ಬೆಂಗಳೂರು(ಫೆ.13): ಪ್ರಸಕ್ತ ಸಾಲಿನಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬುಧವಾರ ಪರೀಕ್ಷಾ ವೇಳಾಪಟ್ಟಿಪ್ರಕಟಿಸಿದೆ. ಮಾ.9ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ.

ವೇಳಾಪಟ್ಟಿಪ್ರಕಾರ, ಮಾ.9ರಂದು ಪ್ರಥಮ ಭಾಷೆ, ಮಾ.10ರಂದು ದ್ವಿತೀಯ ಭಾಷೆ, ಮಾ.11ಕ್ಕೆ ತೃತೀಯ ಭಾಷೆ, ಮಾ.12ಕ್ಕೆ ಗಣಿತ, ಮಾ.13ಕ್ಕೆ ವಿಜ್ಞಾನ ಮತ್ತು ಮಾ.14ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ದಿನಗಳ ಮಧ್ಯೆಯಾವುದೇ ರಜಾ ದಿನಗಳಿಲ್ಲದೆ ಆರು ದಿನಗಳ ಕಾಲ ನಿರಂತರವಾಗಿ ಪರೀಕ್ಷೆ ನಿಗದಿಯಾಗಿದೆ.

'ಸರ್ಕಾರದ ಬಳಿ ದುಡ್ಡಿಲ್ಲ, ಈ ಬಾರಿ ಹೊಸ ಕಾಲೇಜುಗಳ ಸ್ಥಾಪನೆ ಇಲ್ಲ'

7ನೇ ತರಗತಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪಬ್ಲಿಕ್‌ ಪರೀಕ್ಷೆ ಮರು ಜಾರಿ ಮಾಡಲು ಚಿಂತನೆ ನಡೆಸಿದ್ದ ಸರ್ಕಾರ, ಬಳಿಕ ಆ ಚಿಂತನೆ ಕೈಬಿಟ್ಟು ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಂಡಿತ್ತು.

ಮೌಲ್ಯಾಂಕನ ಪರೀಕ್ಷೆ ಮೂಲಕ ವಿದ್ಯಾರ್ಥಿಯ ಕಲಿಕಾ ಮಟ್ಟತಿಳಿದು, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗೆ 8ನೇ ತರಗತಿಯಲ್ಲಿ ವಿಶೇಷ ತರಬೇತಿ ನೀಡುವುದು ಇದರ ಉದ್ದೇಶವಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣ, ಅನುತ್ತೀರ್ಣ ಎಂಬ ಫಲಿತಾಂಶ ನೀಡುವ ಪ್ರಕ್ರಿಯೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿತ್ತು.