ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಬಾದಾಮಿ ಬನಶಂಕರಿ ಜಾತ್ರೆ
ರಥೋತ್ಸವದ ಹಿಂದಿನ ದಿನ ಅರ್ಚಕರು ದೇವಿಗೆ 108 ಬಗೆಯ ತರಕಾರಿ ನೈವೇದ್ಯವನ್ನು ಅರ್ಪಿಸಿ ವನದುರ್ಗಾಂಬಾ ಹೋಮವನ್ನು ಕೈಗೊಳ್ಳುವರು| ಸುತ್ತಲಿನ ಗ್ರಾಮಗಳ ಭಕ್ತರು ದೇವಿಗೆ ಪಲ್ಲೇದ ಹಬ್ಬವೆಂದು ಆಚರಿಸುವರು| ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರ ಜನಸಾಗರವೇ ಹರಿದು ಬರುತ್ತದೆ| ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಭಕ್ತರು ಜಾತ್ರೆಗೆ ಆಗಮಿಸುವರು|
ಶಂಕರ ಕುದರಿಮನಿ
ಬಾದಾಮಿ(ಜ.09): ಬಾದಾಮಿ ಬನಶಂಕರಿ ಜಾತ್ರೆ ಹಲವಾರು ವೈಶಿಷ್ಟಗಳಿಂದ ರಾಜ್ಯದ ಮನೆ, ಮನದ ಮಾತಾಗಿದೆ. ಇದೇ ಕಾರಣ ನಾಡಿನ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ. ಅಲ್ಲದೆ, ಈ ಜಾತ್ರೆಯಲ್ಲಿ ಎಲ್ಲವೂ ದೊರೆಯುತ್ತವೆ. ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ಬಾದಾಮಿ ಬನಶಂಕರಿ ಜಾತ್ರೆಯನ್ನು ನೋಡಬೇಕು ಎಂದು ಎನಿಸುವುದು.
ಬನಶಂಕರಿ ದೇವಾಲಯದ ಎದುರುಗಡೆ ವಿಶಾಲವಾದ ಹರಿದ್ರಾತೀರ್ಥವು ನಿಸರ್ಗ ಸೌಂದರ್ಯದ ಮಧ್ಯ ಭಕ್ತರನ್ನು ಆಕರ್ಷಿಸುತ್ತಿದೆ. ಹರಿದ್ರಾತೀರ್ಥ ಹೊಂಡದ ಮೂರು ಭಾಗಗಳಲ್ಲಿ ಕಲ್ಲಿನ ಮಂಟಪ, ದೇಸಾಯಿ ಮಂಟಪ ಮತ್ತು ಮೂರು ಅಂತಸ್ತಿನ ದೀಪಸ್ತಂಭ (ಮಂಗನಮಹಲ) ಕಂಗೊಳಿಸುತ್ತಿದೆ. ಹೊಂಡದ ನೀರಿನಲ್ಲಿ ಇಡೀ ದೇವಾಲಯದ ಪರಿಸರದ ಪ್ರತಿಬಿಂಬ ವೀಕ್ಷಿಸಬಹುದು. ದೇವಿಗೆ ಹರಕೆ ಬೇಡಿಕೊಂಡ ದಂಪತಿ ಮಕ್ಕಳಾದ ಮೇಲೆ ಹೊಂಡದಲ್ಲಿ ತಮ್ಮ ಚಿಕ್ಕ ಮಕ್ಕಳನ್ನು ತೆಪ್ಪದಲ್ಲಿ ಕೂಡ್ರಿಸಿಕೊಂಡು ಈ ದಂಡೆಯಿಂದ ಆ ದಂಡೆಗೆ ಹೋಗುವ ಸಂಪ್ರದಾಯ ಸಾವಿರಾರು ವರ್ಷಗಳಿಂದ ನಡೆದು ಬಂದಿದೆ. ಇದು ಕೂಡ ಬಾದಾಮಿ ಬನಶಂಕರಿಯ ವಿಶೇಷತೆಯಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪತಿಯ ಮನೆಗೆ ತೆರಳಿದ ಮಹಿಳೆಯರು ಮತ್ತು ಬೀಗರು ಬನಶಂಕರಿದೇವಿಯ ಜಾತ್ರೆಗೆ ಬರುವರು. ಸಂಬಂಧಿಕರು ಬೀಗರು ಜಾತ್ರೆಗೆ ಬರುವುದೆಂದರೆ ಬಾದಾಮಿ ನಗರ ಮತ್ತು ಸುತ್ತಮುತ್ತಲಿನ ಮಹಿಳೆಯರಿಗೆ ಬಿಡುವಿಲ್ಲದೆ ಕೆಲಸ. ಮನೆಗೆ ಬಂದ ಬೀಗರನ್ನು ಸಂತೈಸಲು ಎಳ್ಳು ಹಚ್ಚಿದ ಸಜ್ಜೆ ಮತ್ತು ಜೋಳದ ರೊಟ್ಟಿ ಮಾಡಿದ್ದಾರೆ. ಜಾತ್ರೆಯ ದಿನ ಸಿಹಿ ಗೋದಿಹುಗ್ಗಿ ಮತ್ತು ಗೋದಿಯ ಮಾದಲಿಯನ್ನು ಮಾಡುವರು. ಜಾತ್ರೆಯಲ್ಲಿ ದೇವಿಗೆ ಪೂಜಾ ಸಾಮಗ್ರಿ ಅಂಗಡಿಗಳು, ಮಹಿಳೆಯರಿಗೆ ಬಳೆ ಕುಂಕುಮದ ಅಂಗಡಿ, ಕೃಷಿಕರಿಗೆ ವಿವಿಧ ವಸ್ತುಗಳ ಅಂಗಡಿ, ಗೃಹ ಬಳಕೆ ವಸ್ತುಗಳು, ಚಿಕ್ಕಮಕ್ಕಳಿಗೆ ಆಟಿಕೆ ಸಾಮಾನುಗಳು, ಹೋಟೆಲ್, ಖಾದಿ ಭಂಡಾರ, ಬಾಳೆಹಣ್ಣು, ಮಿಠಾಯಿ ಅಂಗಡಿಗಳ ಸಾಲು ಜೊತೆಗೆ ಹೊಳೆ ಆಲೂರಿನ ಕಲಾತ್ಮಕ ಬಾಗಿಲು ಚೌಕಟ್ಟು ಅಂಗಡಿಗಳು ಜಾತ್ರೆಗೆ ಮೆರಗು ನೀಡಲಿವೆ.
ಕಿಸಗಾಲ ಗೊಂಬೆ:
ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಮಾತ್ರ ಕಾಣಸಿಗುವ ವಿಶಿಷ್ಟಗೊಂಬೆ ಎಂದರೆ ಅದು ‘ಕಿಸಗಾಲ ಗೊಂಬೆ’. ಜಾತ್ರೆಯ ರಥೋತ್ಸವ ಮುಗಿದ ನಂತರ ಇವುಗಳ ಮಾರಾಟ ನಡೆಯುತ್ತವೆ. ಈ ಗೊಂಬೆಗಳನ್ನು ಮನೆಗೆ ಒಯ್ಯುವುದರಿಂದ ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಇದೇ ಕಾರಣಕ್ಕೆ ಜಾತ್ರೆಯಲ್ಲಿ ಈ ಗೊಂಬೆಗಳಿಗೆ ಬಾರಿ ಬೇಡಿಕೆ. ಈ ಕಿಸಗಾಲ ಗೊಂಬೆಗಳನ್ನು 50-60 ವರ್ಷಗಳಿಂದಲೂ ಚಿತ್ರಗಾರ ಕುಟುಂಬಗಳು ಮಾತ್ರ ಸಗಣಿಯಿಂದ ಈ ಗೊಂಬೆಗಳನ್ನು ತಯಾರು ಮಾಡುತ್ತಿದ್ದಾರೆ. ಈ ಗೊಂಬೆಗಳನ್ನು ಖರೀದಿ ಮಾಡಿದ ನಂತರವೇ ಭಕ್ತರು ಮುಂದಿನ ಸಾಮಗ್ರಿಗಳನ್ನು ಖರೀದಿ ಮಾಡಲು ಹೋಗುತ್ತಾರೆ.
