Asianet Suvarna News Asianet Suvarna News

ಕಾಗವಾಡ ನೂತನ ಶಾಸಕ ಶ್ರೀಮಂತ ಪಾಟೀಲ ಮುಂದಿದೆ ದೊಡ್ಡ ಸವಾಲು

ಮಹಾರಾಷ್ಟ್ರದೊಂದಿಗೆ ಚರ್ಚಿಸಿ ಬೇಸಿಗೆಯಲ್ಲಿ ನೀರು ಬಿಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಾರಾ?| ಗ್ರಾಮಗಳ ಸ್ಥಳಾಂತರಕ್ಕೆ ಬೇಕಿದೆ ಒತ್ತು|ಸಂತ್ರಸ್ತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತದೆಯೇ?| ಕಾಗವಾಡ ಕ್ಷೇತ್ರದ ಜನರು ಸಂಪೂರ್ಣವಾಗಿ ಸರ್ಕಾರ ನೀಡುವ ಪರಿಹಾರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ|

A Big Challenge to Kagawad MLA Shrimant Patil
Author
Bengaluru, First Published Dec 12, 2019, 10:10 AM IST

ಬೆಳಗಾವಿ(ಡಿ.12): ವಿಧಾನಸಭೆಯ ಉಪಚುನಾವಣೆ ಕದನ ಮುಗಿಯುತ್ತಿದ್ದಂತೆ ಕ್ಷೇತ್ರದ ಜನತೆ ಮರು ಆಯ್ಕೆಯಾದ ಶಾಸಕರ ಮೇಲೆ ಹಲವಾರು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಶಾಸಕರು ಈಡೇರಿಸುತ್ತಾರೆಯೇ ಎಂದು ಎದುರು ನೋಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕಾಗವಾಡ ಕ್ಷೇತ್ರದಿಂದ ಮರು ಆಯ್ಕೆಯಾಗಿರುವ ಶ್ರೀಮಂತ ಪಾಟೀಲ ಅವರಿಗೆ ಹಳೆ ಕ್ಷೇತ್ರವಾಗಿದ್ದರೂ, ನೂತನ ಪಕ್ಷದಿಂದ ಕಣಕ್ಕಿಳಿದ ಸಂದರ್ಭದಲ್ಲಿ ಹಳೆಯದರ ಜತೆಗೆ ಹೊಸ ಭರಸವೆಗಳನ್ನು ನೀಡಿದ್ದರು. 

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರಿಂದ ಕಾಗವಾಡ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ಅಚಲ ಭರವಸೆಯಿಂದ ಎರಡನೇ ಅವಧಿಗೆ ಶ್ರೀಮಂತ ಪಾಟೀಲ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಈ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರ ಕಷ್ಟಸಾಧ್ಯವಾಗಿದೆ. 

ಸಂತ್ರಸ್ತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತದೆಯೇ?: 

ನೂತನ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಕ್ಷೇತ್ರ ಹಳೆಯದಾಗಿದ್ದರೂ, ಹೊಸ ಪಕ್ಷದೊಂದಿಗೆ ಬೆರೆತು ಕಾಗವಾಡದಲ್ಲಿ ಪ್ರವಾಹ ಪೀಡಿತ ಗ್ರಾಮ ಹಾಗೂ ಮನೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮಾತ್ರ ಕಷ್ಟದ ಕೆಲಸವಾಗಿದೆ. ಗ್ರಾಮಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದಲ್ಲಿ ಜಮೀನು ಹಾಗೂ ಹುಟ್ಟಿ ಬೆಳೆದ ಜಾಗವನ್ನು ಬಿಟ್ಟು ಹೋಗಲು ಪ್ರವಾಹ ಪೀಡಿತ ಗ್ರಾಮಸ್ಥರು ಮುಂದಾಗುತ್ತಿಲ್ಲ. ಮನೆ ಕಳೆದುಕೊಂಡವರಿಗೆ ಇದುವರೆಗೂ ಶಾಶ್ವತ ಸೂರು ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಆದ್ದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಮನೆಗಳನ್ನು ನಿರ್ಮಾಣ ಮಾಡಿಕೊಡುವುದು ಮಾತ್ರವಲ್ಲದೆ ರಸ್ತೆ, ಕುಡಿಯುವ ನೀರು, ಸಮರ್ಪಕ ವಿದ್ಯುತ್, ಬೆಳೆ ಹಾನಿಗೆ ಸೂಕ್ತ ಪರಿಹಾರ, ಸಾರ್ವಜನಿಕ ಆಸ್ಪತ್ರೆಗಳು, ಶಾಲಾ, ಕಾಲೇಜು ಕಟ್ಟಡಗಳ ನಿರ್ಮಾಣ, ನೀರಾವರಿ ಯೋಜನೆಗಳ ಅನುಷ್ಠಾನ, ಕೊಚ್ಚಿ ಹೋಗಿರುವ ಅಥವಾ ಹಾಳಾದ ರಸ್ತೆಗಳ ದುರಸ್ತಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸಬೇಕು ಎಂಬುವುದು ಇಲ್ಲಿನ ಜನರ ಆಶಯವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದಕ್ಕೆ ತಕ್ಕಂತೆ ನೂತನ ಶಾಸಕರು ಅನುದಾನ ನೀಡಿ ಕ್ಷೇತ್ರವನ್ನು ಮಾದರಿಯತ್ತ ಕೊಂಡೊಯ್ಯುವ ಸವಾಲು ಅವರ ಮುಂದಿದೆ. ಇನ್ನು ಶ್ರೀಮಂತ ಪಾಟೀಲ ಮೂಲತಃ ನೆರೆಯ ಸಾಂಗ್ಲಿಯವರು. ಹೀಗಾಗಿ ಬೇಸಿಗೆ ಸಮಯದಲ್ಲಿ ಪ್ರತಿವರ್ಷ ಎದುರಾಗುತ್ತಿರುವ ಜನ, ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಕೃಷ್ಣಾ ನದಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡಿಸುವಲ್ಲಿ ಸಫಲರಾಗುತ್ತಾರೆ ಎಂಬ ಭರವಸೆ ಈ ಭಾಗದ ಜನತೆಯದ್ದು. ಆದರೆ ರಾಜ್ಯದಲ್ಲಿ ಅಷ್ಟೆ ಅಲ್ಲ ನೆರೆಯ ಮಹಾರಾಷ್ಟ್ರದಲ್ಲಿಯೂ ಬದಲಾದ ರಾಜಕೀಯದಿಂದಾಗಿ ಶಿವಸೇನೆ ಹಾಗೂ ಮಿತ್ರಪಕ್ಷಗಳು ಜತೆಗೂಡಿ ಆಡಳಿತ ನಡೆಸುತ್ತಿವೆ. 

