Asianet Suvarna News Asianet Suvarna News

ಈ ಬಾರಿ ಕಾಗದ ಮುಕ್ತ ಜನಗಣತಿ : ಹೇಗೆ ನಡೆಯುತ್ತೆ?

ಈ ಬಾರಿ ಜನಗಣತಿ ನಡೆಸಲು ಪೇಪರ್ ಬಳಕೆ ಮಾಡುತ್ತಿಲ್ಲ. ಈ ಬಾರಿ ಪೇಪರ್ ಇಲ್ಲದೇ ಬೆಂಗಳೂರು ವ್ಯಾಪ್ತಿಯಲ್ಲಿ ನಡೆಯಲಿದೆ. 

App Based Census in Bengaluru
Author
Bengaluru, First Published Dec 27, 2019, 8:49 AM IST

ಈ ಬಾರಿ ಕಾಗದ ಮುಕ್ತ ಜನಗಣತಿ : ಹೇಗೆ ನಡೆಯುತ್ತೆ?

ಬೆಂಗಳೂರು [ಡಿ.27]:  ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಎರಡು ಹಂತದಲ್ಲಿ ಗಣತಿ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ ಮನೆಗಣತಿ, ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಇದೇ ಮೊದಲ ಬಾರಿಗೆ ಕಾಗದ ಮುಕ್ತ ಜನಗಣತಿ ಮಾಡಲಾಗುವುದು ಎಂದು ರಾಜ್ಯ ಜನಗಣತಿ ನಿರ್ದೇಶಕ ಹಾಗೂ ಜನಗಣತಿ ಮುಖ್ಯ ಅಧಿಕಾರಿ ಎಸ್‌.ಬಿ.ವಿಜಯ್‌ಕುಮಾರ್‌ ತಿಳಿಸಿದರು.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜನಗಣತಿ ಅಧ್ಯಕ್ಷ ಬಿ.ಎಚ್‌.ಅನಿಲ್‌ಕುಮಾರ್‌ ಅಧಿಕಾರಿಗಳೊಂದಿಗೆ ‘ಜನಗಣತಿ 2021’ ಪೂರ್ವಭಾವಿ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಎರಡು ಹಂತಗಳಲ್ಲಿ ಜನಗಣತಿ ಸಮೀಕ್ಷೆ ನಡೆಯಲಿದ್ದು, ಮೊದಲನೇ ಹಂತದಲ್ಲಿ ಮನೆ ಗಣತಿ ನಡೆಯಲಿದೆ. ಇದು 2020ರ ಏಪ್ರಿಲ್‌ 15ರಿಂದ ಮೇ 29ರವರೆಗೆ ನಡೆಯಲಿದೆ. ಜನಗಣತಿ 2021ರ ಫೆಬ್ರವರಿ 9ರಿಂದ ಫೆ.29 ವರೆಗೆ ನಡೆಯಲಿದ್ದು, 2021ರ ಮಾಚ್‌ರ್‍ 1ರಿಂದ ಮಾಚ್‌ರ್‍ 5ರವರೆಗೆ ಸಮೀಕ್ಷೆಯ ಪುನರ್‌ ಪರಿಶೀಲನೆ ನಡೆಯಲಿದೆ. ಈ ಬಾರಿ 2023ರೊಳಗೆ ವರದಿ ಸಿದ್ಧಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಹಾಗಾಗಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಎನ್‌ಪಿಆರ್‌ ಪ್ರಕ್ರಿಯೆ:

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆ ಸಹ ನಡೆಯಲಿದೆ. ಎನ್‌ಪಿಆರ್‌ ವೇಳೆ ಸಾರ್ವಜನಿಕರು ಯಾವುದೇ ದಾಖಲಾತಿ ನೀಡುವ ಅವಶ್ಯಕತೆ ಇಲ್ಲ. ಮಾಹಿತಿ ನೀಡಿದರೆ ಸಾಕು. ಉದಾಹರಣೆಗೆ ಆಧಾರ್‌ ಕಾರ್ಡ್‌ ಹೊಂದಿದ್ದಲ್ಲಿ ಸಂಖ್ಯೆ ತಿಳಿಸಿದರೆ ಸಾಕು. ಪಾನ್‌ಕಾರ್ಡ್‌ ಹೊಂದಿದ್ದಲ್ಲಿ ಸಂಖ್ಯೆ ನೀಡಿದರೆ ಸಾಕು. ಆದರೆ, ಯಾವುದೂ ಸಹ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದರು.

