ಚಾಮರಾಜನಗರ(ಫೆ.07): ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲ ಬಳಸಿ, ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಪಡೆಯುವ ಕಸುಬುಗಳಲ್ಲಿ ಜೇನು ಕೃಷಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದನ್ನು ಉಪ ಕಸುಬಾಗಿಕೊಂಡರೆ ರೈತರಿಗೆ ಸಿಹಿಯುಣಿಸುತ್ತದೆ. ಅಷ್ಟೇ ಜೇನು ಸಾಕಾಣೆಯಿಂದ ಬೆಳಗಳಲ್ಲಿ ಇಳುವರಿಯೂ ಹೆಚ್ಚುತ್ತದೆ.

ಇತರೆ ಕೃಷಿ ಪದ್ಧತಿಗಳಗೆ ಸ್ಪರ್ಧೆಯೊಡ್ಡದೇ ಸುಲಭ ತಾಂತ್ರಿಕತೆಯನ್ನು ಹೊಂದಿರುವ ಜೇನು ಕೃಷಿ ಮಾಡುವುದಕ್ಕೆ ಆಸಕ್ತಿ ಅಷ್ಟೇ ಮುಖ್ಯ. ಎಷ್ಟೋ ಕಡೆ ರೈತರು ಇದನ್ನು ಉಪಕಸುಬಾಗಿ ಮಾಡಿಕೊಂಡಿದ್ದರೂ, ಹಲವರು ಜೇನು ಕೃಷಿಯನ್ನೇ ಮುಖ್ಯ ವೃತ್ತಿಯಾಗಿಸಿಕೊಂಡು ಉತ್ತಮ ಲಾಭ ಗಳಿಸುತ್ತಿದ್ದಾರೆ.

ಕೃಷಿ ಮಾಡಿದ್ರೆ ಇಲ್ಲ ಲಾಸ್; ಕೋಟಿ ದುಡಿದ ರೈತರು ಖುಷ್!

ಒಂದು ಜೇನು ಪೆಟ್ಟಿಗೆ (ಕುಟುಂಬ)ಯಿಂದ ಪ್ರತಿ ವರ್ಷ ಸರಾಸರಿ 15-20 ಕಿ.ಗ್ರಾಂ ಜೇನು ತುಪ್ಪವನ್ನು ಪಡೆಯಬಹದಾಗಿದ್ದು, ಇದರಿಂದ 800ರಿಂದ 2000 ರು.ವರೆಗೆ ನಿವ್ವಳ ಲಾಭ ಗಳಿಸಬಹುದಾಗಿದೆ. ಅಲ್ಲದೇ ಜೇನು ನೊಣಗಳ ಪರಾಗಸ್ಪರ್ಶದಿಂದ ಇತರೆ ಬೆಳೆಗಳ ಇಳುವರಿ ಸಹ ಹೆಚ್ಚಾಗಲಿದೆ. ಜೇನುನೊಣಗಳ ಉಪಸ್ಥಿತಿಯಿಂದಾಗಿ ವಿವಿಧ ಬೆಳೆಗಳ ಇಳುವರಿ ಶೇ. 20ರಿಂದ 80ರಷ್ಟುಹೆಚ್ಚಾಗಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ.

ಇಳುವರಿ ಹೆಚ್ಚಳ:

ಜೇನುನೊಣಗಳ ಪರಾಗ ಸ್ಪರ್ಶದಿಂದ ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಅಡಿಕೆ ಇಳುವರಿಯಲ್ಲಿ ಶೇ. 20, ಟೊಮೆಟೋ ಬೆಳೆಯಲ್ಲಿ ಶೇ. 25, ದ್ರಾಕ್ಷಿ ಬೆಳೆಯಲ್ಲಿ ಶೇ. 35, ಸೌತೆ, ಕುಂಬಳ, ಸೀಬೆಯಲ್ಲಿ ಶೇ. 40 ಹಾಗೂ ಕಲ್ಲಂಗಡಿ ಬೆಳೆಯಲ್ಲಿ ಶೇ. 80ರಷ್ಟುಅಧಿಕ ಇಳುವರಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಏಲಕ್ಕಿ, ನಿಂಬೆ, ತರಕಾರಿ, ಹೂವು, ಔಷಧಿ ಹಾಗೂ ಸುಗಂಧ ದ್ರವ್ಯ ಬೆಳೆಗಳೂ ಸಹ ಪರಾಗ ಸ್ಪರ್ಶದಿಂದ ಧನಾತ್ಮಕ ಪ್ರಯೋಜನ ಹೊಂದಲಿವೆ.