ಅನ್ನಪೂರ್ಣೇಶ್ವರಿಯರು:
ಬಾದಾಮಿ ಬನಶಂಕರಿ ಎಂದರೆ ಕೆಲವರಿಗೆ ಗಡಿಗೆಯಲ್ಲಿ ತಂದ ಗಟ್ಟಿಮೊಸರು, ಖಡಕ್ ರೊಟ್ಟಿ, ಚಟ್ನಿ ಮತ್ತಿತರ ರುಚಿ ತಿನಿಸುಗಳು ನೆನಪಿಗೆ ಬರುತ್ತದೆ. ಏಕೆಂದರೆ ಬಾದಾಮಿ ಸುತ್ತಮುತ್ತಲಿನ ಢಾಣಕ ಶಿರೂರ, ಪಟ್ಟದಕಲ್ಲು, ಮಹಾಕೂಟ, ಮಣ್ಣೇರಿ, ಮಂಗಳಗುಡ್ಡ ಸೇರಿದಂತೆ ಹಲವು ಗ್ರಾಮಗಳ ಮಹಿಳೆಯರು ಸಜ್ಜಿ ಮತ್ತು ಜೋಳದ ಕಟಕ್ ರೊಟ್ಟಿ, ಪಲ್ಯ, ಮಜ್ಜಿಗೆ, ಮೊಸರು, ತರಕಾರಿಯನ್ನು ಒಂದು ಬಿದಿರಿನ ಬುಟ್ಟಿಯಲ್ಲಿ ಕಟ್ಟಿಕೊಂಡು, ಜಾತ್ರೆಗೆ ಬಂದ ಭಕ್ತರು ಇರುವಲ್ಲಿ ಬಂದು ಮಾರಾಟ ಮಾಡುತ್ತಾರೆ. ಹೀಗೆ ತಂದ ಊಟ ಸವಿಯುವುದೇ ಒಂದು ಆನಂದ. ಬನಶಂಕರಿ ಜಾತ್ರೆ ಬಂದ ಭಕ್ತರು ಹೋಟೆಲ್‌ಗಳಿಗೆ ಹೋಗದೇ ಇಂತಹ ಮಹಿಳೆಯರ ಕಡೆಯೇ ಊಟ ಮಾಡುವುದು ವಿಶೇಷ. ಇವರಿಗೆ ಅನ್ನಪೂರ್ಣೇಶ್ವರಿಯರು ಎಂದು ಕೂಡ ಕರೆಯುತ್ತಾರೆ.
ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಕಂಪನಿಗಳನ್ನು ಪೋಷಿಸಿಕೊಂಡು ಬಂದಿದೆ. ಬನಶಂಕರಿ ತೇರಿಗೆ ಹೋಗುವುದು ಎಂದರೆ ಇಡೀ ರಾತ್ರಿ ನಾಟಕ ನೋಡುವುದು ಎಂಬುದರ ಅನ್ವರ್ಥಕವೂ ಇದೆ. ಇನ್ನೊಂದು ಮಾತು ಎಂದರೆ ಈ ಜಾತ್ರ್ಯಾಗ ಅವ್ವ-ಅಪ್ಪನ್ನ ಬಿಟ್ಟು ಎಲ್ಲಾನೂ ಸಿಗುತ್ತದೆ ಎಂಬ ಲೋಕಾರೂಢಿ ಮಾತಿದೆ. ಏಕೆಂದರ ಈ ಜಾತ್ರೆಯಲ್ಲಿ ಮಕ್ಕಳ ಆಟಿಕೆಯಿಂದ ಹಿಡಿದು ಮನೆ, ರೈತರ ಸಾಮಗ್ರಿಗಳು ದೊರೆಯುತ್ತವೆ.
ಜ.10ರಂದು ಗೋಧೂಳಿ ಸಮಯದಲ್ಲಿ ಮಹಾರಥೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಹಣ್ಣು ಸಮರ್ಪಿಸುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ನಿರಂತರ ಒಂದು ತಿಂಗಳ ಕಾಲ ಜರುಗುವ ಜಾತ್ರೆಯ ಸವಿ ಸವಿದವನ್ನೆ ಬಲ್ಲ. ಹೀಗಾಗಿ ಬಾದಾಮಿ ಬನಶಂಕರಿ ಜಾತ್ರೆಯ ಕಣ್ತುಂಬಿಕೊಳ್ಳಲು ನೀವು, ನಿಮ್ಮ ಕುಟಂಬದ ಸಮೇತ ಬಂದು ಜಾತ್ರೆ ಆಚರಿಸಿ.
ಬಾದಾಮಿ ಬನಶಂಕರಿ ಜಾತ್ರೆ ಪ್ರತಿವರ್ಷ ನಾವು ಕುಟುಂಬದ ಸಮೇತ ಹೋಗುತ್ತೇವೆ. ಯಾಕಂದ್ರೆ ಬನಶಂಕರಿ ಜಾತ್ರೆ ನೋಡುವುದೇ ಒಂದು ಆನಂದ. ಇನ್ನೂ ಜಾತ್ರೆಯಲ್ಲಿ ಎಲ್ಲವೂ ದೊರೆಯುತ್ತವೆ. ಈ ಜಾತ್ರೆ ಒಂದು ತಿಂಗಳು ಕಾಲ ನಡೆಯುವುದರಿಂದ ನಾನು ಮೂರ್ನಾಲ್ಕು ಬಾರಿ ಆದ್ರು ಜಾತ್ರೆ ಮಾಡುತ್ತೇನೆ ಎಂದು ಗುಳೇದಗುಡ್ಡ ಭಕ್ತ ರಾಘವೇಂದ್ರ ನಿಲುಗಲ್ಲ ಅವರು ಹೇಳಿದ್ದಾರೆ.