ಎನ್‌ಸಿಆರ್‌ ಸಂಬಂಧವಿಲ್ಲ:

ಎನ್‌ಪಿಆರ್‌ ಹಾಗೂ ಎನ್‌ಸಿಆರ್‌ಗೂ ಯಾವುದೇ ಸಂಬಂಧವಿಲ್ಲ ಎಂಬ ಬಗ್ಗೆ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುವುದು ಬೇಡ. ಇನ್ನು ಜನಗಣತಿ ವೇಳೆ ಕಾರು, ಬೈಕ್‌, ಟಿವಿ ಸೇರಿದಂತೆ ಇನ್ನಿತರ ಮಾಹಿತಿ ನೀಡುವ ವೇಳೆ ಮುಂದೆ ಗೊಂದಲ ಆಗಬಹುದು ಎಂಬ ಕಾರಣಕ್ಕೆ ತಪ್ಪು ಮಾಹಿತಿ ನೀಡಬಾರದು, ಜನಗಣತಿಯಲ್ಲಿ ಸಂಗ್ರಹಿಸುವ ಅಂಕಿ ಅಂಶವನ್ನು ಯಾವುದೇ ಕಾರಣಕ್ಕೂ ಮತ್ತೊಂದು ಇಲಾಖೆಯೊಂದಿಗೆ ಹಂಚಿಕೊಳ್ಳುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯವ್ಯಯ ಹಾಗೂ ಯೋಜನೆ ರೂಪಿಸುವುದಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕಾಗದ ಮುಕ್ತ ಗಣತಿಗೆ ಯತ್ನ:

ಇದೇ ಮೊದಲ ಬಾರಿಗೆ ಆ್ಯಪ್‌ ಮೂಲಕ ಜನಗಣತಿ ನಡೆಸುವುದಕ್ಕೆ ಸರ್ಕಾರ ಮುಂದಾಗಿದೆ. ಆ್ಯಪ್‌ ಜೊತೆಗೆ ಕಾಗದ ಮೂಲಕವೂ ಜನಗಣತಿ ಮಾಡಲಾಗುತ್ತಿದೆ. ಆದರೆ, ಗಣತಿಯ ಹಾಳೆಯಲ್ಲಿ ಉದ್ದ ಸಾಲುಗಳ ಸಂಖ್ಯೆಯನ್ನು 12ರಿಂದ 10ಕ್ಕೆ ಕಡಿತಗೊಳಿಸಲಾಗಿದೆ. ಜತೆಗೆ ವಿವರವಾದ ಬರಹಕ್ಕೆ ಅವಕಾಶ ನೀಡದೇ ಆಯ್ಕೆ ರೀತಿ ಪ್ರಶ್ನಾವಳಿ ಸಿದ್ಧಪಡಿಸಲಾಗಿದೆ. ಇದರಿಂದ ಶೇ.40ರಷ್ಟುಸಮೀಕ್ಷಾ ಸಮಯ ಕಡಿಮೆಯಾಗಲಿದೆ ಎಂದು ವಿವರಿಸಿದರು.

