ನಾಡಗೀತೆಯನ್ನು 52 ಸೆಕೆಂಡ್‌ಗೆ ಸೀಮಿತಗೊಳಿಸಿದರೆ ಅನುಕೂಲ : ಹಂಪಾ

ಸಾಹಿತ್ಯ ಸಮ್ಮೇಳನವೆಂಬುದು ಕನ್ನಡಿಗರಿಗೆ ಒಂದು ರೀತಿಯ ಹಬ್ಬವಿದ್ದಂತೆ. ಕನ್ನಡದ ಮನಸ್ಸುಗಳನ್ನು ಸಮ್ಮಿಲನಗೊಳಿಸುವ ಈ ಹಬ್ಬ ಜಾತಿಗಳ ಇರುವಿಕೆಯ ನಡುವೆಯೂ ಜಾತ್ಯತೀತೆಯನ್ನು, ಮತಗಳ ನಡುವೆಯೂ ಮತಾಂಧತೆಯನ್ನು ಮೆಟ್ಟಿನಿಂತು, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೋಗುವಂತಹ ವಾತಾವರಣವನ್ನು ಇಂತಹ ಸಮ್ಮೇಳನಗಳು ಉಂಟು ಮಾಡಬೇಕೆಂದು ಹಿರಿಯ ಸಾಹಿತಿ, ನಾಡೋಜ ಡಾ.ಹಂಪಾ ನಾಗರಾಜಯ್ಯ ಪ್ರತಿಪಾದಿಸಿದರು.

52 Seconds Limitation For Nadageethe Is Good Says Kamala Hampa nagarajaiah snr

 ತುಮಕೂರು (ಡಿ. 16):  ಸಾಹಿತ್ಯ ಸಮ್ಮೇಳನವೆಂಬುದು ಕನ್ನಡಿಗರಿಗೆ ಒಂದು ರೀತಿಯ ಹಬ್ಬವಿದ್ದಂತೆ. ಕನ್ನಡದ ಮನಸ್ಸುಗಳನ್ನು ಸಮ್ಮಿಲನಗೊಳಿಸುವ ಈ ಹಬ್ಬ ಜಾತಿಗಳ ಇರುವಿಕೆಯ ನಡುವೆಯೂ ಜಾತ್ಯತೀತೆಯನ್ನು, ಮತಗಳ ನಡುವೆಯೂ ಮತಾಂಧತೆಯನ್ನು ಮೆಟ್ಟಿನಿಂತು, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೋಗುವಂತಹ ವಾತಾವರಣವನ್ನು ಇಂತಹ ಸಮ್ಮೇಳನಗಳು ಉಂಟು ಮಾಡಬೇಕೆಂದು ಹಿರಿಯ ಸಾಹಿತಿ, ನಾಡೋಜ ಡಾ.ಹಂಪಾ ನಾಗರಾಜಯ್ಯ ಪ್ರತಿಪಾದಿಸಿದರು.

ನಗರದ ಗಾಜಿನ ಮನೆಯಲ್ಲಿ ಜಿಲ್ಲಾ ಕಸಾಪ ಆಯೋಜಿಸಿದ್ದ 14ನೇ ಜಿಲ್ಲಾ ಕನ್ನಡ (Kannada)  ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪಂಪ ಮಹಾಕವಿಯ ಆಶಯದಂತೆ ತ್ಯಾಗ, ಭೋಗಗಳ ಸಮನ್ವಯವೇ ಜೀವನ (Life)  ಎಂಬುದನ್ನು ಸಾಹಿತ್ಯ ತೋರಿಸಿಕೊಡಬೇಕಿದೆ. ಸಾಹಿತ್ಯವೆಂಬುದು ಜನರ ಬದುಕಿನ ಪ್ರತಿಬಿಂಬವಾಗಬೇಕು. ಮನಸ್ಸುಗಳ ನಡುವಿನ ಕಂದರ ಹೆಚ್ಚಿಸದೆ, ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು ಎಂದರು.

ಸಮ್ಮೇಳನ ಅಧ್ಯಕ್ಷರಾದ ಪೊ›.ಎಂ.ವಿ.ನಾಗರಾಜರಾವ್‌ ಅವರಿಗೆ ಕನ್ನಡ ಧ್ವಜ ಹಸ್ತಾಂತರಸಿ ಮಾತನಾಡಿದ ಪೊ›.ಎಸ್‌.ಜಿ. ಸಿದ್ದರಾಮಯ್ಯ, ಧ್ವಜ ನೀಡುವ ಮೂಲಕ ಕನ್ನಡ ಕಟ್ಟುವ ಜವಾಬ್ದಾರಿಯನ್ನು ವಯಸ್ಸಿನಲ್ಲಿ ಮತ್ತು ವಿದ್ವತ್‌ನಲ್ಲಿ ನನಗಿಂತ ಹಿರಿಯರಾದ ಪೊ›.ಎಂ.ವಿ.ನಾಗರಾಜರಾವ್‌ ಅವರಿಗೆ ಹಸ್ತಾಂತರಿಸಿದ್ದೇನೆ ಎಂದರು.