ಜೇನು ಕೃಷಿಯನ್ನು ಮತ್ತಷ್ಟುಪ್ರಚುರಪಡಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಕೃಷಿ ಕೈಗೊಳ್ಳಲು ವಿವಿಧ ಯೋಜನೆಯಡಿ ಸಹಾಯಧನ ನೀಡುತ್ತಿದೆ. ಅಷ್ಟೇ ಅಲ್ಲದೇ ಉತ್ತಮ ಗುಣಮಟ್ಟದ ಹಾಗೂ ರೋಗರಹಿತ ಜೇನು ಕುಟುಂಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ, ವಿತರಿಸುವ ಉದ್ದೇಶದಿಂದ ಖಾಸಗಿ ಮಧುವನಗಳ ಸ್ಥಾಪನೆಗೂ ಮಹತ್ವ ನೀಡಲಾಗಿದೆ.

ಹುಣಸೆ, ಲಿಂಬು ಬೆಳೆದ ರಾಮದುರ್ಗ ರೈತನ ಕೈ ಸೇರಿತು ಕೋಟಿ ಸಂಪಾದನೆ.!

ಜಮೀನು ಹೊಂದಿರುವವರಿಗೆ ಗರಿಷ್ಠ 10 ಜೇನು ಪೆಟ್ಟಿಗೆ, ಕುಟುಂಬ (ಜೇನುನೊಣಗಳ ಸಮೂಹ) ಹಾಗೂ ಸ್ಟ್ಯಾಂಡ್‌ ಮತ್ತು ಜಮೀನು ರಹಿತ ಕುಟುಂಬಗಳಿಗೆ ಗರಿಷ್ಟ4 ಜೇನು ಪೆಟ್ಟಿಗೆ, ಕುಟುಂಬ (ಜೇನುನೊಣಗಳ ಸಮೂಹ) ಹಾಗೂ ಸ್ಟ್ಯಾಂಡ್‌ ಖರೀದಿಸಲು ಇಲಾಖೆ ವತಿಯಿಂದ ಸಹಾಯಧನ ಲಭ್ಯವಿದೆ. ಮಧುವನ ಹಾಗೂ ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆಯಡಿ ಶೇ. 75ರಂತೆ 3375 ರು.ಗಳ ಸಹಾಯಧನ ಸಹ ನೀಡಲಾಗುತ್ತಿದೆ.

ಜೇನು ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದಾಗಿದೆ. ಅಲ್ಲದೇ ಕೃಷಿಕರಲ್ಲದವರೂ ಸಹ ಜೇನುಕೃಷಿಯನ್ನು ಆಚರಿಸಬಹುದಾಗಿದೆ.

ರೈತರು ಜೇನು ಕೃಷಿಯನ್ನು ಅಳವಡಿಸಿಕೊಂಡರೆ ಬೆಳೆಗಳ ಇಳುವರಿಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಆಸಕ್ತರು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯ ಮೂಲಕ ಸರ್ಕಾರದ ಸಹಾಯಧನ ಪಡೆಯಬಹುದಾಗಿದೆ. ಈ ಮೂಲಕ ರಾಜ್ಯದಲ್ಲಿ ಜೇನು ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆ ಡಿಡಿ ಬಿ.ಎಲ್‌. ಶಿವಪ್ರಸಾದ್‌ ಹೇಳಿದ್ದಾರೆ.