ಕಾಲಮಿತಿಯೊಳಗೆ ಜನಗಣತಿ ಮುಗಿಸುವ ಉದ್ದೇಶದಿಂದ ಸಾರ್ವಜನಿಕರು ಸಹ ನೇರವಾಗಿ ತಮ್ಮ ಮಾಹಿತಿಯನ್ನು ಆ್ಯಪ್‌ ಮೂಲಕ ಸಲ್ಲಿಕೆ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಅದಕ್ಕಾಗಿ ಪ್ರತ್ಯೇಕ ಆ್ಯಪ್‌ ರೂಪಿಸಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಮಾತನಾಡಿ, ಕಾಗದ, ಆ್ಯಪ್‌ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕರು ತಮ್ಮ ಮಾಹಿತಿ ದಾಖಲಿಸಬಹುದಾಗಿದೆ. ಹೀಗಾಗಿ, ಜನಗಣತಿ ಕಾರ್ಯ ಸುಲಭವಾಗಲಿದೆ. ಈ 2011ರಲ್ಲಿ ಮಾಡಿದ ಜನಗಣತಿಯ ಸಾರಾಂಶ ಇನ್ನೂ ಅಂತಿಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಒಟ್ಟು ಮೂರು ಆ್ಯಪ್‌ ಪರಿಚಯಿಸಲಾಗಿದ್ದು, ಪ್ಲೆ ಸ್ಟೋರ್‌ನಲ್ಲಿ ಡೌನ್‌ ಲೋಡ್‌ ಮಾಡಿಕೊಳ್ಳಬಹುದು. 2023ರ ವೇಳೆಗೆ ಜನಗಣತಿ ಹಾಗೂ ಎನ್‌ಪಿಆರ್‌ ವರದಿ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದರು.

ಜನಗಣತಿಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಶಿಕ್ಷಕರನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದ್ದು, ಜನಗಣತಿಗೆ ಒಟ್ಟು 17,535 ಬ್ಲಾಕ್‌ಗಳಿಗೆ 19,289 ಸಿಬ್ಬಂದಿ, 3,215 ಮೇಲ್ವಿಚಾರಕರು ಬೇಕಾಗಲಿದ್ದಾರೆ ಎಂದು ತಿಳಿಸಿದರು.

ಜನಗಣತಿಯ ನಾಲ್ಕು ವಿಭಾಗಗಳು

1. ಲಿಂಗ: ಜನ್ಮ ದಿನಾಂಕ, ವಯಸ್ಸು, ಮದುವೆ ದಿನಾಂಕ, ಮಕ್ಕಳಿದ್ದರೆ ಅವರ ವಿವರ

2. ಸಾಮಾಜಿಕ ಮತ್ತು ಸಾಂಸ್ಕೃತಿಕ: ಕುಟುಂಬದ ಮುಖ್ಯಸ್ಥರು, ಸಂಬಂಧ ಏನು?, ರಾಷ್ಟ್ರೀಯತೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ, ವಿಶೇಷ ಚೇತನರೇ?, ಮಾತೃಭಾಷೆ, ಇತರೆ ಭಾಷೆ ಬಳಕೆ ವಿವರ, ವಿದ್ಯಾಭ್ಯಾಸದ ವಿವರ, ಯಾವ ಕ್ಷೇತ್ರ.

3.ಆರ್ಥಿಕತೆ: ಉದ್ಯೋಗದ ವಲಯ, ಸಂಘಟಿತ ಅಥವಾ ಅಸಂಘಟಿತ, ಉದ್ಯೋಗದ ಕ್ಷೇತ್ರ, ನಿರುದ್ಯೋಗಿಯೇ, ಉದ್ಯೋಗ ಹಾಗೂ ವಾಸ ಸ್ಥಳದ ದೂರ, ಸಂಚಾರಕ್ಕೆ ಸ್ವಂತ ವಾಹನವಿದೆಯೇ.

4 ವಲಸೆ: ವಲಸೆ ಬಂದವರೆ? ಈ ಹಿಂದೆ ಸ್ಥಳದ ವಿವರ, ವಲಸೆಗೆ ಕಾರಣ, ವಲಸೆ ಬಂದ ಅವಧಿ, ಮೂಲ ಸ್ಥಳದ ವಿವರ.

