Assembly Election : ರೆಡ್ಡಿಗೆ ಕೈ ಟಿಕೆಟ್ - ಬಿಜೆಪಿಯಲ್ಲಿ ಗೊಂದಲ
ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ಇದೀಗ ಟಿಕೆಟ್ ಹಂಚಿಕೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ(ಡಿ. 11): ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಕ್ಷೇತ್ರದ ಮೊದಲ ಶಾಸಕರಾಗಿ ಕಾಂಗ್ರೆಸ್‌ನಿಂದ ಆಯ್ಕೆಗೊಂಡ ಎನ್.ಸಿ.ನಾಗಯ್ಯರೆಡ್ಡಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಗ್ಗಳಿಕೆ ಒಂದಡೆ ಅದರೆ ಜಿಲ್ಲೆಯಲ್ಲಿಯೆ ಸಾಮಾನ್ಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಏಕೈಕ ಮಹಿಳಾ ಶಾಸಕಿಯಾಗಿ ಎನ್.ಜ್ಯೋತಿರೆಡ್ಡಿ ಅವರನ್ನು ಆರಿಸಿದ ಕೀರ್ತಿ ಗೌರಿಬಿದನೂರಿಗೆ ಸಲ್ಲುತ್ತದೆ.
ಗೌರಿಬಿದನೂರು ಕ್ಷೇತ್ರ ರಾಜಕೀಯವಾಗಿ (Politics) ಇಂದಿಗೂ ಕಾಂಗ್ರೆಸ್ (Congress) ಪ್ರಾಬಲ್ಯ ಇರುವ ಕ್ಷೇತ್ರ. ಒಟ್ಟು ಚುನಾವಣೆಗಳ ಪೈಕಿ 7 ಬಾರಿ ಕಾಂಗ್ರೆಸ್, ಜೆಡಿಎಸ್ 1, ಜನತಾ ಪಕ್ಷ 2, ಇಂದಿರಾ ಕಾಂಗ್ರೆಸ್ 1 ಹಾಗೂ 4 ಬಾರಿ ಪಕ್ಷೇತರರು ಗೆಲುವಿನ ದಡ ಮುಟ್ಟಿದ್ದಾರೆ. ಸದ್ಯ ಕ್ಷೇತ್ರದಲ್ಲಿ 2023ರ ಚುನಾವಣಾ ಅಖಾಡಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು ಟಿಕೆಟ್ ಲಾಬಿ ಜೋರಾಗಿಯೆ ಸಾಗಿದೆ.
ಶಿವಶಂಕರೆಡ್ಡಿಗೆ ಕಾಂಗ್ರೆಸ್ ಟಿಕೆಟ್
ಕಾಂಗ್ರೆಸ್ ಬಂಡಾಯದ ಅಭ್ಯರ್ಥಿಯಾಗಿ 1999 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಎನ್.ಎಚ್.ಶಿವಶಂಕರರೆಡ್ಡಿ ರಾಜಕಾರಣದಲ್ಲಿ ಸೋಲಿಲ್ಲದ ಸರದಾರನಂತೆ 5 ಬಾರಿ ಗೆಲುವು ಸಾಧಿಸಿದ್ದಾರೆ. 2023 ರ ಚುನಾವಣೆಯಲ್ಲೂ ರೆಡ್ಡಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದ್ದು ಘೋಷಣೆಯಷ್ಟೇ ಬಾಕಿ ಇದೆ.
