ಸುರಪುರ: 40 ವರ್ಷದಿಂದ ಪಿಡಬ್ಲ್ಯುಡಿ ಕಚೇರಿಯಲ್ಲೇ ಬಿಇಒ ಆಫೀಸ್..!
ಶಿಥಿಲಾವಸ್ಥೆಯಲ್ಲಿರುವ ಸುರಪುರ-ಶಹಾಪರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಣ್ಣ ಕೊಠಡಿಯಲ್ಲೇ ಐದಾರು ಸಿಬ್ಬಂದಿ ಕಾರ್ಯ ನಿರ್ವಹಣೆ
ನಾಗರಾಜ್ ನ್ಯಾಮತಿ
ಸುರಪುರ(ನ.08): ನೂತನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ 40 ವರ್ಷದಿಂದ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿದ್ದರೆ ಶಹಾಪುರ ತಾಲೂಕಿನ ಬಿಇಒ ಕಚೇರಿ ಶಿಕ್ಷಣ ಇಲಾಖೆಯ ಶಾಲೆಯೊಂದರ ಕಟ್ಟಡದಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದು ಶಿಕ್ಷಣ ಇಲಾಖೆಯ ಗುಣಮಟ್ಟದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಶಿಕ್ಷಣ ಇಲಾಖೆಯು ಹಲವಾರು ಅಧೀನ ಅಧಿಕಾರಿಗಳನ್ನು ಹೊಂದಿ ಸಾಗರದಂತೆ ಶಾಂತವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಸ್ವಂತ ಕಟ್ಟಡವಿಲ್ಲದೆ ಎಲ್ಲರೂ ಒಂದೆಡೆ ಕುಳಿತು ಕೆಲಸ ಮಾಡಲು ಸಾಧ್ಯವಾಗದೆ ಚದುರಿ ಹೋಗಿ ಖಾಲಿ ಇರುವ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುವಂತ ಪ್ರಸಂಗ ನಿರ್ಮಾಣವಾಗಿರುವುದು ಶಹಾಪುರ ಮತ್ತು ಸುರಪುರ ತಾಲೂಕಿನ ನೌಕರರ ದುದೈರ್‍ವವಾಗಿದೆ.
ಮತ್ತೊಂದು ಕಚೇರಿಯಲ್ಲಿ ಆಡಳಿತ:
ಸುರಪುರದಲ್ಲಿ ಪಿಡಬ್ಲ್ಯುಡಿ ಕಟ್ಟಡ 1970ರಲ್ಲಿ ನಿರ್ಮಾಣವಾಗಿದ್ದು, 100 ವರ್ಷದ ಸಾಮರ್ಥ್ಯ ಹೊಂದಿದೆ. ತಾಲೂಕು ಸಿಬ್ಬಂದಿಗಳಿಗೆ ಮಾಡಿದಂತ ವಸತಿ ನಿಲಯವಾಗಿದೆ. ಸರಕಾರದಿಂದ ಪತ್ರ ವ್ಯವಹಾರವಾಗಿದ್ದು, ಅದರನ್ವಯ ಜಿಲ್ಲಾ ಪಂಚಾಯತ್‌ಗೆ ಕೊಡಲಾಗಿದೆ. ಶಿಕ್ಷಣ ಇಲಾಖೆಯು ಜಿಪಂನಡಿ ಬರುವುದರಿಂದ ಸುರಪುರ ಬಿಇಒ ಕಚೇರಿ ನಿರ್ವಹಣೆಗಾಗಿ ನೀಡಲಾಗಿದೆ. ಶಹಾಪುರ ತಾಲೂಕಿನ ಬಿಇಒ ಕಚೇರಿಯು ನಗರದ ಹಳೆ ತಹಸೀಲ್ದಾರ್ ಕಚೇರಿ ಹತ್ತಿರದ ಹಳೆಸಗರದ ಶಾಲಾ ಕಟ್ಟಡದಲ್ಲಿ ಕಳೆದ 30 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ.
ನೀರು ಪೂರೈಕೆ: ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಪ್ರಭು ಚವ್ಹಾಣ್
ಕುಡಿವ ನೀರು, ಶೌಚಕ್ಕೆ ತೊಂದರೆ:
ಎರಡು ತಾಲೂಕಿನ ಬಿಇಒ ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳೇ ಇಲ್ಲ. ಇದರಿಂದಾಗಿ ಮನೆಯಿಂದಲೇ ನೀರು ತಂದು ಕುಡಿಯಬೇಕಿದೆ. ಶೌಚದ ವ್ಯವಸ್ಥೆ ಇಲ್ಲದೆ ಮಹಿಳೆಯರ ಪಾಡು ಯಾರಿಗೂ ಬೇಡವಾಗಿದೆ. ಇಷ್ಟೆಲ್ಲ ಸಮಸ್ಯೆಗಳ ಸಂಕೋಲೆಗೆ ನೌಕರರು ಸಂಬಳಕ್ಕಾಗಿ ಒಗ್ಗಿಕೊಂಡಿರುವುದು ಉದ್ಯೋಗದ ಅನಿವಾರ್ಯತೆ ಎತ್ತಿ ತೋರಿಸುತ್ತಿದೆ.
ಇಕ್ಕಟ್ಟಿನಲ್ಲಿಯೇ ಕೆಲಸ:
ಈಗಿರುವ ಸುರಪುರ ಮತ್ತು ಶಹಾಪುರ ಬಿಇಒ, ಮ್ಯಾನೇಜರ್ ಕೊಠಡಿಗಳು ಕೊಠಡಿಗಳು ಪ್ರತ್ಯೇಕವಾಗಿವೆ. ಇದರೊಳಗೆ ನಾಲ್ಕೈದು ಜನರಿಗಿಂತ ಹೆಚ್ಚು ಜನ ಹೋಗುವಂತಿಲ್ಲ. ಕಚೇರಿಗಳ ಸಿಬ್ಬಂದಿಗಳು 10/15 ಕೊಠಡಿಯಲ್ಲೇ ಲೆಕ್ಕಪತ್ರ ವಿಭಾಗದ ಸಿಬ್ಬಂದಿ, ಆಡಳಿತ ವಿಭಾಗದ ಸಿಬ್ಬಂದಿ, ಕಂಪ್ಯೂಟರ್ ಸಿಬ್ಬಂದಿ ಸೇರಿದಂತೆ ಐದಾರು ಸಿಬ್ಬಂದಿ ಒಂದೇ ಕೊಠಡಿಯಲ್ಲೇ ಕೆಲಸ ಮಾಡಬೇಕಿದೆ.
ಕಚೇರಿಗೆ ಬಂದು 2 ತಿಂಗಳಾಗಿದೆ. ಮಹಿಳೆಯರ ಶೌಚಾಲಯದ ಸಮಸ್ಯೆ ಗಮನಕ್ಕೆ ತಂದು ಅಧಿಕಾರಿಗಳ ಜತೆ ಮಾತನಾಡಲಾಗಿದೆ. ಹೆಚ್ಚುವರಿ ಶೌಚಾಲಯ ನಿರ್ಮಿಸಿಕೊಡುವಂತೆ ಶೀಘ್ರದಲ್ಲೇ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಸುರಪುರ ಬಿಇಒ ಮಹೇಶ್ ಪೂಜಾರ್ ತಿಳಿಸಿದ್ದಾರೆ.
ಶಿಕ್ಷಣ ಸಂಯೋಜಕರ ಕೊಠಡಿ, ದೈಹಿಕ ಶಿಕ್ಷಕರ ಕೊಠಡಿ, ಬಟ್ಟೆ, ಪಠ್ಯ-ಪುಸ್ತಕ, ಸೈಕಲ್, ಅಭಿಲೇಖಾಲಯಗಳ ಕೊಠಡಿಗಳು ಒಂದೊಂದು ಕಡೆಗಿವೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಶಿಕ್ಷಕರು ಶಾಲೆಯ ವಸ್ತುಗಳನ್ನು ತೆಗೆದುಕೊಳ್ಳಲು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಂಚರಿಸುವಂತ ಸ್ಥಿತಿಯಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲ ಎಂಬುದು ಶಿಕ್ಷಣ ಪ್ರೇಮಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.
ಸಿದ್ದರಾಮಯ್ಯಗೆ ನಮ್ಮ ಸಮುದಾಯದ ಬಗ್ಗೆ ಭಯ ಶುರುವಾಗಿದೆ: ಶ್ರೀರಾಮುಲು
ಎರಡು ತಾಲೂಕುಗಳಲ್ಲಿ ಬಿಇಒ ಕಚೇರಿ ನಿರ್ಮಾಣ 8 ವರ್ಷದಿಂದ ನನೆಗುದಿಗೆ ಬಿದ್ದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಅಧಿಕಾರಿಗಳನ್ನು ಆಯಾ ತಾಲೂಕು ಶಾಸಕರು ಕರೆದು ಕರೆಸಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಬೇಕು. ಇನ್ನೊಂದು ವಾರದಲ್ಲಿ ಈ ಕೆಲಸ ಆಗದಿದ್ದರೆ ಡಿಸಿ ಕಚೇರಿ ಮುಂದೆ ಪ್ರತಿಭಟಿಸಲಾಗುತ್ತದೆ ಅಂತ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಓಕುಳಿ ಹೇಳಿದ್ದಾರೆ.
ಸರಕಾರದಿಂದ ಬಂದ ಆದೇಶದ ಅನ್ವಯ ಪಿಡಬ್ಲ್ಯುಡಿ ವಸತಿ ನಿಲಯವನ್ನು ಜಿಲ್ಲಾ ಪಂಚಾಯ್ತಿಗೆ ನೀಡಲಾಗಿದೆ. ಇದಕ್ಕೆ ಯಾವುದೇ ಬಾಡಿಗೆ ನೀಡದ ಕಾರಣ ಕಟ್ಟಡದ ನಿರ್ವಹಣೆಯನ್ನು ಮಾಡುತ್ತಿಲ್ಲ. ವಸತಿ ನಿಲಯವನ್ನು ಬಳಸುತ್ತಿರುವವರೇ ನಿರ್ವಹಣೆ ಮಾಡಬೇಕು. ಮಾಡದಿದ್ದರೆ ಬಾಳಿಕೆ ಸಾಮರ್ಥ್ಯದಲ್ಲಿ ಕುಂಠಿತವಾಗಲಿದೆ ಅಂತ ಸುರಪುರ ಎಇಇ ಎಸ್.ಜಿ. ಪಾಟೀಲ್ ತಿಳಿಸಿದ್ದಾರೆ.