ಆನೆ ಕಾರಿಡಾರಲ್ಲಿ ಮಾನವ ಹಸ್ತಕ್ಷೇಪ: 79 ಆನೆ ಬಲಿ
* 12 ಆನೆಗಳು ವಿದ್ಯುದಾಘಾತದಿಂದ ಸಾವು
* ಮುಂದುವರಿದ ಕಾಡುಪ್ರಾಣಿ-ಮಾನವ ಸಂಘರ್ಷ
* ಆನೆಗಳ ಸಾವು, ಪೋಸ್ಟಮಾರ್ಟಮ್ ವರದಿ ಸಾರ್ವಜನಿಕರಿಗೆ ಲಭ್ಯ
ವಸಂತಕುಮಾರ ಕತಗಾಲ
ಕಾರವಾರ(ಜೂ.10): ಕಾಡಾನೆಗಳು ಹಾಗೂ ಮಾನವನ ನಡುವಣ ಸಂಘರ್ಷ ಹೆಚ್ಚುತ್ತಿದೆ. ಬೆಳೆಹಾನಿ, ಮಾನವ ಪ್ರಾಣಹಾನಿಯೂ ಆಗುತ್ತಿದೆ. ಕಾಡಾನೆಗಳ ಸಾವಿನ ಪ್ರಮಾಣವೂ ಮಿತಿಮೀರಿದೆ! ರಾಜ್ಯದಲ್ಲಿ 2021ರಲ್ಲಿ 79 ಕಾಡಾನೆಗಳು ಮೃತಪಟ್ಟಿವೆ. 17 ಕಾಡಾನೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿವೆ. ಇವುಗಳಲ್ಲಿ 12 ಕಾಡಾನೆಗಳು ವಿದ್ಯುದಾಘಾತದಿಂದ ಸಾವಿಗೀಡಾಗಿವೆ. ಅಪಘಾತ, ಬೇಟೆಯಂತಹ ಘಟನೆಗಳಿಂದಲೂ ಆನೆ ಸಾವಿಗೀಡಾಗಿದೆ. ಆದರೆ ಕಾಡು ಪ್ರಾಣಿಗಳ ಬೇಟೆ 3-4 ದಶಕಗಳ ಹಿಂದೆ ಹೋಲಿಸಿದರೆ ಈಗ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ.
ಹೊಲಗಳಿಗೆ ದಾಳಿ ಇಟ್ಟು ಬೆಳೆಗಳು ನಾಶವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ರೈತರು ತಮ್ಮ ಬೆಳೆಗಳ ರಕ್ಷಣೆಗಾಗಿ ವಿದ್ಯುತ್ ಬೇಲಿ ಅಳವಡಿಸಿಕೊಂಡಿರುತ್ತಾರೆ. ಇದಕ್ಕೂ ಆನೆಗಳು ಬಲಿಯಾಗಿವೆ. ಇನ್ನು ಹರಿದುಬಿದ್ದ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಆನೆಗಳು ಸಾವಿಗೀಡಾಗಿವೆ. ಮಾನವ ಹಾಗೂ ಆನೆಗಳ ನಡುವೆ ಸಂಘರ್ಷ ಹೆಚ್ಚುತ್ತಿದ್ದರೆ, ಆನೆ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಮಾನವನ ಹಸ್ತಕ್ಷೇಪವೂ ಆನೆಗಳು ದಿಕ್ಕುತಪ್ಪಲು ಕಾರಣವಾಗಿದೆ.
ಕೋಲಾರದ ಜನರ ಪ್ರಶ್ನೆ.. ಕಾಡಾನೆಗಳಿಂದ ಮುಕ್ತಿ ಯಾವಾಗ?
ನಾಗರಹೊಳೆಯಲ್ಲಿ 14 ಆನೆಗಳು ಮೃತಪಟ್ಟಿವೆ. ಮಲೇ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ 14 ಆನೆಗಳು ಸಾವಿಗೀಡಾಗಿವೆ. ಕಾವೇರಿ ವೈಲ್ಡ್ ಲೈಫ್ ವಿಭಾಗದಲ್ಲಿ 12, ಬಂಡೀಪುರದಲ್ಲಿ 10, ಬಿಆರ್ ಟೈಗರ್ ರಿಸವ್‌ರ್ 9, ಮಡಿಕೇರಿ 4, ವಿರಾಜಪೇಟೆ 5, ಹಾಸನದಲ್ಲಿ 4, ರಾಮನಗರ 3, ಬನ್ನೇರುಘಟ್ಟ2, ಭದ್ರಾ ಟೈಗರ್ ರಿಸವ್‌ರ್ 1, ಚಿಕ್ಕಮಗಳೂರು 1 ಆನೆಗಳು ಸಾವಿಗೀಡಾಗಿದೆ. ವನ್ಯಜೀವಿಧಾಮ, ಹುಲಿ ಯೋಜನಾ ಪ್ರದೇಶದಲ್ಲಿ ಅಭಿವೃದ್ಧಿಗೆ ತೊಡಕು ಉಂಟಾಗಿರುವುದು ಅಲ್ಲಿ ವಾಸಿಸುತ್ತಿರುವ ಜನತೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕಾಡುಪ್ರಾಣಿಗಳಿಗೆ ಸಿಗುವ ಭದ್ರತೆ, ಜನತೆಗೆ ಸಿಗುತ್ತಿಲ್ಲ ಎಂಬ ಕೂಗು ಉತ್ತರ ಕನ್ನಡದ ಜೋಯಿಡಾದಲ್ಲಿ ಈ ಹಿಂದೆ ಕೇಳಿಬಂದಿತ್ತು.
ಆನೆಗಳ ಸಾವು, ಪೋಸ್ಟಮಾರ್ಟಮ್ ವರದಿ ಸಾರ್ವಜನಿಕರಿಗೆ ಲಭ್ಯ:
ಇಲ್ಲಿಯವರೆಗೆ ಕಾಡಾನೆಗಳ ಸಾವಿಗೆ ಕಾರಣ, ಪೋಸ್ಟಮಾರ್ಟಮ್ ವರದಿ ಸಾರ್ವಜನಿಕವಾಗಿ ಲಭ್ಯವಾಗುತ್ತಿರಲಿಲ್ಲ. ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿ, ವನ್ಯಜೀವಿಗಳ ಸಾವು, ಕಾರಣ ಮತ್ತಿತರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಕೋರಿದ್ದರು. ಈ ಬಗ್ಗೆ 2013ರಲ್ಲಿನ ಉಚ್ಚ ನ್ಯಾಯಾಲಯದ ಆದೇಶವನ್ನೂ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಈಗ ಅರಣ್ಯ ಇಲಾಖೆ ಆನೆಗಳ ಸಾವಿನ ಸಂಖ್ಯೆ, ಕಾರಣಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ a್ಟa್ಞya.ಜಟv.ಜ್ಞಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ.
ಕಾಡಾನೆಗಳ ಸಾವಿನ ಮಾಹಿತಿಯನ್ನು ಸಾರ್ವಜನಿಕವಾಗಿ ಇಲಾಖೆ ಪ್ರಕಟಿಸಬೇಕು ಎನ್ನುವ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಈಗ ಇಲಾಖೆ ವೆಬ್‌ಸೈಟಿನಲ್ಲಿ ಮಾಹಿತಿ ನೀಡತೊಡಗಿದೆ ಅಂತ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ತಿಳಿಸಿದ್ದಾರೆ.