ಈ ಮೊದಲಿನಿಂದಲೂ ಕರ್ನಾಟಕದ ಜಲ, ನೆಲ, ನುಡಿ ವಿಷಯದಲ್ಲಿ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತ ಕಾಲ ಕಳೆಯುತ್ತಿರುವ ಶಿವಸೇನೆ, ಇದೀಗ ಅಧಿಕಾರದಲ್ಲಿದೆ. ಬೇಸಿಗೆ ಸಮಯದಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ, ಕೃಷ್ಣಾ ನದಿ ಪಾತ್ರಕ್ಕೆ ನೀರು ಹರಿಸಲಿದೆ ಎಂದು ನಿರೀಕ್ಷೆ ಮಾಡುವುದು ಕಷ್ಟಸಾಧ್ಯ. ಇದೆ ವೇಳೆ ಸಿಎಂ ಯಡಿಯೂರಪ್ಪ ಅವರು ಕೂಡ ಕೃಷ್ಣಾ ನದಿಗೆ ಕೊಯ್ನಾದಿಂದ ಬೇಸಿಗೆ ಸಂದರ್ಭದಲ್ಲಿ ನೀರು ಬಿಡಿಸುವ ಕುರಿತು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಪ್ರಚಾರ ವೇಳೆ ಭರವಸೆ ನೀಡಿದ್ದರು. ಈಗ ಸಿಎಂ ಕೂಡ ಅವರ ಮಾತನ್ನು ಪಾಲನೆ ಮಾಡಬೇಕಿದ್ದು, ಜನರ ನಿರೀಕ್ಷೆಯನ್ನು ಹುಸಿ ಮಾಡದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಗಡಿಭಾಗದಲ್ಲಿರುವ ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಈ ಮೂಲಕ ಕನ್ನಡ ಶಾಲೆಗಳಿಗೆ ಅಲ್ಲಿನ ಮಕ್ಕಳು ಬರುವಂತೆ ನೋಡಿಕೊಳ್ಳಬೇಕಿದೆ

ಕೊಟ್ಟ ಭರವಸೆ ಈಡೇರಿಸುತ್ತಾರೆಯೇ? 

ಕಳೆದ ಆಗಸ್ಟ್‌ನಲ್ಲಿ ಧಾರಾಕಾರ ಮಳೆ ಹಾಗೂ ಎದುರಾದ ಭೀಕರ ಪ್ರವಾಹದಿಂದ ರೈತರು ಅಕ್ಷರಶಃ ಕಂಗೆಟ್ಟು ಹೋಗಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕೊಳೆತು ಹೋಗಿದ್ದರಿಂದ ರೈತರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಕಾಗವಾಡ ಕ್ಷೇತ್ರದ ಜನರು ಸಂಪೂರ್ಣವಾಗಿ ಸರ್ಕಾರ ನೀಡುವ ಪರಿಹಾರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಶಾಸಕ ಶ್ರೀಮಂತ ಪಾಟೀಲ ಅವರು ತಮ್ಮ ಭಾಷಣದಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕ್ಷೇತ್ರದ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಮರ್ಪಕವಾಗಿ ಸ್ಪಂದಿಸಿಲ್ಲ. ಅನುದಾನವನ್ನು ನೀಡದಿರುವುದರಿಂದ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದೇನೆ ಎಂದಿದ್ದರು. 

ಈ ಹಿನ್ನೆಲೆಯಲ್ಲಿ ಕಾಗವಾಡದ ಕ್ಷೇತ್ರದ ಜನರು ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಬೆಂಬಲಿಸಿದಲ್ಲಿ ಮಾತ್ರ ಈ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ ಎಂದಿದ್ದರು. ಮೊದಲೇ ಕಾಗವಾಡ ಜನತೆ ಧಾರಾಕಾರ ಮಳೆ, ಭೀಕರ ಪ್ರವಾಹದ ಹೊಡೆತಕ್ಕೆ ಸಿಕ್ಕಿಹಾಕಿಕೊಂಡು ನಲುಗಿದ್ದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಿಜೆಪಿ ಸೂಕ್ತ ಎಂಬ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಈ ಭರವಸೆಯನ್ನು ಅನುಷ್ಠಾನಕ್ಕೆ ತರಬೇಕಿರುವುದು ಅವರು ಮುಂದೆ ದೊಡ್ಡ ಸವಾಲಿದೆ.
 

Follow Us:
Download App:
  • android
  • ios