ಬೆಂಗಳೂರು[ಜು.10]: ಸ್ನಾನದ ಕೋಣೆಯ ವೆಂಟಿಲೇಟರ್‌ನಲ್ಲಿ ಮೊಬೈಲ್‌ ಇಟ್ಟು ಮಹಿಳೆಯರ ಅಶ್ಲೀಲ ದೃಶ್ಯಾವಳಿ ಚಿತ್ರೀಕರಣಕ್ಕೆ ಯತ್ನಿಸಿದ ಆರೋಪದ ಮೇರೆಗೆ ಹೋಟೆಲ್‌ ಸ್ವಚ್ಛತಾ ವಿಭಾಗದ ಕೆಲಸಗಾರನೊಬ್ಬನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ 5ನೇ ಮುಖ್ಯರಸ್ತೆಯ ಹೋಟೆಲ್‌ನ ಕೆಲಸಗಾರ ಅಯೂಬ್‌ ಎಂಬಾತ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ತನ್ನ ಹೋಟೆಲ್‌ನಲ್ಲಿ ತಂಗಿದ್ದ ಯುವತಿಯರು ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಲು ಆರೋಪಿ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಗರಕ್ಕೆ ಶೈಕ್ಷಣಿಕ ಪ್ರವಾಸದ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರು, ರಾಜಾಜಿನಗರದ 5ನೇ ಮುಖ್ಯರಸ್ತೆ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಜೂ.6ರಂದು ಬೆಳಗ್ಗೆ 7ಕ್ಕೆ ಮಹಿಳೆಯೊಬ್ಬರು, ಸ್ನಾನದ ಕೋಣೆಗೆ ತೆರಳಿದ್ದಾರೆ. ಆಗ ಯಾರೋ ವೆಂಟಿಲೇಟರ್‌ನಿಂದ ಬಗ್ಗಿ ನೋಡುತ್ತ ಫೋಟೋ ಹಾಗೂ ವಿಡಿಯೋಗ್ರಫಿ ಮಾಡಲು ಯತ್ನಿಸಿರುವುದು ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ಮಹಿಳೆಯರು ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ಪೊಲೀಸರು, ಹೋಟೆಲ್‌ನಲ್ಲಿ ಪರಿಶೀಲಿಸಿದಾಗ ಸ್ವಚ್ಛತಾ ಕೆಲಸಗಾರ ಅಯೂಬ್‌ನ ಕಿಡಿಗೇಡಿತನ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಸಂಬಂಧ ಸ್ವಚ್ಛತಾ ವಿಭಾಗದ ಕೆಲಸಗಾರ ಹಾಗೂ ಹೋಟೆಲ್‌ ಆಡಳಿತ ಮಂಡಳಿ ವಿರುದ್ಧ ಬಸವೇಶ್ವರ ನಗರ ಠಾಣೆಗೆ ಪೊಲೀಸರು ದೂರು ನೀಡಿದ್ದಾರೆ. ಅದರನ್ವಯ ಐಪಿಸಿ 354 (ಅಸಭ್ಯ ವರ್ತನೆ) ಆರೋಪದಡಿ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.