ಮಕ್ಕಳ ಅನೈತಿಕ ಸಾಗಾಣಿಕೆ ಕರಾಳ ಜಾಲ: ನೂರುನ್ನೀಸಾ
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಒಂದು ಕರಾಳ ಜಾಲವಾಗಿದ್ದು, ಈ ಪಿಡುಗಿನ ವಿರುದ್ಧ ಇಲಾಖೆಗಳು, ಸಂಘ ಸಂಸ್ಥೆಗಳು ಎಚ್ಚರ ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ತಿಳಿಸಿದರು.
ತುಮಕೂರು : ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಒಂದು ಕರಾಳ ಜಾಲವಾಗಿದ್ದು, ಈ ಪಿಡುಗಿನ ವಿರುದ್ಧ ಇಲಾಖೆಗಳು, ಸಂಘ ಸಂಸ್ಥೆಗಳು ಎಚ್ಚರ ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಮಹಿಳಾ ಇಲಾಖೆ ಕಚೇರಿ ಸಭಾಂಗಣದಲ್ಲಿ ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತ ಭಾಗಿದಾರರ ಪುನಃಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಅನೈತಿಕ ಸಾಗಾಣಿಕೆ, ಜೀತಪದ್ಧತಿ, ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆಯಾಗಿರುವುದು ಆತಂಕಕಾರಿ ವಿಷಯ. ಇದರ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದರು.
ಎಸ್ಟೇಟ್‌ಗಳು, ತೋಟಗಳಲ್ಲಿ ಮಕ್ಕಳನ್ನು ಮತ್ತು ಕುಟುಂಬಗಳನ್ನು ಜೀತಕ್ಕೆ ಇಟ್ಟುಕೊಂಡು ದುಡಿಸಿಕೊಳ್ಳುವ ಪ್ರಕರಣಗಳು ನಡೆಯುತ್ತಲೇ ಇವೆ. ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುವುದು, ಕೂಲಿಕಾರ್ಮಿಕರಾಗಿ ದುಡಿಮೆಗೆ ಬಳಸಿಕೊಳ್ಳುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಇಲಾಖೆಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಮಹಿಳಾ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ್ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳನ್ನು ಸಾಗಾಣಿಕೆ ಮಾಡುವುದು ಒಂದು ಗಂಭೀರ ಸಮಸ್ಯೆಯಾಗಿ ಉಲ್ಬಣಿಸಿದೆ. ಕೆಲವರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ದಂಧೆಕೋರರು ಸಾಗಾಣಿಕೆಯಂತಹ ಕೃತ್ಯಕ್ಕೆ ಒಳಪಡಿಸುತ್ತಿದ್ದಾರೆ. ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಕಳಿಸುವ, ವೇಶ್ಯಾವೃತ್ತಿಗೆ ದೂಡುವ ಪ್ರಕರಣಗಳು ಸಾಕಷ್ಟಿವೆ. ಮಕ್ಕಳಿಗೆ ಮತ್ತು ಬರುವ ಔಷಧಿ ನೀಡಿ ಅವರನ್ನು ಬೇರೊಂದು ಕಡೆಗೆ ಸಾಗಿಸುವ ಪ್ರಕರಣಗಳೂ ಸಹ ನಡೆಯುತ್ತಿವೆ. ಇದರಿಂದ ಸಾಕಷ್ಟುವರಮಾನವಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇರುವ ಮಾಹಿತಿಗಳಿವೆ. ಆದಕಾರಣ ಪ್ರತಿಯೊಂದು ಭಾಗಿದಾರ ಸಂಸ್ಥೆಗಳು, ಇಲಾಖೆಗಳು ತೀವ್ರ ಎಚ್ಚರಿಕೆ ವಹಿಸಿ ಯಾವ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಮಕ್ಕಳನ್ನು ದುಡಿಮೆಗೆ ಬಳಸಿಕೊಂಡು ಆದಾಯ ಮಾಡಿಕೊಳ್ಳುವವರು ಇದ್ದಾರೆ. ಇನ್ನು ಕೆಲವರು ಅಂಗಾಂಗ ದಾನ ಮಾಡಿ ಹಣ ಮಾಡಿಕೊಳ್ಳುತ್ತಾರೆ. ಮಕ್ಕಳನ್ನು ಭಿಕ್ಷಾಟನೆಗೆ ತಳ್ಳಿ ಇವರು ಲಾಭ ಮಾಡಿಕೊಳ್ಳುತ್ತಾರೆ. ಇಂತಹ ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಊರಿನ ಅಥವಾ ವಾಸಿಸುವ ಸುತ್ತಮುತ್ತ ಯಾರೇ ಅಪರಿಚಿತ ವ್ಯಕ್ತಿಗಳು ಸಂಚರಿಸುತ್ತಿದ್ದರೆ ಅಂತಹವರ ಬಗ್ಗೆ ನಿಗಾ ಇಡಿ ಎಂದವರು ಸಲಹೆ ನೀಡಿದರು.
ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ, ಬಾಲ್ಯ ವಿವಾಹ, ಭಿಕ್ಷಾಟನೆ ಇತ್ಯಾದಿ ವಿಷಯಗಳ ಕುರಿತು ವಕೀಲರಾದ ಕವಿತ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿದರು. ಪೊಲೀಸ್ ಸೇರಿದಂತೆ ವಿವಿಧ ಭಾಗಿದಾರ ಇಲಾಖೆಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ನೂತನ ನಿರೂಪಣಾಧಿಕಾರಿ ಓಂಕಾರಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್.ಎಂ.ದಿನೇಶ್ ಸ್ವಾಗತಿಸಿದರು. ಬಾಲ ಭವನ ಸೊಸೈಟಿಯ ಸಂಯೋಜನಾಧಿಕಾರಿ ಮಮತ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ , ಕಮಲಮ್ಮ ಕೆ. ವಂದಿಸಿದರು.
‘ರಕ್ಷಣೆ ಮಾಡುವ ಜವಬ್ದಾರಿ ಎಲ್ಲರದ್ದು’
ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವಿಕೆ ಕುರಿತಂತೆ 1956ರಲ್ಲಿಯೇ ಸಾಗಾಣಿಕೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಇದಲ್ಲದೆ, ಭಾರತ ದಂಡಸಂಹಿತೆಯಲ್ಲಿಯೂ ವಿವಿಧ ಕಲಂಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಇಂತಹ ಕೃತ್ಯದೊಳಗೆ ಭಾಗಿಯಾದ ಎಲ್ಲರೂ ಶಿಕ್ಷಾರ್ಹ ಅಪರಾಧಿಗಳಾಗುತ್ತಾರೆ. ಎಲ್ಲಿಯೇ ಆಗಲಿ ಮಕ್ಕಳು ಮತ್ತು ಮಹಿಳೆಯರು ಕಾಣೆಯಾದಾಗ ಕೂಡಲೇ ಮಾಹಿತಿ ನೀಡುವ ಕೆಲಸವಾಗಬೇಕು. ಜಾಲಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕು. ಕಾಣೆಯಾದ ಬಹಳಷ್ಟುಪ್ರಕರಣಗಳಲ್ಲಿ ಪತ್ತೆಯಾಗುವ ಮಂದಿ ಅಪರೂಪ. ಈ ಬಗ್ಗೆ ಹೆಚ್ಚು ಚಿಂತಿಸಬೇಕು. ಒಂದು ದೊಡ್ಡ ಮಾಫಿಯಾ ಇದರ ಹಿಂದೆ ಇದ್ದು, ಮಾನವರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ನೂರುನ್ನೀಸಾ ಕರೆ ನೀಡಿದರು.