರ್ಖಾನೆ ಯಾವ ಮಟ್ಟಕ್ಕೆ ಹಾಳಾಗಿತ್ತೆಂದರೆ ಮತ್ತೆ, ಇದನ್ನು ಸರಿಯಾದ ಹಾದಿಗೆ ತರಲು ಸಾವಿರಾರು ಕೋಟಿ ರು. ಬಂಡವಾಳ ಬೇಕಾಗಿತ್ತು. ಈಗಿನ ಸ್ಥಿತಿಯಲ್ಲಿ ಸರ್ಕಾರ ಹಣ ನೀಡುವ ಸ್ಥಿತಿಯಲ್ಲಿ ಇಲ್ಲ. ಹಾಗೆಂದು ಕಾರ್ಖಾನೆಯನ್ನು ಹಾಗೆಯೇ ಹಾಳು ಬಿಡುವುದೂ ಸರಿಯಲ್ಲ. ಈ ಭಾಗದ ಆರ್ಥಿಕ ಚೇತರಿಕೆಗೆ ಮತ್ತು ಉದ್ಯೋಗಾವಕಾಶಕ್ಕೆ ಖಾಸಗೀಕರಣ ಒಂದೇ ಮದ್ದು ಎಂಬ ತೀರ್ಮಾನಕ್ಕೆ ಬರಲಾಗಿದೆ.