ಬಿಜೆಪಿಗೆ ಟಿಕೆಟ್‌ಗೆ ಪೈಪೋಟಿ
ಬಿಜೆಪಿ ಟಿಕೆಟ್‌ಗೆ ಸ್ಥಳೀಯರಾದ ಆರ್‌ಎಸ್‌ಎಸ್ ಹಿನ್ನೆಲೆ ಇರುವ ಮಾನಸ ಆಸ್ಪತ್ರೆ ಗ್ರೂಪ್‌ನ ಅಧ್ಯಕ್ಷ ಡಾ.ಶಶಿಧರ್ ಕರಸತ್ತು ನಡೆಸುತ್ತಿದ್ದಾರೆ. ಪಕ್ಷದ ನಾಯಕ ರವಿನಾರಾಯಣರೆಡ್ಡಿ ಶಶಿಧರ್‌ಗೆ ಬೆಂಬಲ ಸೂಚಿಸಿದ್ದಾರೆ. 1994 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಎನ್.ಜ್ಯೋತಿರೆಡ್ಡಿ ಈಗ ಬಿಜೆಪಿಯಲ್ಲಿದ್ದು ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಹೊಂದಿಲ್ಲ. ಸಚಿವ ಸುಧಾಕರ್ ಗೌರಿಬಿದನೂರು ಕ್ಷೇತ್ರವನ್ನು ರಾಜಕೀಯವಾಗಿ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿದೆ.
ದಳಕ್ಕೆ ನರಸಿಂಹಮೂರ್ತಿ:
ಜೆಡಿಎಸ್‌ನಿಂದ 2018 ರ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋತಿದ್ದ ಜಿಪಂ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ ಎರಡನೇ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧಿಸುವುದು ಪಕ್ಕಾ ಆಗಿದೆ.
ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿಯಲು ಹಲವರು ತಯಾರಿ ನಡೆಸಿದ್ದಾರೆ. ಸಂಸದ ಬಚ್ಚೇಗೌಡರ ಬೀಗರಾದ ಪುಟ್ಟಸ್ವಾಮಿಗೌಡ, ಬೆಂಗಳೂರು ನಗರ ಜಿಪಂ ಸದಸ್ಯರಾಗಿದ್ದ ಕೆಂಪರಾಜು, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 3ನೇ ಸ್ಥಾನ ಪಡೆದಿದ್ದ ಜೈಪಾಲ್‌ರೆಡ್ಡಿ ಮತ್ತೆ ಸ್ಪರ್ಧಿಸುವ ಸಾಧ್ಯತೆ ಇದೆ.
ನಾಗಸಂದ್ರ ರಾಜಕೀಯ ಶಕ್ತಿ ಕೇಂದ್ರ
ಇಂದಿಗೂ ರಾಜಕೀಯ ಪಕ್ಷಗಳಿಗೆ ನಾಗಸಂದ್ರ ಶಕ್ತಿ ಕೇಂದ್ರವಾಗಿದೆ. ಶಾಸಕರಾಗಿದ್ದ ಎನ್.ಸಿ.ನಾಗಯ್ಯರೆಡ್ಡಿ, ಎನ್.ಜ್ಯೋತಿರೆಡ್ಡಿ, ಹಾಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ನಾಗಸಂದ್ರ ಗ್ರಾಮದವರು. ಪ್ರತಿ ಬಾರಿ ಚುನಾವಣೆಯ ರಾಜಕಾರಣ ನಾಗಸಂದ್ರವನ್ನು ಕೇಂದ್ರೀಕರಿಸುತ್ತದೆ ಎನ್ನುವುದು ಮತ್ತೊಂದು ವಿಶೇಷ.
ಟಿಕೆಟ್ ಪೈಪೋಟಿ
ಸಿ.ಸಿದ್ದರಾಜು ಮಾದಹಳ್ಳಿ.
