Vehicle Activity Control ಬೆಂಗಳೂರಿನ ಕೆಆರ್ ಮಾರುಕಟ್ಟೆ, ಟೌನ್ ಹಾಲ್ ಮತ್ತು ಕಿಮ್ಸ್ ಬಳಿ, ಸ್ಮಾರ್ಟ್ ಸಿಗ್ನಲ್ ಮಾಡ್ಯೂಲ್‌ಗಳು - ವೆಹಿಕಲ್‌ ಆಕ್ಟಿವಿಟಿ ಕಂಟ್ರೋಲ್‌ (ವಿಎಸಿ) ಅನ್ನು ರಿಯಲ್‌ ಟೈಮ್‌ ಟ್ರಾಫಿಕ್‌ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.

ಬೆಂಗಳೂರು (ಆ.14): ಬೆಂಗಳೂರು ಹಾಗೂ ಟ್ರಾಫಿಕ್‌ ಸಮನಾರ್ಥಕ ಪದಗಳಂತೆ ಆಗಿವೆ. ಅದೆಷ್ಟೇ ಹೊಸ ತಂತ್ರಜ್ಞಾನ ಬಂದರೂ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ಮಾತ್ರ ಮುಕ್ತಿ ನೀಡಲು ಸಾಧ್ಯವಾಗಿಲ್ಲ. ಉತ್ತಮ ಟ್ರಾಫಿಕ್ ನಿರ್ವಹಣೆಗಾಗಿ, ನಗರ ಪೊಲೀಸರು ಟ್ರಾಫಿಕ್‌ ಸಿಗ್ನಲ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನವೀಕರಣ ಮಾಡಲು ನಿರ್ಧಾರ ಮಾಡಿದ್ದಾರೆ. ಇದು ವಾಹನಗಳು ಅತ್ಯಂತ ಸುಲಭವಾಗಿ ಚಲನೆ ಮಾಡಲು ಸಹಾಯ ಮಾಡಲಿದೆ. ಈಗ, ಜನದಟ್ಟಣೆಯ ರಸ್ತೆಯಲ್ಲಿ ದೀರ್ಘಕಾಲ ಹಸಿರು ಬಣ್ಣದ ಸಿಗ್ನಲ್‌ಗಾಗಿ ಕಾಯುವ ಬದಲು ಬೆಂಗಳೂರು ಈಗ ಎಐ ಚಾಲಿತ ಸ್ಮಾರ್ಟ್‌ ಸಿಗ್ನಲ್‌ಗಳನ್ನು ಆಯ್ಕೆ ಮಾಡಿದೆ. 

ಬೆಂಗಳೂರಿನ ಕೆಆರ್ ಮಾರುಕಟ್ಟೆ, ಟೌನ್ ಹಾಲ್ ಮತ್ತು ಕಿಮ್ಸ್ ಬಳಿ, ಸ್ಮಾರ್ಟ್ ಸಿಗ್ನಲ್ ಮಾಡ್ಯೂಲ್‌ಗಳು - ವೆಹಿಕಲ್‌ ಆಕ್ಟಿವಿಟಿ ಕಂಟ್ರೋಲ್‌ (ವಿಎಸಿ) ಅನ್ನು ರಿಯಲ್‌ ಟೈಮ್‌ ಟ್ರಾಫಿಕ್‌ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಈ ಹಿಂದೆ ಸಿಗ್ನಲ್‌ನಲ್ಲಿ ಪ್ರೀ ಸೆಟ್‌ ಆಗಿದ್ದ ಟೈಮರ್‌ಗಳು ಇರುತ್ತಿದ್ದವು. ಆ ಸಮಯ ಮುಗಿದ ಬಳಿಕ ಸಿಗ್ನಲ್‌ಗಳು ಗ್ರೀನ್‌ ಆಗುತ್ತಿದ್ದವು. ಆದರೆ, ಈಗ ಎಐ ಕ್ಯಾಮೆರಾಗಳನ್ನು ಪ್ರತಿ ಸಿಗ್ನಲ್‌ನಲ್ಲಿ ಅಳವಡಿಕೆ ಮಾಡಲಾಗಿದ್ದು, ಇದು ವೆಹಿಕಲ್‌ಗಳ ಚಲನೆಯನ್ನು ಟ್ರ್ಯಾಕ್‌ ಮಾಡುತ್ತದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕೆಲವೊಂದು ಸಿಗ್ನಲ್‌ಗಳಲ್ಲಿ ಮೂರು ನಿಮಿಷದವರೆಗೆ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಕೆಲವೊಮ್ಮೆ ನೀವು ನಿಂತ ರಸ್ತೆಯಲ್ಲಿ ಹೆಚ್ಚು ವಾಹನಗಳಿರುತ್ತದೆ. ಹಾಗಿದ್ದರೂ ಕೂಡ ಗ್ರೀನ್‌ ಸಿಗ್ನಲ್‌ಗೂ ಬರೋದಕ್ಕೆ ನೀವು ಕಾಯುತ್ತಾ ಇರಬೇಕಾಗುತ್ತದೆ. ಬೇರೆ ರಸ್ತೆಯಲ್ಲಿ ವಾಹನಗಳೇ ಇಲ್ಲದೇ ಇದ್ದರೂ, ಗ್ರೀನ್‌ ಸಿಗ್ನಲ್‌ ಇದ್ದಿರುತ್ತದೆ. ಆದರೆ, ಈಗ ಬಂದಿರುವ ವ್ಯಾಕ್‌ ಟ್ರಾಫಿಕ್‌ ಸಿಗ್ನಲ್‌ಗಳಿಂದ ಈ ಸಮಸ್ಯೆ ತಪ್ಪಲಿದೆ. ಈಗ ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ಗಳು ಸ್ಮಾರ್ಟ್‌ ಆಗಿದ್ದು, VAC ಎನ್ನುವ ಸಾಲನ್ನು ಪ್ರಕಟ ಮಾಡಲಾಗುತ್ತಿದೆ. ಇದರ ಅರ್ಥ ಏನೆಂದರೆ, VAC ಆಕ್ಟೀವ್‌ ಆಗಿದೆ. ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ನಿಂತಿವೆಯೋ ಆ ರಸ್ತೆಯ ಪ್ರಯಾಣಿಕೆಯ ಆದ್ಯತೆಯ ಮೇರೆಗೆ ಹಸಿರು ಸಿಗ್ನಲ್‌ಅನ್ನು ನೀಡಲಾಗಿದೆ ಎನ್ನುವುದಾಗಿದೆ.

