ಬೆಂಗಳೂರು[ಜೂ.23]: ದುರುಗುಟ್ಟಿನೋಡಿದ ಎಂದು ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿದ್ಧಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ದಯಾನಂದ ನಗರ ನಿವಾಸಿ ಅರುಣ್‌ಕುಮಾರ್‌ (23) ಕೊಲೆಯಾದ ಯುವಕ. ಪ್ರಕರಣ ಸಂಬಂಧ ಅಮಿನ್‌ (28) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮೃತ ಅರುಣ್‌ ಮತ್ತು ಅಮಿನ್‌ ಒಂದೇ ಪ್ರದೇಶದವರಾಗಿದ್ದಾರೆ. ಅರುಣ್‌ ಟೆಂಟ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಮಿನ್‌ ಮಿಕ್ಸರ್‌ ಗ್ರೈಂಡರ್‌ ರಿಪೇರಿ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿಯಾಗಿದ್ದ ಅರುಣ್‌ ಕುಡಿದು ಬಂದು ಅಮಿನ್‌ಗೆ ಮದ್ಯ ಕೊಡಿಸುವಂತೆ, ಹಣ ಕೊಡುವಂತೆ ಪೀಡಿಸುತ್ತಿದ್ದ. ಅರುಣ್‌ ವರ್ತನೆಯಿಂದ ಬೇಸತ್ತಿದ್ದ ಅಮಿನ್‌ ಒಂದೆರೆಡು ಬಾರಿ ಅರುಣ್‌ ಜತೆ ಜಗಳವಾಡಿದ್ದ.

ಶನಿವಾರ ಅಮಿನ್‌ ಮನೆ ಸಮೀಪ ಕುಳಿತಿದ್ದ ಅರುಣ್‌ನನ್ನು ದುರುಗುಟ್ಟಿನೋಡಿದ್ದ. ಇದರಿಂದ ಕೋಪಗೊಂಡ ಅರುಣ್‌, ಅಮಿನ್‌ ಮನೆ ಬಳಿ ಹೋಗಿ ಅಮಿನ್‌ ತಂದೆಗೆ ಎಚ್ಚರಿಕೆ ನೀಡಿದ್ದ. ಮನೆಗೆ ಬಂದ ಪುತ್ರ ಅಮಿನ್‌ ಬಳಿ ತಂದೆ ಅರುಣ್‌ ಎಚ್ಚರಿಕೆ ಕೊಟ್ಟು ಹೋಗಿದ್ದ ವಿಷಯ ಹೇಳಿದ್ದರು. ಕೋಪಗೊಂಡ ಅಮಿನ್‌, ಅರುಣ್‌ ಇದ್ದ ಅಂಗಡಿ ಬಳಿ ಹೋಗಿ ಆತನನ್ನು ಪ್ರಶ್ನಿಸಿದ್ದ. ಈ ವೇಳೆ ಅರುಣ್‌ ಹಾಗೂ ಆತನ ಸಹಚರರು ಅಮಿನ್‌ ಮೇಲೆ ಹಲ್ಲೆ ನಡೆಸಿದ್ದರು.

ಮನೆಗೆ ಬಂದ ಅಮಿನ್‌ ಚಾಕು ತೆಗೆದುಕೊಂಡು ಆತನ ಹತ್ಯೆ ಮಾಡಲು ಹೋಗಿದ್ದ. ಪುನಃ ಜಗಳ ನಡೆಯುತ್ತಿದ್ದನ್ನು ಕಂಡ ಸ್ಥಳೀಯರೊಬ್ಬರು ಠಾಣೆಗೆ ನಡೆಯಿರಿ ಎಂದು ಅರುಣ್‌ ಮತ್ತು ಅಮಿನ್‌ನನ್ನು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಅಮಿನ್‌, ಅರುಣ್‌ಗೆ ಚಾಕುವಿನಿಂದ ಹೊಟ್ಟೆಭಾಗಕ್ಕೆ ಇರಿದಿದ್ದ. ತೀವ್ರ ರಕ್ತಸ್ರಾವವಾಗಿ ಅರುಣ್‌ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.