Asianet Suvarna News Asianet Suvarna News

ರಾಜ್ಯದ 7 ಗಡಿ ಜಿಲ್ಲೆಗಳಲ್ಲಿ ಏಡ್ಸ್‌ ಪ್ರಕರಣ ಹೆಚ್ಚಳ!

ರಾಜ್ಯದಲ್ಲಿ ಏಡ್ಸ್ ಪ್ರಕರಣಗಳು ಕಡಿಮೆಯಾದರೂ ಕೂಡ ಕಡಿ ಜಿಲ್ಲೆಗಳಲ್ಲಿ ಈ ಪ್ರಕರಣಗಳು ಕೊಂಚ ಹೆಚ್ಚಾಗಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ. 

Aids Cases Rise in Border District in Karnataka
Author
Bengaluru, First Published Dec 1, 2019, 8:20 AM IST

ಶೇಷಮೂರ್ತಿ ಅವಧಾನಿ

ಕಲಬುರಗಿ [ನ.01]:  ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹೆಚ್ಚಾಗಿ ಹರಡುವ ಎಚ್‌ಐವಿ ಸೋಂಕು ಮತ್ತು ಏಡ್ಸ್‌ ಪ್ರಕರಣಗಳು ನಿರಂತರ ಜಾಗೃತಿಯ ಪರಿಣಾಮದಿಂದಾಗಿ ಕಳೆದ 5 ವರ್ಷಗಳಲ್ಲಿ ರಾಜ್ಯದೆಲ್ಲೆಡೆ ತಗ್ಗುತ್ತ ಸಾಗಿವೆ. ಆದರೆ ಗಡಿಭಾಗದಲ್ಲಿರುವ ರಾಜ್ಯದ ಸಪ್ತ ಜಿಲ್ಲೆಗಳಲ್ಲಿ ಮಾತ್ರ ಈ ಪ್ರಕರಣಗಳ ಒಟ್ಟಾರೆ ಸಂಖ್ಯೆಯಲ್ಲಿ ಕಂಡು ಬಂದಿರುವ ‘ಹೆಚ್ಚಳ’ ಆತಂಕಕಾರಿಯಾಗಿದೆ.

ಲಭ್ಯವಾಗಿರುವ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿ (ಕೆಎಸ್‌ಎಪಿಎಸ್‌) ದಾಖಲೆಗಳನ್ನಾಧರಿಸಿ ಹೇಳುವುದಾದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಏಡ್ಸ್‌ ಪ್ರಕರಣಗಳು ರಾಜ್ಯದಲ್ಲಿ ಶೇ.3ರಿಂದ ಶೇ.4 ಪ್ರತಿಶತ ತಗ್ಗಿವೆ. ಈ ವರ್ಷ ಶೇ.1ರಷ್ಟುತಗ್ಗಿವೆ. ಆದರೆ, ಕಲಬುರಗಿ, ರಾಯಚೂರು, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಾತ್ರ ತುಸು ಹೆಚ್ಚಿಗೆ ಪ್ರಕರಣಗಳು ಕಂಡು ಬಂದಿವೆ. ಈ ವರ್ಷ ಈ ಏಳು ಜಿಲ್ಲೆಗಳಲ್ಲಿ ಎಚ್‌ಐವಿ/ಏಡ್ಸ್‌ ಪ್ರಕರಣಗಳು ಶೇ.1ರಿಂದ ಶೇ.2.5ರಷ್ಟುಹೆಚ್ಚಳ ಕಂಡಿವೆ. ಅದರಲ್ಲೂ ಬೆಳಗಾವಿಯಲ್ಲಿ ಅತಿ ಹೆಚ್ಚು 17992 ಪ್ರಕರಣ ಕಂಡುಬಂದಿದ್ದರೆ, 562 ಪ್ರಕರಣಗಳಿರುವ ಕೊಪ್ಪಳ ಏಳನೇ ಸ್ಥಾನದಲ್ಲಿದೆ. ಈ ಸಪ್ತ ಜಿಲ್ಲೆಗಳನ್ನು ಹೊರತುಪಡಿಸಿದಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಚ್‌ಐವಿ, ಏಡ್ಸ್‌ ಪ್ರಕರಣಗಳು ಒಟ್ಟಾರೆಯಾಗಿ 100ರಿಂದ 400ರ ಆಚೀಚೆ ಮಾತ್ರ ಇವೆ.

ಗಡಿ ಜಿಲ್ಲೆಗಳಲ್ಲಿ ಇನ್ನೂ ಆತಂಕ

ಸೋಂಕಿತರು ಹಿಂದಿನಂತೆ ಪ್ರಕರಣ ಮುಚ್ಚಿಡದೆ ನೇರವಾಗಿ ಎಆರ್‌ಟಿ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರಾದರೂ ಅನಕ್ಷರತೆ ಅಧಿಕವಾಗಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾತ್ರ ಈ ಮಹಾಮಾರಿಯ ಆತಂಕ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ತಗ್ಗಿಲ್ಲ. ಅದಕ್ಕಾಗಿಯೇ ಅಂತಾರಾಜ್ಯ ಸಂಪರ್ಕದ ಹಾಗೂ ನೆರೆ ರಾಜ್ಯಗಳ ಗಡಿಗಂಟಿಕೊಂಡಿರುವ ಜಿಲ್ಲೆಗಳಲ್ಲಿ ಪ್ರಚಾರಾಂದೋಲನಕ್ಕೆ ಹೆಚ್ಚಿನ ಒತ್ತು ನೀಡಲು ಜಾಗೃತಿ ಯೋಜನೆಯೊಂದಿಗೆ ಈ ಸಮಸ್ಯೆಗೆ ಮದ್ದರೆಯಲು ಮುಂದಾಗಿದೆ.