ಹಾಗಾಗಿ ಇಂಥ ಸಿಗ್ನಲ್‌ಗಳು ಆಕ್ಟಿವೇಟ್‌ ಆಗಿರುವ ಪ್ರದೇಶಗಳಲ್ಲಿ ಹೆಚ್ಚು ವಾಹನ ನಿಂತ ರಸ್ತೆಗಳಲ್ಲಿ ತಕ್ಷಣವೇ ಗ್ರೀನ್‌ ಸಿಗ್ನಲ್‌ ನೀಡಿರುವುದನ್ನು ಕಂಡಿರಬಹುದು. ಇದು ಕೃತಕ ಬುದ್ಧಿಮತ್ತೆಯನ್ನು ಅನುಸರಿಸಿ ಕೆಲಸ ಮಾಡುತ್ತದೆ.

ಬೆಂಗಳೂರು ಟ್ರಾಫಿಕ್ ಪೊಲೀಸರು 2022 ರಲ್ಲಿ 50 ಸ್ಥಳಗಳಲ್ಲಿ ಅಡಾಪ್ಟಿವ್ ಸಿಗ್ನಲ್‌ಗಳನ್ನು ಅಳವಡಿಸಲು ಪ್ರಸ್ತಾಪಿಸಿದ್ದಾರೆ. ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಈ ಸ್ಮಾರ್ಟ್ ಸಿಗ್ನಲ್‌ಗಳ ಅನುಷ್ಠಾನದ ನಂತರ ಸರಾಸರಿ ಸರತಿ ಉದ್ದವು ಕಡಿಮೆಯಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ವರದಿಗಳ ಪ್ರಕಾರ, ಯೋಜನೆಯು ಜಪಾನ್ ಸರ್ಕಾರದಿಂದ ಅನುದಾನವನ್ನು ಪಡೆದಿದೆ ಆದರೆ ಕೊರೋನಾ ಕಾರಣದಿಂದಾಗಿ ಇದು ವಿಳಂಬವಾಗಿತ್ತು. 2021ರ ಜೂನ್ 30 ರಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದನ್ನು ಪುನರಾರಂಭಿಸಲಾಗಿದೆ. ಬೆಂಗಳೂರಿನ 23 ಜಂಕ್ಷನ್‌ಗಳಲ್ಲಿ ವಿಎಸಿ ಕಾರ್ಯನಿರ್ವಹಿಸುತ್ತಿದೆ. ಮೈಸೂರು ರಸ್ತೆ, ಮಾಗಡಿ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ, ಬನ್ನೇರುಘಟ್ಟ ರಸ್ತೆ ಸೇರಿದಂತೆ ಪ್ರಮುಖ ಟ್ರಾಫಿಕ್‌ ಜಂಕ್ಷನ್‌ನಲ್ಲಿ ಇದನ್ನು ಅಳವಡಿಸಲಾಗಗಿದೆ.