ಕೊಡೇಕಲ್‌ [ಜು.2] :  ಬರ, ಬೆಳೆ ನಷ್ಟದಿಂದ ಕಂಗಾಲಾಗಿರುವ ಸಾಲಗಾರ ರೈತರಿಗೆ ಈಗ ಬ್ಯಾಂಕ್‌ಗಳು ಹೊಸ ಶಾಕ್‌ ನೀಡಲಾರಂಭಿಸಿವೆ. ತೊಗರಿ ಮಾರಾಟ ಮಾಡಿ ಸರ್ಕಾರದಿಂದ ಜಮೆಯಾದ ಹಣವನ್ನು ಸಾಲ ಬಾಕಿಗೆ ಹೊಂದಾಣಿಕೆ ಮಾಡಿದ ಪ್ರಕರಣ ಯಾದಗಿರಿ ಜಿಲ್ಲೆಯ ಕೊಡೇಕಲ್‌ನಲ್ಲಿ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಈ ನಿಲುವಿಗೆ ರೈತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬರಗಾಲದಿಂದ ಕಂಗಾಲಾಗಿದ್ದ ರೈತರು ತಾವು ಬೆಳೆದ ಅಷ್ಟಿಷ್ಟುತೊಗರಿಯನ್ನು ಎಪಿಎಂಸಿ ಮೂಲಕ ಮಾರಾಟ ಮಾಡಿದ್ದರು. ಹೀಗೆ ಎಪಿಎಂಸಿ ಖರೀದಿಸಿದ ತೊಗರಿಗೆ ಸರ್ಕಾರದ ವತಿಯಿಂದ ಕೊಡೇಕಲ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನೂರಾರು ರೈತರ ಖಾತೆಗಳಿಗೆ ಇತ್ತೀಚೆಗೆ ಹಣ ಸಂದಾಯ ಆಗಿತ್ತು. ಆದರೆ, ಬ್ಯಾಂಕ್‌ ಈ ರೀತಿ ಜಮೆಯಾದ ಹಣವನ್ನು ರೈತರಿಗೆ ನೀಡಲು ನಿರಾಕರಿಸಿದೆ. ಆ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡಿದೆ.

ಕಳೆದ ಬಾರಿ ಬೆಳೆ ನಷ್ಟದಿಂದಾಗಿ ಕೈಸುಟ್ಟುಕೊಂಡಿದ್ದ ರೈತರು ಈಗ ತೊಗರಿ ಮಾರಿ ಬಂದ ಹಣದಿಂದಲಾದರೂ ಮತ್ತೆ ಕೃಷಿ ಚಟುವಟಿಕೆ ಆರಂಭಿಸುವ ನಿರೀಕ್ಷೆಯಲ್ಲಿದ್ದರು. ಈಗ ಬ್ಯಾಂಕ್‌ ಸರ್ಕಾರದ ಮೂಲಕ ಸಂದಾಯವಾದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಲು ಮುಂದಾಗಿರುವುದು ರೈತರಿಗೆ ಆಘಾತ ನೀಡಿದೆ. ಒಂದು ವೇಳೆ ಈ ಹಣ ಕೈಗೆ ಬಾರದೇ ಹೋದರೆ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ ಆರಂಭಿಸುವುದು ಹೇಗೆನ್ನುವ ಚಿಂತೆ ರೈತರನ್ನು ಕಾಡಲು ಶುರುವಾಗಿದೆ.

ರೈತ ಸಂಘಟನೆಗಳ ಆಕ್ರೋಶ:

ಬ್ಯಾಂಕ್‌ನ ಈ ನಿಲುವನ್ನು ಖಂಡಿಸಿ ಸೋಮವಾರ ಕೊಡೇಕಲ್‌ ಪಟ್ಟಣದ ಗದ್ದೆಮ್ಮ ದೇವಿ ಕಟ್ಟೆಯಲ್ಲಿ ಜಮಾಯಿಸಿದ ರೈತರು ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬ್ಯಾಂಕ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯನ್ನೂ ನಡೆಸಿದ ಪ್ರತಿಭಟನಾಕಾರರು ಬ್ಯಾಂಕ್‌ಗೆ ಮುತ್ತಿಗೆ ಹಾಕಲು ಯತ್ನಿಸಿದರು.

2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ತೀವ್ರ ಬರ ಇದ್ದರೂ ಕಷ್ಟಪಟ್ಟು ತೊಗರಿ ಬೆಳೆದ ಸಾಕಷ್ಟುರೈತರು ಈಗ ಅದನ್ನು ಮಾರಾಟ ಮಾಡಿದ್ದಾರೆ. ಆದರೆ, ಕೃಷಿ ಸಾಲದ ಬಾಕಿ ನೆಪ ಮುಂದಿಟ್ಟುಕೊಂಡು ತೊಗರಿ ಹಣ ಸಾಲದ ಖಾತೆಗೆ ಜಮೆ ಮಾಡಿರುವ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕರು ತೊಂದರೆ ಕೊಡುತ್ತಿದ್ದಾರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದರೂ ಸದ್ಯ ಮಾರಾಟ ಮಾಡಿರುವ ತೊಗರಿ ಹಣವನ್ನು ಬೆಳೆ ಸಾಲಕ್ಕೆ ಹೊಂದಾಣಿಕೆ ಮಾಡಿ ಹಣ ನೀಡದೆ ಈಗಾಗಲೇ ನೊಂದಿರುವ ರೈತರ ಮೇಲೆ ಮತ್ತಷ್ಟುಬರೆ ಎಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡಬಾರದು, ಜತೆಗೆ ತೊಗರಿ ಹಣವನ್ನು ಸಾಲಕ್ಕೆ ಹೋಲಿಸಿ ಕಡಿತ ಮಾಡದೇ ತಲುಪಿಸಿ ಎಂದು ಜಿಲ್ಲಾ​ಧಿಕಾರಿಗಳು ಎಚ್ಚರಿಸಿದ್ದರೂ ಕ್ಯಾರೆ ಅನ್ನದ ಬ್ಯಾಂಕ್‌ ಅ​ಧಿಕಾರಿಗಳು ರೈತರ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ರೈತ ಮುಖಂಡರು ಕಿಡಿಕಾರಿದರು.

ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್‌.ಗುಂಡಕನಾಳ ಅವರು ರೈತರ ಸಮಸ್ಯೆ ಆಲಿಸಿ ಆದಷ್ಟುಬೇಗ ಈ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.