ಹುನಗುಂದ[ಜ.31]: ಜನರನ್ನು ಕಣ್ಣೀರಿನಲ್ಲಿಟ್ಟು ಅರ್ಥ ವ್ಯವಸ್ಥೆ ಸುಧಾರಣೆ ಮಾಡುವುದು ರಾಜ್ಯದ ಅಭಿವೃದ್ಧಿಯಲ್ಲ. ಆರ್ಥಿಕ ಹೊರೆಯಾದರೂ ಜನರ ನೆಮ್ಮದಿ ನಮಗೆ ಮುಖ್ಯ. ಜನರ ಸುಖ, ಶಾಂತಿಗಾಗಿ ಕರ್ನಾಟಕದಲ್ಲಿ ಮದ್ಯಪಾನ ನಿಷೇಧಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಠಾಧೀಶರ, ಚಿಂತಕರ, ಹೋರಾಟಗಾರರ, ಮಹಿಳಾ ಸಂಘಟನೆಗಳ ಸಭೆಯನ್ನು ಕೂಡಲೇ ಕರೆದು ಮದ್ಯ ನಿಷೇಧವನ್ನು ಆರ್ಥಿಕ ತೊಂದರೆ ಇಲ್ಲದೆ ನಿಷೇಧಿಸುವ ಹೊಸ ನೀತಿಯನ್ನು ಜಾರಿಗೆ ತರಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕರ್ನಾಟಕ ಮದ್ಯ ನಿಷೇಧ ಆಂದೋಲನ ಹಾಗೂ ವಿವಿಧ 54 ಸಂಘಟನೆಗಳ ನೇತೃತ್ವದಲ್ಲಿ ಮದ್ಯನಿಷೇಧಕ್ಕೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕಳೆದ 4 ದಿನಗಳಿಂದ ನಡೆದ ಹೋರಾಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮದ್ಯಪಾನದಿಂದಲೇ ಇಂದು ಅಧಿಕ ಅತ್ಯಾಚಾರ, ಅಪರಾಧ, ಅಪಘಾತವಾಗುತ್ತಿವೆ. ಸರ್ಕಾರಕ್ಕೆ ಜನರ ನೆಮ್ಮದಿಗಿಂತ ದುಡ್ಡೆ ಮುಖ್ಯವಾಗಿದೆ. ದುಡ್ಡಿಗಾಗಿ ಸರ್ಕಾರ ಆಡಳಿತ ಮಾಡುವುದು ಬೇಡ. ಬಿಹಾರ, ಗುಜರಾತ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದೆ. ಅಲ್ಲಿ ಯಾವುದೇ ಆರ್ಥಿಕ ತೊಂದರೆಯಾಗಿಲ್ಲ. ಮದ್ಯದಿಂದಲೇ ಅಧಿಕ ಹಣ ಬರುತ್ತದೆ ಎಂಬ ತಪ್ಪು ಕಲ್ಪನೆಯನ್ನು ಬಿಟ್ಟು ಭ್ರಷ್ಟಾಚಾರದ ಮೂಲಗಳನ್ನು ಸರಿಯಾಗಿ ಹತ್ತಿಕ್ಕಿದರೆ ಮದ್ಯಪಾನದಿಂದ ಬರುವ ಹಣಕ್ಕಿಂತ 100 ಪಟ್ಟು ಹಣ ಬರುವುದು ಇಂತಹ ಕಾರ್ಯಕ್ಕೆ ಮುಂದಾಗಿ, ಮದ್ಯಪಾನವನ್ನು ಸರ್ಕಾರ ನಿಷೇಧಿಸಬೇಕು. ಹೋರಾಟಗಾರರು ಮುಂದಿನ ಆಂದೋಲನವನ್ನು ಕನಕದಾಸರ ಕಾಗಿನೆಲೆ, ಶರೀಫರ ಶಿಶುನಾಳ, ಸಿದ್ದಗಂಗಾ ಶ್ರೀಗಳ ತುಮಕೂರಿನಲ್ಲಿ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡುವಂತೆ ಸಲಹೆ ಕೊಟ್ಟರು.

ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಸಂಚಾಲಕಿ ಸ್ವರ್ಣ ಭಟ್ಟಮಾತನಾಡಿ, ಸರ್ಕಾರದ ಮಂತ್ರಿ ಮಂಡಲದ ಪರವಾಗಿ ಗೋವಿಂದ ಕಾರಿಜೋಳ, ಶಶಿಕಲಾ ಜೊಲ್ಲೆ, ಶ್ರೀರಾಮುಲು ಬರವರು ಎಂಬ ಭರವಸೆ ಇಟ್ಟುಕೊಂಡಿದ್ದೇವು. ಬರದೆ ಇರುವುದು ನಿರಾಸೆ ಉಂಟುಮಾಡಿದೆ. ಮದ್ಯ ನಿಷೇಧ ಮಾಡುವವರೆಗೂ ಹೋರಾಟ ನಿರಂತರವಾಗಿ ಇರುವುದು. ಶ್ರೀಗಳು 15 ದಿನದೊಳಗೆ ಮುಖ್ಯಮಂತ್ರಿಗಳನ್ನು ನಾಡಿನ ವಿವಿಧ ಮಠಾಧೀಶರೊಂದಿಗೆ ಭೇಟಿ ಮಾಡಿ ಚರ್ಚೆಗೆ ಅವಕಾಶ ಕೊಡುವಂತೆ ಕೇಳುತ್ತೇನೆ ಎಂದಿದ್ದಾರೆ. 15 ದಿನದೊಳಗೆ ಅವಕಾಶ ಸಿಗದೇ ಇದ್ದರೆ ಸಾತ್ವಿಕ ಹೋರಾಟ ಬಿಟ್ಟು ಸರ್ಕಾರ ಎಚ್ಚರಿಸುವ ಹೋರಾಟ ಮಾಡುವುದು ಅನಿವಾರ್ಯ. ಮುಂದಿನ ಹೋರಾಟಗಳು ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಮಾಡುವಂತೆ ಎಲ್ಲ ಸಂಘಟನೆಯ ಆಗ್ರಹವಾಗಿದೆ. ಈ ಕುರಿತು ಚರ್ಚಿಸಿ ಮುಂದಿನ ಹೋರಾಟದ ರೂಪರೇಷ ಮಾಡಲಾಗುವುದು ಎಂದರು. ಸಮಾರೋಪ ಸಮಾರಂಭಕ್ಕೆ ರಾಜ್ಯದ 20 ಜಿಲ್ಲೆಯಿಂದ ಸಾವಿರಕ್ಕೂ ಅಧಿಕ ಹೋರಾಟಗಾರರು ಪಾಲ್ಗೊಂಡಿದ್ದರು.

ಹೋರಾಟಗಾರರಿಂದ ಸ್ವಚ್ಛತೆ

ಕರ್ನಾಟಕ ಮದ್ಯ ನಿಷೇಧ ಆಂದೋಲನ ಹಾಗೂ ವಿವಿಧ 54 ಸಂಘಟನೆಗಳ ನೇತೃತ್ವದಲ್ಲಿ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಹೊರ ಆವರಣದ ರಥ ಬೀದಿಯ ಕೃಷ್ಣಾ ನದಿ ದಡದಲ್ಲಿ ಮದ್ಯ ನಿಷೇಧಕ್ಕಾಗಿ ಕಳೆದ 4 ದಿನಗಳಿಂದ ಹೋರಾಟ ಮಾಡುತ್ತಿದ್ದ ಸತ್ಯಾಗ್ರಹಿಗಳು ಗುರುವಾರ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ದೇವಾಲಯದ ಒಳ ಹಾಗೂ ಹೊರ ಆವರಣ, ನದಿಯ ದಡವನ್ನು ಸ್ವಚ್ಛ ಮಾಡುತ್ತ ಶ್ರಮದಾನ ಮಾಡಿದರು. ನಂತರ ವಿವಿಧ ವಿಷಯಗಳ ಕುರಿತು ಚಿಂತನೆ ನಡೆಸಿ ಮಧ್ಯಾಹ್ನ 2ಗೆ ಸಮಾರೋಪ ಸಮಾರಂಭದ ಮೂಲಕ ಸತ್ಯಾಗ್ರಹ ಮುಕ್ತಾಯಗೊಳಿಸಿದರು.