ಬೆಂಗಳೂರು [ಜು.20] :  ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಡಿಚಿಕ್ಕನಹಳ್ಳಿಯ ಅಭಿಷೇಕ್, ರಮೇಶ್ ಹಾಗೂ ರಾಕೇಶ್ ಬಂಧಿತರು.

ಜುಲೈ 13 ರಂದು ತಡರಾತ್ರಿ ಮೂವರು ಆರೋಪಿಗಳು ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಕೆ.ಎಸ್.ಲೋಕೇಶ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜು. 13 ರಂದು ರಾತ್ರಿ ಕಾನ್ಸ್‌ಟೇಬಲ್ ಲೋಕೇಶ್ ಹಾಗೂ ಇತರ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಮೂವರು ಆರೋಪಿಗಳು ಬೇಗೂರು ರಸ್ತೆಯಲ್ಲಿ ಬರುತ್ತಿದ್ದರು. ಆರೋಪಿಗಳ ಬೈಕ್ ತಡೆದಿದ್ದ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿಗಳು ರಾತ್ರಿ ವೇಳೆ ನಮಗೆ ಓಡಾಡ ಲು ಸ್ವತಂತ್ರವಿಲ್ಲ. ನೀವು ಏಕೆ ನಮ್ಮನ್ನು ತಡೆದು ಪ್ರಶ್ನಿಸುತ್ತಿದ್ದೀರಾ ಎಂದು ಪೊಲೀಸರನ್ನು ಅವಾಚ್ಯ ಶಬ್ಧದಿಂದ ನಿಂದಿಸಿದ್ದರು. 

ಈ ವೇಳೆ ಆರೋಪಿ ಪೈಕಿ ಓರ್ವ, ಪೊಲೀಸರದ್ದು ಬಹಳ ಆಗಿದೆ. ಒಬ್ಬನನ್ನು ಕೊಂದು ಹಾಕಿದರೆ, ನಗರದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಆಮೇಲೆ ನಮ್ಮದೇ ಹವಾ ಎಂದು ಹೇಳಿದ್ದ. ಇದರಿಂದ ಮಾತಿಗೆ ಮಾತು ಬೆಳೆದು ಆರೋಪಿಗಳು ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಅವರ ಕೈ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಗಳಿಂದ ಪಿಎಸ್‌ಐ ಮತ್ತು ಕಾನ್‌ಸ್ಟೇಬಲ್‌ನನ್ನು ರಕ್ಷಿಸಿದ್ದರು.