ಮಳವಳ್ಳಿ (ಡಿ. 11): ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮಳವಳ್ಳಿ ತಾಲೂಕಿನಲ್ಲಿ ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆಯಿಂದ ಕ್ಷೇತ್ರದ ಮೂಲ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
ಪಟ್ಟಣದಲ್ಲಿ ಪ್ರತ್ಯೇಕ ಮುಖಂಡರು ಎರಡು ಬಿಜೆಪಿ (BJP) ಕಚೇರಿಗಳು ತೆರೆದಿರುವುದು ತಾಲೂಕು ಬಿಜೆಪಿ ಘಟಕದಲ್ಲಿ ಗುಂಪುಗಾರಿಗೆ ಇದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯ ಒದಗಿಸುತ್ತಿವೆ. ಪಕ್ಷದ ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರಲ್ಲಿ ಅಧಿಕೃತ ಕಚೇರಿ ಯಾವುದು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಜಿಲ್ಲಾ ಮತ್ತು ರಾಜ್ಯ (Karnataka ) ಬಿಜೆಪಿ ಮುಖಂಡರೇ ಸ್ವಷ್ಟಉತ್ತರ ನೀಡಬೇಕಿದೆ.
ಹಲವು ವರ್ಷಗಳಿಂದ ಪಟ್ಟಣದ ರಾವಣಿ ರಸ್ತೆಯಲ್ಲಿರುವ ಮಾಜಿ ಸಚಿವ ಬಿ.ಸೋಮಶೇಖರ್ ಕಟ್ಟಡದಲ್ಲಿ ಬಿಜೆಪಿ ಕಚೇರಿಯನ್ನು ತೆರೆಯಲಾಗಿತ್ತು. ಆದರೆ, ಇತ್ತೀಚೆಗೆ ಬಿಜೆಪಿ ಕಚೇರಿ ಪಟ್ಟಣದ ಮುಖ್ಯರಸ್ತೆಯಲ್ಲಿ ಇರಬೇಕೆಂಬ ವರಿಷ್ಠರ ಆದೇಶದ ಮೇರೆಗೆ ಮಳವಳ್ಳಿ- ಮೈಸೂರು ರಸ್ತೆಯಲ್ಲಿ ಹೊಸ ಕಚೇರಿ ತೆರೆಯಲಾಗಿದೆ.
ಹೊಸ ಬಿಜೆಪಿ ಕಚೇರಿಗೆ ಉದ್ಘಾಟನೆಗೆ ಮಾಜಿ ಸಚಿವ ಬಿ.ಸೋಮಶೇಖರ್ ಹೊರತು ಪಡಿಸಿ, ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾಧ್ಯಕ್ಷ ಉಮೇಶ್ ಸೇರಿದಂತೆ ಹಲವು ನಾಯಕರು ಆಗಮಿಸಿ ಶುಭ ಕೋರಿ ಹೋಗಿದ್ದರು. ಸ್ವಲ್ಪ ದಿನದಲ್ಲಿಯೇ ಮಾಜಿ ಸಚಿವ ಬಿ.ಸೋಮಶೇಖರ್ ಸಂವಿಧಾನ ಅರ್ಪನಾ ದಿನ ಕಾರ್ಯಕ್ರಮ ಮಾಡಿ ಇದೇ ಅಧಿಕೃತ ಬಿಜೆಪಿ ಕಚೇರಿಯಾಗಿದೆ. ಹೊಸದಾಗಿ ತೆರೆದಿರುವ ಕಚೇರಿ ಕೆಲವರ ವೈಯಕ್ತಿಕ ಕಚೇರಿಯಾಗಿದೆ ಎಂದು ಗೊಂದಲದ ಹೇಳಿಕೆ ನೀಡಿದ್ದರು.
ಕ್ಷೇತ್ರದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಸೋಮಶೇಖರ್ ಜೊತೆಯಲ್ಲಿದ್ದರೇ, ಇನ್ನೂ ಕೆಲವು ಬಿಜೆಪಿ ಕಾರ್ಯಕರ್ತರು ಹೊಸ ಕಚೇರಿಯಲ್ಲಿನ ಮುಖಂಡರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎನ್ನುವುದನ್ನು ತಿಳಿಯದೇ ಗೊಂದಲದಲ್ಲಿದ್ದು ತಟಸ್ಥವಾಗಿದ್ದಾರೆ ಎನ್ನಲಾಗಿದೆ.