ಆಶಾ ಕಾರ್ಯಕರ್ತೆಯರಿಂದ ನಿಗಾ

ಸೋಂಕು ಹೆಚ್ಚು ಕಂಡುಬಂದಿರುವ ಸಪ್ತ ಜಿಲ್ಲೆಗಳಲ್ಲಿ ಆಶಾ ಕಾಯಕರ್ತರ ಬಳಸಿ ತೀವ್ರ ನಿಗಾ ಇಡಲಾಗುತ್ತಿದೆ. 7 ಜಿಲ್ಲೆಗಳ ಮನೆ ಮನೆ ತೆರಳಿ ಏಡ್ಸ್‌ ಕುರಿತಾದ ಜಾಗೃತಿ ನೀಡಲಾಗಿದೆ, ಸೋಂಕು ತಡೆಗೆ ಜನರ ಪಾಲ್ಗೊಳ್ಳುವಿಕೆ ಉತ್ತೇಜಿಸಲಾಗುತ್ತಿದೆ. ಎಚ್‌ಐವಿ ಸೋಂಕಿತರಿಗೆ ಲಭ್ಯವಿರುವ ಎಆರ್‌ಟಿ ಕೇಂದ್ರಗಳ ಮಾಹಿತಿ ನೀಡಲಾಗುತ್ತಿದೆ. ಸೋಂಕಿತರ ಕುರಿತಾದ ಕಳಂಕ, ತಾರತಮ್ಯ ನಿವಾರಣೆ ಯತ್ನಗಳು ಈ ಜಿಲ್ಲೆಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಸಾಗಿವೆ. ಗರ್ಭಿಣಿಯರಿಗೆ ಮೊದಲ ತ್ರೈಮಾಸಿಕದಲ್ಲಿ ಎಚ್‌ಐವಿ ಪರೀಕ್ಷೆಗೆ ಪ್ರೇರಣೆ ನೀಡಲಾಗುತ್ತಿದೆ, ಗರ್ಭಿಣಿಯರಲ್ಲಿ ಸೋಂಕು ಕಂಡಲ್ಲಿ ಎಆರ್‌ಟಿಯಲ್ಲಿ ಚಿಕಿತ್ಸೆ, ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆಗೂ ಪ್ರೇರೇಪಿಸಲಾಗುತ್ತಿದೆ. ಪ್ರಚಾರ ಜಾಹೀರಾತು, ಗೋಡೆ ಬರಹ ಮೂಲಕ ಮನೆಮನೆ ಪ್ರಚಾರ, ಎಚ್‌ಐವಿ, ಎಡ್ಸ್‌ ಎಂದರೇನು? ಹರಡುವ ವಿಧಾನದ ಬಗ್ಗೆ ಮಾಹಿತಿ, ಸೋಂಕಿನ ಪರೀಕ್ಷೆ ಮಾಡಿಸುವ ಸ್ಥಳ ಮಾಹಿತಿ, ಐಸಿಟಿಸಿ ಸಮಾಲೋಚನೆ, ಎಆರ್‌ಟಿ ಚಿಕಿತ್ಸೆಗಳ ಬಗ್ಗೆ ಮಾಹಿತಿ, ಎಚ್‌ಐವಿ, ಏಡ್ಸ್‌ ಕಾಯಿದೆ, ಸೋಂಕಿತರಿಗೆ ಸಿಗುವ ಸಾಮಾಜಿಕ ಸವಲತ್ತುಗಳ ಮಾಹಿತಿ ನೀಡುವ ಕೆಲಸ ಸಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಡಿ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಈ ಸೋಂಕು ಹಾಗೇ ಇದೆ ಎಂಬುದು ಆತಂಕದ ಸಂಗತಿ. ಏಡ್ಸ್‌ ತಡೆಗೆ ಜನರ ಸಹಭಾಗಿತ್ವ ಬೇಕು. ಈ ಸೋಂಕಿನ ವಿರುದ್ಧ ಜನಜಾಗೃತಿ ನಿರಂತರ ನಡೆಸುತ್ತೇವೆ.

ಡಾ. ಸಂಜಯ್‌ ಪಾಟೀಲ್‌ ಉಪ ನಿರ್ದೇಶಕರು ಕೆಎಸ್‌ಎಪಿಎಎಸ್‌ ಬೆಂಗಳೂರು

ಕಲಬುರಗಿಯಲ್ಲಿ 3.16 ಲಕ್ಷ ಕುಟುಂಬಗಳಿಗೆ ಕಳೆದ ಅಕ್ಟೋಬರ್‌ ತಿಂಗಳು ನಮ್ಮ ಆಶಾ ಕಾಯಕರ್ತರ ತಂಡಗಳು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ವಿನಿಮಯ ನಿರಂತರ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಗರ್ಭ ನಿರೋಧಕ ಪೂರೈಕೆಯೂ ಸಾಗಿದೆ.

- ಡಾ.ಮಾಧವರಾವ್‌ ಪಾಟೀಲ್‌, ಡಿಎಚ್‌ಒ ಕಲಬುರಗಿ 

Follow Us:
Download App:
  • android
  • ios