ಹಿರಿಯರಿಗೆ ಮೊದಲು ಪ್ರಶಸ್ತಿ, ಗೌರವ ಮತ್ತು ಸ್ಥಾನಮಾನಗಳು ಸಿಗಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಸಾಂಸ್ಕೃತಿಕ ರಾಜಕಾರಣದಿಂದಾಗಿ ಇಂತಹ ವೈರುಧ್ಯಗಳು ನಡೆದಿವೆ. ಅದಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ತಮ್ಮ 300ಕ್ಕೂ ಹೆಚ್ಚು ಕೃತಿಗಳ ಮೂಲಕ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆಯನ್ನು ಎಂ.ವಿ.ಎನ್‌. ನೀಡಿದ್ದಾರೆ. 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಭುವಾಗಿದ್ದುಕೊಂಡು, ಪ್ರಜಾಪ್ರಭುತ್ವದ ಮಾದರಿಯಲ್ಲಿ ಸಾಹಿತ್ಯ ಪರಿಷತ್‌, ಮೀಸಲಾತಿಯನ್ನು ತಂದು ಅಧಿಕಾರ ವೀಕೇಂದ್ರೀಕರಣಕ್ಕೆ ನಾಂದಿ ಹಾಡಿದರು. ಅವರ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ನಾವು ನಡೆದುಕೊಳ್ಳುವ ಮೂಲಕ ಸರ್ವಜನಾಂಗದ ಶಾಂತಿ ತೋಟ ಎಂಬ ಕವಿವಾಣಿಯನ್ನು ನಿಜ ಮಾಡೋಣ ಎಂದು ಸಲಹೆ ನೀಡಿದರು.

ತುಮಕೂರು ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಹೊರತಂದ ಕಲ್ಪನುಡಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಮಾತೃಭಾಷೆಗೆ ಎಷ್ಟುಶಕ್ತಿ ಇದೆ ಎಂಬುದನ್ನು ಅನ್ಯ ಭಾಷಿಕರ ನಡುವೆ ಇದ್ದಾಗ ನಮಗೆ ಅರ್ಥವಾಗುತ್ತದೆ. ದೇಹ ಸದೃಢವಾಗಲು ಸಮತೋಲನ ಆಹಾರ ಅಗತ್ಯ. ಹಾಗೆಯೇ ಮನಸ್ಸಿನ ಆರೋಗ್ಯಕ್ಕೆ ಕಲೆ, ಸಂಗೀತ, ಸಾಹಿತ್ಯ, ನಾಟಕ ಎಲ್ಲವೂ ಬೇಕು. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಉತ್ಕೃಷ್ಟಸಾಹಿತ್ಯ, ಸಂಗೀತ,ನಾಟಕ ಎಲ್ಲವೂ ಇದೆ.ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕೆಂದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಹಿರೇಮಠದ ಡಾ.ಶಿವಾನಂದಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ಹಿರಿಯರ ನುಡಿಯನ್ನು ಇಂದಿನ ಸಮ್ಮೇಳನ ಸಾರ್ಥಕಗೊಳಿಸಿದೆ. ಕನ್ನಡ ಮಾತೃಭಾಷೆಯ ಜೊತೆಗೆ, ಚೈತನ್ಯ ನೀಡುವ ಭಾಷೆಯೂ ಆಗಿದೆ. ಇಂತಹ ಒಳ್ಳೆಯ ಸಾಹಿತ್ಯ ಜಾತ್ರೆಗೆ ಜನಪ್ರತಿನಿಧಿಗಳು ಗೈರು ಹಾಜರಾಗಿರುವುದು ಬೇಸರ ತರಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜೋತಿಗಣೇಶ್‌, ಸಾಹಿತ್ಯ ಸಮ್ಮೇಳನ ಜಿಲ್ಲೆಯ ಅಭಿವೃದ್ಧಿಗೆ ದಾರಿದೀಪವಾಗಲಿ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಆಶಯ ನುಡಿಗಳನ್ನಾಡಿದರು.

ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಸಿಇಓ ಡಾ.ಕೆ.ವಿದ್ಯಾಕುಮಾರಿ, ಎಡಿಸಿ ಚನ್ನಬಸಪ್ಪ, ಸ್ಫೂರ್ತಿ ಡೆವಲಪ​ರ್‍ಸ್ನ ಎಸ್‌.ಪಿ.ಚಿದಾನಂದ್‌,ಟೂಡಾ ಅಧ್ಯಕ್ಷ ಎಚ್‌.ಜಿ.ಚಂದ್ರಶೇಖರ್‌, ಕಸಾಪ ಪದಾಧಿಕಾರಿಗಳಾದ ಡಾ.ಡಿ.ಎನ್‌.ಯೋಗೀಶ್ವರಪ್ಪ, ಕೆ.ಎಸ್‌. ಉಮಾಮಹೇಶ್‌, ಡಾ.ಕಂಟಲಗೆರೆ ಸಣ್ಣ ಹೊನ್ನಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‌ಹಾಲ್‌ ವೃತ್ತದಿಂದ ಗಾಜಿನ ಮನೆಯವರೆಗೂ ಸಮ್ಮೇಳಾಧ್ಯಕ್ಷರಾದ ಪೊ›.ಎಂ.ವಿ. ನಾಗರಾಜರಾವ್‌ ಅವರನ್ನು ವಿವಿಧ ಜನಪದ ಕಲಾತಂಡಗಳ ಪ್ರದರ್ಶನದ ಮೂಲಕ ಮೆರವಣಿಗೆ ನಡೆಸಲಾಯಿತು.

ನಾನು ಹತ್ತಾರು ದೇಶಗಳ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದೇನೆ. ಅಲ್ಲಿ ತಮ್ಮ ನಾಡಗೀತೆಯನ್ನು ಅತಿ ಕಡಿಮೆ ಸಮಯದಲ್ಲಿ ಮುಗಿಸುತ್ತಾರೆ. ಹೇಗೆ ನಮ್ಮ ರಾಷ್ಟ್ರಗೀತೆ 52 ಸೆಕೆಂಡ್‌ಗಳಲ್ಲಿ ಮುಗಿಯುತ್ತದೆಯೋ ಅದೇ ರೀತಿ ನಾಡಗೀತೆಯನ್ನು 52 ಸೆಕೆಂಡ್‌ಗಳಿಗೆ ಸೀಮಿತಗೊಳಿಸಿದರೆ ಹೆಚ್ಚು ಅನುಕೂಲ ಎಂಬುದು ನನ್ನ ಅಭಿಪ್ರಾಯ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ. ಕುವೆಂಪು ಅವರು ಬರೆದಿರುವ ನಾಡಗೀತೆ ಅತ್ಯಂತ ಸುಂದರ ಮತ್ತು ಮನಮೋಹಕ. ಆದರೆ ಹಲವು ಸಾಲುಗಳು ಇರುವುದರಿಂದ ಹಾಡಲು ತುಂಬಾ ಸಮಯ ಬೇಕಾಗುತ್ತದೆ. ಹಾಗಾಗಿ ಮೊದಲ ಪಲ್ಲವಿಯ ಜೊತೆಗೆ, ಸರ್ವಜನಾಂಗ ಶಾಂತಿಯ ತೋಟ ಎಂಬ ಕೊನೆಯ ಚರಣವನ್ನಷ್ಟೇ ಹಾಡಿದರೆ ಹೆಚ್ಚು ಅರ್ಥ ಗರ್ಭೀತ ಹಾಗೂ ಸಮಯವೂ ಉಳಿತಾಯವಾಗುತ್ತದೆ.

ನಾಡೋಜ ಡಾ.ಹಂಪಾ ನಾಗರಾಜಯ್ಯ ಹಿರಿಯ ಸಾಹಿತಿ

ಶಿಕ್ಷಕರ ನೇಮಕ ವಿಷಯವಾರು ಇರಲಿ

ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೊ›.ಎಂ.ವಿ.ನಾಗರಾಜರಾವ್‌ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ದೊರೆಯುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಜಾಗತೀಕರಣ, ಉದಾರೀಕರಣದ ಪ್ರಭಾವ ಕನ್ನಡಿಗರ ಬದುಕಿನ ಮೇಲೆ ಗಾಢವಾಗಿದೆ. ಈ ಸಮಯದಲ್ಲಿ ನಾವು ದೇಶಿ ಭಾಷೆಯ ಅಸ್ತಿತ್ವ ತಿಳಿಯದಿದ್ದರೆ ಡೋಲಾಯಮಾನ ಸ್ಥಿತಿಗೆ ತಲುಪಬೇಕಾಗುತ್ತದೆ. ಶಿಕ್ಷಕರ ನೇಮಕ ಸಂಖ್ಯಾವಾರು ಎನ್ನುವುದಕ್ಕಿಂತ ವಿಷಯವಾರು ಇದ್ದರೆ ಹೆಚ್ಚು ಅನುಕೂಲವಾಗುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.ಆ ಮೂಲಕ ಯುವಜನತೆಯನ್ನು ಸ್ವಾವಲಂಬಿಗಳಾಗಿಸುವ ಪ್ರಕ್ರಿಯೆ ಒಳ್ಳೆಯದು ಎಂದರು.

Latest Videos
Follow Us:
Download App:
  • android
  • ios