ಮತದಾರರಿಗೆ ಶಾಕ್ ಕೊಟ್ಟ ಬಿಬಿಎಂಪಿ: ಹೋಟೆಲ್‌ಗಳಲ್ಲಿ ಉಚಿತ ಊಟ, ತಿಂಡಿ ವಿತರಣೆಗೆ ನಿಷೇಧ!
ಬೆಂಗಳೂರಿನಲ್ಲಿ ಮತದಾನ ಮಾಡಿ ಬಂದವರಿಗೆ ಯಾವುದೇ ಹೋಟೆಲ್‌ಗಳಲ್ಲಿ ಉಚಿತ ತಿಂಡಿ ಅಥವಾ ಊಟ ನೀಡುವಂತಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ಬೆಂಗಳೂರು (ಮೇ 09): ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ಕೊಡುವುದಾಗಿ ಕೆಲವು ಹೋಟೆಲ್‌ಗಳು ಘೋಷಣೆ ಮಾಡಿಕೊಂಡಿದ್ದರು. ಆದರೆ, ಯಾವುದೇ ಹೋಟೆಲ್‌ಗಳಲ್ಲಿ ಉಚಿತ ಊಟ ಅಥವಾ ತಿಂಡಿ ನೀಡುವಂತಿಲ್ಲ ಎಂದು ಬೃಹತ್ ಬೆಂಗಳುರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಕೇಂದ್ರ ಚುನಾವಣಾ ಆಯೋಗದಿಂದ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರ್ಜರಿ ಮತದಾನ ಜಾಗೃತಿ ಮೂಡಿಸಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸಾಥ್ ನೀಡಲು ಹೋಟೆಲ್ ಮಾಲೀಕರ ಸಂಘವೂ ನಿರ್ಧರಿಸಿತ್ತು. ಬೆಂಗಳೂರಿನ ನಿಸರ್ಗ ಹೋಟೆಲ್ ಸೇರಿದಂತೆ ಹಲವು ಹೋಟೆಲ್‌ಗಳಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತ ತಿಂಡಿ ಹಾಗೂ ಊಟ ಕೊಡುವುದಾಗಿ ಘೋಷಣೆ ಮಾಡಿ ಸಿದ್ಧತೆಯನ್ನೂ ಮಾಡಿಕೊಂಡಿದ್ದವು. ಆದರೆ, ಕೊನೇ ಕ್ಷಣದಲ್ಲಿ ಬಿಬಿಎಂಪಿ ಯಾವುದೇ ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಉಚಿತ ಊಟ, ತಿಂಡಿ ನೀಡದಂತೆ ನಿಷೇಧ ಜಾರಿಗೊಳಿಸಿ ಆದೇಶಿಸಿದೆ.
ರಾಜ್ಯಾದ್ಯಂತ 230 ಕೋಟಿ ರೂ. ಜಪ್ತಿ: ಹೊರ ರಾಜ್ಯದವರಿಗೆ ಪ್ರವೇಶ ನಿಷೇಧ!
ಹೋಟೆಲ್ ಮಾಲೀಕರ ಮೇಲೆ ಕಾನೂನು ಕ್ರಮ: ರಾಜ್ಯದಲ್ಲಿ ಈಗಾಗಲೇ ಮಾ.29ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಆದರೆ, ಈಗಾಗಲೇ ಕೆಲವು ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೆಲವು ಹೋಟೆಲ್‌ಗಳ ಮುಂದೆ ಮತದಾನ ಮಾಡಿ ಬಂದವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಊಟ, ತಿಂಡಿ ನೀಡಲಾಗುವುದು ಎಂದು ಫಲಕ ಮತ್ತು ಪೋಸ್ಟರ್ ಅಳವಡಿಕೆ ಮಾಡಿರುವುದು ಕಂಡುಬಂದಿದೆ. ಆದರೆ, ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಲಿದ್ದು, (Considered as Inducement and violation of MCC) ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿದಂತೆ ಹೋಟೆಲ್ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಉಚಿತ ಊಟ, ತಿಂಡಿ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹೋಟೆಲ್‌ಗಳಲ್ಲಿ ಉಚಿತ ಊಟ, ತಿಂಡಿ ವಿತರಣೆ ಸ್ಥಗಿತ: ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಚಾಲುಕ್ಯ ಸಾಮ್ರಾಟ್ ಕೆಫೆ ಮಾಲಿಕ ಸಂತೋಷ್, ಒಳ್ಳೆಯ ಉದ್ದೇಶ ಇಟ್ಟುಕೊಂಡು ಫ್ರೀ ಆಫರ್ ಕೊಟ್ಟಿದ್ದೆವು. ಮತದಾನ ಮಾಡಿ ಬಂದರೆ ಫ್ರೀ ಬ್ರೇಕ್ ಫಾಸ್ಟ್ ಅಂತ ಆಫರ್ ಮಾಡಿದ್ದೆವು. ಬೆಳಗ್ಗೆ ಪತ್ರಿಕೆ ನೋಡಿ ಬಿಬಿಎಂಪಿ ಆದೇಶದ ಪ್ರಕಾರ ಕೊಡುವಂತಿಲ್ಲ ಅಂತ ಗೊತ್ತಾಯ್ತು. ಹೋಟೆಲ್ ಮಾಲಿಕರ ಸಂಘದ ಮೂಲಕ ಅಪ್ರೋಚ್ ಮಾಡಿದ್ದೆವು. ಬೇರೆ ಹೋಟೆಲ್‌ಗಳಿಗೆ ಪರ್ಮಿಷನ್ ಕೊಟ್ಟಿದಾರೆ ಅನ್ನೋ ಸುದ್ದಿ ಇದೆ. ಈಗ ಆಫರ್ ವಾಪಾಸು ತಗೊಂಡಿದೀವಿ. ನಾಳೆಗಾಗಿ ಮಾಡ್ಕೊಂಡಿದ್ದ ತಯಾರಿಗಳನ್ನು ಕಂಪ್ಲೀಟ್ ಸ್ಟಾಪ್ ಮಾಡಿದೀವಿ ಎಂದು ತಿಳಿಸಿದರು.
Karnataka dry Days: ಇಂದಿನಿಂದ 4 ದಿನ ಮದ್ಯ ಮಾರಾಟವಿಲ್ಲ, ಬಹಿರಂಗ ಪ್ರಚಾರವೂ ಇರಲ್ಲ!
ಪ್ರವಾಸಿ ತಾಣಗಳಿಗೂ ಪ್ರವೇಶ ನಿರ್ಬಂಧ: ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ಬೆಂಗಳೂರು ಸೇರಿದಂತೆ ಬೆಂಗಳೂರಿನ ಸುತ್ತಲಿನ ಪ್ರವಾಸಿ ತಾಣಗಳನ್ನು ಮತದಾನ ದಿನದಂದು ಬಂದ್ ಮಾಡಲಾಗಿದೆ. ಅಂದರೆ ನಾಳೆ ಮತದಾನದ ದಿನ (ಮೇ 10)ರಂದು ಪ್ರಮುಖ ಪ್ರವಾಸಿ ತಾಣಗಳಾದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಮೃಗಾಲಯ ಹಾಗೂ ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.