ಮನೆ ಗಣತಿಯಲ್ಲಿ ಪರಿಶೀಲಿಸುವ ಅಂಶಗಳು

ಮನೆ ನಿರ್ಮಿಸಿದ ರೀತಿ, ಎಷ್ಟುಅಂತಸ್ತು, ಮನೆ ಮಾಲಿಕರ ವಿವರ, ಒಂದು ಕಟ್ಟಡದಲ್ಲಿ ಎಷ್ಟುಮನೆಗಳಿವೆ, ಅವುಗಳಲ್ಲಿ ಎಷ್ಟುಕೋಣೆಗಳಿವೆ. ಎಷ್ಟುಕುಟುಂಬಸ್ಥರು ಇದರಲ್ಲಿ ವಾಸವಿದ್ದಾರೆ, ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ ಇದೆಯೇ, ಹಾಗೂ ಅಡುಗೆ ಕೋಣೆ, ಫ್ರೀಜ್ಡ್‌, ಟಿವಿ, ವಾಹನ, ಮೊಬೈಲ್‌, ಲ್ಯಾಪ್‌ಟಾಪ್‌, ರೇಡಿಯೋ ಹಾಗೂ ಇಂಟರ್‌ನೆಟ್‌ ಸೌಕರ್ಯವಿದೆಯೇ ಎಂಬ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಅದೇ ರೀತಿ ಊಟಕ್ಕೆ ಅಕ್ಕಿ, ಗೋದಿ, ಜೋಳ, ರಾಗಿ ಬಳಕೆ ಮಾಡಲಾಗುತ್ತಿದೆ ಎಂಬ ವಿವರ ಪಡೆದುಕೊಳ್ಳಲಾಗುತ್ತದೆ.

ಎನ್‌ಪಿಆರ್‌ಗೆ ನೀಡಬೇಕಾದ ಮಾಹಿತಿ

ಹೆಸರು, ಲಿಂಗ, ಕುಟುಂಬದ ಮುಖ್ಯಸ್ಥರೊಂದಿಗೆ ಸಂಬಂಧ ಏನು, ವಾಸವಿರುವ ಸ್ಥಳದ ವಿವರ, ತಾತ್ಕಾಲಿಕ ಮತ್ತು ಕಾಯಂ ವಿಳಾಸ, ಶೈಕ್ಷಣಿಕ ಪ್ರಗತಿ, ತಂದೆ, ತಾಯಿ ಹೆಸರು ಮತ್ತು ಅವರ ಜನ್ಮ ದಿನಾಂಕ, ಅವರು ಜನಿಸಿದ ಸ್ಥಳ, ಪತಿ ಅಥವಾ ಪತ್ನಿ ಹೆಸರು, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಮೊಬೈಲ್‌ ಸಂಖ್ಯೆ, ಪ್ಯಾನ್‌ಕಾರ್ಡ್‌, ವಾಹನ ಚಾಲನಾ ಪರವಾನಗಿ ಮಾಹಿತಿಗಳನ್ನು ಕೇಳಲಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಎಸ್‌.ಬಿ. ವಿಜಯ್‌ಕುಮಾರ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಸಮೀಕ್ಷೆ ವಿವರ

ಬ್ಲಾಕ್‌: 17,535

ಸಿಬ್ಬಂದಿ: 19,289

ಮೇಲ್ವಿಚಾರಕರು: 3,215

ಮನೆಗಳ ಪಟ್ಟಿಹಾಗೂ ಮನೆಗಣತಿ: ಏ.15- ಮೇ 29 2020.

ಜನಗಣತಿ: ಫೆ.9- 28.ಫೆ 2021.

ಮರು ಜನಗಣತಿ: ಮಾ.1 ರಿಂದ ಮಾ.5 2021

ಸಮೀಕ್ಷೆಯ ಮೂರು ಆ್ಯಪ್‌? (ಇಂಗ್ಲಿಷ್‌ ಪದಗಳಿವೆ)

Follow Us:
Download App:
  • android
  • ios